More

    ಕೆಂಪು ಕಲ್ಲು ಕ್ವಾರಿ ಉದ್ಯಮ ತಲ್ಲಣ, ಉದ್ಯೋಗ ನಷ್ಟದ ಚಿಂತೆ

    ಅನ್ಸಾರ್ ಇನೋಳಿ ಉಳ್ಳಾಲ
    ಮಾಜಿ ಸಚಿವ ರಮಾನಾಥ ರೈ ಮಾಡಿದ ರೆಡ್ ಬಾಕ್ಸೈಟ್ ಆರೋಪದ ಬಳಿಕ ಎದ್ದ ವಿವಾದವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ಕ್ವಾರಿಗಳ ಮೇಲಿನ ಜವಾಬ್ದಾರಿ ಮತ್ತು ನಿಯಂತ್ರಣದ ಹಕ್ಕನ್ನು ಗ್ರಾಮಕರಣಿಕರಿಗೆ ನೀಡಿದ್ದು, ಇದರ ಪರಿಣಾಮ ಕೆಂಪು ಕಲ್ಲು ಕ್ವಾರಿಗಳು ಬಂದ್ ಆಗಿ ಉದ್ಯಮ ತಲ್ಲಣಗೊಂಡಿದೆ.
    ದ.ಕ. ಜಿಲ್ಲಾದ್ಯಂತ 500ಕ್ಕೂ ಅಧಿಕ ಕೆಂಪು ಕಲ್ಲು ಕ್ವಾರಿಗಳಿದ್ದು, ಸರಿಸುಮಾರು ಒಂದು ಲಕ್ಷ ಮಂದಿ ಈ ಉದ್ಯಮ ನಂಬಿಕೊಂಡು ಜೀವನ ಸಾಗಿಸುತ್ತಿದ್ದರು. ಅದರಲ್ಲೂ ಇನೋಳಿ, ಮುಡಿಪು, ಬಾಳೆಪುಣಿ, ಕೈರಂಗಳ, ನರಿಂಗಾನ ಮುಂತಾದ ಕಡೆ ಅಧಿಕ ಸಂಖ್ಯೆಯಲ್ಲಿ ಕ್ವಾರಿಗಳು ಹಲವು ವರ್ಷಗಳಿಂದ ಇದ್ದು, ಕಲ್ಲುಗಳು ಗುಣಮಟ್ಟದಲ್ಲೂ ಸೈ ಎನಿಸಿದ್ದವು.

    ಮುಡಿಪು, ಬಾಳೆಪುಣಿ, ಇನೋಳಿ ಮೊದಲಾದ ಭಾಗಗಳಲ್ಲಿ ರೆಡ್ ಬಾಕ್ಸೈಟ್ ದಂಧೆ ನಡೆಯುತ್ತಿದೆ ಎಂಬ ವಿಚಾರ ವಿವಾದಕ್ಕೆ ಕಾರಣವಾಗಿ ಸರ್ಕಾರದವರೆಗೂ ತಲುಪಿತ್ತು. ಇದಾದ ಬಳಿಕ ಅಲರ್ಟ್ ಆದ ಜಿಲ್ಲಾಡಳಿತ ಕೆಂಪು ಕಲ್ಲು ಕ್ವಾರಿಗಳಿಗೂ ಪರವಾನಗಿ ಪಡೆಯುವಂತೆ ಆದೇಶ ಹೊರಡಿಸಿದ್ದಲ್ಲದೆ, ಅನಧಿಕೃತ ಕ್ವಾರಿಗಳಿಗೆ ಪಿಡಿಒ ಮತ್ತು ಗ್ರಾಮಕರಣಿಕರನ್ನೇ ಹೊಣೆಗಾರರನ್ನಾಗಿಸುವ ಎಚ್ಚರಿಕೆ ನೀಡಿತು. ಇದರ ಬಳಿಕ ಗ್ರಾಮಕರಣಿಕರು ಕ್ವಾರಿ ಮಾಲೀಕರ ವಿರುದ್ಧ ಕಠಿಣ ಕೇಸುಗಳನ್ನು ಹಾಕಲು ಮುಂದಾಗಿದ್ದಾರೆ. ಇದರ ಪರಿಣಾಮ ಸೋಮವಾರದಿಂದ ಹೆಚ್ಚಿನ ಕ್ವಾರಿಗಳು ಬಂದ್ ಆಗಿವೆ. ಇದನ್ನು ಗಮನಿಸುವಾಗ ಮರಳಿನ ಹಾದಿಯಲ್ಲೇ ಕೆಂಪು ಕಲ್ಲು ಸಾಗುವ ಆತಂಕವೂ ಎದುರಾಗಿದೆ.

    ಉದ್ಯೋಗ ನಷ್ಟದ ಚಿಂತೆ: ಜಿಲ್ಲೆಯಲ್ಲಿ ಮೂವರು ಮಾತ್ರ ಕೆಂಪು ಕಲ್ಲು ಕ್ವಾರಿ ಪರವಾನಗಿ ಹೊಂದಿದ್ದಾರೆ. ಉಳಿದವರು ಮಾಲೀಕರಿಂದ ಜಮೀನು ಲೀಸ್ ಪಡೆದು ಕ್ವಾರಿಗಳನ್ನು ನಿರ್ವಹಿಸುತ್ತ ಬಂದಿದ್ದು, ಇದನ್ನು ನಂಬಿಕೊಂಡು ಕ್ವಾರಿ ಕಾರ್ಮಿಕರು, ಲಾರಿ, ಜೆಸಿಬಿಗಳ ಚಾಲಕ, ಮಾಲೀಕರು, ಲೋಡರ್‌ಗಳ ಕುಟುಂಬ ನಿರ್ವಹಣೆ ನಡೆಯುತ್ತಿತ್ತು. ಪ್ರಸಕ್ತ ಇವರೆಲ್ಲರೂ ಉದ್ಯೋಗ ಕಳೆದುಕೊಂಡು ತಲೆ ಮೇಲೆ ಕೈಇಟ್ಟು ಕುಳಿತುಕೊಳ್ಳುವಂತಾಗಿದೆ.
    ಲೀಸ್ ಆಧಾರದಲ್ಲಿ ಜಮೀನು ಪಡೆದ ಬಳಿಕ ಗರಿಷ್ಠ ಒಂದು ವರ್ಷ ಮಾತ್ರ ಕಲ್ಲು ತೆಗೆಯಲು ಸಾಧ್ಯವಿದ್ದು, ಬಳಿಕ ಅದಕ್ಕೆ ಮಣ್ಣು ಹಾಕಿ ಕೃಷಿ ಬೆಳೆಗೆ ಅವಕಾಶವೂ ಇದೆ. ನಿರ್ಜನ ಪ್ರದೇಶದಲ್ಲಿ ಗುಂಡಿಗಳನ್ನು ಹಾಗೆಯೇ ಬಿಟ್ಟರೆ ನೀರಿಂಗಿಸುವಿಕೆಗೂ ಉಪಕಾರಿ. ಆದರೆ ಮೂರು ವರ್ಷದ ಹಿಂದೆ ರಸ್ತೆ ಬದಿಯಿದ್ದ ಕ್ವಾರಿಗಳಿಗೆ ಮಕ್ಕಳು ಬಿದ್ದು ಮೃತಪಟ್ಟ ಬಳಿಕ ಇವುಗಳ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮದ ಎಚ್ಚರಿಕೆ ನೀಡಿತಾದರೂ ನಂತರದ ದಿನಗಳಲ್ಲಿ ತಣ್ಣಗಾಗಿತ್ತು.

    ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೃಷಿ ಜಾಗದಲ್ಲಿ ಕೆಂಪು ಕಲ್ಲು ತೆಗೆಯಲು 3‘ಎ’ಯಡಿ ಪರವಾನಗಿ ನೀಡಲಾಗುತ್ತಿದ್ದು, ಸ್ವಂತ ಜಮೀನು ಹೊಂದಿದವರಿಗೆ ಇದು ಅತ್ಯಂತ ಅನುಕೂಲವಾಗಿದೆ. ಇನ್ನು ಸರ್ಕಾರಿ ಜಮೀನಿನಲ್ಲಿ ಕಲ್ಲು ತೆಗೆಯಲು ಅವಕಾಶ ಇಲ್ಲ, ಏನಿದ್ದರೂ ಕಾನೂನಬದ್ಧವಾಗಿ ನಡೆಯಲಿ.
    -ರಾಜೇಶ್ ನಾಕ್ ಉಳೆಪಾಡಿಗುತ್ತು, ಬಂಟ್ವಾಳ ಶಾಸಕ 

    ಯಾವುದೇ ಜಮೀನಿನಲ್ಲೂ ಕೆಂಪು ಕಲ್ಲುಗಳನ್ನು ಹೆಚ್ಚೆಂದರೆ ಒಂದು ವರ್ಷ ತೆಗೆಯಬಹುದು. ಇದಕ್ಕೆ ಪರವಾನಗಿ ಪಡೆಯಲು ಗಣಿ ಇಲಾಖೆಗೆ ಅಲೆದಾಡುವುದು ಕಷ್ಟ. ಈಗಾಗಲೇ ಪರವಾನಗಿಗೆ ಹಾಕಿದ ಸಾಕಷ್ಟು ಅರ್ಜಿಗಳೂ ಅಲ್ಲಿವೆ. ಆ ಕಾರಣದಿಂದ ನಿಯಮ ಸಡಿಲೀಕರಣಗೊಳಿಸಿ ಪರವಾನಗಿ ನೀಡುವ ಅಧಿಕಾರ ಗ್ರಾಮಕರಣಿಕರಿಗೆ ಕೊಡಬೇಕು.
    -ಸತೀಶ್ ಆಚಾರ್ಯ, ಕೆಂಪು ಕಲ್ಲು ನಿರ್ವಾಹಕ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts