More

    43 ಸಾವಿರ ರೂ. ಗಡಿ ದಾಟಿದ ಕೆಂಪಡಕೆ

    ಶಿರಸಿ: ಇತ್ತೀಚಿನ ವರ್ಷಗಳ ಮಲೆನಾಡ ಅಡಕೆ ಇತಿಹಾಸದಲ್ಲಿ ಗುರುವಾರ ಕೆಂಪಡಕೆ (ರಾಶಿ) ಕ್ವಿಂಟಾಲ್ ಒಂದಕ್ಕೆ ಗರಿಷ್ಠ 43 ಸಾವಿರ ರೂಪಾಯಿ ಗಡಿ ದಾಟಿದೆ.

    ಮೂರ್ನಾಲ್ಕು ತಿಂಗಳಿಂದ ನಿಧಾನವಾಗಿ ಏರುತ್ತಿದ್ದ ಕೆಂಪಡಕೆ ದರವು ಗುರುವಾರದಂದು ಯಲ್ಲಾಪುರ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಒಂದಕ್ಕೆ ಕನಿಷ್ಠ 36,709 ಹಾಗೂ ಗರಿಷ್ಠ 43,900 ರೂ. ಹಾಗೂ ಶಿರಸಿ ಮಾರುಕಟ್ಟೆಯಲ್ಲಿ ಕನಿಷ್ಠ 37,099 ರೂ. ಹಾಗೂ ಗರಿಷ್ಠ 40, 169 ರೂ. ದರ ದಾಖಲಿಸಿ 2 ವರ್ಷಗಳಲ್ಲೇ ಉತ್ತಮ ದರವಾಗಿ ಗುರುತಿಸಿಕೊಂಡಿದೆ. ಇದಕ್ಕೆ ಹೋಲಿಸಿದರೆ ಸಿದ್ದಾಪುರ ಮಾರುಕಟ್ಟೆಯಲ್ಲಿ ಕನಿಷ್ಠ 37, 399 ಹಾಗೂ ಗರಿಷ್ಠ 39,599 ರೂ. ದಾಖಲಾಗಿದೆ. ವಾರದಿಂದೀಚೆಗೆ 38-39 ಸಾವಿರ ರೂ. ಆಸುಪಾಸಿದ್ದ ದರ ಈಗ 40 ಸಾವಿರ ರೂ. ಗಡಿ ದಾಟಿದ್ದು, ಹಂಗಾಮಿಗೆ ಸರಿಯಾಗಿ ಉತ್ತಮ ದರದ ನಿರೀಕ್ಷೆಯಲ್ಲಿದ್ದ ಅಡಕೆ ಬೆಳೆಗಾರರು ಇದರಿಂದ ಖುಷಿಯಾಗಿದ್ದಾರೆ.

    2014-15ರಲ್ಲಿ ಕೆಂಪಡಕೆ ಕ್ವಿಂಟಾಲ್ ಒಂದಕ್ಕೆ 81 ಸಾವಿರ ರೂ. ಗಡಿ ದಾಟಿದ್ದು, 2017ರಲ್ಲಿ 49 ಸಾವಿರ ರೂ. ಕುಸಿದಿತ್ತು. 2018 ಹಾಗೂ 2019ರಲ್ಲಿ ಸರಾಸರಿ 32 ಸಾವಿರ ರೂ. ಕ್ವಿಂಟಾಲ್ ಒಂದಕ್ಕೆ ಗರಿಷ್ಠ ದರ ಲಭಿಸಿತ್ತು. ಇದೀಗ ಮತ್ತೆ ದರ ಏರಿಕೆಯಾಗಿದ್ದು, ಬೆಳೆಗಾರರು ಇನ್ನಷ್ಟು ದರ ಏರುವ ನಿರೀಕ್ಷೆಯಲ್ಲಿದ್ದಾರೆ.

    ಪ್ರಸ್ತುತ ದರ ಹೆಚ್ಚುತ್ತಿದ್ದರೂ ಬೆಳೆಗಾರರು ಮಾರುಕಟ್ಟೆಗೆ ಮಾಲನ್ನು ಬಿಡುತ್ತಿಲ್ಲ. ಹೀಗಾಗಿ ದರ ಏರಿಸುವ ಮೂಲಕ ಅಡಕೆ ಹೊರತೆಗೆಸುವ ಕಾರ್ಯವನ್ನು ದಳ್ಳಾಳಿಗಳು ಮಾಡುತ್ತಿದ್ದಾರೆ. ಈ ಕಾರಣ ದರ ಹೆಚ್ಚು ದಾಖಲಾಗುತ್ತಿದೆ ಎಂಬುದು ಮಾರುಕಟ್ಟೆ ತಜ್ಞರ ಲೆಕ್ಕಾಚಾರ.

    2019ರ ಅತಿವೃಷ್ಟಿಯ ಕಾರಣ ಕೆಂಪಡಕೆ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಜತೆ, ಕೊನೆ ಕೊಯ್ಯಲು ಕೂಲಿಗಳಿಲ್ಲದೇ ಎಲ್ಲ ಅಡಕೆ ಚಾಲಿ ಅಡಕೆ ಮಾಡಲಾಗಿದೆ. ಹೀಗಾಗಿ ಕೆಂಪಡಕೆ ಉತ್ಪಾದನೆ ಶೇ.50ಕ್ಕಿಂತ ಕಡಿಮೆಯಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ್ದು, ದರ ಇನ್ನಷ್ಟು ಬರುವ ಸಾಧ್ಯತೆಯಿದೆ. | ಶಂಭುಲಿಂಗ ಹೆಗಡೆ ಕದಂಬ ಸಹಕಾರಿ ಅಧ್ಯಕ್ಷ

    ಪ್ರಸಕ್ತ ವರ್ಷ ಅಡಕೆ ಉತ್ಪಾದನೆಯಲ್ಲಿ ತೀವ್ರ ಇಳಿಮುಖವಾದ ಕಾರ ಣ ಹಂಗಾಮಿನ ಆರಂಭದಲ್ಲಿ 40 ಸಾವಿರ ರೂ. ಪ್ರತಿ ಕ್ವಿಂಟಾಲ್​ಗೆ ಲಭ್ಯವಾಗುವಂತಾಗಿದೆ. ಈ ದರ ನಿಧಾನಗತಿಯಲ್ಲಾದರೂ ಮತ್ತಷ್ಟು ಏರುವ ಸಾಧ್ಯತೆಯಿದೆ. | ರವೀಶ ಹೆಗಡೆ ಟಿಎಸ್​ಎಸ್ ಪ್ರಧಾನ ವ್ಯವಸ್ಥಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts