More

    ರೈತ ಮಕ್ಕಳ ವಿದ್ಯಾನಿಧಿಗೆ ಪಹಣಿ ತೊಡಕು; ತಂದೆ-ತಾಯಿ ಹೆಸರಲ್ಲಿ ಪಹಣಿ ಇರಬೇಕು ಎಂಬ ನಿಯಮ

    | ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

    ರಾಜ್ಯದ ರೈತರ ಮಕ್ಕಳಿಗೆ ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಘೋಷಿಸಿರುವ ಬಹುನಿರೀಕ್ಷಿತ ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ ವಿದ್ಯಾರ್ಥಿವೇತನ’ಕ್ಕೆ ಪಹಣಿ ಕಡ್ಡಾಯಗೊಳಿಸಿರುವುದು ಅರ್ಹ ಫಲಾನುಭವಿಗಳಿಗೆ ತಲೆನೋವು ತಂದಿದೆ.

    ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನವೇ ರೈತರ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿದ್ಯಾರ್ಥಿವೇತನ ಯೋಜನೆ ಘೋಷಣೆ ಮಾಡಿದ್ದರು. ಆದರೆ ಈ ವಿದ್ಯಾರ್ಥಿವೇತನ ಪಡೆಯಬೇಕಾದರೆ ಮಕ್ಕಳ ತಂದೆ ಅಥವಾ ತಾಯಿ ಹೆಸರಿನಲ್ಲಿ ಪಹಣಿ ಇರಲೇಬೇಕು. ತಾಲೂಕು ಕೃಷಿ ಕೇಂದ್ರಕ್ಕೆ ಪಹಣಿ, ಆಧಾರ್, ಫೋಟೋ, ಪ್ಯಾನ್​ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರ ನೀಡಬೇಕು. ಇ-ಆಡಳಿತ ಇಲಾಖೆಯ ಫ್ರೋಟ್ಸ್ ಮತ್ತು ಕುಟುಂಬ ತಂತ್ರಾಂಶದಲ್ಲಿ ಅಪ್​ಲೋಡ್ ಮಾಡಿ 16 ಅಂಕಿಗಳ ‘ರೈತರ ಗುರುತಿನ ಚೀಟಿ’(ಎಫ್​ಐಡಿ) ನೋಂದಣಿ ಮಾಡಬೇಕು. ಈ ಎಫ್​ಐಡಿ ಸಂಖ್ಯೆ ಇದ್ದರಷ್ಟೇ ವ್ಯಕ್ತಿಯನ್ನು ರೈತ ಎಂದು ಪರಿಗಣಿಸಲಾಗುತ್ತದೆ. ಆದರೆ, ವಿಭಕ್ತ ಕುಟುಂಬದ ಬಹುತೇಕ ಪಹಣಿಗಳು ಪೂರ್ವಜರ ಹೆಸರಿನಲ್ಲಿ ಇವೆ. ತಾತ, ಅಜ್ಜಿ ಮೃತಪಟ್ಟಿದ್ದರೂ ಮೊಮ್ಮಕ್ಕಳ ಹೆಸರಿಗೆ ಪೌತಿ ಖಾತೆ ಆಗಿಲ್ಲ. ಇನ್ನೂ ಕೆಲವು ಪ್ರಕರಣಗಳಲ್ಲಿ ಕುಟುಂಬಕ್ಕೆ ತಂದೆಯೇ ಮುಖ್ಯಸ್ಥನಾದ ಕಾರಣ ಸಾಯುವವರೆಗೂ ಆತನ ಹೆಸರಿನಲ್ಲೇ ಆಸ್ತಿಯ ಮಾಲಿಕತ್ವ ಇರುತ್ತದೆ. ಈ ವ್ಯಕ್ತಿಯ ಮೊಮ್ಮಕ್ಕಳಿಗೆ ತಂದೆ ಹೆಸರಿನಲ್ಲಿ ಎಫ್​ಐಡಿ ನೋಂದಣಿಗೆ ಸಾಧ್ಯವಾಗುತ್ತಿಲ್ಲ.

    ಪಿತ್ರಾರ್ಜಿತ ಆಸ್ತಿಗಳ ಹಂಚಿಕೆ ವಿವಾದ ಸೃಷ್ಟಿಯಾಗಿ ಕೋರ್ಟ್ ಮೆಟ್ಟಿಲೇರಿ ಆಸ್ತಿಯ ಅಧಿಕಾರ ವರ್ಗಾವಣೆ ಸಾಧ್ಯವಾಗದೆ ಪೂರ್ವಜರ ಹೆಸರಿನಲ್ಲೇ ಉಳಿದಿವೆ. ಈ ತಾಂತ್ರಿಕ ತೊಂದರೆಯಿಂದ ರೈತರ ಮಕ್ಕಳು ವಿದ್ಯಾರ್ಥಿವೇತನ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಎಲ್ಲ ಗೊಂದಲ ಬಗೆಹರಿಸಬೇಕಾದ ಕೃಷಿ ಇಲಾಖೆ ಅಧಿಕಾರಿಗಳಿಗೂ ಇದು ದೊಡ್ಡ ತಲೆನೋವಾಗಿದೆ.

    ಪಹಣಿ ಹೊಂದುವುದು ಸುಲಭವಲ್ಲ: ಸ್ಥಿರಾಸ್ತಿಯ ಪಹಣಿ ಹೊಂದುವುದು ಸುಲಭವಲ್ಲ. ಪಿತ್ರಾರ್ಜಿತ ಆಸ್ತಿಯಾದರೆ ಪೌತಿ ಖಾತೆ ಆಗಬೇಕು. ಆಸ್ತಿ ಹಕ್ಕುದಾರರು ಒಪ್ಪಿದರೆ ಮಾತ್ರ ಪಹಣಿ ಹೆಸರಿಗೆ ಬರಲಿದೆ. ಇಲ್ಲವಾದರೆ, ಕೃಷಿ ಮಾಡುತ್ತಿದ್ದರೂ ಪಹಣಿಯಲ್ಲಿ ಹೆಸರು ಸಿಗುವುದಿಲ್ಲ. ಇನ್ನು, ಗುತ್ತಿಗೆ ಆಧಾರದ ಮೇಲೆ ಕೃಷಿ ಮಾಡುವವರ ಸಂಖ್ಯೆಯೂ ದೊಡ್ಡದಿದೆ. ಈ ವರ್ಗದ ರೈತರಿಗೂ ಪಹಣಿ ಇಲ್ಲದೆ ಎಫ್​ಐಡಿ ನಂಬರ್ ದೊರೆಯುವುದಿಲ್ಲ.

    ಯಾರಿಗೆ ಎಷ್ಟು ಶಿಷ್ಯವೇತನ?: ಪಿಯುಸಿ/ಐಟಿಐ/ಡಿಪ್ಲೊಮಾ ವಿದ್ಯಾರ್ಥಿಗಳಿಗೆ 2,500 ರೂ., ವಿದ್ಯಾರ್ಥಿನಿಯರಿಗೆ 3 ಸಾವಿರ ರೂ., ಪದವಿ ವಿದ್ಯಾರ್ಥಿಗಳಿಗೆ 5 ಸಾವಿರ ರೂ., ವಿದ್ಯಾರ್ಥಿನಿಯರಿಗೆ 5,500 ರೂ., ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ 7,500 ರೂ. ವಿದ್ಯಾರ್ಥಿನಿಯರಿಗೆ 8 ಸಾವಿರ ರೂ. ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 10 ಸಾವಿರ ರೂ. ಮತ್ತು ವಿದ್ಯಾರ್ಥಿನಿಯರಿಗೆ 11 ಸಾವಿರ ರೂ. ವಿದ್ಯಾರ್ಥಿ ವೇತನವನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

    48 ಕೋಟಿ ರೂ. ಜಮಾ: ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ ವಿದ್ಯಾರ್ಥಿವೇತನ’ ಯೋಜನೆಯಡಿ ಈಗಾಗಲೇ 1,75,765 ಮಂದಿಯ ಬ್ಯಾಂಕ್ ಖಾತೆಗಳಿಗೆ 48.33 ಕೋಟಿ ರೂ. ಜಮಾ ಮಾಡಲಾಗಿದೆ. ಮತ್ತೊಂದು ಹಂತದಲ್ಲಿ ಇನ್ನುಳಿದ ಹಣ ಜಮಾ ಮಾಡಲಾಗುತ್ತದೆ ಎಂದು ಕೃಷಿ ಇಲಾಖೆ ನಿರ್ದೇಶಕಿ ನಂದಿನಿ ಕುಮಾರಿ, ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಅಧಿಕಾರಿಗಳ ಎಡವಟ್ಟು?: ವಿವಿಧ ಇಲಾಖೆಗಳ ಶೈಕ್ಷಣಿಕ ಮತ್ತು ಇತರ ದತ್ತಾಂಶ ಆಧಾರದ ಮೇಲೆ ಶಿಷ್ಯವೇತನ ನೀಡಲಾಗುತ್ತಿದೆ. ಆದರೆ, ಭೂ ಸುಧಾರಣೆಗಳ ಕಾಯ್ದೆ-79 ತೆಗೆದ ಮೇಲೆ ಕೃಷಿ ಜಮೀನನ್ನು ಯಾರು ಬೇಕಾದರೂ ಖರೀದಿಸುವ ಹಕ್ಕು ಲಭಿಸಿದೆ. ಉದ್ಯಮಿಗಳು, ಶ್ರೀಮಂತರು ಪಹಣಿ ಹೊಂದಿದ್ದು, ಕೃಷಿ ಸಾಲ, ಬೆಳೆ ಸಮೀಕ್ಷೆ, ಸಬ್ಸಿಡಿಯಲ್ಲಿ ಬಿತ್ತನೆ ಬೀಜ, ಗೊಬ್ಬರ, ಹೀಗೆ ಒಂದಿಲ್ಲೊಂದು ಕಾರಣಕ್ಕೆ ತಾಲೂಕು ಕೃಷಿ ಕೇಂದ್ರದಲ್ಲಿ ಪಹಣಿ ಕೊಟ್ಟು ಎಫ್​ಐಡಿ ಹೊಂದಿದ್ದಾರೆ. ಇದೇ ಡೇಟಾವನ್ನು ವಿದ್ಯಾನಿಧಿಗೂ ಪರಿಗಣಿಸಿರುವ ಸಾಧ್ಯತೆಗಳಿವೆ.

    ಕ್ರೂರ ಅಭಿಮಾನ: ಟಗರು ತಲೆ ಕಟ್ ಮಾಡಿ ಕಟೌಟ್​ಗೆ ನೇತು ಹಾಕಿದ್ರು ಅಲ್ಲು ಅರ್ಜುನ್ ಫ್ಯಾನ್ಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts