More

    ತಿಪಟೂರು ಎಪಿಎಂಸಿಯಲ್ಲಿ ಕೊಬ್ಬರಿಗೆ ದಾಖಲೆಯ ಬೆಲೆ ; ಕ್ವಿಂಟಾಲ್ ಬೆಲೆ 18 ಸಾವಿರ ರೂ.ಗೆ ಜಿಗಿತ

    | ಸೋರಲಮಾವು ಶ್ರೀಹರ್ಷ ತುಮಕೂರು

    ಕರೊನಾ ಲಾಕ್​ಡೌನ್​ನಲ್ಲಿ ರೈತರೆಲ್ಲಾ ಬೆಳೆದ ಬೆಳೆಗಳಿಗೆ ಮಾರುಕಟ್ಟೆಯ ಸಮಸ್ಯೆ ಎದುರಿಸುತ್ತಿರುವ ನಡುವೆ ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿಗೆ ಬಂಪರ್ ಬೆಲೆ ಸಿಕ್ಕಿದೆ. ಬುಧವಾರ ತಿಪಟೂರು ಎಪಿಎಂಸಿಯಲ್ಲಿ ನಡೆದಿರುವ ಇ-ಹರಾಜಿನಲ್ಲಿ ಕ್ವಿಂಟಾಲ್ ಕೊಬ್ಬರಿಗೆ ಗರಿಷ್ಠ 18000 ರೂ. ಸಿಕ್ಕಿರುವುದು ತೆಂಗು ಸೀಮೆಯ ರೈತರ ಸಂತೋಷಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಕೊಬ್ಬರಿ ಖರೀದಿಯ ಅವಧಿಯನ್ನು ಮಧ್ಯಾಹ್ನದವರೆಗೂ ಹೆಚ್ಚಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.

    ಪ್ರಸ್ತುತ ಬೆಳಗ್ಗೆ 6ರಿಂದ 10ರ ವರೆಗೆ ಮಾತ್ರ ಮಾರುಕಟ್ಟೆಯಲ್ಲಿ ಕೊಬ್ಬರಿ ಕೊಂಡುಕೊಳ್ಳಲು ಅವಕಾಶವಿದ್ದು, ಬಹುತೇಕ ರೈತರು ಕೊಬ್ಬರಿ ಸುಲಿಯುವುದನ್ನು ಮುಂದೂಡಿದ್ದರು. ಈಗ ಬೆಲೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ರೈತರು ಕೊಬ್ಬರಿ ಮಾರಾಟ ಮಾಡಲು ಮುಗಿ ಬೀಳುತ್ತಿದ್ದು, ಮಾರುಕಟ್ಟೆಯ ಖರೀದಿ ಅವಧಿ ಹೆಚ್ಚಿಸಿದರೆ ವರ್ತಕರು ಹಾಗೂ ರೈತರಿಗೆ ಅನುಕೂಲವಾಗಲಿದೆ.

    2016ರಲ್ಲಿ ಮಾತ್ರ ಕೊಬ್ಬರಿ ಬೆಲೆ 18 ಸಾವಿರ ರೂ. ಗಡಿ ದಾಟಿದ ದಾಖಲೆ ಹೊಂದಿತ್ತು. ಉತ್ತರ ಭಾರತದ ಮಾರುಕಟ್ಟೆಗಳು ಸಂಪೂರ್ಣ ಬಂದ್ ಆಗಿದ್ದರೂ, ತಿಪಟೂರು ಕೊಬ್ಬರಿಯ ಪ್ರಮುಖ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಗಗನಕ್ಕೇರಿರುವುದು ಅಚ್ಚರಿ ತಂದಿದೆ. ತಮಿಳುನಾಡಿನಲ್ಲಿ ‘ರಾಜಪುರಿ’ ಕೊಬ್ಬರಿಗೆ ಬೇಡಿಕೆ ಬಂದಿರುವುದು ಬೆಲೆ ಹೆಚ್ಚಳಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

    ಮಾರುಕಟ್ಟೆಯಲ್ಲಿ ಬೆಲೆ ಗಗನಕ್ಕೇರಿದೆಯಾದರೂ ಕೊಬ್ಬರಿ ಆವಕ 1225 ಕ್ವಿಂಟಾಲ್ ಮಾತ್ರ. ಹಾಗಾಗಿ, ಹೆಚ್ಚು ಕೊಬ್ಬರಿ ಮಾರುಕಟ್ಟೆಗೆ ಬಂದಾಗಲೂ ಇದೇ ಬೆಲೆ ಇರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ, ಮುಂದಿನ ಒಂದೆರಡು ವಾರಗಳ ಕಾಲ ಬೆಲೆ ಇನ್ನೂ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದೆಯಾದರೂ ರೈತರು ಬೆಲೆ ಹೆಚ್ಚಳಕ್ಕೆ ಕಾಯದೇ ಈಗಿರುವ ಬೆಲೆಗೆ ಕೊಬ್ಬರಿ ಮಾರುವುದು ಒಳಿತು ಎನ್ನಲಾಗಿದೆ.

    ರುಚಿಗೆ ಹೆಸರಾಗಿರುವ ತಿಪಟೂರು, ಅರಸೀಕೆರೆ, ಹುಳಿಯಾರು ಮಾರುಕಟ್ಟೆಯ ಕೊಬ್ಬರಿಗೆ ಬೇಡಿಕೆ ಜಾಸ್ತಿಯಾಗಲಿದೆ. ಬುಧವಾರ ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ದಾಖಲೆಯ 18 ಸಾವಿರಕ್ಕೆ, ಕೌಟು(ಕೆಟ್ಟಿರುವ ಕೊಬ್ಬರಿ) ಸಹ 52 ಸಾವಿರ ರೂ.ಗೆ ಮಾರಾಟವಾಗಿದೆ,. ತೆಂಗಿನಕಾಯಿ ಬೆಲೆ ಸದ್ಯ 20 ರೂ. ಆಸುಪಾಸಿನಲ್ಲಿದ್ದು, ಶ್ರಾವಣ ಆರಂಭವಾದರೆ ಮತ್ತಷ್ಟು ಏರಿಕೆ ಕಾಣಲಿದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಡುತ್ತಾರೆ.

    ಬೆಲೆ ಹೆಚ್ಚಳಕ್ಕೆ ಕಾರಣವೇನು? : ತಿಪಟೂರು ಕೊಬ್ಬರಿಯ ಪ್ರಮುಖ ಮಾರುಕಟ್ಟೆ ಉತ್ತರ ಭಾರತವೇ ಆಗಿದೆ. ಆದರೆ, ಪ್ರಸ್ತುತ ಲಾಕ್​ಡೌನ್ ಕಾರಣಕ್ಕೆ ಉತ್ತರ ಭಾರತದ ರಾಜ್ಯಗಳಿಗೆ ಕೊಬ್ಬರಿ ಪೂರೈಕೆಯಾಗುತ್ತಿಲ್ಲವಾದರೂ ಬೆಲೆ ಹೆಚ್ಚಳವಾಗಿರುವುದು ಅಚ್ಚರಿ ಮೂಡಿಸಿದೆ. ತಮಿಳುನಾಡಿನಲ್ಲಿ ಖ್ಯಾತಿಗಳಿಸಿರುವ, ಉತ್ತರದ ಜನರು ತಿನ್ನಲು ಇಷ್ಟಪಡುವ ‘ರಾಜಾಪೂರಿ’ ಕೊಬ್ಬರಿಗೆ ಬೇಡಿಕೆ ಸೃಷ್ಟಿಯಾಗಿರುವುದು ಕೊಬ್ಬರಿ ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ಕಳೆದ 8 ವಾರಗಳಿಂದ ತಿಪಟೂರು ಎಪಿಎಂಸಿಯಲ್ಲಿ 2 ಸಾವಿರ ಚೀಲ ಮಾತ್ರ ಆವಕವಾಗಿದೆ. ಪೂರೈಕೆ ಕಡಿಮೆಯಾಗಿದ್ದು ಬೆಲೆ ಹೆಚ್ಚಳಕ್ಕೆ ಕಾರಣವಾಗಿರಬಹುದು, ಈಗ ರೈತರೆಲ್ಲಾ ಒಂದೇ ಸಮಯಕ್ಕೆ ಕೊಬ್ಬರಿಯನ್ನು ಮಾರುಕಟ್ಟೆಗೆ ತಂದರೆ ಬೆಲೆ ಕಡಿಮೆಯೂ ಆಗಬಹುದು. ಹಾಗಾಗಿ, ಈಗಿರುವ ಬೆಲೆಗೆ ಕೊಬ್ಬರಿ ಮಾರುವುದು ಜಾಣತನವಾಗಬಹುದು.

    ಏನಿದು ‘ರಾಜಪುರಿ’ ಕೊಬ್ಬರಿ! : ಉತ್ತರ ಭಾರತೀಯರು ಇಷ್ಟಪಟ್ಟು ತಿನ್ನುವ ‘ರಾಜಪುರಿ’ ಕೊಬ್ಬರಿ ತಮಿಳುನಾಡಿನಲ್ಲಿ ಹೆಚ್ಚು ಖ್ಯಾತಿಗಳಿಸಿದೆ, ತೆಂಗಿನಕಾಯಿ ಹೋಳುಗಳನ್ನು ಬಿಸಿಲಿನಲ್ಲಿ ಒಣಗಿಸಿ ‘ರಾಜಪುರಿ’ ಕೊಬ್ಬರಿ ತಯಾರಿಸಲಾಗುತ್ತದೆ. ಈ ಕೊಬ್ಬರಿ ಬೇಡಿಕೆ ಅರಿತ ತಿಪಟೂರು ಎಪಿಎಂಸಿಗಳಲ್ಲಿ ಕೊಬ್ಬರಿಯನ್ನೇ ರಾಜಪುರಿಯನ್ನಾಗಿ ಮಾಡಿ ಮಾರಾಟ ಮಾಡುತ್ತಿರುವುದು ನಮ್ಮ ಕೊಬ್ಬರಿಗೂ ಬೇಡಿಕೆ ಸೃಷ್ಟಿಸಿದೆ.

    ಲಾಕ್​ಡೌನ್ ನಡುವೆಯೂ ಮಾರುಕಟ್ಟೆಯಲ್ಲಿ ಬುಧವಾರ ಗರಿಷ್ಠ 18 ಸಾವಿರಕ್ಕೆ ಮಾರಾಟವಾಗಿರುವುದು ಸಹಜವಾಗಿ ರೈತರಲ್ಲಿ ಹರ್ಷ ಮೂಡಿಸಿದೆ. ಇ-ಹರಾಜು ಆರಂಭಿಸಿದ 2016ರಲ್ಲಿ ಒಮ್ಮೆ ಮಾತ್ರ ಬೆಲೆ 20 ಸಾವಿರಕ್ಕೆ ತಲುಪಿದ ದಾಖಲೆಯಿದೆ. ಇತ್ತೀಚಿನ ಬೆಳವಣಿಗೆ ಗಮನಿಸಿದರೆ ಪ್ರಸ್ತುತ ಅತ್ಯುತ್ತಮ ಬೆಲೆ ಎಂದೇ ಭಾವಿಸಲಾಗಿದೆ.

    ನಾಮೇಗೌಡ, ಕಾರ್ಯದರ್ಶಿ, ತಿಪಟೂರು ಎಪಿಎಂಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts