More

    ಸರ್ಕಾರಿ ಸಿಬ್ಬಂದಿ ವೇತನ ಶೇ.27.5ರಷ್ಟು ಹೆಚ್ಚಳಕ್ಕೆ ಶಿಫಾರಸು; ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ರಾಜ್ಯ ಸರ್ಕಾರಿ ಸಿಬ್ಬಂದಿಯ ಮೂಲ ವೇತನದ ಶೇಕಡ 27.5ರಷ್ಟು ಹೆಚ್ಚಳ ಮಾಡಬೇಕು ಎಂದು ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ಸುಧಾಕರರಾವ್ ನೇತೃತ್ವದ ಏಳನೇ ವೇತನ ಆಯೋಗದ ವರದಿ ಶಿಫಾರಸು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದರು.

    ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಆಯೋಗದ ವರದಿ ಶನಿವಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಸಿಎಂ ಮಾತನಾಡಿ ಅಸ್ತಿತ್ವದಲ್ಲಿರುವ ಮೂಲ ವೇತನವನ್ನು 17 ಸಾವಿರ ರೂ.ಗಳಿಂದ 27 ಸಾವಿರ ರೂ.ಗಳಿಗೆ ಏರಿಸಬೇಕು ಎನ್ನುವುದು ಮತ್ತೊಂದು ಶಿಫಾರಸಾಗಿದೆ.

    ವರದಿ ಹಾಗೂ ಶಿಫಾರಸುಗಳನ್ನು ನಾನಿನ್ನೂ ಪೂರ್ತಿ ನೋಡಿಲ್ಲ. ವರದಿ ಸ್ವೀಕರಿಸಿದ ನಂತರ ಸುಧಾಕರರಾವ್ ಜತೆಗೆ ಚರ್ಚಿಸಿದಾಗ ಇವೆರಡು ಶಿಫಾರಸುಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

    ಆರ್ಥಿಕ ಇಲಾಖೆ ಪರಿಶೀಲನೆ

    ಏಳನೇ ವೇತನ ಆಯೋಗದ ವರದಿಯನ್ನು ಆರ್ಥಿಕ ಇಲಾಖೆ ಪರಿಶೀಲಿಸಲಿದೆ. ಕನಿಷ್ಠ ಮೂರ್ನಾಲ್ಕು ದಿನಗಳಾದರೂ ಪರಿಶೀಲನೆಗೆ ಕಾಲಾವಕಾಶ ಹಿಡಿಯುತ್ತದೆ. ಆರ್ಥಿಕ ಇಲಾಖೆ ತನ್ನ ನಿಲುವು ಏನೆಂಬುದು ತಿಳಿಸಿದ ನಂತರ ಏಳನೇ ವೇತನ ಆಯೋಗದ ಅಂತಿಮ ವರದಿ ಬಗ್ಗೆ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಲಿದೆ.

    ಏಳನೇ ವೇತನ ಆಯೋಗದ ಅಂತಿಮ ವರದಿ ಜಾರಿಯಾಗುವ ತನಕ ಮಧ್ಯಂತರ ಪರಿಹಾರವಾಗಿ ಮೂಲ ವೇತನದಲ್ಲಿ ಶೇ 17ರಷ್ಟು ಹೆಚ್ಚಳ ಮುಂದುವರಿಯಲಿದೆ. ರಾಷ್ಟ್ರೀಯ ಚುನಾವಣೆ ಆಯೋಗ ಶನಿವಾರ ಮಧ್ಯಾಹ್ನ ಮಾಧ್ಯಮಗೋಷ್ಠಿ ಕರೆದಿದೆ. ಲೋಕಸಭೆ ಚುನಾವಣೆಗೆ ವೇಳಾಪಟ್ಟಿ, ನೀತಿ ಸಂಹಿತೆ ಜಾರಿ ಪ್ರಕಟಿಸುತ್ತದೆಯೋ ಇಲ್ಲವೋ ಗೊತ್ತಿಲ್ಲ.

    ಆದರೆ ಏಳನೇ ವೇತನ ಆಯೋಗದ ಅಂತಿಮ ವರದಿ ಪರಿಶೀಲಿಸಿ ಆರ್ಥಿಕ ಇಲಾಖೆ ತನ್ನ ನಿರ್ಧಾರ ತಿಳಿಸಲು ಕಾಲಾವಕಾಶ ನೀಡಬೇಕಾಗುತ್ತದೆ. ಏಳನೇ ವೇತನ ಆಯೋಗಕ್ಕೆ ನೀಡಿದ್ದ ಗಡುವು ಮಾ. 15ಕ್ಕೆ ಮುಕ್ತಾಯವಾಗಿರುವ ಕಾರಣ ಅಂತಿಮ ವರದಿ ಸಲ್ಲಿಸಿದ್ದು, ಸ್ವೀಕರಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು‌

    17,500 ಕೋಟಿ ರೂ ಹೊರೆ

    ಆಯೋಗದ ವರದಿ ಸಲ್ಲಿಸಿದ ಸುಧಾಕರರಾವ್ ಪ್ರತಿಕ್ರಿಯಿಸಿ, ಏಳನೇ ವೇತನ ಆಯೋಗದ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅಂತಿಮ ವರದಿಯನ್ನು ಅಂಗೀಕರಿಸಿ ಜಾರಿ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ 17,500 ಕೋಟಿ ರೂ ಹೊರೆಯಾಗಲಿದೆ ಎಂದು ಹೇಳಿದರು‌

    ಮೂಲ ವೇತನದಲ್ಲಿ ಶೇ27.5ರಷ್ಟು ಹೆಚ್ಚಳ, ಅಸ್ತಿತ್ವದಲ್ಲಿರುವ ಮೂಲ ವೇತನವನ್ನು 17 ಸಾವಿರ ರೂ.ಗಳಿಂದ 27 ಸಾವಿರ ರೂ.ಗೆ ಏರಿಸಲು ಶಿಫಾರಸು ಮಾಡಲಾಗಿದೆ. ಅಂತಿಮ ವರದಿ ಜಾರಿಯಾಗುವ ತನಕ ಮೂಲ ವೇತನಕ್ಕೆ ಮಧ್ಯಂತರ ಪರಿಹಾರ ಮುಂದುವರಿಯಲಿದೆ ಎಂದು ಸುಧಾಕರರಾವ್ ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts