More

    ಈ ಸಲ ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿಗೆ ಹೊಸ ಬ್ಯಾಟಿಂಗ್ ಕ್ರಮಾಂಕ!

    ಬೆಂಗಳೂರು: ‘ಈ ಸಲ ಕಪ್ ನಮ್ದೇ’ ಎನ್ನುವ ಅಭಿಮಾನಿಗಳ ಅಭಿಲಾಷೆಯನ್ನು ಈ ಸಲವಾದರೂ ಈಡೇರಿಸುವ ಸಂಕಲ್ಪ ಮಾಡಿರುವ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ, ಮುಂಬರುವ ಐಪಿಎಲ್ 14ನೇ ಆವೃತ್ತಿಗೆ ಹೊಸ ಯೋಜನೆಯೊಂದನ್ನು ಹಾಕಿಕೊಂಡಿದ್ದಾರೆ. ಆರ್‌ಸಿಬಿ ತಂಡದಲ್ಲಿ ಸಾಮಾನ್ಯವಾಗಿ 3ನೇ ಕ್ರಮಾಂಕದಲ್ಲಿ ಆಡುತ್ತ ಬಂದಿರುವ ವಿರಾಟ್ ಕೊಹ್ಲಿ, ಈ ಬಾರಿ ತಂಡದ ಯಶಸ್ಸಿಗಾಗಿ ಹೊಸ ಕ್ರಮಾಂಕವೊಂದರಲ್ಲಿ ಆಡಲು ನಿರ್ಧರಿಸಿದ್ದಾರೆ. ಹಾಗಾದರೆ ಅವರು ಆಡಲಿರುವ ಹೊಸ ಕ್ರಮಾಂಕ ಯಾವುದು ಗೊತ್ತೇ?

    ವಿರಾಟ್ ಕೊಹ್ಲಿ ಇತ್ತೀಚೆಗೆ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ನಿರ್ಣಾಯಕ 5ನೇ ಪಂದ್ಯದಲ್ಲಿ ರೋಹಿತ್ ಶರ್ಮ ಜತೆಗೆ ಆರಂಭಿಕರಾಗಿ ಆಡಿದ್ದರು. ಇದರ ಮುಂದುವರಿದ ಭಾಗವನ್ನು ಆರ್‌ಸಿಬಿ ಅಭಿಮಾನಿಗಳು ಐಪಿಎಲ್‌ನಲ್ಲೂ ನೋಡಬಹುದು. ಅಂದರೆ ಐಪಿಎಲ್‌ನಲ್ಲೂ ಆರಂಭಿಕರಾಗಿ ಆಡಲು ವಿರಾಟ್ ಕೊಹ್ಲಿ ನಿರ್ಧರಿಸಿದ್ದು, ಕನ್ನಡಿಗ ಹಾಗೂ ಯುವ ಎಡಗೈ ಆರಂಭಿಕ ದೇವದತ್ ಪಡಿಕಲ್ ಜತೆಗೆ ಇನಿಂಗ್ಸ್ ಆರಂಭಿಸಲಿದ್ದಾರೆ.

    ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೊಸ ನಾಯಕನಾಗಲು ಯಾರ್ಯಾರು ಪೈಪೋಟಿಯಲ್ಲಿದ್ದಾರೆ ಗೊತ್ತೇ?

    ಆರ್‌ಸಿಬಿ ತಂಡದ ನಿರ್ದೇಶಕ ಮೈಕ್ ಹೆಸ್ಸನ್ ಈ ವಿಷಯವನ್ನು ಬಹಿರಂಗಪಡಿಸಿದ್ದು, ‘ದೇವದತ್ ಪಡಿಕಲ್ ಜತೆಗೆ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸುವುದನ್ನು ಎದುರು ನೋಡುತ್ತಿದ್ದೇನೆ. ಇದರಿಂದ ತಂಡಕ್ಕೆ ಎಡಗೈ-ಬಲಗೈ ಆರಂಭಿಕ ಜೋಡಿಯೂ ಸಿಗಲಿದೆ. ವಿರಾಟ್ ಕೊಹ್ಲಿ ಪವರ್‌ಪ್ಲೇಯಲ್ಲಿ ಉತ್ತಮವಾಗಿ ಆಡುವ ಸಾಮರ್ಥ್ಯ ಹೊಂದಿದ್ದು, ಅವರ ದಾಖಲೆಯೂ ಬಲಿಷ್ಠವಾಗಿದೆ. ಹೀಗಾಗಿ ಅವರು ಆರಂಭಿಕರಾಗಿ ಆಡುವುದರಿಂದ ತಂಡಕ್ಕೆ ಹೆಚ್ಚಿನ ಬಲ ಸಿಗಲಿದೆ. ನಾವು ಐಪಿಎಲ್ ಆಟಗಾರರ ಹರಾಜಿನ ಸಮಯದಲ್ಲೇ ಈ ಯೋಜನೆಯನ್ನು ಹೊಂದಿದ್ದೆವು’ ಎಂದು ವಿವರಿಸಿದ್ದಾರೆ.

    2020ರ ಐಪಿಎಲ್‌ನಲ್ಲಿ ದೇವದತ್ ಪಡಿಕಲ್ ಆಸ್ಟ್ರೇಲಿಯಾದ ಆರನ್ ಫಿಂಚ್ ಜತೆಗೆ ಇನಿಂಗ್ಸ್ ಆರಂಭಿಸಿದ್ದರು. ಈ ವೇಳೆ 21 ವರ್ಷದ ಪಡಿಕಲ್ 400ಕ್ಕೂ ಅಧಿಕ ರನ್ ಬಾರಿಸಿ ಮಿಂಚಿದ್ದರೂ, ಆರನ್ ಫಿಂಚ್ ಹೆಚ್ಚಿನ ಯಶಸ್ಸು ಕಂಡಿರಲಿಲ್ಲ. ಫಿಂಚ್ 12 ಪಂದ್ಯಗಳಲ್ಲಿ 268 ರನ್ ಗಳಿಸಿದ್ದರು. ಆರ್‌ಸಿಬಿ ಈ ಹಿಂದೆ ಕ್ರಿಸ್ ಗೇಲ್, ಕೆಎಲ್ ರಾಹುಲ್ ಅವರಂಥ ಬ್ಯಾಟ್ಸ್‌ಮನ್‌ಗಳನ್ನೂ ಆರಂಭಿಕರನ್ನಾಗಿ ಹೊಂದಿತ್ತು. ಅವರ ನಿರ್ಗಮನದ ಬಳಿಕ ಆರ್‌ಸಿಬಿ ಉತ್ತಮ ಆರಂಭಿಕರನ್ನು ಕಂಡುಕೊಳ್ಳಲು ಪರದಾಡುತ್ತ ಬಂದಿತ್ತು.

    ಮದುವೆ ಕಾರಣ ನೀಡಿ ಆರ್‌ಸಿಬಿ ತಂಡದ ಆರಂಭಿಕ ಪಂದ್ಯಕ್ಕೆ ಈ ಸ್ಪಿನ್ನರ್ ಗೈರು

    VIDEO| ಚೆನ್ನೈ ಸೂಪರ್‌ಕಿಂಗ್ಸ್ ಹೊಸ ಜೆರ್ಸಿಯಲ್ಲಿ ಸೈನಿಕರಿಗೆ ವಿಶೇಷ ಗೌರವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts