More

    ಪರಿಶುದ್ಧ ಭಕ್ತಿಯಿಂದ ದೈವ ಸಾಕ್ಷಾತ್ಕಾರ

    ಚಿಕ್ಕಮಗಳೂರು: ಪರಿಶುದ್ಧ ಭಕ್ತಿ, ಅಚಲ ನಂಬಿಕೆಯಿಂದ ದೈವ ಸಾಕ್ಷಾತ್ಕಾರ ಸಾಧ್ಯ ಎಂದು ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.

    ನಗರದ ಶಂಕರಪುರ ಕೊಂಗನಾಟಮ್ಮ ದೇವಸ್ಥಾನದ ಶಿಖರ ಕುಂಭಾಭಿಷೇಕ ನೆರವೇರಿಸಿ ಆಶೀರ್ವಚನ ನೀಡಿ, ಜಗತ್ತನ್ನು ನಿಯಂತ್ರಿಸುವ ಶಕ್ತಿಯೇ ಆದಿಶಕ್ತಿ. ಆ ಶಕ್ತಿಯನ್ನು ಜನ ಬೇರೆ ಬೇರೆ ಹೆಸರುಗಳಲ್ಲಿ ಆರಾಧಿಸಿದರೂ ಶಕ್ತಿ ಒಂದೇ ಎಂದು ಹೇಳಿದರು.
    ನಮ್ಮ ಹಿರಿಯರು ಅನಾದಿಕಾಲದಿಂದ ಶಕ್ತಿಯ ಅವತಾರಗಳನ್ನು ವಿವಿಧ ಹೆಸರುಗಳಲ್ಲಿ ಆರಾಧಿಸಿಕೊಂಡು ಬಂದಿದ್ದು, ಅದನ್ನು ಮುಂದುವರಿಸುತ್ತಲೇ ಬೇರೆಯವರ ಆಚಾರ-ವಿಚಾರಗಳನ್ನು ಗೌರವಿಸುವಂತಾಗಬೇಕು. ದೇವರ ಅನುಗ್ರಹಕ್ಕೆ ಜಾತಿ, ಧರ್ಮ, ಮೇಲು-ಕೀಳು ಭೇದವಿಲ್ಲ. ಪರಿಶುದ್ಧ ಭಕ್ತಿಗೆ ದೈವಶಕ್ತಿ ಒಲಿಯುತ್ತದೆ. ಸತ್ಕಾರ್ಯ, ಶುಭನುಡಿ, ಒಳ್ಳೆಯ ಚಿಂತನೆಗಳನ್ನು ರೂಢಿಸಿಕೊಳ್ಳುವ ಮೂಲಕ ಸುಖ, ಶಾಂತಿ, ಆರೋಗ್ಯದ ಜೀವನ ನಡೆಸಬೇಕು ಎಂದು ಆಶಿಸಿದರು.
    ಪುರಾಣಗಳಲ್ಲಿ ಹಲವು ಮಂದಿ ಸಾಧು-ಸಂತರು, ಸಾಧಕರು, ಮಹಾರಾಜರು ದೈವ ಸಾಕ್ಷಾತ್ಕಾರಕ್ಕೆ ಪ್ರಯತ್ನಿಸಿದರೂ ವಿಫಲರಾಗಿದ್ದರು. ಆದರೆ ಬೇಡರ ಕಣ್ಣಪ್ಪ ಹುಟ್ಟಿನಿಂದ ಬೇಡ ಸಮುದಾಯದವರಾದರೂ ಅವರ ಭಕ್ತಿಗೆ ಶಿವ ಮೆಚ್ಚಿದ. ಆ ಪೌರಾಣಿಕ ಕಥೆ ನಮ್ಮೆಲ್ಲರಿಗೂ ಸ್ಫೂರ್ತಿಯಾಗಬೇಕು ಎಂದು ಹೇಳಿದರು.
    ಮುಂಜಾನೆಯಿಂದಲೇ ದೇವಾಲಯದ ಆವರಣದಲ್ಲಿ ಹರಿಹರಪುರದ ಮಾರ್ಕಾಂಡೇಯ ಭಟ್ ಮತ್ತು ಋತ್ವಿಜರ ತಂಡ ಕಲಾಹೋಮ, ದೇವಿಮೂಲಮಂತ್ರ ಹೋಮ, ಪೂರ್ಣಾಹುತಿ ನೆರವೇರಿಸಿದರು. ಬಳಿಕ ದೇವಾಲಯದ ವಿಮಾನಗೋಪುರದ ಪಂಚಕಳಸಗಳಿಗೆ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಕುಂಭಾಭಿಷೇಕ ನೆರವೇರಿಸಿದರು.
    ಗ್ರಾಮಸ್ಥರಾದ ಪಾಂಡುರಂಗ, ಮುರುಗ, ಏಳುಮಲೈ, ಸತೀಶ, ವೇಲು, ಚಂದ್ರು, ಸೋಮ, ಶಂಕರ್, ಶ್ರೀನಿವಾಸ್, ಜಗದೀಶ್, ರಘು, ಆನಂದ್, ರವಿ, ಮೂರ್ತಿ, ಮಂಜು, ಮುರಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts