More

    ಮತ್ತೊಮ್ಮೆ ದಾಖಲೆ ಬರೆಯಲು ಸಿದ್ಧ

    ಕುಮಟಾ: ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ 6 ಬಾರಿ ಬಿಜೆಪಿ ಗೆದ್ದಿದೆ. ಮತ್ತೊಮ್ಮೆ ದಾಖಲೆ ಬರೆಯಲು ಸಿದ್ಧರಾಗಿದ್ದೇವೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

    ಇಲ್ಲಿನ ಜೆಡಿಎಸ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿರಸಿಯಲ್ಲಿ ಮೋದಿ ಕಾರ್ಯಕ್ರಮಕ್ಕೆ ಜನರ ಪ್ರೋತ್ಸಾಹ, ಬೆಂಬಲ ಗಮನಿಸಿದರೆ ದಾಖಲೆಯ ಗೆಲುವು ನಮ್ಮದಾಗಲಿದೆ ಎಂದರು.

    ಕ್ಷೇತ್ರದ ಕೃಷಿ, ಹೆದ್ದಾರಿ, ಮೀನುಗಾರಿಕೆ, ಕೃಷಿ, ಪ್ರವಾಸೋದ್ಯಮ, ಕೈಗಾರಿಕೆ, ಉದ್ಯೋಗ ಸೃಷ್ಟಿ, ಅತಿಕ್ರಮಣ ಸಮಸ್ಯೆ ಮುಂತಾದ ಎಲ್ಲ ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿ ನಮ್ಮ ಗುರಿ. ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಬಿಜೆಪಿ ಸರ್ಕಾರದ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ವಿಚಾರವನ್ನು ಕಾಂಗ್ರೆಸ್ ತಡೆದಿದ್ದರೂ ಮುಂದುವರಿಸಲು ಕ್ರಮ ವಹಿಸಲಾಗುವುದು ಎಂದರು.

    ಇಡೀ ದೇಶದಲ್ಲೇ ಹೀನಾಯ ಸೋಲಿನ ಅರಿವು ಕಾಂಗ್ರೆಸ್ ಪಕ್ಷಕ್ಕೆ ಆಗಿದೆ. ಬಹುಮತಕ್ಕೆ ಸಾಲುವಷ್ಟು ಸ್ವಂತದ ಅಭ್ಯರ್ಥಿಗಳು ಕಣದಲ್ಲಿ ಇಲ್ಲದಿದ್ದರೂ ಹತಾಶೆಯಿಂದ ಗ್ಯಾರಂಟಿ ಘೋಷಣೆ ಮಾಡಿದ್ದಾರೆ. ಅಲ್ಪಸಂಖ್ಯಾತರ ಓಲೈಕೆ ಕಾಂಗ್ರೆಸ್ ಸಿದ್ಧಾಂತದ ಭಾಗವಾಗಿದೆ. ಭವಿಷ್ಯದ ಅಭಿವೃದ್ಧಿಯ ವಿಷಯಗಳನ್ನು ಬಿಟ್ಟು ಚೊಂಬು ಪ್ರದರ್ಶನ ಮಾಡುತ್ತಿದೆ ಎಂದು ಟೀಕಿಸಿದರು.

    ಕಾಂಗ್ರೆಸ್ ಪಕ್ಷವು ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಪತಿ ಹೇಮಂತ ನಿಂಬಾಳ್ಕರ್ ಮೂಲಕ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಜನರ ಭಾವನೆಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಚುನಾವಣೆ ಆಯೋಗ ಸತ್ಯಾಸತ್ಯತೆ ಪರಿಶೀಲಿಸಬೇಕು. ಕಾಂಗ್ರೆಸ್ ಪರವಾಗಿ ಆಸೆ, ಆಮಿಷಗಳನ್ನು ಒಡ್ಡುತ್ತಿದ್ದು, ಅಧಿಕಾರ ದುರ್ಬಳಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ ಎಂದು ಆರೋಪಿಸಿದರು.

    ಶಿವರಾಮ ಹೆಬ್ಬಾರ ಹಾಗೂ ಅನಂತಕುಮಾರ ಹೆಗಡೆ ಅವರ ವರ್ತನೆ ನಡುವೆ ವ್ಯತ್ಯಾಸವಿದೆ. ಕೊನೆಯವರೆಗೂ ಅನಂತಕುಮಾರ ಹೆಗಡೆ ಅವರ ನಿರೀಕ್ಷೆ ಇರಲಿದೆ ಎಂದರು.

    ಶಾಸಕ ದಿನಕರ ಶೆಟ್ಟಿ ಮಾತನಾಡಿ, ಕ್ಷೇತ್ರದ ಜೆಡಿಎಸ್‌ನವರು ನನ್ನನ್ನು ಯಾವುದೇ ಸಂದರ್ಭದಲ್ಲಿ ಮುಕ್ತವಾಗಿ ಸಂಪರ್ಕಿಸಬಹುದು. ಒಗ್ಗಟ್ಟಿನಿಂದ ಕೆಲಸ ಮಾಡಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡೋಣ ಎಂದರು.

    ಜೆಡಿಎಸ್‌ನ ಸೂರಜ ನಾಯ್ಕ ಮಾತನಾಡಿ, ದೇಶದ ಅಭಿವೃದ್ಧಿಯ ಏಕೈಕ ಉದ್ದೇಶದಿಂದ ಬಿಜೆಪಿಯೊಂದಿಗೆ ಮೈತ್ರಿ ಸಾಧಿಸಿದ್ದು, ಜಿಲ್ಲೆಯಲ್ಲಿ ಮತ್ತು ನಮ್ಮ ಕ್ಷೇತ್ರದಲ್ಲಿ ಒಗ್ಗಟ್ಟಿನಿಂದ, ಒಳ್ಳೆಯ ರೀತಿಯಿಂದ ಚುನಾವಣೆ ಎದುರಿಸುತ್ತೇವೆ ಎಂದರು.

    ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಆರತಿ ಗೌಡ, ಮಂಡಲಾಧ್ಯಕ್ಷ ಜಿ.ಐ.ಹೆಗಡೆ, ಡಾ. ಜಿ.ಜಿ.ಹೆಗಡೆ, ಕೆ.ಜಿ.ಭಟ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts