More

    ಮೂರನೇ ಅಲೆ ಎದುರಿಸಲು ಸಿದ್ಧತೆ: ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್

    ಉಡುಪಿ: ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್ 2ನೇ ಅಲೆ ಕಡಿಮೆಯಾಗುತ್ತಿದ್ದು, 3ನೇ ಅಲೆ ಕಂಡುಬರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಈಗಿನಿಂದಲೇ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮೆಡಿಕಲ್ ಎಕ್ಸ್‌ಪರ್ಟ್ಸ್ ಸಮಿತಿ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಜಿಲ್ಲೆಯಲ್ಲಿ ಮಕ್ಕಳಸ್ನೇಹಿ ಕೋವಿಡ್ ಕೇರ್ ಸೆಂಟರ್ ಸಿದ್ಧಮಾಡಿಟ್ಟುಕೊಳ್ಳಬೇಕು. ಅಗತ್ಯವಿದ್ದಲ್ಲಿ ಮಕ್ಕಳ ಜತೆಗೆ ಪಾಲಕರು ತಂಗಲು ವ್ಯವಸ್ಥೆ ಕಲ್ಪಿಸಬೇಕು. ಮಕ್ಕಳ ಮಾಸ್ಕ್‌ಗಳ ದಾಸ್ತಾನು ಅಗತ್ಯವಾಗಿದೆ. ವೈದ್ಯಕೀಯ ಉಪಕರಣಗಳನ್ನು ಖರೀದಿಸುವಾಗ ಮಕ್ಕಳಿಗೆ ಕೋವಿಡ್ ಚಿಕಿತ್ಸೆಗೆ ಮಾತ್ರವಲ್ಲದೆ ಯಾವುದೇ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಬಹುದಾದಂತಹ ಬಹುಪಯೋಗಿ ಉಪಕರಣಗಳನ್ನು ಖರೀದಿಸಬೇಕು. ಇದರಿಂದ ಜಿಲ್ಲೆಯಲ್ಲಿ ಮಕ್ಕಳ ಆರೋಗ್ಯಕ್ಕಾಗಿ ಲಭ್ಯವಿರುವ ವೈದ್ಯಕೀಯ ಸೌಲಭ್ಯ ಹೆಚ್ಚಾಗುತ್ತವೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದರು.

    ಕೋವಿಡ್ 3ನೇ ಅಲೆಯು 18ಕ್ಕಿಂತ ಕಡಿಮೆ ವಯೋಮಿತಿಯವರಲ್ಲಿ ಕಂಡು ಬರುವ ಸಾಧ್ಯತೆಗಳಿವೆ. ಮೊದಲ ಮತ್ತು 2ನೇ ಅಲೆಯಲ್ಲಿ, ಮಕ್ಕಳಿಗೆ ಸೋಂಕು ಹರಡಿರುವ ಪ್ರಮಾಣ ಶೇ.3ರಷ್ಟು ಮಾತ್ರ ಇದೆ. ಹೀಗಾಗಿ 3ನೇ ಅಲೆ ಹರಡುವ ಕುರಿತು ಸ್ಪಷ್ಟ ಚಿತ್ರಣ ಲಭ್ಯವಾಗಿಲ್ಲ. ಆದರೂ ಮುನ್ನೆಚ್ಚರಿಕೆ ಅಗತ್ಯ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು.

    ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಮಾತನಾಡಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಈಗಿನಿಂದಲೇ ಮಕ್ಕಳಸ್ನೇಹಿಯಾಗಿ ದಿನನಿತ್ಯದ ಆರೋಗ್ಯ ಪರಿಶೀಲನೆ, ಮಕ್ಕಳ ಪಲ್ಸ್ ಆಕ್ಸಿಮೀಟರ್ ಬಳಕೆ ವಿಧಾನಗಳ ಬಗ್ಗೆ ತರಬೇತಿ ನೀಡಬೇಕು ಎಂದರು.
    ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಎಚ್‌ಒ ಡಾ.ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್, ಕೋವಿಡ್ ನೋಡಲ್ ಅಧಿಕಾರಿ ಡಾ.ಪ್ರಶಾಂತ ಭಟ್, ಡಾ. ಪ್ರೇಮಾನಂದ ಉಪಸ್ಥಿತರಿದ್ದರು.

    ಡೆತ್ ಅನಾಲಿಸಿಸ್ ಸಿದ್ಧಪಡಿಸಿ: ಈವರೆಗೆ ಕೋವಿಡ್‌ನಿಂದ ಮೃತಪಟ್ಟವರ ಡೆತ್ ಅನಾಲಿಸಿಸ್ ಮಾಡಿ ವರದಿ ನೀಡಬೇಕು. ಇದರಿಂದ ಸೋಂಕಿತರ ಹಿನ್ನೆಲೆ, ಮರಣದ ಕಾರಣಗಳು ಇನ್ನಿತರ ವಿವರಗಳು ಸಂಪೂರ್ಣವಾಗಿ ದೊರೆಯಲಿದೆ. ಮುಂದೆ ಕೋವಿಡ್ ಸಾವು ಸಂಭವಿಸದಂತೆ ಸ್ಪಷ್ಟ ಯೋಜನೆ ರೂಪಿಸಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದರು. ಕೋವಿಡ್ 3ನೇ ಅಲೆಯು ಮಕ್ಕಳಿಗೆ ಭಾದಿಸಿದಲ್ಲಿ ಈ ಬಗ್ಗೆ ಚಿಕಿತ್ಸೆ ನೀಡಲು ಅಗತ್ಯವಿರುವ ವೈದ್ಯರು ಮತ್ತು ಸಹಾಯಕ ಸಿಬ್ಬಂದಿಗೆ ತರಬೇತಿ, ಮಕ್ಕಳಿಂದ ಸ್ವಾಬ್ ಸಂಗ್ರಹ ಸೇರಿದಂತೆ ಚಿಕಿತ್ಸೆ ನೀಡುವ ವಿಧಾನಗಳ ಕುರಿತು ಕೈಪಿಡಿ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts