More

    ನೀರಿನ ಸಮಸ್ಯೆ ನಿವಾರಣೆಗೆ ಈಗಲೇ ಸಜ್ಜಾಗಿ ; ಅಧಿಕಾರಿಗಳಿಗೆ ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ ಸೂಚನೆ

    ಚಿಕ್ಕಬಳ್ಳಾಪುರ : ಮುಂಬರುವ ಬೇಸಿಗೆಯಲ್ಲಿ ಕಂಡು ಬರಲಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಈಗಲೇ ಯೋಜನೆ ರೂಪಿಸಿ, ಪರಿಹಾರ ಕೆಲಸಗಳಿಗೆ ಸಿದ್ಧತೆ ಕೈಗೊಳ್ಳಲು ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಡಳಿತ ಭವನದಲ್ಲಿನ ಜಿಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಮಾಸಿಕ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಬೇಸಿಗೆ ಆರಂಭಕ್ಕೂ ಮೊದಲೇ ನೀರಿನ ಅಭಾವ ಕಂಡು ಬರುತ್ತಿದ್ದು, ಮುಂಬರುವ ದಿನಗಳಲ್ಲಿ ಸಮಸ್ಯಾತ್ಮಕ ಗ್ರಾಮಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇದಕ್ಕೆ ಎಲ್ಲೂ ಕುಡಿಯುವ ನೀರು ಸಮಸ್ಯೆ ಉಂಟಾಗದಿರಲು ಎಚ್ಚರಿಕೆ ವಹಿಸಬೇಕು, ಯಾವುದೇ ಗ್ರಾಮಗಳಲ್ಲಿ ನೀರಿನ ಸಮಸ್ಯೆಯು ಗಮನಕ್ಕೆ ಬಂದ ತಕ್ಷಣ ತಾತ್ಕಾಲಿಕವಾಗಿ ನೀರು ಕಲ್ಪಿಸಿ, ಬಳಿಕ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು. ಅಗತ್ಯ ಇರುವ ಕಡೆ ಖಾಸಗಿ ಕೊಳವೆ ಬಾವಿ ಅಥವಾ ಟ್ಯಾಂಕರ್ ಮೂಲಕ ನೀರು ಪೂರೈಕೆಯಾಗಬೇಕು ಎಂದರು.

    ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಶಿವಕುಮಾರ್ ಲೋಕೂರ್, ಜಿಲ್ಲೆಯಲ್ಲಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯಾತ್ಮ 40 ಗ್ರಾಮಗಳನ್ನು ಗುರುತಿಸಿದ್ದು ಈ ಪೈಕಿ 3 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಹಾಗೂ 37 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಚಿಂತಾಮಣಿಯಲ್ಲಿ 15, ಶಿಡ್ಲಘಟ್ಟ ಹಾಗೂ ಚಿಕ್ಕಬಳ್ಳಾಪುರದಲ್ಲಿ ತಲಾ 11, ಬಾಗೇಪಲ್ಲಿಯಲ್ಲಿ 3 ಸಮಸ್ಯಾತ್ಮಕ ಗ್ರಾಮಗಳಿವೆ ಎಂದರು.

    ಜಂಟಿ ಕೃಷಿ ನಿರ್ದೇಶಕಿ ಎಲ್.ರೂಪ ಮಾತನಾಡಿ, ಜಿಲ್ಲೆಯಲ್ಲಿ ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ ಮಿನಿ ಟ್ರಾಕ್ಟರ್ ಗೆ ಹೆಚ್ಚಿನ ಬೇಡಿಕೆ ಇದ್ದು ಇದರಡಿ ಲಾನುಭವಿಗಳಿಗೆ 3 ಲಕ್ಷ ರೂ ಸಹಾಯಧನ ಸಿಗುತ್ತದೆ ಎಂದು ಮಾಹಿತಿ ನೀಡಿದಾಗ, ಕೃಷಿ ಇಲಾಖೆಯಿಂದ ಸಹಾಯಧನದಡಿ ರೈತರಿಗೆ ಮಿನಿ ಟ್ರಾಕ್ಟರ್‌ಗಳನ್ನು ನೀಡಿಲ್ಲ. ಈಗಲಾದರೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷರು ಸೂಚಿಸಿದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಂದಿರಾ ಕಬಾಡೆ ಮಾತನಾಡಿ, ಜಿಲ್ಲೆಯ ವಿವಿಧ ಕಡೆ ಈಗಾಗಲೇ ಪ್ರತಿಷ್ಠಿತ ಆಸ್ಪತ್ರೆಗಳ ಮೂಲಕ ಆರೋಗ್ಯ ಶಿಬಿರಗಳನ್ನು ನಡೆಸಲಾಗುತ್ತಿದೆ. ರಾಜೀವ್ ಗಾಂ ಆರೋಗ್ಯ ವಿಶ್ವ ವಿದ್ಯಾಲಯದ ಸಹಕಾರದೊಂದಿಗೆ ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು, ಪೆರೇಸಂದ್ರ ಹಾಗೂ ದಿಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಾದರಿ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಇತರೆ ಇಲಾಖೆಗಳ ಸಹಕಾರದೊಂದಿಗೆ ತಂಬಾಕು ಸೇವನೆ ಮತ್ತು ಮಾರಾಟದಲ್ಲಿ ನಿಯಮ ಉಲ್ಲಂಘಿಸುವ ಅಂಗಡಿಗಳ ಮೇಲೆ ದಾಳಿ ನಡೆಸಿ, ದಂಡ ವಿಧಿಸಲಾಗುತ್ತಿದೆ ಎಂದರು. ಸಭೆಯಲ್ಲಿ ಜಿ.ಪಂ.ಉಪಾಧ್ಯಕ್ಷೆ ಸರಸ್ವತಮ್ಮ, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಕೆ.ಸಿ.ರಾಜಾಕಾಂತ್, ಮುನಿಯಪ್ಪ, ಉಪ ಕಾರ್ಯದರ್ಶಿ ನೋಮೇಶ್, ಮುಖ್ಯ ಲೆಕ್ಕಾಧಿಕಾರಿ ಧನುರೇಣುಕಾ, ಮತ್ತಿತರರು ಇದ್ದರು.

    ಅನುದಾನ ವಾಪಸಾತಿಗೆ ಆಕ್ಷೇಪ : ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನವು ಖರ್ಚಾಗದೇ ವಾಪಸ್ಸಾಗುತ್ತಿರುವುದಕ್ಕೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು. ಕಳೆದ ಸಾಲಿನಲ್ಲಿ ಆರೋಗ್ಯ ಇಲಾಖೆ ಸೇರಿ ವಿವಿಧ ಇಲಾಖೆಯ ಅನುದಾನ ವಾಪಸ್ ಹೋಗಿ, ವ್ಯರ್ಥವಾಗಿದೆ. ಇದು ಮರುಕಳಿಸಬಾರದು. 1 ರೂ ಕೂಡ ವಾಪಸ್ ಹೋಗಬಾರದು. ಒಂದು ವೇಳೆ ಬಿಡುಗಡೆಯಾದ ಸಂಪೂರ್ಣ ಅನುದಾನವನ್ನು ಖರ್ಚು ಮಾಡದಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧ್ಯಕ್ಷರು ಎಚ್ಚರಿಕೆ ನೀಡಿದರು. ಜಿ.ಪಂ.ಸಿಇಒ ಪಿ.ಶಿವಶಂಕರ್ ಮಾತನಾಡಿ, ಪ್ರಸಕ್ತ ಸಾಲಿನ ಆರ್ಥಿಕ ವರ್ಷ ಮುಗಿಯಲು ಇನ್ನು ಒಂದು ತಿಂಗಳಷ್ಟೇ ಬಾಕಿ ಉಳಿದಿದೆ. ಕೆಲ ಇಲಾಖೆಗಳಲ್ಲಿ ೆಬ್ರವರಿ 15ಕ್ಕೆ ಅನುದಾನ ಬಿಡುಗಡೆ ಸ್ಥಗಿತಗೊಂಡಿದ್ದು, ಉಳಿದ ಇಲಾಖೆಗಳ ಅನುದಾನ ಯಾವಾಗ ಬೇಕಾದರೂ ಕಡಿತವಾಗಬಹುದು. ಇದಕ್ಕೆ ಫೆಬ್ರವರಿಯೊಳಗೆ ಅನುದಾನ ಬಳಕೆಯಾಗಿರಬೇಕು ಎಂದರು.

    ಆರೋಗ್ಯ ಸೇವೆ ಸುಧಾರಣೆ : ಆರೋಗ್ಯ ಮತ್ತು ವೈದ್ಯಕೀಯ ಖಾತೆ ನಿರ್ವಹಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್ ಹೆಚ್ಚಿನ ನೆರವಿನೊಂದಿಗೆ ಜಿಲ್ಲೆಯಲ್ಲಿ ಆರೋಗ್ಯ ಸೇವೆ ಮತ್ತಷ್ಟು ಸುಧಾರಣೆಗೆ ಶ್ರಮಿಸಲು ಸಭೆಯಲ್ಲಿ ಸಲಹೆ ಕೇಳಿ ಬಂತು.
    ಜಿಲ್ಲೆಯ ಆಸ್ಪತ್ರೆಗಳಿಗೆ ಅಗತ್ಯವಿರುವ ಸವಲತ್ತು, ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತರಬೇಕು. ಖ್ಯಾತ ಆಸ್ಪತ್ರೆಗಳ ಸಹಕಾರದೊಂದಿಗೆ ಜಿಲ್ಲಾದ್ಯಂತ ಪ್ರತಿ ತಿಂಗಳು ಒಂದೆರಡು ಆರೋಗ್ಯ ಶಿಬಿರಗಳನ್ನು ಕೈಗೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts