More

    ಬಿಜೆಪಿ ಜತೆಗಿನ ಮೈತ್ರಿ ಮರುಪರಿಶೀಲನೆ ಮಾಡಿ; ದೇವೇಗೌಡರಿಗೆ ಇಬ್ರಾಹಿಂ ಮನವಿ

    ಬೆಂಗಳೂರು: ಬಿಜೆಪಿ ಜತೆಗಿನ ಮೈತ್ರಿ ಮರುಪರಿಶೀಲನೆ ಮಾಡುವಂತೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರಿಗೆ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಂ.ಇಬ್ರಾಹಿಂ ಮನವಿ ಮಾಡಿದರು.

    ನಾನೇ ಈಗಲೂ ಜೆಡಿಎಸ್ ರಾಜ್ಯಾಧ್ಯಕ್ಷ. ವಿಸರ್ಜನೆ ಮಾಡಲು ಬರುವುದಿಲ್ಲ. ದೇವೇಗೌಡರು ತಪ್ಪು ಮಾಡಿದ್ದಾರೆ. ಇನ್ನೂ ಒಂದು ವಾರ ಕಾಯುತ್ತೇನೆ. ದೇವೇಗೌಡರು ಏನು ತೀರ್ಮಾನ ಮಾಡುತ್ತಾರೆ ಎಂಬುದನ್ನು ಕಾದು ನೋಡುತ್ತೇನೆ. ದೇವೇಗೌಡರ ಮೇಲೆ ನನಗೆ ವಿಶ್ವಾಸವಿದೆ ಎಂದು ಸುದ್ದಿಗಾರರಿಗೆ ಹೇಳಿದರು.

    ಜಿಲ್ಲಾಧ್ಯಕ್ಷರು, ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ. ಯಾರನ್ನೂ ನಾನು ಬಹಿರಂಗವಾಗಿ ಕರೆಯುತ್ತಿಲ್ಲ. ಲೋಕಸಭೆ ಚುನಾವಣೆಗೆ ಸಮಯವಿದೆ, ಮಾತಾಡೋಣ ಎಂದಿದ್ದೇನೆ ಎಂದು ಮಾರ್ಮಿಕ ಮಾತುಗಳನ್ನಾಡಿದರು.

    ಅ.26ರ ಬಳಿಕ ತೀರ್ಮಾನ

    ಕೇರಳ, ತಮಿಳುನಾಡು, ರಾಜಸ್ಥಾನ ಬಳಿಕ ಕಾರ್ಯಕ್ರಮದ ನಿಮಿತ್ತ ಉದಯಪುರಕ್ಕೆ ಹೋಗುತ್ತಿದ್ದೇನೆ. ಅ.26ರಂದು ಮುಂಬೈಗೆ ಹೋಗುತ್ತಿದ್ದೇನೆ. ಬೇರೆ ಪಕ್ಷದ ನಾಯಕರನ್ನು ಭೇಟಿ ಮಾಡುತ್ತೇನೆ. ನಾನು ಒಂದೇ ಕಡೆ ಕೂರುವುದಿಲ್ಲ ಎಂದರು.

    ನನ್ನನ್ನು ವಿಸರ್ಜನೆ ಮಾಡಲು ಬರುವುದಿಲ್ಲ

    ರಾಜ್ಯಾಧ್ಯಕ್ಷ ಸ್ಥಾನದಿಂದ ನನ್ನನ್ನು ವಿಸರ್ಜನೆ ಮಾಡಲು ಬರುವುದಿಲ್ಲ. ಚುನಾವಣೆ ಮೂಲಕ ಆಯ್ಕೆ ಆಗಿರುವ ಸಮಿತಿ. ರೋಲ್ಸ್ ಪ್ರಕಾರ ಪಾರ್ಟಿ ನಡೆಸಬೇಕು. ನನ್ನ ಇಚ್ಛೆ ಪ್ರಕಾರ ಪಾರ್ಟಿ ನಡೆಸಲು ಆಗಲ್ಲ. ಕೋರ್ ಕಮಿಟಿ ಮಾಡಿದ್ದು ನಾನು. ದೇವೇಗೌಡ ಮಾಡಿದ್ದು ಅಲ್ಲ. ರಾಜ್ಯದಲ್ಲಿ ಜೆಡಿಎಸ್ ಅಧ್ಯಕ್ಷರಿಗೆ ಅಧಿಕಾರ ಇರುತ್ತದೆ. ರಾಜ್ಯಾಧ್ಯಕ್ಷರು ಸಂವಿಧಾನ ವಿರುದ್ಧ ಹೋದರೇ, ನೋಟಿಸ್ ಕೊಡಬೇಕು. ಮೀಟಿಂಗ್ ಕರೆದು ಆ ಸಭೆಯಲ್ಲಿ ರಾಜ್ಯಾಧ್ಯಕ್ಷರನ್ನು ತೆಗೆಯಬೇಕಾಗುತ್ತದೆ ಎಂದು ಇಬ್ರಾಹಿಂ ತಿಳಿಸಿದರು.

    ಕುಮಾರಸ್ವಾಮಿ ಮೇಲೆ ಭರವಸೆ ಇಲ್ಲ

    ಕುಮಾರಸ್ವಾಮಿ ಅವರ ಮೇಲೆ ನನಗೆ ಭರವಸೆ ಇಲ್ಲ. ದೇವೇಗೌಡರ ಮೇಲೆ ನನಗೆ ಇನ್ನೂ ವಿಶ್ವಾಸವಿದೆ. ಅವರು ತಮ್ಮ ತೀರ್ಮಾನ ಮರುಪರಿಶೀಲಿಸಬಹುದೆಂದು ಕಾಯುತ್ತಿದ್ದೇನೆ ಎಂದರು.
    ಬಿಜೆಪಿ ಜತೆಗಿನ ಮೈತ್ರಿಯಿಂದ ಅಸಮಾಧಾನಗೊಂಡು ಸಿಎಂ ಇಬ್ರಾಹಿಂ ಆಪ್ತರ ಪ್ರತ್ಯೇಕ ಸಭೆ ನಡೆಸಿದ್ದರು. ಈ ಸಭೆ ಬಳಿಕ ಮಾತನಾಡಿದ ಇಬ್ರಾಹಿಂ, ನಮ್ಮದೆ ಓರಿಜಿನಲ್ ಪಕ್ಷ, ಮಾಜಿ ಸಿಎಂ ಕುಮಾರಸ್ವಾಮಿಯನ್ನು ಪಕ್ಷದಿಂದ ಉಚ್ಚಾಟನೆ ಮಾಡುತ್ತೇನೆ ಎಂದಿದ್ದರು. ಅದಕ್ಕೆ ಪ್ರತಿಯಾಗಿ ದೇವೇಗೌಡರು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಇಬ್ರಾಹಿಂ ಅವರನ್ನು ವಿಸರ್ಜಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts