More

    ಗಣರಾಜ್ಯೋತ್ಸವಕ್ಕೆ ಹೈ ಅಲರ್ಟ್: ಸಿಎಎ ಪ್ರತಿಭಟನೆ ಭೀತಿ, ಪ್ರತಿಭಟನಾಕಾರರ ವಿರುದ್ಧ ಕಾನೂನುಕ್ರಮದ ಎಚ್ಚರಿಕೆ

    ಬೆಂಗಳೂರು: ಗಣರಾಜ್ಯೋತ್ಸವದ ಮೇಲೆ ಉಗ್ರರು ಹಾಗೂ ಸಿಎಎ, ಎನ್​ಆರ್​ಸಿ ವಿರುದ್ಧದ ಪ್ರತಿಭಟನೆಯ ಕರಿನೆರಳು ಆವರಿಸಿರುವ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

    ಭಾನುವಾರ 71 ಗಣರಾಜ್ಯೋತ್ಸವ ನಡೆಯುವ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಜ.26ರ ಬೆಳಗ್ಗೆ 9 ಗಂಟೆಗೆ ರಾಜ್ಯಪಾಲ ವಿ.ಆರ್.ವಾಲಾ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಭಾರತೀಯ ವಾಯುಪಡೆ ಹೆಲಿಕಾಪ್ಟರ್​ನಿಂದ ಪುಷ್ಪವೃಷ್ಟಿ ಆಗಲಿದೆ. ಭಾರತೀಯ ರಕ್ಷಣಾ ಪಡೆಯ ಮೂವರು ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

    ನಗರದ ಎಲ್ಲೆಡೆ ಗಣರಾಜ್ಯೋತ್ಸವ ನಡೆಯಲಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಉಗ್ರರ ಬೆದರಿಕೆ ಇರುವ ಬಗ್ಗೆ ಕೇಂದ್ರ ಸರ್ಕಾರದಿಂದ ಮಾಹಿತಿ ಲಭಿಸಿದೆ. ಹೆದರುವ ಅಗತ್ಯವಿಲ್ಲ. ಪರೇಡ್ ಮೈದಾನ ಸೇರಿ ನಗರದೆಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಹೇಳಿದರು.

    ಕೆಲ ದಿನಗಳಿಂದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನೋಂದಣಿ ಕಾಯ್ದೆ ಪರ-ವಿರೋಧ ಪ್ರತಿಭಟನೆ, ಸಮಾವೇಶಗಳು ಸಾಕಷ್ಟು ನಡೆದಿವೆ. ಇದೀಗ ಅದನ್ನು ಮರೆತು ಎಲ್ಲರೂ ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ ದೇಶಕ್ಕೆ ಮತ್ತು ಸೈನಿಕರಿಗೆ ಗೌರವ ಸಲ್ಲಿಸಬೇಕು. ಒಂದು ವೇಳೆ ಪರೇಡ್ ಮೈದಾನದಲ್ಲಿ ಪ್ರತಿಭಟನೆ ಮಾಡಿ ಗೊಂದಲ ಸೃಷ್ಟಿಸಲು ಯತ್ನಿಸಿದರೆ ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭಾಸ್ಕರ್ ರಾವ್ ಎಚ್ಚರಿಕೆ ನೀಡಿದರು.

    ಪರೇಡ್ ಮೈದಾನದಲ್ಲಿ ಬಿಗಿ ಭದ್ರತೆ: ಪರೇಡ್ ಮೈದಾನದಲ್ಲಿ 75 ಪೊಲೀಸ್ ಅಧಿಕಾರಿ, ಸಿಬ್ಬಂದಿ ಕಣ್ಗಾವಲು ಇರಲಿದ್ದಾರೆ. ನಗರದ ಎಲ್ಲ ಹೋಟೆಲ್, ಲಾಡ್ಜ್, ತಂಗುದಾಣಗಳು ಇನ್ನಿತರ ಪ್ರದೇಶಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾವಹಿಸಲಾಗಿದೆ. ನಗರದ ಎಲ್ಲ ವಿಭಾಗದ 9 ಡಿಸಿಪಿ ನೇತೃತ್ವದಲ್ಲಿ 150 ಅಧಿಕಾರಿ, 943 ಸಿಬ್ಬಂದಿ ಭದ್ರತೆಗೆ ನಿಯೋಜಿಸಲಾಗಿದೆ. 10 ಕೆಎಸ್​ಆರ್​ಪಿ, 2 ಡಿಸ್ವಾ್ಯಟ್ ತಂಡ, 1 ಕ್ಷಿಪ್ರ ಕಾರ್ಯಾಚರಣೆ ಪಡೆ, ಗರುಡಾ ಪಡೆ, ಕಮಾಂಡ್ ಕಂಟ್ರೋಲ್ ವಾಹನಗಳು ಮೊಕ್ಕಾಂ ಹೂಡಲಿವೆ. ಮೈದಾನದ ಸಂಪೂರ್ಣ ತಪಾಸಣೆಗೆ 7 ಎಎಸ್ ಚೆಕ್ ತಂಡ ಕೆಲಸ ಮಾಡಲಿವೆ. ಮೈದಾನದ ಸುತ್ತಮುತ್ತಲಿರುವ 25 ಮಹಡಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 150 ಸಿಸಿ ಕ್ಯಾಮರಾಗಳು ಪ್ರತಿಕ್ಷಣವನ್ನು ಸೆರೆ ಹಿಡಿಯಲಿವೆ ಎಂದು ಪೊಲೀಸ್ ಆಯುಕ್ತರು ವಿವರಿಸಿದರು.

    ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್​ಕುಮಾರ್ ಗಣರಾಜ್ಯೋತ್ಸವದ ಪೂರ್ವಭಾವಿ ತಾಲೀಮು ಪರಿಶೀಲನೆ ನಡೆಸಿದರು. ನಗರ ಜಿಲ್ಲಾಧಿಕಾರಿ ಜಿ.ಎಸ್. ಶಿವಮೂರ್ತಿ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಪಾರ್ಕಿಂಗ್ ನಿರ್ಬಂಧ: ಜ.26ರ ಬೆಳಗ್ಗೆ 8.30ರಿಂದ 10.30ರವರೆಗೆ ಕಬ್ಬನ್ ರಸ್ತೆ, ಬಿಆರ್​ಎ ಜಂಕ್ಷನ್​ನಿಂದ ಕಾಮರಾಜ ರಸ್ತೆ ಜಂಕ್ಷನ್​ವರೆಗೆ ಎರಡು ದಿಕ್ಕುಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಅದರಂತೆ, ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತ, ಶಿವಾಜಿನಗರ ಬಸ್ ನಿಲ್ದಾಣದವರೆಗೆ, ಕಬ್ಬನ್ ರಸ್ತೆ, ಸಿಟಿಒ ವೃತ್ತದಿಂದ ಕೆ.ಆರ್. ರಸ್ತೆ, ಎಂ.ಜಿ. ರಸ್ತೆ, ಕ್ವೀನ್ಸ್ ವೃತ್ತದಲ್ಲಿ ರ್ಪಾಂಗ್ ನಿರ್ಬಂಧಿಸಲಾಗಿದೆ.

    ತುರ್ತು ಸೇವೆಗೆ ಸನ್ನದ್ಧ: ಆಕ್ಮಸಿಕ ಸಂಭವಿಸಿದಾಗ ತುರ್ತು ಸೇವೆಗೆ ಆಂಬುಲೆನ್ಸ್, ವೈದ್ಯಕೀಯ ಸೇವೆ ಮತ್ತು ಕೆಲವು ನಿರ್ದಿಷ್ಟ ಆಸ್ಪತ್ರೆಗಳನ್ನು ಗುರುತಿಸಿ, ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಅಗ್ನಿಶಾಮಕದಳದ ವಾಹನಗಳು ಸ್ಥಳದಲ್ಲಿ ಮೊಕ್ಕಾಂ ಹೂಡಲಿವೆ ಎಂದು ಬಿಬಿಎಂಪಿ ಆಯುಕ್ತ ವಿವರಿಸಿದರು.

    ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಬಿಗಿಭದ್ರತೆ: ಸಿಗರೇಟ್, ಬೆಂಕಿಪೊಟ್ಟಣ, ಕರಪತ್ರಗಳು, ಬಣ್ಣದ ದ್ರಾವಣ, ವಿಡಿಯೋ, ಸ್ಟಿಲ್ ಕ್ಯಾಮರಾ, ನೀರಿನ ಬಾಟಲಿಗಳು, ಕ್ಯಾನ್, ಶಸ್ತ್ರಾಸ್ತ್ರಗಳು, ಹರಿತವಾದ ವಸ್ತುಗಳು, ಚಾಕು-ಚೂರಿ, ಕಪು್ಪ ಕರವಸ್ತ್ರಗಳು, ತಿಂಡಿ, ತಿನಿಸು, ಮದ್ಯದ ಬಾಟಲಿ, ಬಾವುಟ, ಪಟಾಕಿ, ಸ್ಪೋಟಕ ವಸ್ತು, ಹೆಲ್ಮೆಟ್, ರೇಡಿಯೋ, ಕೊಡೆ, ಮೊಬೈಲ್ ಮೈದಾನದೊಳಗೆ ತರುವುದನ್ನು ನಿಷೇಧಿಸಲಾಗಿದೆ. ಬೆಳಗ್ಗೆ 8 ಗಂಟೆ ಒಳಗಾಗಿ ಪ್ರವೇಶಿಸಿ ಮೈದಾನದಲ್ಲಿ ಆಸೀನರಾಗುವುದು ಕಡ್ಡಾಯವಾಗಿದೆ.

     
    ಮೈದಾನದಲ್ಲಿ ವಾಹನಗಳ ನಿಲುಗಡೆಗೆ ಸ್ಥಳವಕಾಶ ಕಡಿಮೆ ಇರುವ ಕಾರಣ ಪ್ರೇಕ್ಷಕರು, ಅಧಿಕಾರಿ, ಸಿಬ್ಬಂದಿ ನಮ್ಮ ಮೆಟ್ರೋ, ಬಿಎಂಟಿಸಿ ಇನ್ನಿತರ ಸಾರ್ವಜನಿಕ ಸಾರಿಗೆ ಬಳಸುವುದು ಒಳಿತು.
    | ಡಾ. ಬಿ.ಆರ್. ರವಿಕಾಂತೇಗೌಡ ಜಂಟಿ ಪೊಲೀಸ್ ಆಯುಕ್ತ(ಸಂಚಾರ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts