More

    ಮೂವರಿಗೆ ಆರ್‌ಸಿಯು ಗೌರವ ಡಾಕ್ಟರೇಟ್

    ಬೆಳಗಾವಿ: ಹುಬ್ಬಳ್ಳಿಯ ಮೂರುಸಾವಿರ ಮಠದ ಪೀಠಾಧ್ಯಕ್ಷ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ಕೆ.ಗೋವಿಂದರಾಜ ಅವರಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಸೋಮವಾರ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.

    ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಕ್ರೀಡಾ ಮತ್ತು ಸಮಾಜಸೇವೆ ಕ್ಷೇತ್ರಕ್ಕಾಗಿ ಬೆಂಗಳೂರಿನ ಕೆ.ಗೋವಿಂದರಾಜ್ ಅವರಿಗೆ ಪದವಿ ಪ್ರದಾನ ಮಾಡಲಾಯಿತು. ಔದ್ಯಮಿಕ ಮತ್ತು ಹಣಕಾಸು ಕ್ಷೇತ್ರಕ್ಕಾಗಿ ಬೆಂಗಳೂರಿನ ಪದ್ಮಶ್ರೀ ಟಿ.ವಿ.ಮೋಹನದಾಸ ಪೈ (ಅವರು ಅನುಪಸ್ಥಿತರಿದ್ದ ಕಾರಣ) ಅವರಿಗೆ ಗೌರವ ಡಾಕ್ಟರೇಟ್ ನೀಡುತ್ತಿರುವ ಕುರಿತು ಘೋಷಿಸಲಾಯಿತು.

    33 ವಿದ್ಯಾರ್ಥಿಗಳಿಗೆ ಚಿನ್ನದ ಪದಕ: ವಿವಿಧ ಸಂಶೋಧನಾ ಪ್ರಬಂಧ ಮಂಡಿಸಿದ್ದ 79 ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಪ್ರದಾನ ಮಾಡಿದ ರಾಜ್ಯಪಾಲರು, ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಯ ಒಟ್ಟು 33,974 ವಿದ್ಯಾರ್ಥಿಗಳ ಪದವಿಯನ್ನು ಅಧಿಕೃತವಾಗಿ ಪ್ರಕಟಿಸಿದರು. ಸ್ನಾತಕ ಪದವಿ ಗಳಿಸಿದ 31,262 ವಿದ್ಯಾರ್ಥಿಗಳಲ್ಲಿ 77 ವಿದ್ಯಾರ್ಥಿಗಳು ರ‌್ಯಾಂಕ್ ಪಡೆದಿದ್ದು, ಅವರಲ್ಲಿ 11 ವಿದ್ಯಾರ್ಥಿಗಳಿಗೆ ಸುವರ್ಣ ಪದಕ ಹಾಗೂ ಸ್ನಾತಕೋತ್ತರ ಪದವಿ ಗಳಿಸಿದ 2,712 ವಿದ್ಯಾರ್ಥಿಗಳಲ್ಲಿ 68 ವಿದ್ಯಾರ್ಥಿಗಳು ರ‌್ಯಾಂಕ್ ಪಡೆದಿದ್ದಾರೆ. ಆ ಪೈಕಿ 22 ವಿದ್ಯಾರ್ಥಿಗಳಿಗೆ ಸುವರ್ಣ ಪದಕ ವಿತರಿಸಲಾಯಿತು.

    ಜ್ಞಾನ-ಕೌಶಲ ಅಗತ್ಯ: ಆನ್‌ಲೈನ್ ಮೂಲಕ ಘಟಿಕೋತ್ಸವ ಭಾಷಣ ಮಾಡಿದ ಬೆಂಗಳೂರಿನ ನ್ಯಾಕ್ ನಿರ್ದೇಶಕ ಪ್ರೊ. ಎಸ್.ಸಿ.ಶರ್ಮಾ, ಪ್ರಸ್ತುತ ಸನ್ನಿವೇಶದಲ್ಲಿ ನಮ್ಮೆದುರಿಗಿರುವ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು ಪದವಿಯೊಂದೇ ಸಾಲದು. ಅದರೊಟ್ಟಿಗೆ ಇನ್ನೂ ಹೆಚ್ಚಿನ ಜ್ಞಾನ-ಕೌಶಲದ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.

    ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್, ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠದ ಆಯುಕ್ತೆ ಗೀತಾ ಬಿ.ವಿ., ಜಿಲ್ಲಾ ಪಂಚಾಯಿತಿ ಸಿಇಒ ಎಚ್.ವಿ.ದರ್ಶನ, ಕುಲಪತಿ ರಾಮಚಂದ್ರಗೌಡ, ಕುಲಸಚಿವ ಪ್ರೊ.ಬಸವರಾಜ ಪದ್ಮಶಾಲಿ ಹಾಗೂ ಕುಲಸಚಿವ ಪ್ರೊ. ಎಸ್.ಎಂ. ಹುರಕಡ್ಲಿ ಸೇರಿದಂತೆ ವಿಶ್ವವಿದ್ಯಾಲಯದ ಸಿಂಡಿಕೇಟ್, ವಿದ್ಯಾವಿಷಯಕ ಪರಿಷತ್‌ನ ಸದಸ್ಯರು ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts