More

    ಕೊನೇ ಎಸೆತಕ್ಕೆ ಸಿಕ್ಸರ್ ಸಿಡಿಸಿ ಆರ್‌ಸಿಬಿ ಗೆಲ್ಲಿಸಿದ ಭರತ್; ಮ್ಯಾಕ್ಸ್‌ವೆಲ್ ಜತೆಗೂಡಿ ದಿಟ್ಟ ಚೇಸಿಂಗ್

    ದುಬೈ: ಕೊನೇ ಎಸೆತದಲ್ಲಿ 5 ರನ್ ಬೇಕಾಗಿದ್ದಾಗ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆಎಸ್ ಭರತ್ (78*ರನ್, 52 ಎಸೆತ, 3 ಬೌಂಡರಿ, 4 ಸಿಕ್ಸರ್) ಲಾಂಗ್ ಆನ್‌ನತ್ತ ಸಿಡಿಸಿದ ಭರ್ಜರಿ ಸಿಕ್ಸರ್ ನೆರವಿನಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಟೇಬಲ್ ಟಾಪರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸುವ ಮೂಲಕ ಐಪಿಎಲ್-14ರ ಪ್ಲೇಆಫ್​ ಕಾದಾಟಕ್ಕೆ ಆತ್ಮವಿಶ್ವಾಸದೊಂದಿಗೆ ಸಜ್ಜಾಗಿದೆ. ಭರತ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (51*ರನ್, 33 ಎಸೆತ, 8 ಬೌಂಡರಿ) ದಿಟ್ಟ ಚೇಸಿಂಗ್‌ನಿಂದ ಆರ್‌ಸಿಬಿ ತಂಡ, ತನ್ನ ಕಡೇ ಲೀಗ್ ಪಂದ್ಯದಲ್ಲಿ ಆರಂಭಿಕ ಆಘಾತದ ನಡುವೆಯೂ ರೋಚಕ ಗೆಲುವು ಸಾಧಿಸಿತು.

    ದುಬೈ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಪೃಥ್ವಿ ಷಾ (48 ರನ್, 31 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ಶಿಖರ್ ಧವನ್ (43 ರನ್, 35 ಎಸೆತ, 3 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್‌ಗೆ 164 ರನ್ ಪೇರಿಸಿತು. ಪ್ರತಿಯಾಗಿ ಆರ್‌ಸಿಬಿ ತಂಡ 3 ವಿಕೆಟ್‌ಗೆ 166 ರನ್ ಪೇರಿಸಿ ಜಯಿಸಿತು. ಆವೇಶ್ ಖಾನ್ ಎಸೆದ ಕಡೇ ಓವರ್‌ನಲ್ಲಿ 15 ರನ್ ಬೇಕಿತ್ತು. ಮ್ಯಾಕ್ಸ್‌ವೆಲ್ ಮೊದಲೆರಡು ಎಸೆತಗಳಲ್ಲಿ ಬೌಂಡರಿ ಸಹಿತ 6 ರನ್ ಕಸಿದರೆ, 3ನೇ ಎಸೆತದಲ್ಲಿ ಲೆಗ್‌ಬೈ ಮೂಲಕ 1 ರನ್ ಬಂತು. 4ನೇ ಎಸೆತಕ್ಕೆ ರನ್ ಇಲ್ಲ. 5ನೇ ಎಸೆತದಲ್ಲಿ 2 ರನ್. ಮರು ಎಸೆತ ವೈಡ್. ಬಳಿಕ ಕೊನೇ ಎಸೆತದಲ್ಲಿ ಭರತ್ ಸಿಕ್ಸರ್ ಚಚ್ಚಿದರು.

    ಆರ್‌ಸಿಬಿ ಮೊತ್ತ 6 ರನ್ ಆಗುವಷ್ಟರಲ್ಲೇ ಆರಂಭಿಕರಾದ ದೇವದತ್ ಪಡಿಕಲ್ (0) ಮತ್ತು ನಾಯಕ ವಿರಾಟ್ ಕೊಹ್ಲಿ (4) ಡಗೌಟ್ ಸೇರಿದ್ದರೆ, ಎಬಿ ಡಿವಿಲಿಯರ್ಸ್‌ (26) ತುಸು ಚೇತರಿಕೆ ನೀಡಿ ಇನಿಂಗ್ಸ್‌ನ 10ನೇ ಓವರ್‌ನಲ್ಲಿ ಔಟಾದರು. ಆಗ ಜತೆಗೂಡಿದ ಕೆಎಸ್ ಭರತ್ ಮತ್ತು ಮ್ಯಾಕ್ಸ್‌ವೆಲ್ ಮುರಿಯದ 4ನೇ ವಿಕೆಟ್‌ಗೆ 63 ಎಸೆತಗಳಲ್ಲಿ 111 ರನ್ ಸೇರಿಸಿ ಆರ್‌ಸಿಬಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಗೆಲುವಿನ ನಡುವೆಯೂ ಆರ್‌ಸಿಬಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲೇ ಉಳಿಯಿತು.

    ಡೆಲ್ಲಿಗೆ ಶಿಖರ್ ಧವನ್-ಪೃಥ್ವಿ ಷಾ ಆಸರೆ
    ಡೆಲ್ಲಿ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕುವ ಲೆಕ್ಕಾಚಾರದೊಂದಿಗೆ ಫೀಲ್ಡಿಂಗ್ ಆಯ್ದುಕೊಂಡ ನಾಯಕ ವಿರಾಟ್ ಕೊಹ್ಲಿ ಲೆಕ್ಕಾಚಾರವನ್ನು ಶಿಖರ್ ಧವನ್-ಪೃಥ್ವಿ ಷಾ ಜೋಡಿ ಸಂಪೂರ್ಣ ಉಲ್ಟಾ ಮಾಡಿತು. ವೇಗಿಗಳಿಗೆ ನೆರವಾಗುವ ಪಿಚ್‌ನಲ್ಲಿ ಧವನ್ ಹಾಗೂ ಪೃಥ್ವಿ ಪರಸ್ಪರ ಪೈಪೋಟಿಗಿಳಿದವರಂತೆ ಬ್ಯಾಟ್ ಬೀಸಿದರು. ಈ ಜೋಡಿಯನ್ನು ಬೇರ್ಪಡಿಸಲು ಕೊಹ್ಲಿ ಪದೆ ಪದೇ ಬೌಲರ್‌ಗಳನ್ನು ಬದಲಿಸಿದರೂ ಪ್ರಯೋಜನವಾಗಲಿಲ್ಲ. ಧವನ್-ಪೃಥ್ವಿ ಜೋಡಿ 62 ಎಸೆತಗಳಲ್ಲಿ 88 ರನ್ ಜತೆಯಾಟವಾಡಿತು. ಧವನ್ ವಿಕೆಟ್ ಕಬಳಿಸುವ ಮೂಲಕ ವೇಗಿ ಹರ್ಷಲ್ ಪಟೇಲ್ ಈ ಜೋಡಿಯನ್ನು ಬೇರ್ಪಡಿಸಲು ಯಶಸ್ವಿಯಾದರು. ಇದರ ಬೆನ್ನಲ್ಲೇ ಚಾಹಲ್ ಎಸೆತದಲ್ಲಿ ಪೃಥ್ವಿ ಷಾ ಕೂಡ ನಿರ್ಗಮಿಸಿದರು. ಇದರೊಂದಿಗೆ ಡೆಲ್ಲಿ ತಂಡದ ರನ್‌ವೇಗಕ್ಕೂ ಬ್ರೇಕ್ ಹಾಕಲಾಯಿತು. ಬಳಿಕ ಬಂದ ನಾಯಕ ರಿಷಭ್ ಪಂತ್ (10), ಶ್ರೇಯಸ್ ಅಯ್ಯರ್ (18) ನಿರಾಸೆ ಅನುಭವಿಸಿದರೆ, ಶಿಮ್ರೋನ್ ಹೆಟ್ಮೆಯೆರ್ (29ರನ್, 22 ಎಸೆತ, 2 ಬೌಂಡರಿ, 2 ಸಿಕ್ಸರ್) ಸ್ಲಾಗ್ ಓವರ್‌ಗಳಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಲವಾಗಿ ಡೆಲ್ಲಿ ತಂಡದ ಮೊತ್ತ 160ರ ಗಡಿ ದಾಟಿತು.

    ಡೆಲ್ಲಿ ಕ್ಯಾಪಿಟಲ್ಸ್: 5 ವಿಕೆಟ್‌ಗೆ 164 (ಪೃಥ್ವಿ ಷಾ 48, ಶಿಖರ್ ಧವನ್ 43, ಶಿಮ್ರೋನ್ ಹೆಟ್ಮೆಯರ್ 29, ಮೊಹಮದ್ ಸಿರಾಜ್ 25ಕ್ಕೆ 2, ಚಾಹಲ್ 34ಕ್ಕೆ 1, ಹರ್ಷಲ್ ಪಟೇಲ್ 34ಕ್ಕೆ 1, ಡೇನಿಯಲ್ ಕ್ರಿಶ್ಚಿಯನ್ 19ಕ್ಕೆ 1), ಆರ್‌ಸಿಬಿ: 3 ವಿಕೆಟ್‌ಗೆ 166 (ಕೆಎಸ್ ಭರತ್ 78*, ಗ್ಲೆನ್ ಮ್ಯಾಕ್ಸ್‌ವೆಲ್ 51*, ಅನ್ರಿಚ್ ನೋಕಿಯಾ 24ಕ್ಕೆ 2, ಅಕ್ಷರ್ ಪಟೇಲ್ 39ಕ್ಕೆ 1)

    VIDEO| ಭಾರತದ ಪ್ರಧಾನಿ ಇಚ್ಛಿಸಿದಲ್ಲಿ ಪಾಕ್​ ಕ್ರಿಕೆಟ್ ಮಂಡಳಿ ಕುಸಿಯಬಹುದು ಎಂದ ರಮೀಜ್ ರಾಜ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts