More

    ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ : ಟಿಕೆಟ್‌ಗೆ ಪೈಪೋಟಿ

    ಸದೇಶ್ ಕಾರ್ಮಾಡ್ ಮೈಸೂರು
    ರಾಜ್ಯದ 6 ವಿಧಾನಸಭಾ ಕ್ಷೇತ್ರಗಳಿಗೆ ಜೂ.3 ರಂದು ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು, ಲೋಕಸಭಾ ಫಲಿತಾಂಶಕ್ಕೂ ಮುನ್ನವೇ ಜಿಲ್ಲೆಯಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯ ಚಟುವಟಿಕೆ ಬಿರುಸುಗೊಳ್ಳಲಿದೆ.

    ದಕ್ಷಿಣ ಶಿಕ್ಷಕರ ಕ್ಷೇತ್ರವು ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಯನ್ನು ಒಳಗೊಂಡಿದ್ದು, ಒಟ್ಟು 18,379 ಮತದಾರರು ಇದ್ದಾರೆ. ಪುರುಷರು 10,355, ಮಹಿಳೆಯರು 8,022 ಹಾಗೂ ಇತರೆ 2 ಮತದಾರರು ಇದ್ದಾರೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಒಟ್ಟು 20,700 ಮತದಾರರು ಇದ್ದರು.

    ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ನ ಮರಿತಿಬ್ಬೇಗೌಡ ಪ್ರತಿನಿಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಮರಿತಿಬ್ಬೇಗೌಡರ ಪ್ರಭಾವ ಹೆಚ್ಚಾಗಿದ್ದು, ಸತತ ನಾಲ್ಕು ಬಾರಿ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ಇವರು ಗೆಲುವು ಸಾಧಿಸುತ್ತಾ ಬಂದಿದ್ದಾರೆ.

    ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮರಿತಿಬ್ಬೇಗೌಡ ಜೆಡಿಎಸ್ ವರಿಷ್ಠರೊಂದಿಗೆ ಮುನಿಸಿಕೊಂಡಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತ. ಕಳೆದ ವರ್ಷ ನಡೆದ ವಿಧಾನ ಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ಅವರ ಗೆಲುವಿಗೆ ಮರಿತಿಬ್ಬೇಗೌಡ ಶ್ರಮಿಸಿದ್ದರು. ಆ ಸಂದರ್ಭದಲ್ಲಿಯೇ ಕಾಂಗ್ರೆಸ್ ಹೈಕಮಾಂಡ್ ಮರಿತಿಬ್ಬೇಗೌಡರಿಗೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್ ಖಾತ್ರಿ ಮಾಡಿದ್ದರು.

    ಕಾಂಗ್ರೆಸ್‌ನಿಂದ ಮರಿತಿಬ್ಬೇಗೌಡ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಖ ಖಚಿತವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಈ ಬಾರಿ ಆಕಾಂಕ್ಷಿಗಳು ಕಾಣಿಸಿಕೊಂಡಿಲ್ಲ. ಜೆಡಿಎಸ್‌ನಿಂದ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಸ್ಪರ್ಧಿಸುವ ಸಾಧ್ಯತೆ ಇದ್ದು, ಜೆಡಿಎಸ್ ಹೈಕಮಾಂಡ್ ಸಹ ಶ್ರೀಕಂಠೇಗೌಡರ ಸ್ಪರ್ಧೆಗೆ ಒಲವು ತೋರಿದ್ದಾರೆ. ಈ ಬಾರಿ ಸ್ಪರ್ಧೆಗೆ ಅವಕಾಶ ನೀಡಬೇಕು ಎಂದು ಜೆಡಿಎಸ್ ಮುಖಂಡ ವಿವೇಕ್ ವರಿಷ್ಠರ ಮುಂದೆ ಬೇಡಿಕೆ ಇಟ್ಟಿದ್ದು, ಅಂತಿಮವಾಗಿ ವರಿಷ್ಠರು ಯಾರಿಗೆ ಆಶೀರ್ವಾದ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

    ಬಿಜೆಪಿಯಲ್ಲಿ ಟಿಕೆಟ್ ಪೈಪೋಟಿ: ಬಿಜೆಪಿಯಲ್ಲಿ ಈ ಬಾರಿ ಟಿಕೆಟ್‌ಗೆ ಪೈಪೋಟಿ ಕಂಡು ಬಂದಿದೆ. ಮೈಸೂರು ವಿಶ್ವ ವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಇ.ಸಿ. ನಿಂಗರಾಜ್‌ಗೌಡ, ಜನಪದ ವಿಶ್ವವಿದ್ಯಾಲಯ ಸಿಂಡಿಕೇಟ್ ಮಾಜಿ ಸದಸ್ಯ ಡಾ. ವಸಂತ್ ಕುಮಾರ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿ ದ್ದಾರೆ. ಕಳೆದ ಬಾರಿ ಇದೇ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ ಬಿ. ನಿರಂಜನಮೂರ್ತಿ ಈ ಬಾರಿಯೂ ಸ್ಪರ್ಧೆಗೆ ಅವಕಾಶ ಕೋರಿದ್ದಾರೆ. ಈ ಮೂವರಲ್ಲಿ ಯಾರಿಗೆ ಹೈಕಮಾಂಡ್ ಆಶೀರ್ವಾದ ದೊರೆಯಲಿದೆ ಎಂಬ ಕುತೂಹಲ ಮೂಡಿದೆ.

    ಮೈತ್ರಿ ಮಾತುಕತೆ: ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ರಾಜಕೀಯ ಮೈತ್ರಿ ಮಾಡಿಕೊಂಡಿದ್ದು, ಜೆಡಿಎಸ್ ಇದೀಗ ಎನ್‌ಡಿಎ ಮೈತ್ರಿಕೂಟ ಸೇರಿಕೊಂಡಿದೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ನಿರಂತರವಾಗಿ ಮುಂದುವರೆಯಲಿದೆ ಎಂದು ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್ ವರಿಷ್ಠರು ಹೇಳಿಕೆ ನೀಡಿದ್ದಾರೆ. ಹಾಗಾಗಿ ಬಿಜೆಪಿ ಹಾಗೂ ಜೆಡಿಎಸ್ ಜತೆಗೂಡಿ ವಿಧಾನ ಪರಿಷತ್ ಚುನಾವಣೆ ಯನ್ನು ಎದುರಿಸಲಿದೆಯೇ ಎಂಬ ಕುತೂಹಲ ಇದೆ. ಹಾಗೊಂದು ವೇಳೆ ಚುನಾವಣೆಗೆ ಮೈತ್ರಿ ಏರ್ಪಟ್ಟರೆ ಸೀಟು ಹಂಚಿಕೆಯಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರ ಯಾರ ಪಾಲಾಗಲಿದೆ ಎಂಬ ಕುತೂಹಲ ಮೂಡಿದೆ.

    ಚುನಾವಣಾ ಅಧಿಸೂಚನೆ ಪ್ರಕಟ : ಮೇ 9
    ನಾಮಪತ್ರ ಸಲ್ಲಿಕೆಗೆ ಅಂತಿಮ ದಿನ : ಮೇ 16
    ನಾಮಪತ್ರ ಪರೀಶೀಲನೆ : ಮೇ 17
    ನಾಮಪತ್ರ ಹಿಂಪಡೆಯಲು ಕೊನೆಯ ದಿನ: ಮೇ 20
    ಮತದಾನ : ಜೂನ್ 3
    ಮತದಾನ ಸಮಯ : ಬೆಳಗ್ಗೆ 8 ರಿಂದ ಸಂಜೆ 4
    ಮತ ಎಣಿಕೆ : ಜೂ.6

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts