More

    ಶ್ರೇಯಸ್ ಅಯ್ಯರ್‌ಗಾಗಿ ಆರ್‌ಸಿಬಿ ಸಲ್ಲಿಸಲಿರುವ ಬಿಡ್​ ಮೊತ್ತವೆಷ್ಟು ಗೊತ್ತೇ?

    ನವದೆಹಲಿ: ಬೆಂಗಳೂರಿನಲ್ಲಿ ಫೆಬ್ರವರಿ 12 ಮತ್ತು 13ರಂದು ನಡೆಯಲಿರುವ ಐಪಿಎಲ್ 15ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಮುಂಬೈ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಅವರನ್ನು ಖರೀದಿಸಲು ಭರ್ಜರಿ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ. ತಂಡದ ನಾಯಕತ್ವವನ್ನೂ ವಹಿಸಬಲ್ಲ ಆಟಗಾರರಾಗಿರುವ ಕಾರಣ, ಶ್ರೇಯಸ್‌ಗೆ ಬೃಹತ್ ಮೊತ್ತದ ಬಿಡ್ಡಿಂಗ್ ನಡೆಯುವ ಸಾಧ್ಯತೆಗಳಿವೆ.

    ಸದ್ಯಕ್ಕೆ ಪ್ರಮುಖವಾಗಿ ಆರ್‌ಸಿಬಿ, ಕೋಲ್ಕತ ನೈಟ್‌ರೈಡರ್ಸ್‌ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಹೊಸ ನಾಯಕನ ಹುಡುಕಾಟದಲ್ಲಿವೆ. ಹೀಗಾಗಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಸ್ಟಾರ್ ಆಟಗಾರರ ಪೈಕಿ 27 ವರ್ಷದ ಶ್ರೇಯಸ್ ಅಯ್ಯರ್ ಅವರೇ ನಾಯಕತ್ವಕ್ಕೆ ನೆಚ್ಚಿನ ಆಯ್ಕೆ ಎನಿಸಿದ್ದಾರೆ. ಐಪಿಎಲ್‌ನಲ್ಲಿ ಈ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿ 2020ರ ಆವೃತ್ತಿಯ ಫೈನಲ್‌ಗೇರಿಸಿದ ದಾಖಲೆಯ ಬಲವೂ ಅವರಿಗೆ ಇದೆ.

    ಮಾಜಿ ಕ್ರಿಕೆಟಿಗ ಹಾಗೂ ವಿಶ್ಲೇಷಕ ಆಕಾಶ್ ಚೋಪ್ರಾ ಅವರು ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಹೇಳಿಕೊಂಡಿರುವ ಪ್ರಕಾರ, ಆರ್‌ಸಿಬಿ ತಂಡ ಶ್ರೇಯಸ್ ಅಯ್ಯರ್‌ಗಾಗಿ ಗರಿಷ್ಠ 20 ಕೋಟಿ ರೂ.ವರೆಗೂ ಬಿಡ್ ಸಲ್ಲಿಸಲು ಸಿದ್ಧವಿದೆ. ಆರ್‌ಸಿಬಿ ತಂಡದ ಮೂಲಗಳು ತಮಗೆ ಈ ಮಾಹಿತಿ ನೀಡಿವೆ ಎಂದು ಅವರು ತಿಳಿಸಿದ್ದಾರೆ. ಇನ್ನು ಶ್ರೇಯಸ್ ಅಯ್ಯರ್ ಅವರನ್ನು ಸೆಳೆಯಲು ಕೆಕೆಆರ್ ತಂಡ ಕೂಡ ಸಾಕಷ್ಟು ಪೈಪೋಟಿ ನಡೆಸಬಹುದಾಗಿದೆ. ಆದರೆ ಪಂಜಾಬ್ ಕಿಂಗ್ಸ್ ತಂಡ ಶ್ರೇಯಸ್ ಮೇಲೆ ಹೆಚ್ಚಿನ ಆಸಕ್ತಿ ತೋರುವ ಸಾಧ್ಯತೆ ಇಲ್ಲ ಎಂದು ಆಕಾಶ್ ಚೋಪ್ರಾ ವಿವರಿಸಿದ್ದಾರೆ.

    ಒಂದು ವೇಳೆ ಶ್ರೇಯಸ್ ಅಯ್ಯರ್ 20 ಕೋಟಿ ರೂ.ವರೆಗೆ ಬಿಡ್ಡಿಂಗ್ ಪಡೆದರೆ ಐಪಿಎಲ್‌ನಲ್ಲಿ ಅತ್ಯಧಿಕ ಸಂಭಾವನೆ ಪಡೆದ ಆಟಗಾರ ಎನಿಸಲಿದ್ದಾರೆ. ವಿರಾಟ್ ಕೊಹ್ಲಿ ಈ ಹಿಂದೆ ಆರ್‌ಸಿಬಿ ತಂಡದಲ್ಲಿ 17 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರೆ, ಕನ್ನಡಿಗ ಕೆಎಲ್ ರಾಹುಲ್ ಈ ಬಾರಿ 17 ಕೋಟಿ ರೂ. ಮೊತ್ತಕ್ಕೆ ಲಖನೌ ಸೂಪರ್‌ಜೈಂಟ್ಸ್ ತಂಡ ಸೇರಿದ್ದಾರೆ. ಇನ್ನು ಹರಾಜಿನಲ್ಲಿ ಕ್ರಿಸ್ ಮಾರಿಸ್ 16.2 ಕೋಟಿ ರೂ. ಪಡೆದಿದ್ದೇ ಗರಿಷ್ಠವಾಗಿದೆ. ಭಾರತೀಯರ ಪೈಕಿ ಯುವರಾಜ್ 2015ರಲ್ಲಿ ಡೆಲ್ಲಿ ತಂಡದಿಂದ 16 ಕೋಟಿ ರೂ. ಪಡೆದಿದ್ದೇ ಗರಿಷ್ಠವಾಗಿದೆ.

    ಯುವ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್, ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಡೇವಿಡ್ ವಾರ್ನರ್, ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ, ಕ್ವಿಂಟನ್ ಡಿಕಾಕ್ ಹರಾಜಿನಲ್ಲಿ ದೊಡ್ಡ ಮೊತ್ತದ ಬಿಡ್ ಕಾಣಬಹುದಾದ ಇತರ ಆಟಗಾರರು ಎಂದು ಆಕಾಶ್ ಚೋಪ್ರಾ ಹೆಸರಿಸಿದ್ದಾರೆ.

    ಐಪಿಎಲ್ ಹರಾಜಿಗೆ 590 ಆಟಗಾರರು; ಸ್ಟಾರ್ ಕ್ರಿಕೆಟಿಗರ ಮೂಲಬೆಲೆ ಎಷ್ಟು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts