More

    ಭರವಸೆ, ಹೊಸತನದ ಹಾದಿಯಲ್ಲಿ ಆರ್‌ಸಿಬಿ

    ಚುಟುಕು ಕ್ರಿಕೆಟ್ ಸಮರ ಆರಂಭಿಕ ಹಂತದಿಂದಲೂ ಈ ಸಲ ಕಪ್ ನಮ್ದೇ..ಈ ಸಲ ಕಪ್ ನಮ್ದೇ ಎಂಬ ಆರ್‌ಸಿಬಿ ಅಭಿಮಾನಿಗಳ ಉದ್ಘೋಷ ಮುಗಿಲುಮುಟ್ಟುತ್ತದೆ. ವಿಶ್ವ ಶ್ರೇಷ್ಠ ಆಟಗಾರರು ತಂಡದಲ್ಲಿದ್ದರೂ ಆರ್‌ಸಿಬಿ ಟ್ರೋಫಿ ಜಯಿಸಲು ವಿಲವಾಗಿದೆ. ತಂಡದ ಮೇಲಿರುವ ಪ್ರೀತಿ ಮಾತ್ರ ಅಭಿಮಾನಿಗಳಿಗೆ ಕಿಂಚಿತ್ತು ಕಡಿಮೆಯಾಗಿಲ್ಲ. ಪ್ರತಿ ವರ್ಷವೂ ಹೊಸ ಭರವಸೆಯೇ ತಂಡದ ಜೀವಾಳವಾಗಿದೆ. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ ಈ ಬಾರಿ ಕೆಲವೊಂದು ಹೊಸತನದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ನಾಯಕ ವಿರಾಟ್ ಕೊಹ್ಲಿ ಆರಂಭಿಕನಾಗಿ ಇನಿಂಗ್ಸ್ ಆರಂಭಿಸುತ್ತಿದ್ದರೆ, ನೂತನವಾಗಿ ತಂಡ ಸೇರ್ಪಡೆಗೊಂಡಿರುವ ಗ್ಲೆನ್ ಮ್ಯಾಕ್ಸ್‌ವೆಲ್, ಕೈಲಿ ಜೇಮಿಸನ್ ಅಲ್ಲದೆ, ಕೆಲ ದೇಶೀಯ ಆಟಗಾರರು ಈ ಬಾರಿ ಭರವಸೆ ಮೂಡಿಸಿದ್ದಾರೆ.

    * ಆರಂಭಿಕರಾಗಿ ವಿರಾಟ್ ಕೊಹ್ಲಿ..!
    ನಾಯಕ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸುತ್ತಿರುವುದು ಈ ಬಾರಿಯ ವಿಶೇಷ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಕಡೇ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸುವ ಮೂಲಕ ಐಪಿಎಲ್‌ಗೂ ಇದೇ ಮಾದರಿಯಲ್ಲಿ ಬ್ಯಾಟಿಂಗ್ ಮಾಡುವ ಕುರಿತು ಸಂದೇಶ ರವಾನಿಸಿದ್ದರು. ಇದಕ್ಕೆ ಧ್ವನಿಗೂಡಿಸಿರುವ ತಂಡದ ನಿರ್ದೇಶಕ ಮೈಕ್ ಹೆಸ್ಸನ್ ಕೂಡ ಕೊಹ್ಲಿ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ಈಗಾಗಲೇ ಘೋಷಿಸಿದ್ದಾರೆ. ಮತ್ತೊಂದೆಡೆ, ಉತ್ತಮ ಾರ್ಮ್‌ನಲ್ಲಿರುವ ಕನ್ನಡಿಗ ದೇವದತ್ ಪಡಿಕಲ್ ಜತೆಗೂಡಿ ಕೊಹ್ಲಿ ಇನಿಂಗ್ಸ್ ಆರಂಭಿಸಿದರೆ 3ನೇ ಹಾಗೂ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಹೆಚ್ಚುವರಿ ಬ್ಯಾಟ್ಸ್‌ಮನ್ ಲಭಿಸಿದಂತಾಗುತ್ತದೆ. ಕೊಹ್ಲಿ ಈ ಮುನ್ನ ಐಪಿಎಲ್‌ನಲ್ಲೂ ಕೆಲ ಪಂದ್ಯಗಳಿಗೆ ಕ್ರಿಸ್ ಗೇಲ್ ಜತೆಗೂಡಿ ಇನಿಂಗ್ಸ್ ಆರಂಭಿಸಿದ್ದರು.

    * ಮ್ಯಾಕ್ಸ್‌ವೆಲ್, ಜೇಮಿಸನ್ ಮೇಲಿದೆ ಹೆಚ್ಚಿದ ನಿರೀಕ್ಷೆ
    ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾಗಿರುವ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ನ್ಯೂಜಿಲೆಂಡ್ ಆಲ್ರೌಂಡರ್ ಕೈಲಿ ಜೇಮಿಸನ್ ಕ್ರಮವಾಗಿ 14.25 ಕೋಟಿ ಹಾಗೂ 15 ಕೋಟಿ ರೂಪಾಯಿಗೆ ತಂಡ ಸೇರಿಕೊಂಡಿದ್ದಾರೆ. ಹಿಂದಿನ ಆವೃತ್ತಿಗಳಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಳಲುತ್ತಿದ್ದ ಆರ್‌ಸಿಬಿ ತಂಡಕ್ಕೆ ಈ ಜೋಡಿ ಬಲ ತುಂಬಲು ಸಜ್ಜಾಗಿದೆ. ಕಳೆದ ಆವೃತ್ತಿಯಲ್ಲಿ ಕಳಪೆ ನಿರ್ವಹಣೆಯಿಂದಾಗಿ ಪಂಜಾಬ್ ಕಿಂಗ್ಸ್ ಬಿಡುಗಡೆ ಮಾಡಿತ್ತು. ಆಟಗಾರರ ಹರಾಜಿನಲ್ಲಿ ಜಿದ್ದಿಗೆ ಬಿದ್ದಂತೆ ಮ್ಯಾಕ್ಸ್‌ವೆಲ್‌ರನ್ನು ಕೊಂಡುಕೊಂಡಿರುವ ಆರ್‌ಸಿಬಿ ಫ್ರಾಂಚೈಸಿ ಮಧ್ಯಮ ಕ್ರಮಾಂಕದಲ್ಲಿ ಸಾಕಷ್ಟು ಭರವಸೆ ಇಟ್ಟುಕೊಂಡಿದೆ. ಸಾಧ್ಯವಾದಷ್ಟು ಮಟ್ಟಿಗೆ ಮ್ಯಾಕ್ಸ್‌ವೆಲ್ ಅವರ ಕೌಶಲದ ಸದುಪಯೋಗಗಕ್ಕೆ ಸಜ್ಜಾಗಿದ್ದೇವೆ ಎನ್ನುತ್ತಾರೆ ನಿರ್ದೇಶಕ ಹೆಸ್ಸನ್. ಮತ್ತೊಂದೆಡೆ, 6.9 ಅಡಿ ಎತ್ತರದ ಕೈಲಿ ಜೇಮಿಸನ್ ಮೇಲೂ ಆರ್‌ಸಿಬಿ ತಂಡ ಅಷ್ಟೇ ಭರವಸೆ ಇಟ್ಟಿದೆ. ಸ್ವಿಂಗ್, ಬೌನ್ಸಿ ಎಸೆತಗಳಿಗೆ ಹೆಸರಾಗಿರುವ ಜಮೈಸನ್ ಸ್ಫೋಟಕ ಬ್ಯಾಟಿಂಗ್ ಕೂಡ ಮಾಡಬಲ್ಲರು. ಈ ಜೋಡಿಗೆ ಮತ್ತೋರ್ವ ವಿದೇಶಿ ಆಲ್ರೌಂಡರ್ ಡೇನಿಯಲ್ ಕ್ರಿಶ್ಚಿಯನ್ ಸಾಥ್ ನೀಡಲಿದ್ದಾರೆ.

    * ಶೈನ್ ಆಗುವರೇ ನವದೀಪ್ ಸೈನಿ-ಸಿರಾಜ್
    ನವದೀಪ್ ಸೈನಿ-ಮೊಹಮದ್ ಸಿರಾಜ್ ಜೋಡಿ ಹಿಂದಿನ ಆವೃತ್ತಿಗಳಲ್ಲೂ ಆರ್‌ಸಿಬಿ ತಂಡದಲ್ಲಿದ್ದರೂ ಈ ಬಾರಿ ಹೊಸ ಹುರುಪಿನೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೆ ಕಾರಣ ಆಸ್ಟ್ರೇಲಿಯಾ ಪ್ರವಾಸದಲ್ಲಿ ಈ ಜೋಡಿ ತೋರಿ ಅದ್ಭುತ ನಿರ್ವಹಣೆ. ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಿಂಚಿನ ದಾಳಿ ಮೂಲಕ ಗಮನಸೆಳೆದಿದ್ದ ಈ ಜೋಡಿ ಆರ್‌ಸಿಬಿ ವೇಗದ ಬೌಲಿಂಗ್ ವಿಭಾಗ ನೇತೃತ್ವ ವಹಿಸಲಿದೆ. ಅಲ್ಲದೆ, ಭರ್ಜರಿ ಫಾರ್ಮ್‌ನಲ್ಲಿರುವ ಈ ಜೋಡಿ ತಂಡದ ಪಾಲಿಗೆ ಹೊಸ ಭರವಸೆ ಮೂಡಿಸಿದೆ. ಅಲ್ಲದೆ, ಆಸೀಸ್ ಪ್ರವಾಸದಲ್ಲಿ ಮಿಂಚಿದ್ದ ಮತ್ತೋರ್ವ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಪವರ್ ಪ್ಲೇನಲ್ಲಿ ತಮ್ಮ ಕರಾಮತ್ತು ತೋರಿಸಲು ಸಜ್ಜಾಗಿದ್ದಾರೆ.

    * ಭರವಸೆ ಮೂಡಿಸಿರುವ ಪಡಿಕಲ್
    ಹಿಂದಿನ ಆವೃತ್ತಿಯಲ್ಲಿ ಗಮನಾರ್ಹ ನಿರ್ವಹಣೆ ತೋರಿದ್ದ ಕರ್ನಾಟಕದ ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್ ನಾಯಕ ವಿರಾಟ್ ಕೊಹ್ಲಿ ಜತೆಗೂಡಿ ಇನಿಂಗ್ಸ್ ಆರಂಭಿಸಲಿದ್ದಾರೆ. ದೇಶೀಯ ಕ್ರಿಕೆಟ್ ಟೂರ್ನಿಗಳಾದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ಹಾಗೂ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಗಳಲ್ಲೂ ಮಿಂಚಿದ್ದ ಪಡಿಕಲ್, ಉತ್ತಮ ಫಾರ್ಮ್ ಉಳಿಸಿಕೊಂಡಿದ್ದು, ಮತ್ತೊಮ್ಮೆ ಆರಂಭಿಕ ಹಂತದಲ್ಲಿ ತಂಡಕ್ಕೆ ನೆರವಾಗುವ ವಿಶ್ವಾಸದಲ್ಲಿದ್ದಾರೆ.

    * ದೇಶೀಯ ಹುಡುಗರ ಮೇಲೆ ಭರವಸೆ
    ಮೊಹಮದ್ ಅಜರುದ್ದೀನ್, ರಜತ್ ಪಟಿದಾರ್ ಹಾಗೂ ಸೂಯಾಂಶ್ ಪ್ರಭುದೇಸಾಯಿ ಬಗ್ಗೆ ತಂಡದ ನಿರ್ದೇಶಕ ಮೈಕ್ ಹೆಸ್ಸನ್ ವಿಶೇಷ ಒಲವು ಹೊಂದಿದ್ದಾರೆ. ಕೇರಳದ ಮೊಹಮದ್ ಅಜರುದ್ದೀನ್ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಮುಂಬೈ ಎದುರು ಕೇವಲ 54 ಎಸೆತಗಳಲ್ಲಿ 11 ಸಿಕ್ಸರ್ ಒಳಗೊಂಡಂತೆ ಅಜೇಯ 137 ರನ್ ಬಾರಿಸಿ ಗಮನಸೆಳೆದಿದ್ದರು. ಗೋವಾದ ಸೂಯಾಂಶ್ ಪ್ರಭುದೇಸಾಯಿ, 360 ಡಿಗ್ರಿ ಆಕಾರದಲ್ಲಿ ಬ್ಯಾಟಿಂಗ್ ಮಾಡುವ ಕಲೆಹೊಂದಿದ್ದರೆ, ರಜತ್ ಪಟಿದಾರ್ ಕೂಡ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ಮೂವರ ನಿರ್ವಹಣೆ ಗಮನಿಸಿಯೇ ತಂಡಕ್ಕೆ ಮಣೆ ಹಾಕಲಾಗಿದೆ ಎಂದು ಹಸ್ಸೆನ್ ಹೇಳುತ್ತಾರೆ.

    * ಆರ್‌ಸಿಬಿ ಸಾಧನೆ
    2008ರಿಂದಲೂ ಲೀಗ್‌ನ ಭಾಗವಾಗಿರುವ ಆರ್‌ಸಿಬಿ, 2009, 2011 ಹಾಗೂ 2016ರಲ್ಲಿ ಫೈನಲ್ ಪ್ರವೇಶಿಸಿದ್ದರೂ ಪ್ರಶಸ್ತಿ ಜಯಿಸಲು ವಿಫಲವಾಗಿದೆ. 2016ರಲ್ಲಿ ಫೈನಲ್ ಪ್ರವೇಶಿಸಿದ ಬಳಿಕ ಸತತ ಮೂರು ವರ್ಷ ಕನಿಷ್ಠ ಪ್ಲೇಆಫ್ ಹಂತಕ್ಕೇರಲು ವಿಫಲವಾಗಿತ್ತು. 2020ರಲ್ಲಿ ಯುಎಇಯಲ್ಲಿ ನಡೆದ ಲೀಗ್‌ನಲ್ಲಿ ಪ್ಲೇ-ಆಫ್ ಹಂತಕ್ಕೇರಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts