More

    ಇಂದು ಆರ್‌ಸಿಬಿ-ಪಂಜಾಬ್ ಮುಖಾಮುಖಿ; ರಾಹುಲ್ ಪಡೆಗೆ ಗೆಲುವೊಂದೇ ಮಾರ್ಗ

    ಶಾರ್ಜಾ: ಅರಬ್ ನಾಡಿನಲ್ಲಿ ಸೋಲು, ಗೆಲುವನ್ನು ಸಮನಾಗಿ ಸ್ವೀಕರಿಸಿ ಪ್ಲೇಆಫ್ ಸನಿಹಕ್ಕೆ ಬಂದಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-14ರ ಎರಡನೇ ಭಾಗದ ಹಣಾಹಣಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಭಾನುವಾರ ಎದುರಿಸಲಿದೆ. ಯುಎಇಯಲ್ಲಿ ಆಡಿದ ಆರಂಭಿಕ 2 ಪಂದ್ಯಗಳಲ್ಲೂ ಸೋತು, ಬಳಿಕ ಎರಡು ಪಂದ್ಯಗಳಲ್ಲಿ ಜಯಿಸಿರುವ ವಿರಾಟ್ ಕೊಹ್ಲಿ ಬಳಗ ಇದೀಗ ಹ್ಯಾಟ್ರಿಕ್ ಗೆಲುವಿನೊಂದಿಗೆ ಪ್ಲೇಆಫ್ ಖಾತ್ರಿ ಪಡಿಸಿಕೊಳ್ಳುವ ತವಕದಲ್ಲಿದೆ. ಜತೆಗೆ ಅಹಮದಾಬಾದ್‌ನಲ್ಲಿ ನಡೆದ ಮೊದಲ ಚರಣದ ಪಂದ್ಯದಲ್ಲಿ ಪಂಜಾಬ್ ಎದುರು ಅನುಭವಿಸಿದ ಸೋಲಿಗೂ ಸೇಡು ತೀರಿಸಿಕೊಳ್ಳುವ ಅವಕಾಶ ಲಭಿಸಿದೆ. ಮತ್ತೊಂದೆಡೆ, ಪ್ಲೇಆಫ್ ಹಂತಕ್ಕೇರಲು ಕೂದಲೆಳೆ ಅವಕಾಶ ಉಳಿಸಿಕೊಂಡಿರುವ ಕನ್ನಡಿಗ ಕೆಎಲ್ ರಾಹುಲ್ ಬಳಗಕ್ಕೆ ಗೆಲುವೊಂದೇ ಮಾರ್ಗವಾಗಿದೆ.

    *ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಆರ್‌ಸಿಬಿ
    ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಎದುರು ಭರ್ಜರಿ ಜಯ ದಾಖಲಿಸಿದ ವಿಶ್ವಾಸದಲ್ಲಿರುವ ವಿರಾಟ್ ಕೊಹ್ಲಿ ಬಳಗ, ಲೀಗ್‌ನಲ್ಲಿ ಇದುವರೆಗೆ ಆಡಿರುವ 11 ಪಂದ್ಯಗಳಿಂದ 7 ಜಯ, 4ರಲ್ಲಿ ಸೋಲನುಭವಿಸಿದ್ದು, 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಉತ್ತಮ ಫಾರ್ಮ್‌ನಲ್ಲಿರುವುದು ತಂಡದ ಪ್ಲಸ್ ಪಾಯಿಂಟ್. ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್ ಹಿಂದಿನ ಎರಡು ಪಂದ್ಯಗಳಲ್ಲೂ ಸ್ಫೋಟಿಸಲು ವಿಫಲರಾಗಿದ್ದರು. ಮೊಹಮದ್ ಸಿರಾಜ್, ಹರ್ಷಲ್ ಪಟೇಲ್, ಶಾಬಾಜ್ ಅಹ್ಮದ್ ಹಾಗೂ ಯಜುವೇಂದ್ರ ಚಾಹಲ್ ಒಳಗೊಂಡ ಬೌಲಿಂಗ್ ಬಳಗ ಉತ್ತಮ ನಿರ್ವಹಣೆ ತೋರುತ್ತಿದೆ. ವಿಕೆಟ್ ಕೀಪಿಂಗ್ ಜತೆಗೆ ಬ್ಯಾಟಿಂಗ್‌ನಲ್ಲೂ ಕೆಎಸ್ ಭರತ್ ಗಮನಸೆಳೆಯುತ್ತಿದ್ದಾರೆ.

    *ಹಗ್ಗದ ಮೇಲಿನ ನಡಿಗೆ
    ಕೋಲ್ಕತ ನೈಟ್ ರೈಡರ್ಸ್‌ ಎದುರು 5 ವಿಕೆಟ್‌ಗಳಿಂದ ಮಣಿಸಿ ಪ್ಲೇಆಫ್ ಹಾದಿಯನ್ನು ಜೀವಂತವಾಗಿರಿಸಿಕೊಂಡಿರುವ ಪಂಜಾಬ್ ತಂಡದ ಪರಿಸ್ಥಿತಿ ಹಗ್ಗದ ಮೇಲಿನ ನಡಿಗೆಯಂತಿದೆ. ಉಳಿದ ಎರಡೂ ಪಂದ್ಯಗಳಲ್ಲಿ ಗೆದ್ದರೂ ಇತರ ತಂಡಗಳ ಫಲಿತಾಂಶದ ಮೇಲೆ ಪಂಜಾಬ್ ತಂಡದ ಪ್ಲೇಆಫ್ ಆಸೆ ನಿಂತಿದೆ. ಒಂದು ವೇಳೆ ಆರ್‌ಸಿಬಿ ಎದುರು ಸೋತರೆ ಅಧಿಕೃತವಾಗಿ ಲೀಗ್‌ನಿಂದ ಹೊರಬೀಳುವ ಆತಂಕದಲ್ಲಿದೆ. ಕರ್ನಾಟಕದ ಬ್ಯಾಟ್ಸ್‌ಮನ್‌ಗಳಾದ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಉತ್ತಮ ಫಾರ್ಮ್‌ನಲ್ಲಿದ್ದರೆ, ಅರಬ್ ನಾಡಿನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಶಾರೂಖ್ ಖಾನ್ ಸ್ಫೋಟಕ ಬ್ಯಾಟಿಂಗ್‌ನಿಂದ ಗಮನಸೆಳೆದಿದ್ದರು. ಮೊಹಮದ್ ಶಮಿ, ಅರ್ಷದೀಪ್ ಸಿಂಗ್ ಡೆತ್ ಓವರ್‌ಗಳಲ್ಲಿ ಎದುರಾಳಿಗೆ ಕಂಟಕವಾಗಬಲ್ಲರು.

    ಮುಖಾಮುಖಿ: 27
    ಆರ್‌ಸಿಬಿ: 12
    ಪಂಜಾಬ್ ಕಿಂಗ್ಸ್: 15
    ಹಿಂದಿನ ಮುಖಾಮುಖಿ: ಅಹಮದಾಬಾದ್‌ನಲ್ಲಿ ಆರ್‌ಸಿಬಿಗೆ 34 ರನ್ ಸೋಲು.
    ಪಂದ್ಯ ಆರಂಭ: ಮಧ್ಯಾಹ್ನ 3.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts