More

    ಮೂರು ತಿಂಗಳ ಬಳಿಕ ಬಡ್ಡಿಯನ್ನೆಲ್ಲ ಒಟ್ಟಿಗೆ ಕಟ್ಟಬೇಕಾ?: ಸಾಲಾವಧಿ ವಿಸ್ತರಣೆಯ ನಿಮ್ಮೆಲ್ಲ ಪ್ರಶ್ನೆಗಳಿಗೆ ಆರ್​ಬಿಐನಿಂದ ಉತ್ತರ

    ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ಕಳೆದ ವಾರ ಎಲ್ಲ ರೀತಿಯ ಬ್ಯಾಂಕ್​ಗಳಿಂದ ಪಡೆದ, ಎಲ್ಲ ರೀತಿಯ ಸಾಲಗಳ ಪಾವತಿ ಅವಧಿಯನ್ನು ಮೂರು ತಿಂಗಳ ಕಾಲ ಮುಂದೂಡಿದೆ. ಅಂದರೆ 2020ರ ಮಾರ್ಚ್​ 1ರಿಂದ ಮೇ 31ರವರೆಗೆ ಸಾಲದ ಕಂತುಗಳನ್ನು ಕಟ್ಟುವುದರಿಂದ ವಿನಾಯ್ತಿ ನೀಡಿದೆ. ನೀವು ಈಗಾಗಲೇ ಮಾರ್ಚ್​ ತಿಂಗಳ ಕಂತು ಪಾವತಿಸಿದ್ದಲ್ಲಿ ನಿಮಗೆ ಎರಡು ತಿಂಗಳ ವಿನಾಯ್ತಿ ಮಾತ್ರ ದೊರೆಯಲಿದೆ. ಆದರೆ, ಸಾಲದ ಮೇಲಿನ ಬಡ್ಡಿ ಎಂದಿನಂತೆ ಮುಂದುವರಿಯಲಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಬ್ಯಾಂಕ್​ಗಳ ಕೂಡ ಗ್ರಾಹಕರಿಗೆ ಮಾಹಿತಿ ನೀಡಿವೆ. ಹೀಗಿದ್ದರೂ ಸಾಲಗಾರರಲ್ಲಿ ಹಲವು ಗೊಂದಲಗಳು ಮನೆ ಮಾಡಿವೆ. ಹೀಗಾಗಿ ಇಂಡಿಯನ್​ ಬ್ಯಾಂಕ್ಸ್ ಅಸೋಸಿಯೇಷನ್ (ಐಬಿಎ) ಗ್ರಾಹಕರ ಕೆಲ ಪುನರಾವರ್ತಿತ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಿದೆ.

    * ಆರ್​ಬಿಐ ಸಾಲಾವಧಿ ವಿಸ್ತರಣೆ (ಮಾರಟೋರಿಯಂ) ಮಾಡಿದ್ದು ಏಕೆ?
    ದೇಶದಲ್ಲಿ ಕೋವಿಡ್​-19 ಸೃಷ್ಟಿಸಿರುವ ಆತಂಕದಿಂದಾಗಿ ವಾಣಿಜ್ಯ ವಹಿವಾಟುಗಳು ಸ್ತಬ್ಧವಾಗಿವೆ. ಈ ಹಿನ್ನೆಲೆಯಲ್ಲಿ ಸಾಲ ಪಾವತಿ ಮೇಲೆ ಉಂಟಾಗುವ ಒತ್ತಡವನ್ನು ಕಡಿಮೆ ಮಾಡುವುದು ಹಾಗೂ ನಗದು ಹರಿವು ಸಾಮಾನ್ಯವಾಗಿರುವಂತೆ ನೋಡಿಕೊಳ್ಳುವುದುಇದರ ಮುಖ್ಯ ಉದ್ದೇಶ ಜತೆಗೆ, ವಹಿವಾಟು ಇಲ್ಲದಿರುವುದು, ಆದಾಯ ಕುಸಿತ ಮೊದಲಾದ ಕಾರಣದಿಂದ ಸಂಕಷ್ಟಕ್ಕೊಳಗಾಗಿರುವವರಿಗೆ ನೆರವಾಗುತ್ತಿದೆ.

    * ಆರ್​ಬಿಐ ಯೋಜನೆಗೆ ಯಾರೆಲ್ಲ/ ಯಾವೆಲ್ಲ ಸಾಲಗಳು ಒಳಪಡುತ್ತವೆ?
    ಎಲ್ಲ ಕಾಲಾವಧಿ ಸಾಲಗಳು (ಕೃಷಿ ಸಾಲ, ಬೆಳೆ ಸಾಲ, ರಿಟೇಲ್​ ಸಾಲ ಸೇರಿ) ನಗದು ಸಾಲ, ಓವರ್​ ಡ್ರಾಫ್ಟ್​ ಪಡೆದ ಗ್ರಾಹಕರು ಈ ಸಾಲಾವಧಿ ವಿಸ್ತರಣೆಯ ಪ್ರಯೋಜನ ಪಡೆದಕೊಳ್ಳಬಹುದು. 2020ರ ಮಾರ್ಚ್​ 1ರವರೆಗೆ ಚಾಲ್ತಿಯಲ್ಲಿರುವ ಎಲ್ಲ ಸಾಲ ಖಾತೆಗಳಿಗೆ ಇದು ಅನ್ವಯವಾಗುತ್ತದೆ. ಉದಾಹರಣೆಗೆ 2025ರ ಮಾರ್ಚ್​ನಲ್ಲಿ ಮುಗಿಯುವ ಸಾಲದ ಅವಧಿ 2025ರ ಜೂನ್​ವರೆಗೆ ವಿಸ್ತರಣೆಯಾಗುತ್ತದೆ. 60 ಕಂತುಗಳ ಸಾಲವು 63 ಕಂತುಗಳಾಗುತ್ತವೆ.

    * ಸಾಲಾವಧಿ ವಿಸ್ತರಣೆ ಎಲ್ಲ ಕಾಲಾವಧಿ ಸಾಲಗಳಿಗೂ ಅನ್ವಯಿಸುತ್ತದೆಯೇ?
    ಹೌದು… ಸಾಲಾವಧಿ ವಿಸ್ತರಣೆಯು ಎಲ್ಲ ರೀತಿಯ, ಎಲ್ಲ ರಂಗದ ಸಾಲಗಳಿಗೂ ಅನ್ವಯವಾಗುತ್ತದೆ. ಸಾಲದ ಅವಧಿಯು ಎಷ್ಟೇ ದಿನ ಅಥವಾ ವರ್ಷಗಳದ್ದಾದರೂ ವಿಸ್ತರಣೆ ಪಡೆಯಬಹುದು.

    * ಋಣ ವಿಳಂಬ ಯೋಜನೆ ಅಸಲು ಪಾವತಿಗೆ ಅನ್ವಯವಾಗುತ್ತೋ ಅಥವಾ ಬಡ್ಡಿ ಪಾವತಿಗೂ ಅನ್ವಯಿಸುತ್ತೋ?
    ಅಸಲು ಪಾವತಿಯನ್ನು ಮೂರು ತಿಂಗಳ ಕಾಲ ಮುಂದೂಡಬಹುದು. ಮಾರ್ಚ್​1ರಂದು ಸಾಲದ ಕೊನೆಯ ಕಂತು ಪಾವತಿಸಬೇಕಿದ್ದರೆ, ಅದನ್ನು ಜೂನ್​ 1ರಂದು ಪಾವತಿಸಬಹುದು. ಇನ್ನು ಕಂತುಗಳಲ್ಲಿ ಸಾಲ ಮರುಪಾವತಿ ಮಾಡುವವರು ಕೂಡ ಮೂರು ತಿಂಗಳ ಅಥವಾ ಮೂರು ಕಂತುಗಳ ಅವಕಾಶವನ್ನು ಹೆಚ್ಚುವರಿಯಾಗಿ ಪಡೆಯಲಿದ್ದಾರೆ. ಜತೆಗೆ, ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಹಾಗೂ ವಾರ್ಷಿಕವಾಗಿ ಸಾಲ ಪಾವತಿ ಮಾಡುವವರಿಗೂ ಮೂರು ತಿಂಗಳ ವಿಸ್ತರಣೆ ಅವಧಿ ಅನ್ವಯವಾಗಲಿದೆ. ಒಂದು ವೇಳೆ ಸಾಲದ ಅಸಲು ಮರುಪಾವತಿ ಆರಂಭವಾಗದಿರುವ ಸಂದರ್ಭಗಳಲ್ಲಿ ಈಗ ಕಟ್ಟಬೇಕಿರುವ ಬಡ್ಡಿಯ ಮೊತ್ತವನ್ನು ಮೂರು ತಿಂಗಳವರೆಗೆ ವಿಸ್ತರಣೆ ಪಡೆಯಬಹುದು.

    * ಗೃಹ ಸಾಲದ ಬಡ್ಡಿಯನ್ನು ಮೂರು ತಿಂಗಳ ಬಳಿಕ ಒಟ್ಟಿಗೆ ಕಟ್ಟಬೇಕಾಗುತ್ತದೆಯೇ? ಇಎಂಐ ಮೊತ್ತ ಹೆಚ್ಚಾಗುತ್ತಾ?
    ಗೃಹ ಸಾಲ ನೀಡಿರುವ ಸಂಸ್ಥೆಗಳು ಈ 3 ತಿಂಗಳ ಅವಧಿಯ ಬಡ್ಡಿಯ ಮೊತ್ತವನ್ನು ಅಸಲಿಗೆ ಸೇರಿಸುತ್ತವೆ. ಒಟ್ಟಾರೆಯಾಗಿ ಆ ಮೊತ್ತಕ್ಕೆ ಬಡ್ಡಿ ವಿಧಿಸುತ್ತವೆ. ಹೀಗಾಗಿ ನೀವು ಕಟ್ಟುವ ಅಸಲಿನ ಮೊತ್ತ ಕಡಿಮೆಯಾಗಿ ಬಡ್ಡಿ ಹೆಚ್ಚಾಗುತ್ತದೆ. ಉದಾಹರಣೆಗೆ ನೀವು 30 ಲಕ್ಷ ರೂ. ಸಾಲ ಪಡೆದಿದ್ದು, ಪ್ರತಿತಿಂಗಳು 25 ಸಾವಿರ ರೂ. ಬಡ್ಡಿ ಕಟ್ಟುತ್ತಿದ್ದರೆ ಮೂರು ತಿಂಗಳ ಬಳಿಕ ಅಸಲಿನ ಮೊತ್ತ 30ಲಕ್ಷ 75ಸಾವಿರ ರೂ. ಆಗುತ್ತದೆ. ಬಳಿಕ ಈ ಮೊತ್ತಕ್ಕೆ ಬಡ್ಡಿ ಕಟ್ಟಬೇಕಾಗುತ್ತದೆ. ಆದರೆ ಇಎಂಐ ಮೊತ್ತ ಹೆಚ್ಚಾಗದು. 3 ತಿಂಗಳು ಅವಧಿ ಅಥವಾ ಕಂತು ಹೆಚ್ಚಾಗುತ್ತದೆ.

    * ವಿಸ್ತರಣೆ ಅವಧಿಯು ಸಾಲ ಮರುಪಾವತಿಯನ್ನು ನಿಗದಿಗಿಂತ ಹೆಚ್ಚು ಮಾಡುವುದಾದಲ್ಲಿ?
    ಅಂಥ ಎಲ್ಲ ಕಾಲಾವಧಿ ಸಾಲಗಳ ಮರುಪಾವತಿ ಅವಧಿಯು ಈ ಸೌಲಬ್ಯಕ್ಕೆ ಅನುಗುಣವಾಗಿ ವಿಸ್ತರಣೆಯಾಗಲಿದೆ. ಇದಕ್ಕೆ ಯಾವುದೇ ಮಾರ್ಪಾಡು ಅಥವಾ ಬ್ಯಾಂಕ್​ನ ಸಮ್ಮತಿ ಅಗತ್ಯವಿರುವುದಿಲ್ಲ.

    * ಬಂಡವಾಳ ಸಾಲ (ವರ್ಕಿಂಗ್​ ಕ್ಯಾಪಿಟಲ್​ ) ಮೇಲೆ ಈ ಯೋಜನೆ ಹೇಗೆ ಅನ್ವಯವಾಗುತ್ತದೆ?
    ಬಂಡವಾಳ ಸಾಲದ ಮೇಲೆ ಮೂರು ತಿಂಗಳ ಅವಧಿಗೆ ಬಡ್ಡಿ ಪಡೆಯುವುದನ್ನುನಿಲ್ಲಿಸಲಾಗುತ್ತದೆ. ಆದರೆ, ಮೂರು ತಿಂಗಳ ಬಳಿಕ ಎಲ್ಲ ಬಡ್ಡಿಯನ್ನು ಒಂದೇ ಬಾರಿಗೆ ನೀಡಲೇಬೇಕು. ಅಂದರೆ ತಿಂಗಳಿಗೆ 10 ಲಕ್ಷ ರೂ. ಬಡ್ಡಿ ಪಾವತಿ ಮಾಡುವುದಾದರೆ ಮೂರು ತಿಂಗಳ ಬಳಿಕ ಒಟ್ಟಿಗೆ 30 ಲಕ್ಷ ರೂ. ಪಾವತಿಸಬೇಕಾಗುತ್ತದೆ.

    * ಸಾಲ ಮರುಪಾವತಿಸದ ಅವಧಿಗೆ ಗ್ರಾಹಕರು ಸುಸ್ತಿದಾರರು ಎನಿಸುವುದಿಲ್ಲವೇ?
    ಸಾಮಾನ್ಯವಾಗಿ 3 ತಿಂಗಳ ಸಾಲ ಮರುಪಾವತಿ ಮಾಡದಿದ್ದರೆ ಅದನ್ನು ಬ್ಯಾಂಕ್​ಗಳು ಅನುತ್ಪಾದಕ ಸಾಲ ಎಂದು ಪರಿಗಣಿಸುತ್ತವೆ. 5 ಕೋಟಿಗಿಂತಲೂ ಹೆಚ್ಚಿನ ಮೊತ್ತವಾದರೆ ಈ ಬಗ್ಗೆ ಆರ್​ಬಿಐಗೆ ಮಾಹಿತಿ ನೀಡಲಾಗುತ್ತದೆ. ಗ್ರಾಹಕರ ಕ್ರೆಡಿಟ್​ ಸ್ಕೋರ್​ಅನ್ನು ಋಣಾತ್ಮಕವಾಗಿ ಬಿಂಬಿಸಲಾಗುತ್ತದೆ. ಜತೆಗೆ, ದಂಡವನ್ನು ವಿಧಿಸಲಾಗುತ್ತದೆ. ಆದರೆ, ಈ ಅವಧಿಯಲ್ಲಿ ಅಂಥ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗುವುದಿಲ್ಲ.

    * ಹಾಗಿದ್ದರೆ, ಎಲ್ಲರೂ ಈ ಯೋಜನೆಯ ಲಾಭ ಪಡೆದುಕೊಳ್ಳಬೇಕೆ?
    ನಿಮ್ಮ ಆದಾಯದಲ್ಲಿ ಕುಸಿತ ಅಥವಾ ವಹಿವಾಟಿನಲ್ಲಿ ತೊಂದರೆ ಕಂಡುಬಂದಲ್ಲಿ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು. ಆದರೆ, ಅವಧಿ ವಿಸ್ತರಣೆಯಾಗುತ್ತದೆ ಎನ್ನುವುದನ್ನು ಹೊರತುಪಡಿಸಿದರೆ, ಸಾಲದ ಮೇಲಿನ ಬಡ್ಡಿಯ ಮೊತ್ತ ಹೆಚ್ಚಾಗುತ್ತದೆ ಎಂಬುದನ್ನು ತಿಳಿಯಬೇಕು. ಉದಾಹರಣೆಗೆ ಒಂದು ಲಕ್ಷ ರೂ. ಸಾಲಕ್ಕೆ ಶೇ. 12ರ ದರದಲ್ಲಿ ಪ್ರತಿ
    ತಿಂಗಳು ಒಂದು ಸಾವಿರ ರೂ.ನಂತೆ ಬಡ್ಡಿ ಕಟ್ಟುತ್ತಿದ್ದರೆ, ಮೂರು ತಿಂಗಳ ಬಳಿಕ ಬಡ್ಡಿಯ ಮೊತ್ತ 3030 ರೂ. ಆಗುತ್ತದೆ.

    * ಕ್ರೆಡಿಟ್​ ಕಾರ್ಡ್​ ನ ಬಾಕಿ ಪಾವತಿಯನ್ನು ಮುಂದೂಡಬಹುದೇ?
    ಹೌದು… ಕ್ರೆಡಿಟ್ ಕಾರ್ಡ್​ ಮೂಲಕ ಪಡೆದ ಸಾಲಕ್ಕೂ ಈ ಸಾಲಾವಧಿ ವಿಸ್ತರಣೆ ಅನ್ವಯವಾಗುತ್ತದೆ. ಆದರೆ, ಅದಕ್ಕೆ ಬಡ್ಡಿ ಪಾವತಿಸಬೇಕಾಗುತ್ತದೆ. ಸಾಮಾನ್ಯವಾಗಿ ಬಾಕಿ ಮೊತ್ತದ ಮೇಲೆ ಕ್ರೆಡಿಟ್​ ಕಾರ್ಡ್​ ಸಂಸ್ಥೆಯವರು ವಿಧಿಸುವ ಬಡ್ಡಿ ಹೆಚ್ಚಾಗಿರುತ್ತದೆ. ಈ ಬಗ್ಗೆ ಕ್ರೆಡಿಟ್​ ಕಾರ್ಡ್​ ಸಂಸ್ಥೆಗಳಿಂದ ವಿವರಣೆ ಪಡೆಯುವುದು ಒಳಿತು. ಸಮಾಧಾನದ ವಿಷಯವೆಂದರೆ ಯಾವುದೇ ಬಾಕಿಯ ಮೇಲೆ ದಂಡ ವಿಧಿಸಲಾಗುವುದಿಲ್ಲ ಹಾಗೂ ನೀವು ಸುಸ್ತಿದಾರರೆಂದು ಕ್ರೆಡಿಟ್ ಸ್ಕೋರ್​ ಸಂಸ್ಥೆಗಳಿಗೆ ಮಾಹಿತಿ ನೀಡಲಾಗುವುದಿಲ್ಲ.

    * ಇನ್ಯಾವ ರೀತಿಯಲ್ಲಿ ವಹಿವಾಟುಗಳಿಗೆ ಅನುಕೂಲವಾಗಲಿದೆ?
    ವಹಿವಾಟುದಾರರು ತಮ್ಮ ವಹಿವಾಟುಗಳನ್ನು ಗಮನಿಸಿಕೊಂಡು ಅದರಂತೆ ವರ್ಕಿಂಗ್​ ಕ್ಯಾಪಿಟಲ್​ ಅಗತ್ಯವನ್ನು ಹೊಂದಾಣಿಕೆ ಮಾಡಿಕೊಳ್ಳಬಹುದು. ಬ್ಯಾಂಕ್​ಗಳು ವಹಿವಾಟಿನ ವಾಸ್ತವಿಕ ಅಂಶಗಳನ್ನು ಪರಿಗಣಿಸಿ ವಹಿವಾಟುದಾರರಿಗೆ ನೆರವಾಗಬಹುದು. ಆದರೆ, ಪ್ರಕರಣದಿಂದ ಪ್ರಕರಣಕ್ಕೆ ಆಯಾ ಬ್ಯಾಂಕ್​ ಶಾಖೆಗಳು ಕೈಗೊಳ್ಳುವ ನಿರ್ಧಾರಗಳು ಭಿನ್ನವಾಗಿರಬಹುದು.

    ಕರೊನಾ ಸೋಂಕಿತರ ಚಿಕಿತ್ಸೆ ಟೊಂಕ ಕಟ್ಟಿ ನಿಲ್ಲಲಿವೆ ರೋಬಾಟ್​ಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts