More

    ಸರ್ಕಾರವನ್ನು ಎಚ್ಚರಿಸುವ ಕೆಲಸ ನಿರಂತರವಾಗಲಿ: ಸಾಮೂಹಿಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ಕರೆ

    ಮಂಡ್ಯ:  ರೈತರ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಈ ಹಿಂದೆ ಇದ್ದಂತಹ ಸಮಸ್ಯೆಗಳು ಹಾಗೆಯೇ ಉಳಿದಿವೆ. ಆದ್ದರಿಂದ ರೈತರ ಚಳವಳಿಗಳು ಬಹುದೊಡ್ಡ ಮಟ್ಟದಲ್ಲಿ ನಡೆಯಬೇಕು ಎಂದು ಸಾಮೂಹಿಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ಹೇಳಿದರು.
    ನಗರದ ಗಾಂಧಿ ಭವನದಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 18ನೇ ಸಂಸ್ಮರಣೆ ಮತ್ತು ಕೆ.ಎಸ್.ಪುಟ್ಟಣ್ಣಯ್ಯ ಅವರ 5ನೇ ಸಂಸ್ಮರಣೆ ಅಂಗವಾಗಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ವಿಚಾರ ವೇದಿಕೆ ವತಿಯಿಂದ ಆಯೋಜಿಸಿದ್ದ ಮಂಡ್ಯ ರೈತರ ಸ್ವಾಭಿಮಾನಿ ದಿನಾಚರಣೆಯಲ್ಲಿ ಮಾತನಾಡಿದರು. ನಿರಂತರ ಹೋರಾಟದ ಮೂಲಕ ಸರ್ಕಾರವನ್ನು ಸದಾ ಎಚ್ಚೆತ್ತುಕೊಳ್ಳುವಂತೆ ಮಾಡಬೇಕಿದೆ. ಕೃಷಿ ವಾಣಿಜ್ಯ ಒಪ್ಪಂದ ಆದ ಬಳಿಕ ರೈತರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಆರೋಪಿಸಿದರು.
    ಅಡಿಕೆ, ಕೊಬ್ಬರಿ ಸೇರಿದಂತೆ ಇತರೆ ಬೆಳೆಗಳಿಗೆ ಬೆಂಬಲ ಬೆಲೆ ಸಿಗದೇ ರೈತರು ಪರಿತಪಿಸುವಂತಾಗಿದೆ. ಇದಕ್ಕೆಲ್ಲ ಕೃಷಿ ವಾಣಿಜ್ಯ ಒಪ್ಪಂದವೇ ಕಾರಣವಾಗಿದೆ. ರೈತರ ಎಲ್ಲ ಬೆಳೆಗಳು ಪಾತಾಳಕ್ಕೆ ಕುಸಿದಿದೆ. ತೊಗರಿ, ಭತ್ತ, ಬೇಳೆ, ಗೋಧಿ, ಕಬ್ಬಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಇದರಿಂದಾಗಿ ಪರಕೀಯರ ಆಡಳಿತದಲ್ಲಿ ಇದ್ದೇವೆನೋ ಎಂಬಂತೆ ಸರ್ಕಾರಗಳು ರೈತರನ್ನು ನಿರ್ಲಕ್ಷಿೃಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ವಕೀಲ ಬೂದನೂರು ಬೊಮ್ಮಯ್ಯ ಮಾತನಾಡಿ, ಹಣಕ್ಕಾಗಿ ರೈತರು ಫಲವತ್ತಾದ ಭೂಮಿಯನ್ನು ಮಾರಾಟ ಮಾಡುವುದು ಬೇಡ. ಕೃಷಿ ಕ್ಷೇತ್ರದಲ್ಲಿ ಹೊಸತನದೊಂದಿಗೆ ಆಯ್ಕೆ ಮಾಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ರೈತರ ಬಗ್ಗೆ ಜನಪ್ರತಿನಿಧಿಗಳು ಕಾಳಜಿ ತೋರಿಸುತ್ತಿಲ್ಲ. ಇದರಿಂದಾಗಿ ಜಿಲ್ಲೆಯ ಅಭಿವೃದ್ಧಿಯು ಕುಂಠಿತವಾಗಿದೆ. ರೈತರ ಸಮಸ್ಯೆಗಳು ಹೆಚ್ಚುತ್ತಿವೆ ಎಂದರು.
    ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ರೈತ ಸಂಘದ ಅನುಸೂಯಮ್ಮ, ಚುಕ್ಕಿ ನಂಜುಂಡಸ್ವಾಮಿ, ಹಸಿರು ಸೇನೆ ಶಿವರಾಮು, ಬೆಳ್ಳೂರು ಶಿವರಾಂ, ಪಿ.ಕೆ.ನಾಗಣ್ಣ ಪಣಕನಹಳ್ಳಿ ಇತರರಿದ್ದರು.
    ಇದೇ ವೇಳೆ ರೈತ ಹೋರಾಟಗಾರರು ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಂತೆಯೇ ರೈತ ಮತ್ತು ಮಹಿಳಾ ಚಳವಳಿಯ ಮುಂದಿನ ನಡೆ ಕುರಿತು ಸಂವಾದ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts