More

    ರವಿ ಪೂಜಾರಿ ಬೆಂಗಳೂರಿಗೆ? ಸೆನೆಗಲ್​ನಲ್ಲಿ ಆರೋಪಿಯನ್ನು ವಶಕ್ಕೆ ಪಡೆದ ರಾಜ್ಯ ಪೊಲೀಸರು

    ಬೆಂಗಳೂರು: ಆಫ್ರಿಕಾದ ಸೆನೆಗಲ್​ನಲ್ಲಿ ಬಂಧಿತನಾಗಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ಭಾರತಕ್ಕೆ ಕರೆತರಲು ಅಡ್ಡಿಯಾಗಿದ್ದ ಎಲ್ಲ ಕಾನೂನು ತೊಡಕುಗಳು ನಿವಾರಣೆಯಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಭಾನುವಾರ ತಡರಾತ್ರಿ ಈತನನ್ನು ಬೆಂಗಳೂರಿಗೆ ಕರೆತರಲಾಗಿದೆ ಎನ್ನಲಾಗುತ್ತಿದೆಯಾದರೂ ದೃಢಪಟ್ಟಿಲ್ಲ.

    ರಾಜ್ಯ ಪೊಲೀಸರ ತಂಡ ಸೆನೆಗಲ್​ನಲ್ಲಿ ಎಲ್ಲ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಏರ್​ಫ್ರಾನ್ಸ್ ವಿಮಾನದ ಮೂಲಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಿಗಿ ಭದ್ರತೆಯಲ್ಲಿ ರವಿ ಪೂಜಾರಿಯನ್ನು ಕರೆತಂದಿದೆ ಎಂದು ಹೇಳಲಾಗಿದ್ದರೂ ಪತ್ರಿಕೆ ಮುದ್ರಣಕ್ಕೆ ಹೋಗುವವರೆಗೂ ಇದನ್ನು ಪೊಲೀಸರು ಖಚಿತಪಡಿಸಿರಲಿಲ್ಲ.

    ರಾಜ್ಯದ ಗುಪ್ತಚರ ಇಲಾಖೆಯ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಸೆನೆಗಲ್​ನಲ್ಲಿ 2019ರ ಜ.19ರಂದು ರವಿ ಪೂಜಾರಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. ಬಳಿಕ ಭಾರತಕ್ಕೆ ಆತನನ್ನು ಹಸ್ತಾಂತರ ಮಾಡಲು ಮುಂದಾದಾಗ, ಈ ಪ್ರಕ್ರಿಯೆಗೆ ತಡೆ ನೀಡುವಂತೆ ಕೋರಿ ರವಿ ಪೂಜಾರಿ ಸೆನೆಗಲ್ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ.

    ಎಲ್ಲಿ, ಎಷ್ಟೆಷ್ಟು ಪ್ರಕರಣ..?

    ಬೆಂಗಳೂರಿನಲ್ಲಿ ರವಿ ಪೂಜಾರಿ ವಿರುದ್ಧ 39, ಮಂಗಳೂರಿನಲ್ಲಿ 36, ಉಡುಪಿಯಲ್ಲಿ 11, ಮೈಸೂರು, ಹುಬ್ಬಳ್ಳಿ-ಧಾರವಾಡ, ಕೋಲಾರ ಮತ್ತು ಶಿವಮೊಗ್ಗದಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ. ಪೂಜಾರಿ ವಿರುದ್ಧ ಮುಂಬೈ ಪೊಲೀಸರು ಒಟ್ಟು 49 ಪ್ರಕರಣಗಳನ್ನು ದಾಖಲಿಸಿದ್ದು, 26 ಪ್ರಕರಣಗಳು ಕಠಿಣವಾದ ಎಂಸಿಒಸಿಎ (ಮಹಾರಾಷ್ಟ್ರ ನಿಯಂತ್ರಣ ಸಂಘಟಿತ ಅಪರಾಧ ಕಾಯ್ದೆ) ಅಡಿ ಇವೆ. 11 ಪ್ರಕರಣಗಳಲ್ಲಿ ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ಗುಜರಾತ್ ಹಾಗೂ ಕೇರಳದಲ್ಲಿಯೂ ಹಲವಾರು ಪ್ರಕರಣಗಳು ದಾಖಲಾಗಿವೆ.

    ಬಂಧನದಲ್ಲಿ ಪತ್ನಿ

    2005ರಲ್ಲಿ ಪಾಸ್​ಪೋರ್ಟ್ ಪ್ರಕರಣದಲ್ಲಿ ರವಿ ಪೂಜಾರಿ ಪತ್ನಿ ಪದ್ಮಾ ಬಂಧಿತಳಾಗಿದ್ದಳು. ಇಬ್ಬರ ವಿರುದ್ಧ ರೆಡ್​ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು. ಕೋರ್ಟ್ ಇತ್ತೀಚೆಗೆ ಅರ್ಜಿಯನ್ನು ತಿರಸ್ಕರಿಸಿತ್ತು. ಮೊದಲು ಮುಂಬೈ ಪೊಲೀಸರು ಆತನನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ.

    1 ವರ್ಷದಿಂದ ಸಾಹಸ: ಗುಪ್ತಚರ ಇಲಾಖೆ 2018ರಲ್ಲಿ ರವಿ ಪೂಜಾರಿ ಸೆನಗಲ್​ನಲ್ಲಿ ಇರುವುದನ್ನು ಪತ್ತೆಹಚ್ಚಿತ್ತು. ನಂತರ ಅಲ್ಲಿನ ಪೊಲೀಸರಿಗೆ ಆತನ ಹಿನ್ನೆಲೆ ತಿಳಿಸಿ ವಶಕ್ಕೆ ಪಡೆಯುವಂತೆ ಕೇಳಿತ್ತು. ಅದರಂತೆ 2019 ಜ.19ರಂದು ಅಲ್ಲಿನ ಪೊಲೀಸರು ಬಂಧಿಸಿದ್ದರು. ಗುಪ್ತಚರ ಇಲಾಖೆ ಅಂದಿನ ಎಡಿಜಿಪಿ ಅಮರ್ ಕುಮಾರ್ ಪಾಂಡೆ ನೇತೃತ್ವದಲ್ಲಿ ಸತತ 1 ವರ್ಷದಿಂದ ಪ್ರಕರಣದ ಹಿಂದೆ ಬಿದ್ದಿದ್ದ ಪೊಲೀಸರು ಆತನನ್ನು ದೇಶಕ್ಕೆ ಕರೆ ತರಲು ಸಾಹಸ ಮಾಡಿದ್ದರು.

    ಯಾರು ರವಿ ಪೂಜಾರಿ?

    ರವಿ ಪೂಜಾರಿ ಉಡುಪಿ ಜಿಲ್ಲೆಯ ಮಲ್ಪೆ ಮೂಲದವ. ಇಂಗ್ಲೀಷ್, ಹಿಂದಿ ಮತ್ತು ಕನ್ನಡ ಮಾತನಾಡುತ್ತಾನೆ. ಈತನಿಗೆ ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನಿದ್ದು, ಪುತ್ರನಿಗೆ ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಲ್ಲಿ ವಿವಾಹವಾಗಿದೆ. ಅರ್ಧದಲ್ಲೇ ಶಾಲೆ ಮೊಟಕುಗೊಳಿಸಿದ್ದ ಪೂಜಾರಿ 1990ರಲ್ಲಿ ಮುಂಬೈ ಸೇರಿದ್ದ. ಅಂಧೇರಿಯಲ್ಲಿ ವಾಸವಿದ್ದ ಈತ ಛೋಟಾ ರಾಜನ್ ಗ್ಯಾಂಗ್ ಜತೆ ಸೇರಿಕೊಂಡಿದ್ದ. ಸ್ಥಳೀಯ ರೌಡಿಗಳನ್ನು ಹತ್ಯೆ ಮಾಡಿದ ಬಳಿಕ ರವಿ ಪೂಜಾರಿ ಹೆಸರು ಚಾಲ್ತಿಗೆ ಬಂದಿತ್ತು.

    ಈತನ ಗ್ಯಾಂಗ್ 1995ರಲ್ಲಿ ಮುಂಬೈನ ಚೆಂಬೂರ್ ಎಂಬಲ್ಲಿ ಬಿಲ್ಡರ್ ಪ್ರಕಾಶ್ ಕುಕ್ರೇಜಾ ಅವರನ್ನು ಹತ್ಯೆ ಮಾಡಿತ್ತು. 2000ದಲ್ಲಿ ಗ್ಯಾಂಗ್ ಮಧ್ಯೆ ಮನಸ್ತಾಪ ಉಂಟಾಗಿ ತನ್ನದೇ ಗ್ಯಾಂಗ್ ಕಟ್ಟಿಕೊಂಡಿದ್ದ. ನಂತರ ಭೂಗತ ಲೋಕದಲ್ಲಿದ್ದುಕೊಂಡು ಅಪರಾಧ ಪ್ರಕರಣಗಳಲ್ಲಿ ತೊಡಗಿದ್ದ ರವಿ ಪೂಜಾರಿ ಅಕ್ರಮವಾಗಿ ಕೋಟ್ಯಂತರ ರೂ. ಸಂಪಾದಿಸಿ ಮುಂಬೈನಿಂದ ದುಬೈಗೆ ಹಾರಿದ್ದ. 2003ರಲ್ಲಿ ಬಿಲ್ಡರ್ ಸುರೇಶ್ ವಾಧ್ವಾ ಹತ್ಯೆಗೆ ಯತ್ನಿಸಿದ್ದ. 2005ರಲ್ಲಿ ವಕೀಲ ಮಜೀದ್ ಮೆಮೊನ್ ಹತ್ಯೆ ಮಾಡಿದ ಆರೋಪ ಈತನ ಮೇಲಿದೆ.

    ಹಫ್ತಾ ವಸೂಲಿ ಈತನ ಮುಖ್ಯ ದಂಧೆಯಾಗಿತ್ತು. ಅದರಲ್ಲೂ ಕರ್ನಾಟಕದಲ್ಲಿ ಉದ್ಯಮಿಗಳು, ರಾಜಕಾರಣಿಗಳು ಅವನ ಗುರಿಯಾಗುತ್ತಿದ್ದರು. ವಿದೇಶದಲ್ಲಿ ಇದ್ದುಕೊಂಡು, ಭಾರತದಲ್ಲಿ ತನ್ನ ಕಾರ್ಯಚಟುವಟಿಕೆ ನಡೆಸುತ್ತಿದ್ದ ಎಂಬ ಆರೋಪ ಕೇಳಿಬಂದಿತ್ತು. 90ರ ದಶಕದಲ್ಲಿ ಮುಂಬೈ, ಮಂಗಳೂರು ಮತ್ತು ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ. ಆಫ್ರಿಕಾ ದೇಶದ ಸೆನೆಗಲ್​ನಲ್ಲಿ ಉದ್ಯಮ ನಡೆಸಿ ಅಲ್ಲೆ ನೆಲೆಸಲು ನಿರ್ಧರಿಸಿದ್ದ ಪೂಜಾರಿ ಪೊಲೀಸರಿಗೆ ತನ್ನ ಸುಳಿವು ಸಿಗಬಾರದು ಎಂಬ ಕಾರಣಕ್ಕೆ ರ್ಬುನೋ ಫಾಸೋ ದೇಶದಿಂದ ಆಂಟನಿ ಫರ್ನಾಂಡಿಸ್ ಹೆಸರಿನಲ್ಲಿ ಪಾಸ್​ಪೋರ್ಟ್ ಪಡೆದಿದ್ದ.

    ಭೂಗತ ಪಾತಕಿ ರವಿ ಪೂಜಾರಿ ಯನ್ನು ಕರೆತರಲು ಸೆನೆಗಲ್​ಗೆ ರಾಜ್ಯ ಪೊಲೀಸರ ತಂಡ ಹೋಗಿತ್ತು. ಆತನನ್ನು ವಶಕ್ಕೆ ಪಡೆಯಲು ಎಲ್ಲ ಕಾನೂನು ಕ್ರಮ ಪೂರೈಸಲಾಗಿದೆ.

    | ಪ್ರವೀಣ್ ಸೂದ್ ಡಿಜಿಪಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts