More

    ರವಿ ಪೂಜಾರಿ ಆಸ್ತಿ ಜಪ್ತಿಗೆ ಇಡಿ ಸಿದ್ಧತೆ

    ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಯಡಿ ಜಾರಿ ನಿರ್ದೇಶನಾಲಯ (ಇಡಿ) ಇಸಿಐಆರ್ ದಾಖಲಿಸಿದೆ. ಆಫ್ರಿಕಾದ ಸೆನಗಲ್‌ನಲ್ಲಿ ನೂರಾರು ಕೋಟಿ ರೂ. ಮೌಲ್ಯದ ಆಸ್ತಿ ಮಾಡಿರುವ ವಿಚಾರವನ್ನು ಈಗಾಗಲೇ ಪತ್ತೆಹಚ್ಚಿರುವ ಇಡಿ ಅಧಿಕಾರಿಗಳ ತಂಡ, ಮುಟ್ಟುಗೋಲು ಹಾಕಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.

    26ಕ್ಕೂ ಅಧಿಕ ವರ್ಷಗಳ ಕಾಲ ಭೂಗತ ಜಗತ್ತನ್ನು ಆಳಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಗ್ಯಾಂಗ್‌ಸ್ಟರ್ ರವಿ ಪೂಜಾರಿ ಸೆನಗಲ್‌ನಲ್ಲಿ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿ ಹೊಂದಿದ್ದಾನೆ. ಈತನ ವಿರುದ್ಧ ಬೆಂಗಳೂರಿನಲ್ಲೇ 46 ಎ್ಐಆರ್ ದಾಖಲಾಗಿದ್ದು, ಇದರಲ್ಲಿ ಕೊಲೆ, ಕೊಲೆಯತ್ನ, ಸುಲಿಗೆ, ಹಪ್ತಾ ವಸೂಲಿ, ಬೆದರಿಕೆಯಂತಹ 20 ಪ್ರಕರಣಗಳಾದರೆ, ಇನ್ನುಳಿದ 26 ಕೇಸ್‌ಗಳಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಅಪರಾಧ ಎಸಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಇಡಿ ಉನ್ನತ ಮೂಲಗಳು ತಿಳಿಸಿವೆ.
    ಇಡಿ ವಶಕ್ಕೆ ರವಿ ಪೂಜಾರಿ: ಈಗಾಗಲೇ ಎಸ್‌ಐಟಿ ಅಧಿಕಾರಿಗಳಿಂದ ರವಿ ಪೂಜಾರಿ ಬಗ್ಗೆ ಮಾಹಿತಿ ಕಲೆ ಹಾಕಿರುವ ಇಡಿ ಅಧಿಕಾರಿಗಳು, ಆತನನ್ನು 15 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಲು ತಯಾರಿ ನಡೆಸಿದ್ದಾರೆ. ಕೋರ್ಟ್ ಕಲಾಪಗಳು ಪುನರಾರಂಭಗೊಂಡ ಕೂಡಲೇ ಈ ಪ್ರಕ್ರೀಯೆ ನಡೆಯಲಿದೆ. ಈತನ ಪತ್ನಿ ಪದ್ಮಾ ಪೂಜಾರಿ ಹಾಗೂ ಮಕ್ಕಳ ಹೆಸರಲ್ಲೂ ವಿದೇಶದಲ್ಲಿ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿ ಹೂಡಿಕೆ ಮಾಡಿರುವ ಬಗ್ಗೆ ಇಡಿ ಜಾಡು ಹಿಡಿದಿದೆ.

    ಪೂಜಾರಿಗಾಗಿ ಕಾಯುತ್ತಿರುವ ಮುಂಬೈ ಪೊಲೀಸರು: ಮುಂಬೈನಲ್ಲಿ ಈತನ ವಿರುದ್ಧ 120ಕ್ಕೂ ಹೆಚ್ಚು ಪ್ರಕರಣಗಳಿದ್ದು, ಮುಂಬೈ ಪೊಲೀಸರು ಈತನಿಗಾಗಿ ಕಾದು ಕುಳಿತಿದ್ದಾರೆ. ಇಡಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಕೂಡಲೇ ಮುಂಬೈ ಪೊಲೀಸರು ತಮ್ಮ ವಶಕ್ಕೆ ಪಡೆಯಲು ಸಿದ್ದತೆ ನಡೆಸುವ ಸಾಧ್ಯತೆಗಳಿವೆ ಮೂಲಗಳು ತಿಳಿಸಿವೆ. ರವಿ ಪೂಜಾರಿ ವಿರುದ್ಧ ದೇಶದ ವಿವಿಧೆಡೆ ಹತ್ತಾರು ವರ್ಷಗಳ ಹಿಂದೆ ದಾಖಲಾಗಿ ನಾಮವಾಶೇಷವಾಗಿದ್ದ ಹಲವು ಪ್ರಕರಣಗಳಿಗೆ ಮತ್ತೆ ಮರುಜೀವ ಬಂದಿದೆ.

    25 ಎಸಿಪಿ, 24 ಇನ್‌ಸ್ಪೆಕ್ಟರ್‌ಗಳ ವರ್ಗ
    ಭೂಗತ ಪಾತಕಿ ರವಿ ಪೂಜಾರಿ ಜೊತೆಗೆ ನಂಟು ಆರೋಪ ಹೊತ್ತ ಎಸಿಪಿ ವೆಂಕಟೇಶ್ ಪ್ರಸನ್ನ ಸೇರಿ 25 ಎಸಿಪಿ ಹಾಗೂ 24 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಸರ್ಕಾರ ಶುಕ್ರವಾರ ಆದೇಶಿಸಿದೆ. ಸಿಸಿಬಿ ವಿಚಾರಣೆ ವೇಳೆ ವೆಂಕಟೇಶ್ ಪ್ರಸನ್ನ ಜೊತೆ ಸಂಪರ್ಕ ಇರುವುದಾಗಿ ರವಿ ಪೂಜಾರಿ ಬಾಯ್ಬಿಟ್ಟಿದ್ದ. ಎಸಿಪಿ ವಿರುದ್ಧ ಇಲಾಖಾ ತನಿಖೆ ಬಳಿಕ ವೆಂಕಟೇಶ್ ಪ್ರಸನ್ನರನ್ನು ರಾಜ್ಯ ಗುಪ್ತಚರ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಇವರ ಜೊತೆಗೆ ರಾಜ್ಯದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದ 24 ಎಸಿಪಿ ಮತ್ತು 24 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts