More

    ರವಿ ಪೂಜಾರಿ ಕೇಸುಗಳಿಗೆ ಮರುಜೀವ

    ಮಂಗಳೂರು/ಉಡುಪಿ: ಪಶ್ಚಿಮ ಆಫ್ರಿಕಾದ ಸೆನೆಗಲ್‌ನಲ್ಲಿ ಬಂಧಿತನಾಗಿ ಭಾರತಕ್ಕೆ ಹಸ್ತಾಂತರಗೊಳ್ಳಲಿರುವ ಭೂಗತ ಪಾತಕಿ ರವಿ ಪೂಜಾರಿ(58) ಮೂಲತಃ ಮಲ್ಪೆಯ ವಡಬಾಂಡೇಶ್ವರದ ನಿವಾಸಿಯಾಗಿದ್ದು, ಈತನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 36 ಹಾಗೂ ಉಡುಪಿ ಜಿಲ್ಲೆಯಲ್ಲಿ 10 ಸಹಿತ ಒಟ್ಟು 46 ಪ್ರಕರಣಗಳು ದಾಖಲಾಗಿವೆ.
    ಕೊಲೆ, ಕೊಲೆ ಯತ್ನ, ಬೆದರಿಕೆ, ಹಫ್ತಾ ವಸೂಲಿಗೆ ಬೆದರಿಕೆ ಮೊದಲಾದುವು ಇದರಲ್ಲಿ ಪ್ರಮುಖವಾಗಿವೆ. 2006ರಲ್ಲಿ ಮೊದಲ ಪ್ರಕರಣ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಕಾರ್ಕಳ, ಬ್ರಹ್ಮಾವರ, ಉಡುಪಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 10 ಪ್ರಕರಣಗಳು ಇವೆ. ದ.ಕ. ಜಿಲ್ಲೆಯ ಪುತ್ತೂರು ನಗರ ಠಾಣೆ, ಬಂಟ್ವಾಳ, ಮಂಗಳೂರು ನಗರದ ಕದ್ರಿ, ಬರ್ಕೆ, ಬಂದರು, ಪಾಂಡೇಶ್ವರ, ಕೊಣಾಜೆ ಮೊದಲಾದ ಠಾಣೆಗಳಲ್ಲಿ 36 ಪ್ರಕರಣಗಳಿವೆ.

    ಛೋಟಾ ನಂಟು: ರವಿ ಪೂಜಾರಿ ಮುಂಬೈ ಅಪರಾಧ ಜಗತ್ತಿಗೆ ಕಾಲಿಟ್ಟಿದ್ದ. ಆರಂಭದಲ್ಲಿ ಛೋಟಾ ರಾಜನ್, ಗುರುಸಾಟಂ ಜತೆ ನಿಕಟ ಸಂಪರ್ಕ ಹೊಂದಿದ್ದ. ಬಳಿಕ 1990ರಲ್ಲಿ ದುಬೈಗೆ ತೆರಳಿದ್ದ. ಅಲ್ಲಿಂದ ಆಸ್ಟ್ರೇಲಿಯಾ, ಆಫ್ರಿಕಾ ಮೊದಲಾದ ದೇಶಗಳಲ್ಲಿ ನೆಲೆ ಕಂಡುಕೊಂಡಿದ್ದ. ಅಲ್ಲಿಂದಲೇ ದೇಶದ ರಾಜಕಾರಣಿಗಳಿಗೆ, ಉದ್ಯಮಿಗಳಿಗೆ, ಸಿನಿಮಾ ನಟರಿಗೆ ಬೆದರಿಕೆ ಕರೆಗಳನ್ನು ಮಾಡುತ್ತಿದ್ದ. ದೇಶದ ವಿವಿಧ ಕಡೆ ಸಹಚರರ ಮೂಲಕ ಅಪರಾಧ ಕೃತ್ಯ ಎಸಗುತ್ತಿದ್ದ.
    ದಾವೂದ್ ಇಬ್ರಾಹಿಂನ ಖಾಸಾ ಶೂಟರ್ ರಶೀದ್ ಮಲಬಾರಿ ಪರ ನ್ಯಾಯಾಲಯದಲ್ಲಿ ವಾದಕ್ಕೆ ಮುಂದಾಗಿದ್ದ ಮಂಗಳೂರಿನ ವಕೀಲ ನೌಶಾದ್‌ನನ್ನು 2009ರಲ್ಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಈತನ ವಿರುದ್ಧ ಹಫ್ತಾ ವಸೂಲಿ, ಜೀವ ಬೆದರಿಕೆ ಪ್ರಕರಣಗಳು ದಾಖಲಾಗಿವೆ. ಕೆಲವು ಪ್ರಕರಣಗಳು ತನಿಖೆಯಲ್ಲಿವೆ. ಇನ್ನು ಕೆಲವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ಆತನ ವಿರುದ್ಧ 2012ರಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿತ್ತು. ಈ ನೋಟಿಸ್ 5 ವರ್ಷಕ್ಕೊಮ್ಮೆ ನವೀಕರಣಗೊಳಿಸಲಾಗುತ್ತಿತ್ತು. 2017ರಲ್ಲಿ ಮತ್ತೆ ನವೀಕರಣಗೊಂಡಿತ್ತು.
    ಮಂಗಳೂರಿನ ಬಿಜೈ ಉದ್ಯಮಿಯೊಬ್ಬರ ಮಳಿಗೆಗೆ 2014 ಮಾರ್ಚ್ 3ರಂದು ರವಿ ಪೂಜಾರಿ ಸಹಚರರು ಆಗಮಿಸಿ ಹಫ್ತಾ ವಸೂಲಿಗೆ ಬೆದರಿಕೆ ಹಾಕಿ ಹೋಗಿದ್ದರು. ಈ ಪ್ರಕರಣದಲ್ಲಿ ಹಲವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು. ಪಿಸ್ತೂಲ್, ಮದ್ದು ಗುಂಡುಗಳನ್ನು ವಶಪಡಿಸಿಕೊಂಡಿದ್ದರು.
    ಇತ್ತೀಚೆಗೆ ನಾಲ್ಕೈದು ವರ್ಷಗಳಿಂದ ಕರಾವಳಿಯಲ್ಲಿ ರವಿ ಪೂಜಾರಿ ಅಪರಾಧ ಚಟುವಟಿಕೆಗಳು ಕಡಿಮೆಯಾಗಿದ್ದವು.

    ಮಂಗಳೂರು ಪೊಲೀಸರು ರೆಡಿ: ಬಂಧಿತ ರವಿ ಪೂಜಾರಿಯನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದು ಇಲ್ಲಿ ವಿವಿಧ ಠಾಣೆಗಳಲ್ಲಿ ಆತನ ವಿರುದ್ಧ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿ ತನಿಖೆ ನಡೆಸಲಿದ್ದಾರೆ. ಮಂಗಳೂರು ಹಾಗೂ ಉಡುಪಿ ಪೊಲೀಸರು ಈ ನಿಟ್ಟಿನಲ್ಲಿ ಸಿದ್ಧತೆ ನಡೆಸಿದ್ದಾರೆ.
    ಸದ್ಯ ಬೆಂಗಳೂರು ಪೊಲೀಸರು ಪೂಜಾರಿಯನ್ನು ವಶಕ್ಕೆ ಪಡೆದಿರುವುದರಿಂದ ಅವರ ತನಿಖೆ ಮುಗಿದು, ನ್ಯಾಯಾಲಯಕ್ಕೆ ಹಾಜರುಪಡಿಸಿ, ಅಲ್ಲಿ ಮತ್ತೆ ಬಾಡಿವಾರಂಟ್ ಮೇಲೆ ಆತನನ್ನು ಕರೆದುಕೊಂಡು ಬರುವ ನಿರೀಕ್ಷೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಮಲ್ಪೆ ನಿವಾಸಿ: ಪಶ್ಚಿಮ ಆಫ್ರಿಕಾದ ಸೆನೆಗಲ್‌ನಲ್ಲಿ ಬಂಧಿತನಾಗಿ ಭಾರತಕ್ಕೆ ಹಸ್ತಾಂತರಗೊಳ್ಳಲಿರುವ ಭೂಗತ ಪಾತಕಿ ರವಿ ಪೂಜಾರಿ(58) ಮೂಲತಃ ಮಲ್ಪೆಯ ವಡಬಾಂಡೇಶ್ವರದ ನಿವಾಸಿ. ವಡಬಾಂಡೇಶ್ವರ ನೆರ್ಗಿ ಸರಸ್ವತಿ ಭಜನಾ ಮಂದಿರ ಬಳಿಯ ನಿವಾಸಿ ಸೂರ್ಯ ಪೂಜಾರಿ – ಸುಶೀಲಾ ಪೂಜಾರಿ ದಂಪತಿ ಐವರು ಮಕ್ಕಳಲ್ಲಿ ರವಿ ಪೂಜಾರಿ ಎರಡನೇಯವನು. ಈತನಿಗೆ ಅಕ್ಕ, ತಂಗಿ ಹಾಗೂ ಇಬ್ಬರು ತಮ್ಮಂದಿರು ಇದ್ದಾರೆ. ಓರ್ವ ತಮ್ಮ ಮಧು ಪೂಜಾರಿ ತೀರಿಕೊಂಡಿದ್ದಾರೆ. ಮಗನ ಅಪರಾಧ ಕೃತ್ಯಗಳಿಗೆ ಪೊಲೀಸರ ಪದೇಪದೆ ವಿಚಾರಣೆ ಎದುರಿಸಬೇಕಾದ ಪರಿಸ್ಥಿತಿಯಿಂದ ಬೇಸತ್ತ ತಂದೆ ತಾಯಿ 12 ವರ್ಷಗಳ ಹಿಂದೆಯೇ ಮಲ್ಪೆ ಮನೆಯನ್ನು ತ್ಯಜಿಸಿ ಹೋಗಿದ್ದರು.

    ಬೆಳೆದಿದ್ದು ಮುಂಬೈನಲ್ಲಿ: ರವಿ ಪೂಜಾರಿ ಮಲ್ಪೆಯಲ್ಲಿ ಹುಟ್ಟಿದ್ದರೂ ಬೆಳೆದಿದ್ದು, ಶಾಲೆಗೆ ಹೋಗಿರುವುದು ಮುಂಬೈನಲ್ಲಿ. ತಂದೆ ಸೂರ್ಯ ಪೂಜಾರಿ ಮುಂಬೈಯ ಕಂಪನಿಯೊಂದರಲ್ಲಿ ಕೆಲಸಕ್ಕಿದ್ದರು. ನಿವೃತ್ತರಾದ ಬಳಿಕ ಮಲ್ಪೆಯ ಮನೆಯಲ್ಲಿ ಬಂದು ನೆಲೆಸಿದ್ದರು. ಮುಂಬೈ ಅಪರಾಧ ಲೋಕದಲ್ಲಿ ತೊಡಗಿಸಿಕೊಂಡಿದ್ದ ರವಿ ಪೂಜಾರಿ ಮಾತ್ರ ಮುಂಬೈನಲ್ಲೇ ಇದ್ದು ಊರಿಗೆ ಆಗಾಗ ಬಂದು ಹೋಗುತ್ತಿದ್ದ.

    1990-92 ಕೊನೆಯ ಭೇಟಿ: ರವಿ ಪೂಜಾರಿ 1990- 92ರ ಅವಧಿಯಲ್ಲಿ ಮಲ್ಪೆಯಲ್ಲಿ ನಡೆದ ಅಕ್ಕನ ಮದುವೆಯಲ್ಲಿ ಪಾಲ್ಗೊಂಡಿದ್ದೇ ಕೊನೆಯ ಭೇಟಿ. ಈ ಅವಧಿಯಲ್ಲಿ ಆತನಿಗೆ ಅಂದಾಜು 28 ವರ್ಷ ವಯಸ್ಸಾಗಿತ್ತು. ಅದೇ ಸಮಯದಲ್ಲಿ ಪೊಲೀಸರು ರವಿ ಪೂಜಾರಿಯನ್ನು ಹುಡುಕಿಕೊಂಡು ಬಂದಾಗ ಆತ ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂಬ ಮಾಹಿತಿ ಕುಟುಂಬದವರಿಗೆ ಗೊತ್ತಾಗಿತ್ತು ಎಂದು ಮೂಲಗಳು ತಿಳಿಸಿವೆ.

    ಮನೆ ತೊರೆದ ಕುಟುಂಬ: ಸೂರ್ಯ ಪೂಜಾರಿ ನಿವೃತ್ತಿ ನಂತರ ಪೊಲೀಸರು ರವಿ ಪೂಜಾರಿ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ಪದೇಪದೆ ಮನೆಗೆ ಆಗಮಿಸಿ ತಂದೆ-ತಾಯಿಯನ್ನು ವಿಚಾರಣೆ ನಡೆಸುತ್ತಿದ್ದು, ಬೇಸತ್ತ ಸೂರ್ಯ ಪೂಜಾರಿ 12 ವರ್ಷ ಹಿಂದೆ ಮಲ್ಪೆಯ ಮನೆಯನ್ನು ಮಾರಾಟ ಮಾಡಿ ದೆಹಲಿಯಲ್ಲಿ ವಾಸವಾಗಿದ್ದ ತನ್ನ ಪುತ್ರಿಯ ಮನೆಗೆ ಹೋಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಸೂರ್ಯ ಪೂಜಾರಿ ಐದು ವರ್ಷಗಳ ಹಿಂದೆ ಅಲ್ಲಿಯೇ ಮೃತಪಟ್ಟಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts