More

    ಪಡಿತರ ವಿತರಣೆ ಗೋಲ್​ಮಾಲ್!

    ರಾಣೆಬೆನ್ನೂರ: ಲಾಕ್​ಡೌನ್ ಸಮಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂದು ರಾಜ್ಯ ಸರ್ಕಾರ ಪಡಿತರದಾರರಿಗೆ ತಲಾ 10 ಕೆಜಿ ಪಡಿತರ ಅಕ್ಕಿ ವಿತರಿಸುತ್ತಿದೆ. ಆದರೆ, ಅಂಗಡಿಕಾರರು ಪ್ರತಿ ಫಲಾನುಭವಿಯ ಒಂದು ಕೆಜಿ ಕಡಿತ ಮಾಡಿಕೊಂಡು ವಿತರಿಸುತ್ತಿದ್ದಾರೆ.
    ತಾಲೂಕಿನ ಮಾಳನಾಯಕನಹಳ್ಳಿ ಕೃಷಿ ಪತ್ತಿನ ಸಹಕಾರಿ ಸಂಘದ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ಫಲಾನುಭವಿಗೆ 1 ಕೆಜಿ ಅಕ್ಕಿಯನ್ನು ಕಡಿಮೆ ವಿತರಣೆ ಮಾಡುತ್ತಿದ್ದು, ಇಂಥ ಹಗಲು ದರೋಡೆ ಕುರಿತು ಗ್ರಾಮದ ಯುವಕನೊಬ್ಬ ವಿಡಿಯೋ ಸಮೇತ ‘ನಮ್ಮ ತುಮ್ಮಿನಕಟ್ಟಿ’ ಎಂಬ ಫೇಸ್​ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾನೆ.
    ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಪಡಿತರ ವಿತರಣೆ ಮಾಡುವಾಗ 1 ಕೆಜಿ ಕಡಿಮೆ ವಿತರಣೆ ಮಾಡುತ್ತಿರುವುದನ್ನು ಯುವಕ ಪ್ರಶ್ನೆ ಮಾಡಿದ್ದಾನೆ. ‘ಈ ಹಿಂದೆ ಅರ್ಧ ಕೆಜಿ ಕಡಿಮೆ ಕೊಡುತ್ತಿದ್ದೇವು. ಈಗ 1 ಕೆಜಿ ಕಡಿಮೆ ಮಾಡಿ ಕೊಡುತ್ತಿದ್ದೇವೆ. ಬೇಕಾದರೆ ತೆಗೆದುಕೋ, ಇಲ್ಲವಾದರೆ ಹೋಗು’ ಎಂದು ಸಹಕಾರಿ ಸಂಘದ ಸಿಬ್ಬಂದಿ ಯುವಕನೊಂದಿಗೆ ವಾಗ್ವಾದ ಮಾಡಿದ್ದಾರೆ. ಆಗ ಯುವಕ, ‘ಇದನ್ನು ನಾನು ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ’ ಎಂದಾಗ, ‘ಇದೆಲ್ಲ ಆಹಾರ ನಿರೀಕ್ಷಕರಿಗೆ ಗೊತ್ತೇ ಇದೆ. ಅವರಿಗೆ ಹೇಳಿಯೇ ನಾವು ಕಡಿಮೆ ಕೊಡುತ್ತಿದ್ದೇವೆ. ನೀನು ಯಾರಿಗೆ ಬೇಕಾದರೂ ಹೇಳಿಕೋ’ ಎಂದು ಯುವಕನಿಗೆ ವಾಪಸ್ ಕಳುಹಿಸಿದ್ದಾರೆ.
    ಈ ಎಲ್ಲ ದೃಶ್ಯವನ್ನು ಗ್ರಾಮದ ಯುವಕ ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾನೆ. ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಸ್ಥಳೀಯ ಶಾಸಕರು ಇಂಥವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಬರೆದುಕೊಂಡಿದ್ದಾನೆ. ಇದೀಗ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಂದಲೂ ಭಾರಿ ಆಕ್ರೋಶ ವ್ಯಕ್ತವಾಗಿದೆ.

    ತಾಲೂಕಿನ ಮಾಳನಾಯಕನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಮಾಡುವಾಗ ಒಂದು ಕೆ.ಜಿ. ಕಡಿತ ಮಾಡಿಕೊಂಡು ನೀಡುತ್ತಿರುವ ಕುರಿತ ವಿಡಿಯೋ ಫೇಸ್​ಬುಕ್​ನಲ್ಲಿ ಹರಿಬಿಟ್ಟ ಕಾರಣ ನಾನೇ ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಮಾಳನಾಯಕನಹಳ್ಳಿ ಸೇರಿ ಸುತ್ತಲಿನ ಗ್ರಾಮಗಳ ಮನೆ ಮನೆಗೆ ತೆರಳಿ ವಿಚಾರಣೆ ಮಾಡುತ್ತೇನೆ. ಎಲ್ಲರಿಂದ ಮಾಹಿತಿ ಸಂಗ್ರಹಿಸಿದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು.
    | ಎಂ.ಸಿ. ಮೇಗಳಮನಿ
    ತಾಲೂಕು ಆಹಾರ ಇಲಾಖೆ ನಿರೀಕ್ಷಕ




    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts