More

    ಅನ್ನಭಾಗ್ಯಕ್ಕೆ ಮತ್ತೆ ವಕ್ಕರಿಸಿದ ಸರ್ವರ್ ಭೂತ: ಪಡಿತರ ಪಡೆಯಲು ಕಾರ್ಡ್‌ದಾರರ ಪರದಾಟ

    ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ಮತ್ತೆ ಸರ್ವರ್ ಭೂತ ವಕ್ಕರಿಸಿದೆ. ನಾಲ್ಕೈದು ದಿನಗಳಿಂದ ಸರ್ವರ್ ಸಮಸ್ಯೆಯಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ರಾಜ್ಯಾದ್ಯಂತ ಕಾರ್ಡ್‌ದಾರರು ಪರದಾಡುವಂತಾಗಿದೆ. ಯೋಜನೆಗೆ ‘ಸರ್ವರ್ ಡೌನ್’ಸಮಸ್ಯೆ ನಿರಂತರವಾಗಿ ಕಾಡುತ್ತಿದ್ದರೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಹಾರ ಇಲಾಖೆ ಹೆಣಗಾಡುವಂತಾಗಿದೆ. ಇದರಿಂದಾಗಿ ಪ್ರತಿ ನಿತ್ಯ ನ್ಯಾಯಬೆಲೆ ಅಂಗಡಿಗಳಿಗೆ ಕಾರ್ಡ್‌ದಾರರು ಹೋಗಿ ಬರುವಂತಾಗಿದೆ. 2022ರ ಸೆ.15ರಿಂದ 10 ದಿನವರೆಗೆ ಸರ್ವರ್ ಡೌನ್ ಗುಮ್ಮ ಕಾಡಿತ್ತು. ಈಗ ಮತ್ತೆ ಜನಪ್ರಿಯ ಯೋಜನೆಗೆ ನೂರೆಂಟು ತೊಂದರೆಯಾಗುತ್ತಿದೆ. ಸರ್ವರ್ ಮೇಲ್ವಿಚಾರಣೆ ನಡೆಸುವವರು ಇಲಾಖೆಯಿಂದ ಸಮರ್ಪಕವಾಗಿ ಹಣ ಪಾವತಿಸದಿದ್ದರೆ ಬೇಕಂತಲೇ ಕೆಲವೊಮ್ಮೆ ಸರ್ವರ್ ಡೌನ್ ಮಾಡುತ್ತಿರುವ ಬಗ್ಗೆಯೂ ಗಂಭೀರ ಆರೋಪವಿದೆ.

    ರಾಜ್ಯದಲ್ಲಿ 1,15,79,081 ಬಿಪಿಎಲ್, 23,87,956 ಎಪಿಎಲ್ ಹಾಗೂ 10,90,563 ಅಂತ್ಯೋದಯ ಸೇರಿ ಒಟ್ಟು 1,50,57,600 ಕಾರ್ಡ್‌ಗಳಿವೆ. ಪ್ರತಿ ತಿಂಗಳು 20,168 ನ್ಯಾಯಬೆಲೆ ಅಂಗಡಿಗಳಿಂದ ಯೋಜನೆಯಡಿ ಈ ಎಲ್ಲ ಕಾರ್ಡ್‌ದಾರರಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಬೆಂಗಳೂರು, ಮೈಸೂರು ಹಾಗೂ ಕಲಬುರಗಿಯಲ್ಲಿ ಸದ್ಯ ಹಳೆಯ ಸರ್ವರ್ ಅಳವಡಿಸಲಾಗಿದೆ. ಮತ್ತೊಂದು ಸರ್ವರ್ ಅಳವಡಿಕೆಗೆ ಸರ್ಕಾರ ಈಗಾಗಲೆ ಟೆಂಡರ್ ಕರೆದರೂ ಇನ್ನೂ ಪ್ರಕ್ರಿಯೆಗಳು ಮುಗಿದಿಲ್ಲ. ಇದರಿಂದ ಮೂರ್ನಾಲ್ಕು ತಿಂಗಳಿಗೊಮ್ಮೆ ಉಂಟಾಗುತ್ತಿರುವ ಸರ್ವರ್ ಸಮಸ್ಯೆಯಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ಕಾರ್ಡ್‌ದಾರರು ತೊಂದರೆಯಾಗಿದೆ.

    ಪ್ರತಿ ನಿತ್ಯ ನ್ಯಾಯಬೆಲೆ ಅಂಗಡಿಗಳ ಮುಂದೆ ತಮ್ಮ ಕೆಲಸ ಬಿಟ್ಟು ನೂರಾರು ಜನರು ಬಯೋಮೆಟ್ರಿಕ್ ನೀಡಲು ಸರದಿ ಸಾಲಿನಲ್ಲಿ ನಿಂತುಕೊಂಡು ಕಾಯುವಂತಾಗಿದೆ. ಕೇವಲ 7-8 ಕಾರ್ಡ್‌ದಾರರ ಬಯೋ ಮಾತ್ರ ತೆಗೆದುಕೊಳ್ಳಲಾಗುತ್ತಿದೆ. ಉಳಿದವರು ಮನೆಗೆ ವಾಪಸ್ ತೆರಳುತ್ತಿದ್ದಾರೆ. ಒಟ್ಟಿನಲ್ಲಿ ದೈನಂದಿನ ಕೆಲಸ ಬಿಟ್ಟು ಕಾರ್ಡ್‌ದಾರರು ಅಂಗಡಿಗಳ ಮುಂದೆ ದಿನಗಟ್ಟಲೆ ಕಾಯುವಂತಾಗಿದೆ.

    ಆಹಾರ ಇಲಾಖೆ ಸರ್ವರ್ ಅನ್ನು ಸರ್ಕಾರದ 21 ಇಲಾಖೆಗಳು ಅವಲಂಬಿತವಾಗಿವೆ. ಹೀಗಾಗಿ, ಪಡಿತರ ವಿತರಣೆಗೆ ಪದೇಪದೆ ಸರ್ವರ್ ಸಮಸ್ಯೆ ಎದುರಾಗುತ್ತಿದೆ. ಈ ಸಮಸ್ಯೆ ಬಗೆಹರಿಯುವರೆಗೆ ಮೊಬೈಲ್ ಒಟಿಪಿ ಇಲ್ಲವೆ ಚೆಕ್‌ಲೀಸ್ಟ್ ಮೂಲಕ ವಿತರಣೆಗೆ ಅವಕಾಶ ನೀಡಬೇಕು. ಪಡಿತರ ವಿತರಣೆಗೆ ಪ್ರತ್ಯೇಕ ಸರ್ವರ್ ಕೇಂದ್ರವನ್ನು ಸ್ಥಾಪಿಸಬೇಕು. ಬರುವ ಬಜೆಟ್‌ನಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಎಣ್ಣೆ, ಉಪ್ಪು, ಸೊಪ್ಪು ಸೇರಿ ದಿನ ಬಳಕೆ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಬೇಕು. ಬಾಕಿ ಉಳಿದಿರುವ ಕಮಿಷನ್ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು.
    | ಟಿ. ಕೃಷ್ಣಪ್ಪ. ಅಧ್ಯಕ್ಷ.ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ.

    ಶೇ.100 ಪಡಿತರ ವಿತರಣೆ ಕಷ್ಟ: ಪ್ರಸ್ತುತ ತಿಂಗಳಿನ ಶೇ.100 ಪಡಿತರ ಎತ್ತುವಳಿ ಕಷ್ಟವಾಗಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸರ್ವರ್ ಸಮಸ್ಯೆ ಇನ್ನಷ್ಟು ಬಿಗಾಡಯಿಸಿದೆ. ಶನಿವಾರದವರೆಗೆ (ಜ.21) ರಾಜ್ಯಾದ್ಯಂತ ಶೇ.15 ಪಡಿತರ ವಿತರಿಸಲಾಗಿದ್ದು, ಇನ್ನೂ 8 ದಿನಗಳಲ್ಲಿ ಶೇ.100 ಪಡಿತರ ವಿತರಣೆಗೆ ಮಾಡಬೇಕಾದ ಸ್ಥಿತಿಯಲ್ಲಿ ಅಂಗಡಿ ಮಾಲೀಕರು ಸಿಲುಕಿದ್ದಾರೆ. ಸರ್ವರ್ ಸಮಸ್ಯೆ ಬಗೆಹರಿಸದಿದ್ದರೆ ಬಯೋ ಬದಲು ಮೊಬೈಲ್ ಒಟಿಪಿ ಇಲ್ಲವೆ ಚೆಕ್‌ಲೀಸ್ಟ್ ಮೂಲಕ ಲಾನುಭವಿಗೆ ಪಡಿತರ ವಿತರಿಸಲು ಅವಕಾಶ ನೀಡಬೇಕೆಂಬ ಸರ್ಕಾರಕ್ಕೆ ಮಾಲೀಕರು ಮನವಿ ಮಾಡಿದ್ದಾರೆ. ಒಂದು ದೇಶ ಒಂದು ಪಡಿತರ ಯೋಜನೆಯಡಿ ಬೇರೆ ಜಿಲ್ಲೆಯ ಕಾರ್ಡ್‌ದಾರರಿಗೂ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಪಡಿತರ ಧಾನ್ಯಗಳ ಸ್ಟಾಕ್ ನೋಡಿಕೊಳ್ಳಲು ಮಾಲೀಕರಿಗೆ ಸಾಧ್ಯವಾಗುತ್ತಿಲ್ಲ.

    ಅರ್ಜಿ ಸಲ್ಲಿಕೆಗೂ ಸರ್ವರ್ ಕಂಟಕ: ಪಡಿತರ ಸೋರಿಕೆ ಹಾಗೂ ಬೋಗಸ್ ಕಾರ್ಡ್ ತಡೆಯಲು ಸಲುವಾಗಿ ಆಹಾರ ಇಲಾಖೆ ಜಾರಿಗೆ ತಂದಿದ್ದ ರೇಷನ್ ಕಾರ್ಡ್‌ಗೆ ಆಧಾರ್ ದೃಢೀಕರಣ (ಇಕೆವೈಸಿ)ಪ್ರಕ್ರಿಯೆಗೆ ಸರ್ವರ್ ಸಮಸ್ಯೆ ಕಾಡಿತ್ತು. ಪದೇಪದೆ ಸರ್ವರ್ ಡೌನ್‌ನಿಂದ ಮೂರು ವರ್ಷ ಇಕೆವೈಸಿ ಕುಂಟುತ್ತಾ ಸಾಗಿತ್ತು. ರೇಷನ್ ಕಾರ್ಡ್‌ನಲ್ಲಿರುವ ಪ್ರತಿ ಸದಸ್ಯರು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಆಧಾರ್ ದೃಢೀಕರಣ ಮಾಡಿಸಲು ಎದುಸಿರು ಬಿಡುವಂತಾಗಿತ್ತು. ಅಂತೂ ಕೊನೆಗೂ ಇಕೆವೈಸಿ ಪ್ರಕ್ರಿಯೆ ಮುಗಿಸಲು ನ್ಯಾಯಬೆಲೆ ಅಂಗಡಿಯವರು ದೊಡ್ಡ ಸಾಧನೆಯನ್ನೇ ಮಾಡುವಂತಾಗಿತ್ತು. ಹೊಸದಾಗಿ ಬಿಪಿಎಲ್, ಎಪಿಎಲ್ ಕಾರ್ಡ್ ಬಯಸುವ ಅರ್ಜಿದಾರರು ಇಲಾಖೆ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದ್ದರೂ ಸರ್ವರ್ ಸಮಸ್ಯೆಯಿಂದ ಆಗುತ್ತಿಲ್ಲ.

    ನಾಯಿಯನ್ನು ನಾಯಿ ಎಂದ ಪಕ್ಕದ ಮನೆಯವನನ್ನು ಕೊಂದೇ ಬಿಟ್ಟ!

    ಶಾಲೆಯಲ್ಲಿ ಹೃದಯಾಘಾತಕ್ಕೊಳಗಾಗಿ ಸಾವಿಗೀಡಾದ್ಲು 8ನೇ ತರಗತಿ ವಿದ್ಯಾರ್ಥಿನಿ

    ಮೇಲಿನ ಮನೆಯ ಶೋಯಬ್, ಕೆಳಗಿನ ಮನೆಯ ಶಾಜಿಯಾ ಒಂದೇ ದಿನ ಗಾಯಬ್!

    ಸಂಬಂಧಿಕರ ಅಂತ್ಯಕ್ರಿಯೆಗೆ ತೆರಳುತ್ತಿದ್ದವರಲ್ಲಿ ಮೂವರು ಮಾರ್ಗಮಧ್ಯೆಯೇ ಸಾವು, ಇನ್ನೊಬ್ಬರ ಪರಿಸ್ಥಿತಿ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts