More

    ಇಂದು ರಥಸಪ್ತಮಿ| ಸೂರ್ಯಪೂಜೆಯ ಪರ್ವಕಾಲ

    ಪ್ರತಿ ವರ್ಷ ಮಾಘಮಾಸದ ಶುಕ್ಲಪಕ್ಷ ಏಳನೇ ದಿನವನ್ನು ‘ರಥಸಪ್ತಮಿ’ ಎಂದು ಕರೆಯುತ್ತಾರೆ. ಇದು ಭಗವಾನ್ ಸೂರ್ಯನಾರಾಯಣನ ಜನ್ಮದಿನ. ಸೂರ್ಯದೇವನು ಸಪ್ತಮಿಯಂದು ತನ್ನ ರಥವನ್ನು ಉತ್ತರದಿಕ್ಕಿಗೆ ತಿರುಗಿ ಸಂಚರಿಸಲು ಪ್ರಾರಂಭಿಸುವನು.
    ‘ಏಕಚಕ್ರೋ ರಥೋ ಮಂತ್ರಾ ವಿಕಲೋ ವಿಷಮಾ ಹಯಾಃ |
    ಆಕ್ರಮತ್ಯೇವ ತೇಜಸ್ವೀ ತಥಾಷ್ಯಕೋ ನಭಸ್ಥಲಂ ||’
    ಈ ಸೂರ್ಯ ರಥಕ್ಕೆ ಒಂದೇ ಚಕ್ರ. ಏಳು ಕುದುರೆಗಳು. ಇದರ ಸಾರಥಿ ಅರುಣ. ಸೂರ್ಯನ ರಥದ ಭಾಗಗಳು ಸಂವತ್ಸರದಲ್ಲಿನ ವಿಭಾಗಗಳಿಗೆ ಹೋಲಿಕೆಯಿದೆ. ಒಂದೇ ಚಕ್ರ ಇರುವ ರಥಕ್ಕೆ ಹೆಗಲು ನಾಭಿ, ಪಂಚ ಆಯುಧಗಳು, ಚಕ್ರದಲ್ಲಿನ ಎಲೆಗಳು, ಆರು ಋತುಗಳು, ಬಂಡಿಯ ಮಧ್ಯಭಾಗ ಆಯನಗಳು, ತಳ, ಮುಹೂರ್ತಗಳು, ನಿಮಿಷಗಳೇ ಹಗ್ಗಗಳು. ರಾತ್ರಿಯೇ ರಥದವರೋಧಗಳು, ರಥದ ಅಶ್ವಗಳು. ಗಾಯತ್ರಿ, ತ್ರಿಷ್ಟುಪ್, ಅನುಷ್ಟುಪ್, ಜಗತಿ, ಪಂಕ್ತಿ, ಬೃಹತಿ, ಉಷ್ಣಿಕ್ಕು ಎಂಬ ಏಳು ಛಂದಸ್ಸುಗಳೇ ರಥದ ಕುದುರೆಗಳು. ಇನ್ನೊಂದು ರೀತಿಯಲ್ಲಿ 7 ಕುದುರೆಗಳು ವಾರದಲ್ಲಿರುವ 7 ದಿನಗಳ ಸಂಕೇತ. ರಥದ 12 ಜೋಡಿ ಚಕ್ರಗಳು ವರ್ಷದ 12 ತಿಂಗಳುಗಳು ಹಾಗೂ ದ್ವಾದಶರಾಶಿಗಳ ಸಂಕೇತ. ಬೆಳಕಿನಲ್ಲಿರುವ 7 ವಿಧದ ಬಣ್ಣಗಳೇ 7 ಅಶ್ವಗಳು.

    ಶ್ರೀಮನ್ನಾರಾಯಣನೇ ಕಶ್ಯಪ, ಅದಿತಿ ದಂಪತಿಗಳ ಪುತ್ರನಾಗಿ ಜನಿಸಿರುವ ಸೂರ್ಯದೇವ ಅವನಿಗೆ ‘ವೈವಸ್ವತ’ ಎಂದು ಹೆಸರು. ನಾವು ಈಗ ಇರುವುದು 7ನೇ ಮನ್ವಂತರದಲ್ಲಿ. ಇದಕ್ಕೆ ಸೂರ್ಯನ ಹೆಸರನ್ನೂ ಸೇರಿಸಿಕೊಂಡು ನಿತ್ಯ ಸಂಕಲ್ಪ ಮಾಡುವಾಗ ಪಠಿಸುವುದೇ ವೈವಸ್ವತ ಮನ್ವಂತರ ಎಂದು. ಈ ವೈವಸ್ವತ ಮನ್ವಂತರ ಪ್ರಾರಂಭ ಆಗಿದ್ದು ರಥಸಪ್ತಮಿ ದಿನ.

    ವ್ರತದ ಆಚರಣೆ: ರಥಸಪ್ತಮಿ ದಿನ ಸೂರ್ಯೋದಯಕ್ಕೆ ಮೊದಲೇ ಎದ್ದು ಸಮುದ್ರ, ಗಂಗಾ, ತ್ರಿವೇಣಿ ಸಂಗಮದಲ್ಲೋ, ಸಮೀಪದ ನದಿ, ಸರೋವರ, ಕೊಳ, ಬಾವಿಗಳಲ್ಲೋ ಅಥವಾ ಮನೆಗಳಲ್ಲಿಯೋ ಸ್ನಾನ ಮಾಡಬೇಕು. ಸ್ನಾನ ಮಾಡುವಾಗ 7 ಎಕ್ಕದ ಎಲೆಗಳನ್ನು ಬಳಸಬೇಕು. ಎಕ್ಕದ ಎಲೆಗೆ ಸಂಸ್ಕೃತದಲ್ಲಿ ‘ಅರ್ಕ’ ಎಂದು ಹೆಸರು. ಈ ಪದವು ಸೂರ್ಯ ಪದಕ್ಕೆ ಸಮಾನ. ಶ್ರೀ ವಿಷ್ಣುವಿಗೆ ತುಳಸಿ ಎಷ್ಟು ಪ್ರೀತಿಯೋ ಸೂರ್ಯನಿಗೆ ಅರ್ಕ ಅಷ್ಟೇ ಪ್ರಿಯ.

    ಏಳು ಎಕ್ಕದ ಎಲೆ ಏಕೆ ಎಂದರೆ ಈ ಜನ್ಮದ, ಜನ್ಮಾಂತರದ, ಕಾಯಕ, ವಾಚಕ, ಮಾನಸಿಕ, ಜ್ಞಾತ, ಅಜ್ಞಾತ ಪಾಪಗಳೆಂಬ ಸಪ್ತಪಾಪಗಳನ್ನು ಪರಿಹರಿಸಿಕೊಳ್ಳಲು ಏಳು ಎಕ್ಕದ ಎಲೆಯನ್ನು ಉಪಯೋಗಿಸಬೇಕು. ಈ ಏಳರ ಸಂಖ್ಯೆಯ ಮತ್ತೊಂದು ವಿಶೇಷತೆ ಏನೆಂದರೆ ಸೂರ್ಯ ರಥದ ಚಕ್ರ ಕಾಲವನ್ನು ಸೂಚಿಸಿದರೆ ರಥದ 7 ಅಶ್ವಗಳು ವಾರದ 7 ದಿನಗಳನ್ನು, ಬೆಳಗಿನಲ್ಲಿರುವ 7 ವಿಧದ ಬಣ್ಣಗಳನ್ನು ಪ್ರತಿನಿಧಿಸುತ್ತದೆ. ಮುಖ್ಯವಾಗಿ ಮನಸ್ಸಿನ ಮೂಲಕ ಹಿಡಿತ ಸಾಧಿಸಬೇಕೆಂಬ ಸಂಕೇತ. ಎಕ್ಕದ ಎಲೆಗಳಲ್ಲಿ ಔಷಧೀಯ ಗುಣಗಳಿವೆ. ಚರ್ಮರೋಗ, ಅಜೀರ್ಣ, ಕಾಲುನೋವು, ಹೊಟ್ಟೆನೋವು, ಹಲ್ಲಿನ ನೋವುಗಳಿಗೆ ಈ ಎಲೆಯ ರಸವನ್ನು ಉಪಯೋಗಿಸುತ್ತಾರೆ. ಎಕ್ಕದ ಗಿಡದ ಬೇರು ಕಾಂಡಗಳು ಕೆಮ್ಮು, ಅಸ್ತಮಾ ಕಾಯಿಲೆಗಳಿಗೆ ಒಳ್ಳೆಯ ಔಷಧ. ಸ್ನಾನ ಮಾಡುವಾಗ ತಲೆಯ ಮೇಲೆ ಒಂದು, ಭುಜಗಳ ಮೇಲೆ ಎರಡು, ಮೊಣಕಾಲುಗಳ ಮೇಲೆ ಎರಡು, ಪಾದಗಳ ಮೇಲೆ ಎರಡು ಇಟ್ಟುಕೊಂಡು ನೀರನ್ನು ಹಾಕಿಕೊಂಡು ಸ್ನಾನಮಾಡಬೇಕು.

    ‘ಸಪ್ತ ಸಪ್ತ ಹರಪ್ರೀತ ಸಪ್ತಲೋಕ ಪ್ರದೀಪನ
    ಸಪ್ತಮಿ ಸಹಿತೋ ದೇವ ಗೃಹಾಣಾರ್ಘಂ ದಿವಾಕರಃ’
    ಅಥವಾ
    ‘ಸಪ್ತ ಸಪ್ತ ರಥಸಪ್ತ ಸಪ್ತ ದ್ವೀಪಾ ವಸುಂಧರಾ
    ಸಪ್ತರ್ಕ ವರ್ಣಮಾದಾಯ ಸಪ್ತಮಿ ರಥಸಪ್ತಮಿ’
    ಎಂಬ ಮಂತ್ರವನ್ನು ಪಠಿಸಿ ಸೂರ್ಯನಿಗೆ ಅರ್ಘ್ಯವನ್ನು ಕೊಡಬೇಕು. ಕೆಲವೆಡೆ ಅಂದು ಹಿರಿಯರಿಗೆ ಪಿರ್ತೃತರ್ಪಣ ನೀಡುವ ಪದ್ಧತಿ ಇರುವುದು. ನಂತರ ಆದಿತ್ಯಹೃದಯ, ಸೂರ್ಯ ಸಹಸ್ರನಾಮ, ಸೂರ್ಯ ಅಷ್ಟೋತ್ತರ, ಸೂರ್ಯಾಷ್ಟಕ, ಸೂರ್ಯಗಾಯತ್ರಿ ಜಪ, ಸೂರ್ಯನಿಗೆ ಪ್ರಿಯವಾದ ಗೋಧಿ ಹಾಗೂ ಬೆಲ್ಲವನ್ನು ಮಿಶ್ರಣ ಮಾಡಿ ಪಾಯಸವನ್ನು ನೈವೇದ್ಯ ಮಾಡಬೇಕು. ಅಂದು ವಿಶೇಷವಾಗಿ ಸೂರ್ಯ ನಮಸ್ಕಾರಗಳನ್ನು ಮಾಡಬೇಕು.

    ಮಂಡಗದ್ದೆ ಪ್ರಕಾಶಬಾಬು ಕೆ.ಆರ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts