More

    ನೀನಲ್ಲದೆ ಮತ್ತಾರೂ ಇಲ್ಲವಯ್ಯ…

    ಎಂ.ಯೋಗೀಶ ಹೊಸದುರ್ಗ
    ಬಸವಣ್ಣನ ವಚನಗಳನ್ನು ಹಿಂದಿ ಭಾಷೆಯಲ್ಲಿ ನೃತ್ಯ ಮತ್ತು ಸಂಗೀತದ ಮೂಲಕ ದೇಶದ ಜನರಿಗೆ ತಲುಪಿಸುವ ಉದ್ದೇಶದಿಂದ ಸಾಣೇಹಳ್ಳಿಯ

    ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರೂಪಿಸಿರುವ ‘ತುಮಾರೆ ಸಿವಾ ಔರ್ ಕೋಯಿ ನಹಿ’ ಎನ್ನುವ ಹೆಸರಿನ ರಾಷ್ಟ್ರಮಟ್ಟದ ಸಾಂಸ್ಕೃತಿಕ ಅಭಿಯಾನ ಐದು ರಾಜ್ಯಗಳಲ್ಲಿ ಹನ್ನೊಂದು ಪ್ರದರ್ಶನ ಕಾಣುವ ಮೂಲಕ ಯಶಸ್ವಿಯಾಗಿದೆ.

    ಶಿವಕುಮಾರ ಕಲಾಸಂಘದ ಮೂಲಕ ವಿಶಿಷ್ಟ, ವಿನೂತನ ಪರಿಕಲ್ಪನೆಯೊಂದಿಗೆ ದೇಶದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪ್ರಥಮ ವಚನ ಸಾಂಸ್ಕೃತಿಕ ಅಭಿಯಾನಕ್ಕೆ ಜು.2ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು.

    ಮೊದಲ ಪ್ರದರ್ಶನವನ್ನು ಕನ್ನಡದಲ್ಲಿ ಪ್ರಸ್ತುತಪಡಿಸಲಾಗಿತ್ತು.

    ಬೆಂಗಳೂರಿನಿಂದ ಸಾಂಸ್ಕೃತಿಕ ಅಭಿಯಾನ ಆರಂಭಿಸಿದ ಕಲಾತಂಡ ಆಂಧ್ರಪ್ರದೇಶ, ತೆಲಂಗಾಣ, ಒರಿಸ್ಸಾ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳ 11 ಪ್ರಮಖ ಸ್ಥಳಗಳಲ್ಲಿ ಯಶಸ್ವಿ ಪ್ರದರ್ಶನಗಳನ್ನು ನೀಡಿದೆ.

    ಒರಿಸ್ಸಾದ ಭುವನೇಶ್ವರದಲ್ಲಿ ಹಾಗೂ ಪಶ್ಚಿಮ ಬಂಗಾಳದ ಖರಗ್ ಪುರದಲ್ಲಿ ನೀಡಿದ ಪ್ರದರ್ಶನಗಳಿಗೆ ಸಾಂಸ್ಕೃತಿಕ ಲೋಕದ ಪರಿಣಿತರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.

    ಯಾತ್ರೆಗಾಗಿ ಸಜ್ಜುಗೊಂಡಿರುವ ಶಿವಕುಮಾರ ಕಲಾಸಂಘದ ಬಸ್ಸಿನಲ್ಲಿ 3900 ಕಿ.ಮೀ. ಪ್ರಯಾಣ ಬೆಳೆಸಿರುವ ಕಲಾವಿದರ ತಂಡ ಸೆಪ್ಟೆಂಬರ್ 2ರ ವೇಳೆಗೆ 14 ರಾಜ್ಯಗಳ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರದರ್ಶನ ನೀಡಲಿದೆ.

    24 ಕಲಾವಿದೆಯರು ಹಾಗೂ 6 ಜನ ತಂತ್ರಜ್ಞರು ತಂಡದಲ್ಲಿದ್ದಾರೆ.

    ಬಸವಣ್ಣನ 44 ವಚನಗಳನ್ನು ಹಿಂದಿ ಭಾಷೆಗೆ ಭಾಷಾಂತರಿಸಿ ನೃತ್ಯ ರೂಪಕವನ್ನು ರೂಪಿಸಲಾಗಿದೆ.

    ಒಂದು ಗಂಟೆ ಅವಧಿಯ ನೃತ್ಯ ಹಾಗೂ ಸಂಗೀತದ ರೂಪಕವನ್ನು ಸ್ನೇಹಾ ಕಪ್ಪಣ್ಣ ನಿರ್ದೇಶಿಸಿದ್ದಾರೆ. ಸಂಚಾಲಕರಾಗಿ ಶ್ರೀನಿವಾಸ ಕಪ್ಪಣ, ರಂಗಕರ್ಮಿ ವೈ.ಡಿ.ಬದಾಮಿ ಯಾತ್ರೆಯ ವ್ಯವಸ್ಥೆ ನಿರ್ವಹಿಸುತ್ತಿದ್ದಾರೆ.

    ಬಸವಾದಿ ಶರಣರ ಬದುಕು ಹಾಗೂ ಚಿಂತನೆಗಳನ್ನು ದೇಶದ ಜನರಿಗೆ ತಲುಪಿಸುವ ಉದ್ದೇಶದಿಂದ ಆರಂಭವಾಗಿರುವ ನಿನಲ್ಲದೆ ಮತ್ತಾರೂ ಇಲ್ಲವಯ್ಯ (ತುಮಾರೆ ಸಿವಾ ಔರ್ ಕೋಯಿ ನಹಿ) ಎನ್ನುವ ಸಾಂಸ್ಕೃತಿಕ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 5 ರಾಜ್ಯಗಳಲ್ಲಿ ಯಶಸ್ವಿ ಯಾತ್ರೆ ನಡೆಸಿರುವ ಅಭಿಯಾನ 14 ರಾಜ್ಯಗಳಲ್ಲಿ ಪ್ರದರ್ಶನ ನೀಡಲಿದೆ. ಜಾಲತಾಣಗಳಲ್ಲಿ ಕಳೆದು ಹೋಗಿರುವ ಜನರನ್ನು ವಚನ ಸಾಹಿತ್ಯದೆಡೆಗೆ ಕರೆತರುವ ಕೆಲಸ ಇದಾಗಿದೆ.
    ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts