More

    ರಂಗೇರಿದ ಬೈಲಹೊಂಗಲ ಎಪಿಎಂಸಿ ಚುನಾವಣೆ

    ಬೈಲಹೊಂಗಲ: ಪಟ್ಟಣದ ಎಪಿಎಂಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಜೂ.22ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಸದಸ್ಯರಲ್ಲೇ ತೀವ್ರ ಪೈಪೋಟಿ ಎದುರಾಗಿದೆ.

    ಮೊದಲ ಅವಧಿಯಲ್ಲಿ ಕಿತ್ತೂರ ತಾಲೂಕಿನ ಸಂಗನಗೌಡ ಪಾಟೀಲ, 2ನೇ ಅವಧಿಯಲ್ಲಿ ಬೈಲಹೊಂಗಲ ತಾಲೂಕಿನ ಭರಮಪ್ಪ ಸತ್ಯಣ್ಣವರ ಅಧ್ಯಕ್ಷರಾಗಿ, ಮೊದಲ ಅವಧಿಯ ಉಪಾಧ್ಯಕ್ಷೆ ಯಾಗಿ ಕಿತ್ತೂರ ತಾಲೂಕಿನ ಶ್ವೇತಾ ಪಾಟೀಲ, ನೀಲಪ್ಪ ನೇಗಿನಹಾಳ 2ನೇ ಅವಧಿಗೆ ಉಪಾಧ್ಯಕ್ಷ ರಾಗಿದ್ದರು. ಆದರೆ, ಜೂ.6ರಂದು 2ನೇ ಅವಧಿ ಮುಗಿಯುತ್ತಿದ್ದಂತೆಯೇ ಬೈಲಹೊಂಗಲ ಹಾಗೂ ಕಿತ್ತೂರ ತಾಲೂಕು ಹೊಂದಿರುವ ಎಪಿಎಂಸಿ 3ನೇ ಅವಧಿಗೆ ತೀತ್ರ ಸೆಣಸಾಟ ನಡೆದಿದ್ದು, ಹಿರಿಯರ ಸಮ್ಮುಖದಲ್ಲಿ ರಾಜೀ-ಸಂಧಾನ ನಡೆದಿವೆ. ಒಂದು ವೇಳೆ ರಾಜೀ ಸೂತ್ರ ಫಲ ನೀಡಿದರೆ ಮಾತ್ರ ಅವಿರೋಧ ಆಯ್ಕೆಯಾಗುವ ಸಂಭವಿ ಇದೆ. ಇಲ್ಲವಾದಲ್ಲಿ ಚುನಾವಣೆ ನಡೆಯುವುದು ಖಚಿತ.

    ಚುನಾವಣೆ ಮುಂದೂಡಲಾಗಿತ್ತು: ಜೂ.16ಕ್ಕೆ ನಿಗದಿಯಾಗಿದ್ದ ಚುನಾವಣೆಯನ್ನು ತಹಸೀಲ್ದಾರ್ ಡಾ.ದೊಡ್ಡಪ್ಪ ಹೂಗಾರ ಅವರು ಸರ್ಕಾರದ ನಾಮನಿರ್ದೇಶಿತ ಸದಸ್ಯೆ ಸುಶೀಲವ್ವ ನಂದಿಹಳ್ಳಿ, ದೇವಲಾಪುರ ಗ್ರಾಮದ ಸೋಮೇಶ್ವರ ಸಂಸ್ಕರಣ ಘಟಕದ ವಯಿತಿಂದ ಸುಬುದ್ಧಿಸ್ವಾಮಿ ರುದ್ರಾಪುರ ಅವರ ನಾಮನಿರ್ದೇಶನದ ಪಟ್ಟಿ ಜೂ.12ಕ್ಕೆ ಬಂದಿದ್ದರಿಂದ ಅವರಿಗೆ ಚುನಾವಣೆ ನೋಟಿಸ್ ನೀಡಲಾಗಿತ್ತು. ಹಾಗಾಗಿ ಚುನಾವಣೆಯನ್ನು ಮುಂದೂಡಿ ಜೂ.22ಕ್ಕೆ ನಿಗದಿಪಡಿಸಲಾಗಿದೆ.

    ಎರಡೂ ತಾಲೂಕುಗಳಿಂದ 11 ರೈತ ಪ್ರತಿನಿಧಿ, 1 ವರ್ತಕರ ಪ್ರತಿನಿಧಿ, ಬೈಲಹೊಂಗಲ ಟಿಎಪಿಸಿಎಂಎಸ್ ನಾಮನಿರ್ದೇಶಿತ ಸದಸ್ಯ 1, ದೇವಲಾಪುರ ಸೋಮೇಶ್ವರ ಸಂಸ್ಕರಣ ಘಟಕದಿಂದ 1, ಸರ್ಕಾರಿ ನಾಮನಿರ್ದೇಶಿತರಾಗಿ 3 ಸದಸ್ಯರು ಆಡಳಿತ ಮಂಡಳಿಯಲ್ಲಿ ಇರುತ್ತಾರೆ. ರೈತ ಪ್ರತಿನಿಧಿಗಳಿಗೆ ಮಾತ್ರ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿದ್ದು, ಎಲ್ಲ 17 ಜನರು ಮತದಾನ ಮಾಡಲು ಅರ್ಹರಿರುತ್ತಾರೆ.

    3ನೇ ಅವಧಿಗೆ ಪೈಪೋಟಿ: ಅಧ್ಯಕ್ಷ ಸ್ಥಾನಕ್ಕೆ ನೇಸರಗಿ ಕ್ಷೇತ್ರದ ಸದಸ್ಯ ಹಿಂದಿನ ಅಧ್ಯಕ್ಷ ಭರಮಪ್ಪ ಸತ್ಯಣ್ಣವರ 3ನೇ ಅವಧಿಗೂ ತುರಕರಶೀಗಿಹಳ್ಳಿ ಕ್ಷೇತ್ರದ ನೀಲಪ್ಪ ನೇಗಿನಹಾಳ ಅವರೊಂದಿಗೆ ತೀವ್ರ ಪೈಪೋಟಿ ನಡೆಸಿದ್ದಾರೆ. ಇದರಿಂದ ಬಿಜೆಪಿ ಬೆಂಬಲಿತ ಸದಸ್ಯರಲ್ಲಿಯೇ ಪೈಪೋಟಿ ನಡೆದಿದ್ದರಿಂದ ತೀವ್ರ ಕುತೂಹಲ ಮೂಡಿಸಿದೆ.
    ಸರ್ಕಾರ ನಿರ್ದೇಶಿತ ಸದಸ್ಯರಾಗಿ 3, ಬಿಜೆಪಿ ಬೆಂಬಲಿತರಾಗಿ 5 ಜನ ಆಯ್ಕೆಯಾಗಿದ್ದಾರೆ. ಜಿಪಂ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಬೆಂಬಲಿತರಾಗಿ 2, ಕಾಂಗ್ರೆಸ್ ಬೆಂಬಲಿತರಾಗಿ 2, ಜೆಡಿಎಸ್ ಬೆಂಬಲಿತರಾಗಿ 1, ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಬೆಂಬಲಿತರಾಗಿ 1, ದೇವಲಾಪುರ ಸೋಮೇಶ್ವರ ಸಂಸ್ಕರಣ ಘಟಕದಿಂದ 1, ಟಿಎಪಿಸಿಎಂಎಸ್ 1, ವರ್ತಕರ ಕ್ಷೇತ್ರದ 1 ಸದಸ್ಯರಿದ್ದಾರೆ. ಮೇಲ್ನೋಟಕ್ಕೆ ಬಿಜೆಪಿ ಹಿಡಿತದಲ್ಲಿ ಎಪಿಎಂಸಿ ಇದ್ದರೂ ಅದೇ ಪಕ್ಷದ
    ಸದಸ್ಯರಲ್ಲೇ ಪೈಪೋಟಿ ನಡೆದಿರುವುದರಿಂದ ಚುನಾವಣೆ ರಂಗು ಪಡೆದಿದೆ.

    ಕೊನೇ ಗಳಿಗೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸಂಗೊಳ್ಳಿ ಕ್ಷೇತ್ರದ ಮಹಾದೇವಿ ಬಸನಗೌಡ ಪಾಟೀಲ, ಬಾಬಾಗೌಡ ಪಾಟೀಲ ಬೆಂಬಲಿತ ಚಿಕ್ಕಬಾಗೇವಾಡಿ ಕ್ಷೇತ್ರದ ಬಸವರಾಜ ಗಡೆನ್ನವರ ಮಧ್ಯೆ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ.

    ಸದಸ್ಯರ ಓಲೈಕೆಗೆ ಭಾರಿ ಕಸರತ್ತು

    ಕಿತ್ತೂರ ಶಾಸಕ ಮಹಾಂತೇಶ ದೊಡಗೌಡರ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅವರ ಕೃಪೆ ಯಾರ ಬೆನ್ನಿಗೆ ಇದೆ ಎಂಬುವುದು ಗೌಪ್ಯವಾಗಿದೆ. ಸದಸ್ಯರೂ ಸಹ ತಮ್ಮ ಇಂಗಿತ ಬಿಟ್ಟುಕೊಡುತ್ತಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಒಡ್ಡಿರುವ ಅಭ್ಯರ್ಥಿಗಳಿಗೆ ಗುಪ್ತವಾಗಿ ಸಮನಾಗಿ ಬೆಂಬಲ ವ್ಯಕ್ತವಾಗುತ್ತಿದ್ದು, ಸದಸ್ಯರ ಓಲೈಕೆಗೆ ಭಾರಿ ಕಸರತ್ತು ನಡೆದಿದೆ. ಯಾರಿಗೆ ಅಧ್ಯಕ್ಷ ಸ್ಥಾನ ಒಲಿಯಲಿದೆ ಎಂದು ಕುತೂಹಲ ಮೂಡಿಸಿದೆ. ಉಪಾಧ್ಯಕ್ಷ ಸ್ಥಾನಕ್ಕೂ ಕೊನೇ ಗಳಿಗೆಯಲ್ಲಿ ತೀವ್ರ ಪೈಪೋಟಿ ಕಂಡುಬರುವ ಸಾಧ್ಯತೆ ಇದೆ.

    | ಬಸವರಾಜ ಕಲಾದಗಿ ಬೈಲಹೊಂಗಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts