More

    ಪತ್ನಿ, ಮಕ್ಕಳ ಮೇಲೆ ಪ್ರಮಾಣ ಮಾಡಿದ ಜೆಡಿಎಸ್ ಅಭ್ಯರ್ಥಿ ಮಂಜುನಾಥ

    ರಾಣೆಬೆನ್ನೂರ: ಚುನಾವಣೆಯಲ್ಲಿ ಪ್ರಾಮಾಣಿಕ ಹಾಗೂ ನ್ಯಾಯ ಸಮ್ಮತವಾಗಿ ಮತಯಾಚನೆ ಮಾಡಿದ್ದೇನೆ ಹೊರತು ಯಾವುದೆ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದು ಜೆಡಿಎಸ್ ಪರಾಜಿತ ಅಭ್ಯರ್ಥಿ ಮಂಜುನಾಥ ಗೌಡಶಿವಣ್ಣವರ ಪತ್ನಿ ಹಾಗೂ ಮಕ್ಕಳ ತಲೆ ಮೇಲೆ ಕೈಯಿಟ್ಟು ಪ್ರಮಾಣ ಮಾಡಿದರು.
    ನಗರದ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನಕ್ಕೆ ಎರಡು ದಿನ ಇರುವಾಗ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದವರು ಮಂಜಣ್ಣನಿಗೆ ನಾವು ಹೇಳಿದ್ದೇವೆ. ಅವರು ನಮ್ಮ ಪರ ಮತ ಹಾಕಲು ಹೇಳಿದ್ದಾರೆ ಎಂದು ಮತದಾರರಿಗೆ ಇಲ್ಲಸಲ್ಲದ ಸುಳ್ಳು ಹೇಳಿದ್ದಾರೆ. ಇದರಿಂದ ನಾನು ನಿರೀಕ್ಷೆ ಮಾಡಿದ್ದ 30 ಸಾವಿರ ಮತಗಳ ಬದಲಾಗಿ ಕೇವಲ 5840 ಮತಗಳು ಮಾತ್ರ ಲಭಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ನಾನು ಯಾರೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲ. ಚುನಾವಣೆ ಖರ್ಚಿಗೆ ಹಣ ನೀಡುವುದಾಗಿ ತಿಳಿಸಿದ್ದ ಪಕ್ಷದ ವರಿಷ್ಠ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೊನೆಯ ಗಳಿಗೆಯಲ್ಲಿ ಹಣ ನೀಡಲಿಲ್ಲ. ನನ್ನ ಜಮೀನು ಮಾರಾಟ ಮಾಡಿ ಚುನಾವಣೆ ಮಾಡಿರುವೆ. ಬೇರೆ ಪಕ್ಷದವರು ನೀಡಿದ ಹಣದ ಹೊಳೆಯ ಮಧ್ಯೆ ನನ್ನ ಸ್ವಂತ ದುಡಿಮೆಯ ಹಣ ನಡೆಯಲಿಲ್ಲ.
    ನಾನು ಕ್ಷೇತ್ರದಲ್ಲಿ 200 ದಿನ ಕಷ್ಟ ಪಟ್ಟು ಕೆಲಸ ಮಾಡಿರುವೆ. ಮನೆ ಮನೆಗೆ ತೆರಳಿ ಮತ ಕೇಳಿದ್ದೇನೆ. ಆದರೆ, ನಮ್ಮ ಶ್ರಮವನ್ನು ಬಿಜೆಪಿ ಹಾಗೂ ಕಾಂಗ್ರೆಸ್‌ನವರು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಎರಡೇ ದಿನದಲ್ಲಿ ಹಾಳು ಮಾಡಿದ್ದಾರೆ. ನನ್ನ ಯಾವುದೇ ಗಾಡಿಯನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿಲ್ಲ.
    ಇಂಥ ಸುಳ್ಳು ಸುದ್ದಿಯ ಕುತಂತ್ರ ರಾಜಕೀಯ ನನಗೆ ತಡವಾಗಿ ಗೊತ್ತಾಯಿತು. ನನಗೆ ಬರುವಂತಹ ಮತಗಳು ಉಳಿದ ಪಕ್ಷಗಳ ಪಾಲಾದವು. ಶ್ರಮಪಟ್ಟ ವ್ಯಕ್ತಿಯ ಬಗ್ಗೆ ಅಪ್ರಚಾರ ಮಾಡಿ ನನ್ನ ವ್ಯಕ್ತಿತ್ವ ಹಾಳು ಮಾಡಿದರು. ನನ್ನ ತಾಲೂಕಿನ ಮತದಾರರಿಗೆ ನಿಜ ಸಂಗತಿ ತಿಳಿಯಬೇಕು. ನನ್ನ ಬಗ್ಗೆ ಆರೋಪ ಮಾಡಿದವರು ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ. ಈ ಸಾಕ್ಷಿಯಾಗಿ ನನ್ನ ಕುಟುಂಬ ಮೇಲೆ ಆಣೆ ಮಾಡುತ್ತೇನೆ ಎಂದು ಪತ್ನಿ ಮತ್ತು ಮಕ್ಕಳ ತಲೆ ಮೇಲೆ ಕೈಯಿಟ್ಟು ಪ್ರಮಾಣ ಮಾಡಿದರಲ್ಲದೆ ಮುಂದಿನ ಚುನಾವಣೆಯಲ್ಲಿ ಹಣಕ್ಕೆ ಮಾರುಹೋಗಬೇಡಿ ಎಂದು ಮನವಿ ಮಾಡಿದರು.
    ಪತ್ನಿ ಶಶಿಕಲಾ ಗೌಡಶಿವಣ್ಣನವರ, ಮಹೇಶ ಹೊನ್ನಜ್ಜೇರ, ಮಲ್ಲಿಕಾರ್ಜನ ತೆಗ್ಗಿನ, ಮಾರುತಿ ಸಾವಿ, ಇಬ್ರಾಹಿಂ ಯಲಗಚ್ಚಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts