More

    ಸಮರ್ಪಕ ಬೀಜ, ಗೊಬ್ಬರ ವಿತರಣೆಗೆ ಆಗ್ರಹಿಸಿ ರೈತರ ಪ್ರತಿಭಟನೆ

    ರಾಣೆಬೆನ್ನೂರ: ತಾಲೂಕಿನ ರೈತರಿಗೆ ಸಮರ್ಪಕವಾಗಿ ಬೀಜ, ಗೊಬ್ಬರ ವಿತರಣೆ ಮಾಡಬೇಕು. ಕಳಪೆ ಬೀಜ ಮಾರಾಟ ತಡೆಯಬೇಕು. ರೈತರಿಗೆ ಕಡಿಮೆ ದರದಲ್ಲಿ ಬೀಜ, ಗೊಬ್ಬರ ಮಾರಾಟ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ತಾಲೂಕು ಘಟಕದ ವತಿಯಿಂದ ಸೋಮವಾರ ನಗರದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
    ನೇತೃತ್ವ ವಹಿಸಿದ್ದ ರೈತ ಸಂಘ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಮುಂಗಾರು ಬಿತ್ತನೆಗೆ ಈಗಾಗಲೇ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಬಾರಿ ಅತಿವೃಷ್ಟಿಯಿಂದ ಬೆಳೆಹಾನಿಯಾಗಿ ರೈತರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ರೈತರಿಗೆ ಬೀಜ, ಗೊಬ್ಬರ ಖರೀದಿಸಲು ಸಹಾಯಧನ ವಿತರಣೆ ಮಾಡಬೇಕು. ಅಲ್ಲದೆ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಕಡಿಮೆ ದರದಲ್ಲಿ ಬೀಜ ಹಾಗೂ ಗೊಬ್ಬರ ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
    ರೈತ ಸಂಪರ್ಕ ಕೇಂದ್ರದಲ್ಲಿ 5ಕೆ.ಜಿ. ಮೆಕ್ಕೆಜೋಳ ಬೀಜದ ಪ್ಯಾಕೇಟ್‌ಗೆ 1200 ರೂ. ಬೆಲೆಯಿದೆ. ಆದರೆ, ಖಾಸಗಿಯವರು ಅದೇ ಬೀಜ 550 ರೂ.ನಿಂದ 700 ರೂ.ವರೆಗೆ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಬೇಕು. ನಗರದಲ್ಲಿ ಕೆಲವರು ಕಳಪೆ ಮೆಕ್ಕೆಜೋಳ ಬೀಜ ಮಾರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪವಿದೆ. ಆದ್ದರಿಂದ ತಹಸೀಲ್ದಾರ್‌ರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಬೀಜ ಮಾರಾಟಗಾರರ ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಕಳಪೆ ಹಾಗೂ ಖುಲ್ಲಾ ಬೀಜ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts