More

    24*7 ಕುಡಿಯುವ ನೀರಿನ ಬಿಲ್ ತುಂಬದಿದ್ದರೆ ಬಡ್ಡಿ ಸಮೇತ ವಸೂಲಿಗೆ ಸದಸ್ಯರಿಂದ ಆಕ್ಷೇಪ

    ರಾಣೆಬೆನ್ನೂರ: 247 ಕುಡಿಯುವ ನೀರಿನ ಬಿಲ್ ತುಂಬದಿದ್ದರೆ ಶೇ. 1ರಷ್ಟು ಬಡ್ಡಿ ಸಮೇತ ವಸೂಲಿ ಮಾಡುವ ವಿಚಾರ ಹಾಗೂ ಹೊಸದಾಗಿ ನಲ್ಲಿ ಸಂಪರ್ಕ ಬೇಕು ಎನ್ನುವವರು 13,500 ರೂ. ಪಾವತಿಸಬೇಕು ಎಂಬ ವಿಷಯಕ್ಕೆ ಸಂಬಂಧಿಸಿ ನಗರಸಭೆ ಸದಸ್ಯರು ಹಾಗೂ 247 ಕುಡಿಯುವ ನೀರು ಸರಬರಾಜು ವಿಭಾಗದ ಅಧಿಕಾರಿಗಳ ನಡುವೆ ಮಾತಿನ ಜಟಾಪಟಿ ನಡೆದು ವಿಷಯ ಮುಂದೂಡಿದ ಘಟನೆ ಗುರುವಾರ ನಗರಸಭೆಯಲ್ಲಿ ನಡೆಯಿತು. ನಗರಸಭೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಸಭೆಯಲ್ಲಿ 247 ಕುಡಿಯುವ ನೀರಿನ ಬಿಲ್ ಪಾವತಿ ಕುರಿತು ವಿಷಯ ಮಂಡಿಸುತ್ತಿದ್ದಂತೆ ಎಲ್ಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
    ಸದಸ್ಯರಾದ ಮಲ್ಲಣ್ಣ ಅಂಗಡಿ ಮಾತನಾಡಿ, ನಗರದಲ್ಲಿ ಸರಿಯಾಗಿ 247 ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ. ಬಹಳಷ್ಟು ಬಡಾವಣೆಯಲ್ಲಿ ನೀರಿನ ಸಮಸ್ಯೆಯಿದೆ. ಇಂಥ ಸಮಯದಲ್ಲಿ ಬಿಲ್ ತುಂಬದಿದ್ದರೆ ಬಡ್ಡಿ ಸಮೇತ ವಸೂಲಿ ಮಾಡುತ್ತೇವೆ ಎನ್ನುವ ಕ್ರಮ ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಕಾಶ ಬುರಡಿಕಟ್ಟಿ ಮಾತನಾಡಿ, ಕೇವಲ ಒಂದೂವರೆ ಅಡಿ ಪೈಪ್‌ಲೈನ್ ಅಳವಡಿಕೆ ಮಾಡಲು ಹೊಸ ನಲ್ಲಿ ಸಂಪರ್ಕ ಮಾಡಿಕೊಳ್ಳುವವರಿಂದ 13,500 ರೂ. ವಸೂಲಿ ಮಾಡುವುದು ಸರಿಯಲ್ಲ. ಬಡವರು ಇಷ್ಟು ಹಣ ಕೊಟ್ಟು ನಲ್ಲಿ ಸಂಪರ್ಕ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಹಿಂದೆ ನಗರಸಭೆಯಿಂದ ನಲ್ಲಿ ಸಂಪರ್ಕ ನೀಡಿದಾಗ 3500 ರೂ. ನಿಗದಿ ಮಾಡಲಾಗಿತ್ತು. ಇದೀಗ ಇಷ್ಟೊಂದು ಹಣ ಏಕೆ ಎಂದು ಪ್ರಶ್ನಿಸಿದರು. ನಿಂಗರಾಜ ಕೋಡಿಹಳ್ಳಿ ಮಾತನಾಡಿ, 247 ಕುಡಿಯುವ ನೀರು ಸರಬರಾಜು ವಿಭಾಗದ ಇಂಜಿನಿಯರ್‌ಗಳು ನಲ್ಲಿ ಸಂಪರ್ಕಕ್ಕೆ 13,000 ರೂ. ನಿಗದಿ ಮಾಡಿದ್ದೀರಿ. ಇದರ ಬದಲಾಗಿ ನಗರಸಭೆಯಿಂದ ಟೆಂಡರ್ ಕರೆದು ಹೊರಗಿನವರಿಗೆ ಗುತ್ತಿಗೆ ಕೊಟ್ಟರೆ, ಇದಕ್ಕಿಂತಲೂ ಕಡಿಮೆ ಹಣದಲ್ಲಿ ಮಾಡಿಕೊಡುತ್ತಾರೆ. ಇದನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.
    ಇದಕ್ಕೆ ಒಪ್ಪದ ನೀರು ಸರಬರಾಜು ವಿಭಾಗದ ಇಂಜಿನಿಯರ್ ಶಂಕರ ಹಾದಿಮನಿ, ಇದೀಗ ಹೊಸ ನಲ್ಲಿ ಸಂಪರ್ಕ ಕಲ್ಪಿಸಲು 350 ಅರ್ಜಿಗಳು ಬಂದಿವೆ. 8 ವರ್ಷ ನಿರ್ವಹಣೆ ನಮ್ಮದೆ ಇರುವುದರಿಂದ ಬೇರೆಯವರಿಗೆ ಕಾಮಗಾರಿ ಕೊಡಲು ಬರುವುದಿಲ್ಲ ಎಂದರು. ಇದರಿಂದ ಆಕ್ರೋಶಗೊಂಡ ಎಲ್ಲ ಸದಸ್ಯರು ಈ ವಿಷಯ ಚರ್ಚಿಸಲು ಪ್ರತ್ಯೇಕ ಸಭೆ ಕರೆಯಬೇಕು. ಅಲ್ಲಿಯವರೆಗೆ ಈ ವಿಷಯಕ್ಕೆ ಅನುಮೋದನೆ ಕೊಡುವುದಿಲ್ಲ ಎಂದು ಪಟ್ಟುಹಿಡಿದರು. ನಂತರ ಆಯುಕ್ತ ಎನ್.ಎಚ್. ಕುಮ್ಮಣ್ಣನವರ ಮಾತನಾಡಿ, ಈ ವಿಷಯ ಕುರಿತು ಚರ್ಚಿಸಲು ಮಾ. 20 ಅಥವಾ 21ರಂದು ವಿಶೇಷ ಸಭೆ ಏರ್ಪಡಿಸಲಾಗುವುದು ಎಂದು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts