More

    ರಂಭಾಪುರಿ ಯುಗಮಾನೋತ್ಸವಕ್ಕೆ 20 ರಂದು ಚಾಲನೆ

    ಬಾಳೆಹೊನ್ನೂರು: ಜಗದ್ಗುರು ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಕ್ಷೇತ್ರನಾಥ ಶ್ರೀವೀರಭದ್ರಸ್ವಾಮಿ ಮಹಾರಥೋತ್ಸವ ಹಾಗೂ ಧರ್ಮಜಾಗೃತಿ ಸಮಾರಂಭಕ್ಕೆ ಮಾ.20ರಂದು ವಿದ್ಯುಕ್ತ ಚಾಲನೆ ದೊರೆಯಲಿದೆ.
    ಶ್ರೀಪೀಠದಲ್ಲಿ ಬುಧವಾರ ಬೆಳಗ್ಗೆ ಧ್ವಜಾರೋಹಣ, ಹರಿದ್ರಾಲೇಪನದ ಮೂಲಕ ಧಾರ್ಮಿಕ ಕಾರ್ಯಗಳಿಗೆ ಚಾಲನೆ ದೊರೆಯಲಿದ್ದು, ಪ್ರಾತಃಕಾಲ ಜಗದ್ಗುರು ರೇಣುಕಾಚಾರ್ಯರು, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ, ಸೋಮೇಶ್ವರ ಮಹಾಲಿಂಗ, ಶಕ್ತಿಮಾತೆ ಚೌಡೇಶ್ವರಿ, ಭದ್ರಕಾಳಿ, ಪಾರ್ವತಿ ಅಮ್ಮನವರಿಗೆ ಮಹಾರುದ್ರಾಭಿಷೇಕ, ಅಷ್ಟೋತ್ತರ, ಲಕ್ಷ ಬಿಲ್ವಾರ್ಚನೆ, ಪುಷ್ಪಾಲಂಕಾರ, ಮಹಾಮಂಗಲ ನಡೆಯಲಿದೆ.
    ಬೆಳಗ್ಗೆ 11ಕ್ಕೆ ರಾಜ್ಯಮಕ್ಕಳ ಸಾಹಿತ್ಯ ಪರಿಷತ್‌ನಿಂದ ಎನ್.ಆರ್.ಪುರ ತಾಲೂಕು ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮಕ್ಕಳ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸಿ.ಎನ್.ಅಶೋಕ್ ಸಮ್ಮೇಳನ ಉದ್ಘಾಟಿಸಲಿದ್ದು, ನಿರ್ಮಲಾ ಕಾನ್ವೆಂಟ್ ವಿದ್ಯಾರ್ಥಿನಿ ಬಿ.ಎ.ವರ್ಷಿಣಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ.
    ರಂಭಾಪುರಿ ಪೀಠದಲ್ಲಿ ನಡೆಯಲಿರುವ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವಕ್ಕೆ ಶ್ರೀ ಪೀಠದಲ್ಲಿ ಭರದ ಸಿದ್ಧತೆಗಳು ನಡೆದಿದೆ. ಶ್ರೀಪೀಠವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಧರ್ಮ ಸಮಾರಂಭದ ವೇದಿಕೆ ಕಾರ್ಯಕ್ರಮಕ್ಕೆ ಬೃಹತ್ ಪೆಂಡಾಲ್ ನಿರ್ಮಿಸಲಾಗಿದೆ. ಭಕ್ತರ ವಿಶ್ರಾಂತಿಗಾಗಿ ವಿವಿಧೆಡೆ ಶಾಮಿಯಾನ ಹಾಕಲಾಗಿದೆ. ಸಾವಿರಾರು ಭಕ್ತರು ಏಕಕಾಲಕ್ಕೆ ಭೋಜನ ಸ್ವೀಕರಿಸಲು ಮಹಿಳೆಯರು, ಪುರುಷರಿಗೆ ಪ್ರತ್ಯೇಕವಾಗಿ ಪ್ರಸಾದ ಕೌಂಟರ್‌ಗಳನ್ನು ತೆರೆಯಲಾಗಿದೆ. ಶ್ರೀಪೀಠದಿಂದ ಕೊಪ್ಪಕ್ಕೆ ತೆರಳುವ ಮೇಲ್ಪಾಲ್ ರಸ್ತೆಯಲ್ಲಿ ಜಾತ್ರಾ ಮಹೋತ್ಸವಕ್ಕಾಗಿ ವಿವಿಧ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗಿದೆ. ಬಾಳೆಹೊನ್ನೂರು ರಸ್ತೆಯ ಗದ್ದೆಯ ಬಳಿಯಲ್ಲಿ ಮಕ್ಕಳು, ಹಿರಿಯರಿಗಾಗಿ ವಿವಿಧ ಆಟೋಟಗಳಿಗೆ ಸೆಂಟರ್ ತೆರೆಯಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts