More

    ರಾಮನಗರ ಜಿಲ್ಲೆಯಲ್ಲಿ ಕರಗ ಮೆರವಣಿಗೆಗೆ ಇಲ್ಲ ಅವಕಾಶ: ಜಿಲ್ಲಾಡಳಿತ ಆದೇಶ

    ರಾಮನಗರ: ಚಾಮುಂಡೇಶ್ವರಿ ಸೇರಿ ಒಟ್ಟು 8 ಕರಗ ಮಹೋತ್ಸವವನ್ನು ಕರೊನಾ ಆಪೋಷಣ ತೆಗೆದುಕೊಂಡಿದ್ದು, ಆಚರಣೆ ಈ ಬಾರಿ ಆಯಾ ದೇವಾಲಯಗಳಿಗೆ ಸೀಮಿತವಾಗಿರಲಿದೆ. ಪ್ರತಿವರ್ಷ ಆಷಾಢದಲ್ಲಿ ನಗರ ಶಕ್ತಿ ದೇವತೆಗಳ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಆದರೆ ಈ ಬಾರಿಯ ಸಂಭ್ರಮದ ಆಚರಣೆಗೆ ಕರೊನಾ ಹಿನ್ನೆಲೆಯಲ್ಲಿ ಅವಕಾಶ ನಿರಾಕರಿಸಲಾಗಿದೆ.

    ಜಿಲ್ಲೆಯಲ್ಲಿ ಹೆಚ್ಚು ತ್ತಿರುವ ಕರೊನಾ ಸೋಂಕು ನಿಯಂತ್ರಿಸ ಬೇಕಾದರೆ ಧಾರ್ಮಿಕ ಆಚರಣೆ ವೇಳೆ ಹೆಚ್ಚು ಜನ ಸೇರದಂತೆ ಕ್ರಮವಹಿಸಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಧಾರ್ಮಿಕ ಆಚರಣೆಗೆ ವಿಘ್ನ ಬರದಂತೆ ಕ್ರಮ ಕೈಗೊಂಡಿರುವ ಜಿಲ್ಲಾಡಳಿತ ಆಚರಣೆ ಮತ್ತು ಉತ್ಸವವನ್ನು ಸಂಪೂರ್ಣವಾಗಿ ದೇವಾಲಯದ ಆವರಣದಲ್ಲಿ ನೆರವೇರಿಸುವಂತೆ ಆದೇಶ ನೀಡಿದೆ. ಕರಗ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಮುಂದಾಗಿದ್ದ ಮಂದಿಗೆ ಜಿಲ್ಲಾಡಳಿತದ ಈ ನಿರ್ಧಾರ ಭಾರೀ ನಿರಾಸೆ ಉಂಟುಮಾಡಿದೆ.

    ಬನ್ನಿ ಮಹಾಂಕಾಳಿ ಹಸಿ ಕರಗ: ನಗರ ದೇವತೆ ಬನ್ನಿ ಮಹಾಂಕಾಳಿ ಅಮ್ಮನವರ ಹಸಿ ಕರಗಕ್ಕೆ ಚಾಲನೆ ದೊರೆಯಲಿದೆ. ಆದರೆ, ಆಚರಣೆಗಳು ಮಾತ್ರ ದೇವಾಲಯಕ್ಕೆ ಸೀಮಿತಗೊಳ್ಳಲಿದೆ. ಮಂಗಳವಾರ ಬೆಳಗ್ಗೆಯಿಂದಲೇ ಕರಗ ಉತ್ಸವದ ಧಾರ್ಮಿಕ ಆಚರಣೆಗಳಿಗೆ ಆರಂಭಗೊಳ್ಳಲಿದೆ. ದೇವಾಲಯದಲ್ಲಿ ಗಣಪತಿ ಹೋಮ, ನವಗ್ರಹ ಹೋಮ ಸೇರಿ ವಿವಿಧ ಹೋಮ ಹವನ ನಡೆಯಲಿದ್ದು, ಕರಗದ ಪ್ರಯುಕ್ತ ಅಮ್ಮನವರಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಸಂಜೆ ದೇವಾಲಯದ ಆವರಣದಲ್ಲಿಯೇ ಹಸಿ ಕರಗ ನಡೆಸಲಾಗುತ್ತದೆ. ಆ ಮೂಲಕ ಶಾಸ್ತ್ರೋಕ್ತ್ಸವಾಗಿ ಆಚರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದು ವರ್ಷ ಕರಗದ ಆಚರಣೆ ನಿಂತರೆ, ಸತತ ಮೂರು ವರ್ಷ ಉತ್ಸವವನ್ನು ನಿಲ್ಲಿಸಬೇಕೆಂಬ ವಾಡಿಕೆಯಿದ್ದು, ಸರಳ ಆಚರಣೆಗೆ ಅನುಮತಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

    ಮೆರವಣಿಗೆಗೆ ಇಲ್ಲ ಅವಕಾಶ: ರಾಮನಗರದಲ್ಲಿ ಬನ್ನಿ ಮಹಾಂಕಾಳಮ್ಮ ದೇವಿ ಕರಗದ ಜತೆಗೆ 8 ಕರಗ ಮಹೋತ್ಸವಗಳು ಪ್ರತಿ ವರ್ಷ ಜರುಗುತ್ತವೆ. ಅದ್ದೂರಿ ಆಚರಣೆಯಿಂದಾಗಿ ಇವು ಹೆಸರು ಗಳಿಸಿದ್ದವು, ಆದರೆ, ಕರೊನಾ ಹಬ್ಬುವ ಭೀತಿಯಿಂದಾಗಿ ಜಿಲ್ಲಾಡಳಿತ ದೇವಾಲಯದಲ್ಲಿ ಕರಗ ನಡೆಸಲು ಅನುಮತಿ ನೀಡಿದ್ದು, ಕರಗದ ಮೆರವಣಿಗೆಗೆ ನಿಷೇಧ ಹೇರಿದೆ. ಈ ಕುರಿತಂತೆ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಆದೇಶ ಹೊರಡಿಸಿದ್ದಾರೆ.

    ಶಕ್ತಿದೇವತೆಗಳ ಎಂಟು ಕರಗ: ಬನ್ನಿ ಮಹಾಂಕಾಳಿ ಅಮ್ಮನವರ ಕರಗ ಸೇರಿ ಇತರ 8 ಶಕ್ತಿ ದೇವತೆಗಳ ಕರಗ ಮಹೋತ್ಸವ ಜರುಗಲಿದೆ. ಚಾಮುಂಡೇಶ್ವರಿ ಅಮ್ಮನವರು, ಮಗ್ಗದಕೆರೆ ಮಾರಮ್ಮ, ಬಿಸಿಲು ಮಾರಮ್ಮ, ಭಂಡಾರಮ್ಮ, ಮುತ್ತುಮಾರಮ್ಮ, ಐಜೂರು ಆದಿಶಕ್ತಿ, ಶೆಟ್ಟಹಳ್ಳಿ ಬೀದಿ ಆದಿಶಕ್ತಿ, ಕೊಂಕಾಣಿದೊಡ್ಡ ಆದಿಶಕ್ತಿ ಅಮ್ಮನವರ ಕರಗಗಳು ಪ್ರತಿ ವರ್ಷ ಜರುಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts