More

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಗೋಲ್‌ಮಾಲ್: 17.6 ಲಕ್ಷ ದುರುಪಯೋಗದ ದೂರು

    ಗಂಗಾಧರ್ ಬೈರಾಪಟ್ಟಣ ರಾಮನಗರ
    ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಲಕ್ಷಾಂತರ ರೂಪಾಯಿ ಗೋಲ್‌ಮಾಲ್ ನಡೆದಿದ್ದು, ನಿವೃತ್ತ ಸಹಾಯಕ ನಿರ್ದೇಶಕ ಹಾಗೂ ಹೊರ ಗುತ್ತಿಗೆ ನೌಕರನ ವಿರುದ್ಧ ರಾಮನಗರದ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


    ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಎಂ.ಎನ್. ಹರೀಶ್ ಮತ್ತು ಇದೇ ಕಚೇರಿಯಲ್ಲಿ ಹೊರಗುತ್ತಿಗೆ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉದಯಚಂದ್ರ ವಿರುದ್ಧ ಪ್ರಸ್ತುತ ಪ್ರಭಾರ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಟಿ.ಜಿ. ರಮೇಶ್ ಬಾಬು ದೂರು ನೀಡಿದ್ದು, 17.60 ಲಕ್ಷ ರೂ. ಅನುದಾನವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಯಾವ ಅನುದಾನ?
    ದುರುಪಯೋಗ 1: ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮಕ್ಕೆ ಸರ್ಕಾರದಿಂದ ನೀಡಲಾಗಿದ್ದ ಒಟ್ಟು 3.60 ಲಕ್ಷ ರೂ.ಗಳನ್ನು ಈ ಕಾರ್ಯಕ್ರಮದ ಫಲಾನುಭವಿಗಳೇ ಅಲ್ಲದ ಎ.ಎಸ್. ಅನಿಲ್‌ಕುಮಾರ್ ಎನ್ನುವವರ ಖಾತೆಗೆ 10 ಸಾವಿರ ರೂ, ಕೆ. ರವೀಂದ್ರ ಎನ್ನುವವರ ಖಾತೆಗೆ 45 ಸಾವಿರ ರೂ., ಕೆ.ಕಾಳಯ್ಯ ಎಂಬುವವರ ಖಾತೆಗೆ 1,12,115 ರೂ. ಹಾಗೂ 88 ಸಾವಿರ ರೂ.ಗಳನ್ನು ಉದಯ್‌ಚಂದ್ರ ತನ್ನ ಖಾತೆಗೆ ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿಸಿದ್ದಾನೆ.

    ದುರುಪಯೋಗ 2: 2021-22ನೇ ಸಾಲಿನ ಸಾಮಾನ್ಯ ಧನಸಹಾಯ ಯೋಜನೆಯಡಿ ಸಂಘ-ಸಂಸ್ಥೆಗಳ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹಾಗೂ ಅಸಂಘಟಿತ ಕಲಾವಿದರ ವೇಷಭೂಷಣ ಖರೀದಿಗೆ ಭರಿಸಲಾಗುವ ವೆಚ್ಚದ ಅನುದಾನದಲ್ಲಿ ಕಾರ್ಯಕ್ರಮದ ಫಲಾನುಭವಿಗಳಲ್ಲದ ಎಚ್.ಎಂ. ನಾಗರಾಜ ಎನ್ನುವವರಿಗೆ ಎರಡು ಬಾರಿ ತಲಾ ಒಂದೂವರೆ ಲಕ್ಷದಂತೆ ಒಟ್ಟು 3 ಲಕ್ಷ ರೂ., ಸಂಜೀವ ಎನ್ನುವವರಿಗೆ 75 ಸಾವಿರ ರೂ.ಗಳನ್ನು ಆರ್‌ಟಿಜಿಎಸ್ ಮೂಲಕ ಪಾವತಿ ಮಾಡಲಾಗಿದೆ.

    ದುರುಪಯೋಗ 3: 2021-22ನೇ ಸಾಲಿನ ಸಾಮಾನ್ಯ ಧನಸಹಾಯ ಯೋಜನೆಯಡಿ ಸಂಘ ಸಾಂಸ್ಕೃತಿಕ ಚಟುವಟಿಕೆ ಹಾಗೂ ಅಸಂಘಟಿತ ಕಲಾವಿದರ ವೇಷಭೂಷಣ ಖರೀದಿಗೆ ಭರಿಸಲಾಗುವ ವೆಚ್ಚದ ಅನುದಾನಕ್ಕೆ ಸಂಬಂಧಪಟ್ಟಂತೆ ಒಟ್ಟು 75 ಸಾವಿರ ರೂ./ ಬಿಡುಗಡೆ ಆಗಿದ್ದು, ಈ ಕಾರ್ಯಕ್ರಮದ ಫಲಾನುಭವಿ ಆದ ಶ್ರೀ ಚೈತನ್ಯ, ಕ್ರೀಡಾ ಮತ್ತು ಸಾಂಸ್ಕೃತಿಕ ಕಲಾ ಸಂಘ(ರಿ) ಸಂಸ್ಥೆಗೆ ಒಂದು ಲಕ್ಷ ರೂ.ಗಳನ್ನು ಆರ್‌ಟಿಜಿಎಸ್ ಮೂಲಕ ಪಾವತಿ ಮಾಡಲಾಗಿದೆ. ಆದರೆ ಸರ್ಕಾರದ ಅನುದಾನ 75 ಸಾವಿರ ರೂ.ಗಳಿದ್ದರೂ ಹೆಚ್ಚುವರಿಯಾಗಿ 25 ಸಾವಿರ ರೂ. ಪಾವತಿ ಮಾಡಲಾಗಿದೆ.

    ದುರುಪಯೋಗ 4: ಕನ್ನಡಕ್ಕಾಗಿ ನಾವು ಕಾರ್ಯಕ್ರಮಕ್ಕೆ ಭರಿಸಲಾಗುವ ವೆಚ್ಚದ ಅನುದಾನದಲ್ಲಿ ಫಲಾನುಭವಿಗಳಲ್ಲದ ಬೈರೇಗೌಡ ಎಂಬುವರಿಗೆ 45 ಸಾವಿರ ರೂ., ಕಾಳಯ್ಯ ಎನ್ನುವರಿಗೆ 1.25 ಲಕ್ಷ ರೂ., ವೀಣಾ ಎನ್ನುವರಿಗೆ 10 ಸಾವಿರ ರೂ. ಹಾಗೂ ಹೊರಗುತ್ತಿಗೆ ನೌಕರನಾಗಿರುವ ಉದಯ್‌ಚಂದ್ರ ತನ್ನ ಖಾತೆಗೆ 80 ಸಾವಿರ ರೂ.ಗಳನ್ನು ಆರ್‌ಟಿಜಿಎಸ್ ಮೂಲಕ ಪಾವತಿ ಮಾಡಿಸಿಕೊಂಡಿದ್ದಾನೆ.

    ನಿವೃತ್ತರಾದವರ ಸಹಿಯೇ ಬಳಕೆ: ಎಂ.ಎನ್. ಹರೀಶ್ 2022ರ ಮೇ 31ರಂದು ವಯೋನಿವೃತ್ತಿ ಹೊಂದಿದ್ದು, ಇವರ ನಿವೃತ್ತಿಗೂ ಮುಂಚೆಯೇ ದೂರುದಾರ ರಮೇಶ್‌ಬಾಬು ಮೇ 25ರಿಂದಲೇ ಜಿಲ್ಲಾಧಿಕಾರಿ ಆದೇಶದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಹಣ ದುರುಪಯೋಗವಾಗಿರುವ ಎಲ್ಲಾ ಪ್ರಕರಣಗಳು 2022ರ ಜೂ.13ರಿಂದ ಜೂ.28ರ ಅವಧಿಯಲ್ಲಿ ನಡೆದಿದ್ದು ಆರ್‌ಟಿಜಿಎಸ್‌ಗೆ ಬಳಕೆ ಮಾಡಲಾಗಿರುವ ಚೆಕ್‌ಗಳಲ್ಲಿ ನಿವೃತ್ತರಾದವರ ಸಹಿಯನ್ನೇ ಬಳಕೆ ಮಾಡಲಾಗಿದೆ. ಈ ಸಹಿ ಅಸಲಿಯೇ ಅಥವಾ ನಕಲಿಯೇ ಎನ್ನುವ ಅನುಮಾನ ಮೂಡಿಸಿದೆ. ಅಲ್ಲದೆ ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದ ಕಡತಗಳೂ ಕಚೇರಿಯಿಂದ ಮಾಯವಾಗಿದ್ದು, ಹೊರಗುತ್ತಿಗೆ ನೌಕರ ಉದಯ್‌ಚಂದ್ರ ಸಹ ಜು.1ರಿಂದ ಕೆಲಸಕ್ಕೆ ಗೈರುಹಾಜರಾಗಿದ್ದಾನೆ.

    ಗುತ್ತಿಗೆ ನೌಕರನ ಕೈಚಳಕ: ದೂರಿನಲ್ಲಿ ತಿಳಿಸಿರುವಂತೆ ಬಹುತೇಕ ಎಲ್ಲಾ ಪ್ರಕರಣದಲ್ಲಿಯೂ ನಡೆದ ಕಾರ್ಯಕ್ರಮಕ್ಕೆ ಸಂಬಂಧಿಸಿದವರಿಗೆ ಅಲ್ಲದೆ, ಮತ್ತೊಬ್ಬರಿಗೆ ಹಣ ಸಂದಾಯ ಮಾಡಿರುವುದು ಬೆಳಕಿಗೆ ಬಂದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಹಿಂದಿನಿಂದಲೂ ಅನುದಾನ ಹಂಚಿಕೆಯಲ್ಲಿ ತಾರತಮ್ಯ, ಕಲಾವಿದರ ಕಡೆಗಣನೆ ಸೇರಿ ವಿವಿಧ ಆರೋಪಗಳು ಕೇಳಿ ಬರುತ್ತಲೇ ಇದ್ದವು. ಇದೀಗ ಇಲಾಖೆ ಅಧಿಕಾರಿಯೇ ಈ ಸಂಬಂಧ ದೂರು ದಾಖಲು ಮಾಡಿರುವುದು ಇಲಾಖೆಯಲ್ಲಿನ ಭ್ರಷ್ಟಾಚಾರದ ಕರಾಳತೆಯನ್ನು ಜಗಜ್ಜಾಹೀರುಗೊಳಿಸಿದ್ದು, ಈ ಸಂಬಂಧ ವಿಸ್ತೃತ ತನಿಖೆ ನಡೆಸುವ ಮೂಲಕ ದಂದೆಕೋರರಿಗೆ ಪಾಠ ಕಲಿಸಬೇಕಿದೆ. ವಿರ್ಪಯಾಸವೆಂದರೆ ಇಡೀ ಪ್ರಕರಣದಲ್ಲಿ ಹೊರಗುತ್ತಿಗೆ ನೌಕರ ಉದಯ್‌ಚಂದ್ರ ತನ್ನ ಕೈಚಳಕ ತೋರಿಸಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಈತನ ವಿರುದ್ಧ ಈ ಹಿಂದೆಯೂ ಕಲಾವಿದರು ಹಣ ದುರುಪಯೋಗದ ಆರೋಪ ಮಾಡಿದ್ದರು ಎನ್ನಲಾಗಿದೆ.


    ಇಲಾಖೆಯಲ್ಲಿ ನನ್ನ ಗಮನಕ್ಕೂ ತರದೇ ಸಹಿಯನ್ನೂ ಪಡೆಯದೇ ವಿವಿಧ ಕಾರ್ಯಕ್ರಮಗಳ ಒಟ್ಟು 17.60 ಲಕ್ಷ ರೂ.ಗಳನ್ನು ದುರುಪಯೋಗ ಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಹಿಂದಿನ ಪ್ರಭಾರ ಸಹಾಯಕ ನಿರ್ದೇಶಕರು ಮತ್ತು ಹೊರಗುತ್ತಿಗೆ ನೌಕರನ ವಿರುದ್ಧ ದೂರು ದಾಖಲಿಸಿದ್ದೇನೆ.
    | ಟಿ.ಜಿ.ರಮೇಶ್‌ಬಾಬು ಸಹಾಯಕ ನಿರ್ದೇಶಕ (ಪ್ರಭಾರ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts