More

    ಸೂಚನೆ ಇದ್ದರೂ ನಿಲ್ಲದ ಬಸ್‌ಗಳು: ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು

    ರಾಮನಗರ: ಬಸ್‌ಗಳ ನಿಲುಗಡೆಗೆ ಆಗ್ರಹಿಸಿ ನಗರದ ಹೊರಭಾಗದಲ್ಲಿರುವ ಜಾನಪದ ಲೋಕದ ಬಳಿ ಇರುವ ಡಿಪ್ಲೊಮಾ ಕಾಲೇಜು ವಿದ್ಯಾರ್ಥಿಗಳು ಶುಕ್ರವಾರ ಸಂಜೆ ಹೆದ್ದಾರಿ ಸಂಚಾರ ತಡೆದು ಪ್ರತಿಭಟಿಸಿದರು.


    ಜಿಲ್ಲಾಧಿಕಾರಿ ನಿವಾಸದ ಎದುರು ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ರಸ್ತೆತಡೆ ನಡೆಸಿ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಬಸ್ ನಿಲುಗಡೆ ಮಾಡದ ಕೆಎಸ್‌ಆರ್‌ಟಿಸಿ ಚಾಲಕರು, ನಿರ್ವಾಹಕರ ವಿರುದ್ಧ ಮತ್ತು ಸಾರಿಗೆ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ರಾಮನಗರ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಬಂದ ವಿದ್ಯಾರ್ಥಿಗಳು ಕಾಲೇಜಿಗೆ ಪ್ರವೇಶ ಪಡೆದಿದ್ದು, ನಿತ್ಯದ ಓಡಾಟಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ ಅವಲಂಬಿಸಿದ್ದೇವೆ. ಆದರೆ ಬೆಳಗ್ಗೆ ಹಾಗೂ ಸಂಜೆ ಹೊತ್ತು ಕಿಕ್ಕಿರಿದು ತುಂಬಿರುವ ಬಸ್‌ಗಳಲ್ಲಿ ಪ್ರಯಾಣಿಸಬೇಕಾಗಿದೆ. ಪಾಲಿಟೆಕ್ನಿಕ್ ಬಳಿ ಬಸ್‌ಗಳನ್ನು ಕಡ್ಡಾಯವಾಗಿ ನಿಲುಗಡೆ ಮಾಡುವಂತೆ ಸೂಚನೆ ಇದ್ದರೂ ಚಾಲಕರು ನಿಲ್ಲಿಸುತ್ತಿಲ್ಲ. ಇದರಿಂದಾಗಿ ಬಸ್ ಸಿಗದೇ ಮನೆಗಳಿಗೆ ತೆರಳಲು ತೊಂದರೆ ಆಗಿದೆ ಎಂದು ದೂರಿದರು.


    ನಿರ್ವಾಹಕರು ಪಾಸ್ ಹೊಂದಿರುವ ವಿದ್ಯಾರ್ಥಿಗಳನ್ನು ಶತ್ರುಗಳಂತೆ ನೋಡುತ್ತಾರೆ. ಬಸ್ ಖಾಲಿ ಇದ್ದರೂ ಹತ್ತಿಸಿಕೊಳ್ಳುವುದಿಲ್ಲ. ಪಾಸ್ ಇರುವವರಿಗೆ ಪ್ರವೇಶ ಇಲ್ಲ ಎಂದು ಇಳಿಸುತ್ತಾರೆ. ಇಲ್ಲವಾದಲ್ಲಿ ಟಿಕೆಟ್ ಪಡೆಯುವಂತೆ ಒತ್ತಾಯಿಸುತ್ತಾರೆ. ಪ್ರಶ್ನಿಸಿದರೆ ನಮ್ಮನ್ನೇ ನಿಂದಿಸುತ್ತಾರೆ ಎಂದು ವಿದ್ಯಾರ್ಥಿಗಳು ದೂರಿದರು.

    ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ಧೋರಣೆ ಖಂಡಿಸಿ ಈ ಹಿಂದೆಯೂ ಪ್ರತಿಭಟನೆ ನಡೆಸಿದ್ದೆವು. ಆದಾಗ್ಯೂ ಪರಿಸ್ಥಿತಿ ಸುಧಾರಿಸಿಲ್ಲ. ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ಬಸ್‌ಗಳನ್ನೂ ಡಿಪ್ಲೊಮಾ ಕಾಲೇಜು ಮುಂಭಾಗ ಕಡ್ಡಾಯವಾಗಿ ನಿಲುಗಡೆ ಮಾಡುವಂತೆ ಒತ್ತಾಯಿಸಿದರು.

    ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ರಾಮನಗರ ಗ್ರಾಮೀಣ ಠಾಣೆ ಹಾಗೂ ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳ ಮನವೊಲಿಸಿದರು. ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ನಂತರದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಕೈ ಬಿಟ್ಟರು.

    ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ: ನಗರದ ಹೊರ ಭಾಗದಲ್ಲಿರುವ ಬಹುತೇಕ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳ ಕಥೆಯೂ ಇದೇ ಆಗಿದೆ.
    ಉಳಿದ ಕಾಲೇಜುಗಳ ವಿದ್ಯಾರ್ಥಿಗಳದೂ ಇದೇ ಕಥೆ. ರಾಮನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಬಸವನಪುರದಲ್ಲಿನ ಕಾನೂನು ಕಾಲೇಜುಗಳಿದ್ದು ಕೋರಿಕೆ ನಿಲುಗಡೆಗೆ ಸೂಚನೆಯಿದ್ದರೂ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸುವುದಿಲ್ಲ. ಪಾಸ್ ಇದ್ದವರನ್ನು ಬಸ್‌ಗಳಿಗೆ ಹತ್ತಿಸಿಕೊಳ್ಳುವುದಿಲ್ಲ ಎಂಬ ದೂರುಗಳಿವೆ.


    ಇದೀಗ ತಾನೇ ಶೈಕ್ಷಣಿಕ ಚಟುವಟಿಕೆಗಳು ಪುನರಾರಂಭಗೊಳ್ಳುತ್ತಿದ್ದು, ನಗರದ ಹೊರವಲಯದಲ್ಲಿ ಇರುವ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. ಅವರಿಗೆ ಬಸ್ ಸೌಲಭ್ಯ ಸೇರಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಉನ್ನತ ಶಿಕ್ಷಣ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಈ ಕುರಿತು ಸಭೆ ನಡೆಸಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts