More

    ಪ್ರಾಣಾಪಾಯದಿಂದ ಪ್ರೇಮಿಗಳು ಪಾರು ಮನೆಯವರು ಪ್ರೀತಿ ನಿರಾಕರಿಸಿದ್ದಕ್ಕೆ ನೊಂದು ಆತ್ಮಹತ್ಯೆ ಯತ್ನ ಸಾಯಲು ರಾಮದೇವರ ಬೆಟ್ಟದಿಂದ ಜಿಗಿದರು

    ರಾಮನಗರ

    ಮನೆಯವರು ಪ್ರೀತಿ ನಿರಾಕರಿಸಿದ್ದಕ್ಕೆ ನೊಂದ ಪ್ರೇಮಿಗಳು ರಾಮದೇವರ ಬೆಟ್ಟದಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿರುವುದು ಶುಕ್ರವಾರ ನಡೆದಿದೆ.

    ಬೆಂಗಳೂರಿನ ನಾಗರಬಾವಿ ನಿವಾಸಿ ಚೇತನ್ (19) ಮತ್ತು ಕತ್ರಿಗುಪ್ಪೆಯ ಯುವತಿ (19) ಆತ್ಮಹತ್ಯೆಗೆ ಯತ್ನಿಸಿದವರು. ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಚೇತನ್ ಬಿಇ ವ್ಯಾಸಂಗ ಮಾಡುತ್ತಿದ್ದರೆ, ಯುವತಿಯೂ ಬಿಕಾಂ ಓದುತ್ತಿದ್ದಾಳೆ. ಇಬ್ಬರೂ 5 ವರ್ಷಗಳಿಂದ ಪ್ರೀತಿಸುತ್ತಿದ್ದು, ಈ ವಿಚಾರ ಮನೆಯವರಿಗೂ ತಿಳಿದಿದೆ.
    ಆದರೆ, ಇವರ ಪ್ರೀತಿಯನ್ನು ನಿರಾಕರಿಸಿದ್ದ ಎರಡೂ ಕುಟುಂಬದವರು ವ್ಯಾಸಂಗ ಮುಂದುವರಿಸುವಂತೆ ಸೂಚನೆ ನೀಡಿದ್ದರು. ಇದರಿಂದ ಮನನೊಂದ ಇಬ್ಬರೂ ಬೈಕ್‌ನಲ್ಲಿ ರಾಮದೇವರ ಬೆಟ್ಟಕ್ಕೆ ತೆರಳಿದ್ದಾರೆ. ಪಾರ್ಕಿಂಗ್ ಲಾಟ್‌ನಲ್ಲಿ ಬೈಕ್ ನಿಲ್ಲಿಸಿ, ನಂತರ ಬೆಟ್ಟಕ್ಕೆ ತೆರಳಿ, ಡೆತ್‌ನೋಟ್ ಬರೆದಿಟ್ಟು, ಬ್ಯಾಗ್ ಮತ್ತು ಚಪ್ಪಲಿಯನ್ನು ಬಿಟ್ಟು ಬೆಟ್ಟದಿಂದ ಜಿಗಿದಿದ್ದಾರೆ.

    ಬದುಕಿದ್ದೇ ಪವಾಡ
    ನಮ್ಮ ಮನೆಯಲ್ಲಿ ಪ್ರೀತಿ ನಿರಾಕರಣೆ ಮಾಡಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್‌ನೋಟ್‌ನಲ್ಲಿ ಬರೆದು ಸುಮಾರು 100 ಅಡಿಗೂ ಹೆಚ್ಚು ಆಳದ ಕಂದಕಕ್ಕೆ ಜಿಗಿದಿದ್ದಾರೆ. ಇಷ್ಟು ಎತ್ತರಿಂದ ಜಿಗಿದರೆ ಕಲ್ಲು ಬಂಡೆಗಳಿಂದ ಕೂಡಿರುವ ಪ್ರದೇಶದಲ್ಲಿ ಬದುಕುಳಿಯುವುದು ಕಷ್ಟ. ಆದರೆ ಇಬ್ಬರೂ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಭದ್ರತೆಗೆ ನಿಯೋಜನೆ ಮಾಡಿರುವ ಹೋಂಗಾರ್ಡ್ ಸಿಬ್ಬಂದಿ, ಬೆಟ್ಟದ ಮೇಲೆ ಪರಿಶೀಲನೆ ಮಾಡುತ್ತಿದ್ದ ವೇಳೆ ಚಪ್ಪಲಿ ಮತ್ತು ಬ್ಯಾಗ್ ಇರುವುದು ಕಂಡು ಬಂದಿದೆ. ತಕ್ಷಣವೇ ಏನೋ ಅನಾಹುತ ನಡೆದಿದೆ ಎನ್ನುವುದನ್ನು ಅರಿತು, ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಇಬ್ಬರು ಆತ್ಮಹತ್ಯೆಗೆ ಯತ್ನಿಸಿರುವುದು ಕಂಡು ಬಂದಿದೆ.
    ಒಂದು ಹಂತದಲ್ಲಿ ಇಬ್ಬರೂ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿತ್ತಾದರೂ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದರೆ ಪ್ರಜ್ಞಾ ಹೀನ ಸ್ಥಿತಿಯಲ್ಲಿರುವುದು ಕಂಡು ಬಂದಿದ್ದು, ಸುಮಾರು 3 ಗಂಟೆಗಳ ಕಾರ್ಯಾಚರಣೆ ನಡೆಸಿ ಪ್ರೇಮಿಗಳನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ಪಿಐ ಗಿರಿರಾಜ್, ಎಎಸ್ಐ ರುದ್ರೇಶ್ ಮತ್ತು ತಂಡ, ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts