More

    ರಾಮಲಿಂಗೇಶ್ವರ ನಗರ ಇನ್ನು ಪಾಶ್ ಏರಿಯಾ!

    ಹುಬ್ಬಳ್ಳಿ: ಇದೊಂದು ಕೊಳಚೆ ಪ್ರದೇಶ. ಹದಗೆಟ್ಟ ರಸ್ತೆ, ಒಳಚರಂಡಿ ವಂಚಿತ ಬಡಾವಣೆ. ರಸ್ತೆ ಮೇಲೆ ಹರಿಯುವ ಚರಂಡಿ ನೀರು ಇಲ್ಲಿ ಸಾಮಾನ್ಯ. ಆದರೆ, ಇನ್ನು ಕೆಲವೇ ದಿನಗಳಲ್ಲಿ ಇಲ್ಲಿನ ಪರಿಸ್ಥಿತಿ ಸಂಪೂರ್ಣ ಬದಲಾವಣೆಗೊಳ್ಳಲಿದೆ. ಈ ಕೊಳಚೆ ಪ್ರದೇಶ ‘ಸ್ಮಾರ್ಟ್’ ಆಗಿ ಪರಿವರ್ತನೆಗೊಳ್ಳಲಿದೆ. ಹುಬ್ಬಳ್ಳಿಯ ಪ್ರಮುಖ ಬಡಾವಣೆಗಳಲ್ಲಿ ಇರುವ ಅತ್ಯಾಧುನಿಕ ಸೌಲಭ್ಯಗಳು ಇಲ್ಲಿ ತಲೆ ಎತ್ತುವ ನಿಟ್ಟಿನಲ್ಲಿ ಕೆಲಸಗಳು ಆರಂಭವಾಗಿವೆ.

    ಈ ಎಲ್ಲ ಪೀಠಿಕೆ ಹುಬ್ಬಳ್ಳಿಯ ಪ್ರಮುಖ ಕೊಳಚೆ ಪ್ರದೇಶ ಶ್ರೀ ರಾಮಲಿಂಗೇಶ್ವರ ನಗರ ಬಡಾವಣೆಗೆ ಸಂಬಂಧಿಸಿದ್ದು.

    ಕರ್ನಾಟಕ ಕೊಳಚೆ ನಿಮೂಲನಾ ಮಂಡಳಿಯಿಂದ ಕೊಳಚೆ ಪ್ರದೇಶವೆಂದು ಘೋಷಿತಗೊಂಡಿರುವ ಇಲ್ಲಿನ ಗೋಕುಲ ರಸ್ತೆಯ ಶ್ರೀ ರಾಮಲಿಂಗೇಶ್ವರ ನಗರಕ್ಕೆ ‘ಸ್ಮಾರ್ಟ್’ ಕಳೆ ಬರುತ್ತಿದೆ.

    ಹುಬ್ಬಳ್ಳಿ – ಧಾರವಾಡ ಸ್ಮಾರ್ಟ್​ಸಿಟಿ ಕಂಪನಿ ಇಲ್ಲಿನ 7.25 ಕಿಮೀ ವ್ಯಾಪ್ತಿಯಲ್ಲಿ ಹಲವಾರು ಅತ್ಯಾಧುನಿಕ ಸೌಲಭ್ಯಗಳನ್ನು ನಿರ್ವಿುಸುತ್ತಿದೆ. ಈ ತಿಂಗಳ ಅಂತ್ಯದಲ್ಲಿ ಈ ಬಡಾವಣೆಯಲ್ಲಿ ನಿರ್ವಣಗೊಳ್ಳುತ್ತಿರುವ ವಿವಿಧ ಸೌಲಭ್ಯಗಳ ಕಾಮಗಾರಿ ಪೂರ್ಣಗೊಳ್ಳಲಿದೆ.

    ಗಟಾರುಗಳ ಮೇಲೆ ಅನಧಿಕೃತ ಕಟ್ಟೆಗಳ ನಿರ್ವಣ, ತೆರೆದ ಗಟಾರಿನಲ್ಲಿಯೇ ಮಕ್ಕಳ ಮಲಮೂತ್ರ ವಿಸರ್ಜನೆ, ಡಾಂಬರ್ ಕಿತ್ತು ತಗ್ಗು ಬಿದ್ದ ರಸ್ತೆ ಸೇರಿ ಹಲವಾರು ಸಮಸ್ಯೆಗಳು ಈ ಕೊಳಚೆ ಪ್ರದೇಶದಲ್ಲಿದ್ದವು. ಗಟಾರುಗಳ ಮೇಲೆ ಅನಧಿಕೃತವಾಗಿ ನಿರ್ವಿುಸಿದ್ದ ಕಟ್ಟೆಗಳನ್ನು ಈಗ ತೆರವುಗೊಳಿಸಲಾಗಿದೆ. ಗುಣಮಟ್ಟದ ಒಳಚರಂಡಿ ಹಾಗೂ ಗಟಾರುಗಳನ್ನು ನಿರ್ವಿುಸಲಾಗಿದೆ. ಹದಗೆಟ್ಟ ರಸ್ತೆ ಸರಿಪಡಿಸಲು ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿ ಜಾರಿಯಲ್ಲಿದೆ.

    ನೀರು ಪೂರೈಕೆಗಾಗಿ ಪೈಪ್​ಲೈನ್ ಅಳವಡಿಕೆ, ಬೀದಿ ದೀಪ , ವೃತ್ತಗಳ ಅಭಿವೃದ್ಧಿ, ಸಾರ್ವಜನಿಕ ಶೌಚಗೃಹ ಸೇರಿ ಹಲವು ಸೌಲಭ್ಯಗಳನ್ನು ಒದಗಿಸುವ ಕಾಮಗಾರಿಗಳು ಸಾಗಿವೆ. ಜತೆಗೆ ಒಂದು ಅಂಗನವಾಡಿಯನ್ನೂ ಅಭಿವೃದ್ಧಿಗೊಳಿಸಲಾಗಿದೆ. ಒಳಚರಂಡಿ ನೀರು ನಾಲಾ ಸೇರಲು ಪೈಪ್​ಲೈನ್ ಹಾಕಲಾಗುತ್ತಿದೆ.

    ಸಿಮೆಂಟ್ ರಸ್ತೆ ನಿರ್ವಣ, ಗುಣಮಟ್ಟದ ಒಳಚರಂಡಿ, ನೀರು ಪೂರೈಕೆಗಾಗಿ ಪೈಪ್​ಗಳ ಅಳವಡಿಕೆ, ಬೀದಿ ದೀಪ, ವೃತ್ತಗಳ ಅಭಿವೃದ್ಧಿ, ಸಾರ್ವಜನಿಕ ಶೌಚಗೃಹ, ಭೂಗತ ವಿದ್ಯುತ್ ಕೇಬಲ್ ಸೇರಿ ಹಲವು ಸೌಲಭ್ಯಗಳನ್ನು ನಿರ್ವಿುಸಲಾಗಿದೆ. ಜತೆಗೆ ಒಂದು ಅಂಗನವಾಡಿಯನ್ನೂ ಅಭಿವೃದ್ಧಿಗೊಳಿಸಲಾಗಿದೆ.

    ಕಳೆದ 4 ತಿಂಗಳ ಹಿಂದೆಯೇ ಬಾಕಿ ಉಳಿದಿರುವ ಕಾಮಗಾರಿಗಳು ಪೂರ್ಣಗೊಳ್ಳಬೇಕಿತ್ತು. ಆದರೆ, ಲಾಕ್​ಡೌನ್ ಸಮಯದಲ್ಲಿ ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದರಿಂದ ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳುವುದು ತಡವಾಯಿತು.

    ಒಟ್ಟಿನಲ್ಲಿ ಶ್ರೀ ರಾಮಲಿಂಗೇಶ್ವರ ನಗರ ಇದೀಗ ಹುಬ್ಬಳ್ಳಿಯ ಪ್ರಮುಖ ಬಡಾವಣೆಗಳಿಗೆ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲದಂತೆ ಕಂಗೊಳಿಸಲು ಸಿದ್ಧವಾಗಿದೆ.

    ನೂರು ನಗರಿಯಲ್ಲೊಂದು

    2016ರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಸ್ಮಾರ್ಟ್​ಸಿಟಿ ಯೋಜನೆಗೆ ಆಯ್ಕೆಗೊಂಡಿತು. ದೇಶದ ಒಟ್ಟು 100 ಮಹಾನಗರಗಳು ಈ ಯೋಜನೆಗೆ ಆಯ್ಕೆಗೊಂಡಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಯೋಜನೆಗೆ ತಲಾ ಶೇ. 50ರಷ್ಟು ಹಣಕಾಸು ಸೌಲಭ್ಯ ಒದಗಿಸಲಿವೆ. ಹು-ಧಾ ಸ್ಮಾರ್ಟ್​ಸಿಟಿ ಕಂಪನಿಯು ಸರ್ಕಾರದ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

    ಅನೇಕ ಅಚ್ಚರಿ

    ಅಚ್ಚರಿಯ ಸಂಗತಿ ಎಂದರೆ ಪಾಶ್ ಏರಿಯಾದಲ್ಲಿಯೂ ಇರದ ಕೆಲವು ಸೌಲಭ್ಯಗಳು ಇಲ್ಲಿ ಸೃಷ್ಟಿಯಾಗುತ್ತಿವೆ. ಒಳ ರಸ್ತೆಗಳಿಗೆ ಪೇವರ್ಸ್ ಹಾಕಲಾಗಿದೆ. ಭೂಗತ ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ನಾಲಾಕ್ಕೆ ತಡೆಗೋಡೆ ನಿರ್ವಿುಸಲಾಗಿದೆ. ಹೀಗೆ ಅನೇಕ ಸೌಕರ್ಯಗಳನ್ನು ಇಲ್ಲಿ ಒದಗಿಸಲಾಗಿದೆ.

    ಶ್ರೀ ರಾಮಲಿಂಗೇಶ್ವರ ನಗರದಲ್ಲಿ ಸ್ವಚ್ಛತೆಯೇ ಇರಲಿಲ್ಲ. ಸೊಳ್ಳೆಗಳ ಕಾಟ ಸಾಕಷ್ಟಿತ್ತು. ಚಿಕೂನ್​ಗುನ್ಯಾ ಸೇರಿ ಹಲವು ಸಾಂಕ್ರಾಮಿಕ ರೋಗಗಳು ಇಲ್ಲಿ ಹೆಚ್ಚಿದ್ದವು. ಇದೀಗ ಸ್ಮಾರ್ಟ್​ಸಿಟಿ ಯೋಜನೆಯಡಿ ಹಲವು ಸೌಲಭ್ಯಗಳನ್ನು ಒದಗಿಸುವ ಮೂಲಕ ಇಲ್ಲಿನ ಜನರು ಆರೋಗ್ಯಯುತವಾಗಿ ಬದುಕಲು ಬೇಕಾದ ವಾತಾವರಣ ನಿರ್ವಿುಸಲಾಗಿದೆ. ಇಲ್ಲಿನ ಜನರ ಜೀವನಮಟ್ಟ ಸುಧಾರಿಸುವ ಪ್ರಯತ್ನ ಮಾಡಲಾಗಿದೆ.
    | ಎಸ್.ಎಚ್. ನರೇಗಲ್ಲ, ವಿಶೇಷ ಅಧಿಕಾರಿ, ಹು-ಧಾ ಸ್ಮಾರ್ಟ್​ಸಿಟಿ ಕಂಪನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts