More

    ಆಯೋಧ್ಯೆಯಲ್ಲಿ ರಾಮಲಲ್ಲ ವಿಗ್ರಹ ಕೆತ್ತನೆ ಪೂರ್ಣಗೊಳಿಸಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್

    ಮೈಸೂರು: ಆಯೋಧ್ಯೆಯ ಶ್ರೀರಾಮಂದಿರದಲ್ಲಿ ಪ್ರತಿಷ್ಠಾನೆಗೊಳ್ಳಲಿರುವ ಬಾಲರಾಮ (ರಾಮಲಲ್ಲ) ವಿಗ್ರಹ ಕೆತ್ತನೆಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ವಾರದ ಹಿಂದೆ ಪೂರ್ಣಗೊಳಿಸಿದ್ದಾರೆ.

    ಬಾಲರಾಮನ ಸುಂದರ ವಿಗ್ರಹವನ್ನು ಕೆತ್ತನೆ ಮಾಡಲು ಅರುಣ್ ಯೋಗಿರಾಜ್ ಆರು ತಿಂಗಳ ಸಮಯ ತೆಗೆದುಕೊಂಡರು. ಆರು ತಿಂಗಳ ಕಾಲ ಅವರು ಆಯೋಧ್ಯೆಯಲ್ಲಿಯೇ ಉಳಿದುಕೊಂಡಿದ್ದರು. ಇದೀಗ ವಿಗ್ರಹದ ಕೆತ್ತನೆ ಪೂರ್ಣಗೊಳಿಸಿ ವಿಗ್ರಹವನ್ನು ಹಸ್ತಾಂತರಿಸಿ ಮೈಸೂರಿಗೆ ಮರಳಿದ್ದಾರೆ.

    ಮೂರು ವಿಗ್ರಹಗಳು ಕೆತ್ತನೆ

    ಮೈಸೂರಿನ ಶಿಲ್ಪಿ ಯೋಗಿ ಅರುಣ್ ಯೋಗಿರಾಜ್, ಬೆಂಗಳೂರಿನ ಜಿ.ಎಲ್. ಭಟ್ ಹಾಗೂ ರಾಜಸ್ತಾನದ ಸತ್ಯನಾರಾಯಣ ಪಾಂಡೆ ಅವರು ತಲಾ ಒಂದು ರಾಮಲಲ್ಲ ವಿಗ್ರಹವನ್ನು ಕೆತ್ತನೆ ಮಾಡಿದ್ದಾರೆ. ಈ ಪೈಕಿ ಒಂದು ವಿಗ್ರಹವನ್ನು ಅಂತಿಮವಾಗಿ ಆಯ್ಕೆ ಮಾಡಿ ಪ್ರತಿಷ್ಠಾಪಿಸಲಾಗುವುದು. ಜನವರಿ 22 ರಂದು ಅಯೋಧ್ಯೆ ಶ್ರೀರಾಮಂದಿರ ಉದ್ಘಾಟನೆಗೊಳ್ಳಲಿದೆ.

    ಐದು ವರ್ಷದ ಬಾಲರಾಮ ಬಿಲ್ಲು, ಬಾಣವನ್ನು ಹಿಡಿದು ನಿಂತಿರುವ ವಿಗ್ರಹವನ್ನು ಕೆತ್ತನೆ ಮಾಡಲಾಗಿದೆ. ಈ ವಿಗ್ರಹ 51 ಇಂಚು ಎತ್ತರ ಹಾಗೂ ಮೂರುವರೆ ಅಡಿ ಅಗಲ ಹೊಂದಿದೆ. ರಾಮನವಮಿ ದಿನದಂದು ಈ ವಿಗ್ರಹದ ಮೇಲೆ ಸೂರ್ಯಕಿರಣ ಬೀಳುವ ರೀತಿಯಲ್ಲಿ ದೇವಸ್ಥಾನ ನಿರ್ಮಿಸಲಾಗಿದ್ದು, ಅದಕ್ಕೆ ಅನುಗುಣವಾಗಿ 51 ಇಂಚು ಎತ್ತರದ ವಿಗ್ರಹ ಕೆತ್ತನೆ ಮಾಡಲಾಗಿದೆ.

    ‘ರಾಮಲಲ್ಲಾ ಪ್ರತಿಮೆ ಕೆತ್ತನೆಗೆ ಆಯ್ಕೆಗೊಂಡ ದೇಶದ ಮೂವರು ಶಿಲ್ಪಿಗಳಲ್ಲಿ ನಾನು ಸಹ ಒಬ್ಬ ಎಂಬುದು ಸಂತಸದ ವಿಚಾರ. ಇದು ನನ್ನ ಪೂರ್ವಜನ್ಮದ ಪುಣ್ಯದ ಫಲ. ಇಂತಹ ಅವಕಾಶ ಎಲ್ಲರಿಗೂ ದೊರೆಯುವುದಿಲ್ಲ. ಒಟ್ಟು 6 ತಿಂಗಳ ಕಾಲ ವಿಗ್ರಹ ಕೆತ್ತನೆ ಕಾರ್ಯ ನಡೆಯಿತು. ಪ್ರತಿದಿನ 12 ರಿಂದ 14 ಗಂಟೆ ಕಾಲ ವಿಗ್ರಹ ಕೆತ್ತನೆ ಕಾರ್ಯದಲ್ಲಿ ತೊಡಗಿದೆ. ದೇವರ ಕೃಪೆಯಿಂದ ವಿಗ್ರಹ ಸುಂದರವಾಗಿ ಮೂಡಿಬಂದಿದೆ. ಮೂವರು ಶಿಲ್ಪಿಗಳು ಸಹ ತಮ್ಮ ಶಕ್ತಿಮೀರಿ ವಿಗ್ರಹವನ್ನು ಸುಂದರವಾಗಿ ಕೆತ್ತನೆ ಮಾಡಿದ್ದಾರೆ’ ಅನ್ನುತ್ತಾರೆ ಶಿಲ್ಪಿ ಅರುಣ್ ಯೋಗಿರಾಜ್.

    ಹೊಯಸ್ಸಳ ಶೈಲಿಯಲ್ಲಿ ಕೆತ್ತನೆ

    ರಾಮಲಲ್ಲಾ ವಿಗ್ರಹದಲ್ಲಿ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಸಂಸ್ಕೃತಿ ಮಿಳಿತಗೊಂಡಿದೆ. ಹೊಸ್ಸಳ ಹಾಗೂ ಕಲ್ಯಾಣ ಚಾಲುಕ್ಯ ಶೈಲಿಯನ್ನು ಬಳಕೆ ಮಾಡಿಕೊಂಡು ರಾಮಲಲ್ಲಾ ವಿಗ್ರಹ ಕೆತ್ತನೆ ಮಾಡಿದ್ದೇನೆ. ವಿಗ್ರಹದಲ್ಲಿ ದಕ್ಷಿಣ ಭಾರತ ಆಭರಣಗಳು, ಉತ್ತರ ಭಾರತದ ವಸ್ತ್ರಗಳನ್ನು ಕಾಣಬಹುದು ಎಂದು ಅರುಣ್ ಯೋಗಿರಾಜ್ ‘ವಿಜಯವಾಣಿ’ಗೆ ತಿಳಿಸಿದರು.

    ಎಚ್.ಡಿ.ಕೋಟೆಯ ಕಲ್ಲು ಬಳಕೆ

    ರಾಮಲಲ್ಲಾ ವಿಗ್ರಹ ಕೆತ್ತನೆಗೆ ಎಚ್.ಡಿ.ಕೋಟೆಯಲ್ಲಿ ದೊರೆತ ಕೃಷ್ಣಶಿಲೆಯನ್ನು ಬಳಕೆ ಮಾಡಲಾಗಿದೆ. ಈ ಕೃಷ್ಣಶಿಲೆಯಲ್ಲಿ ಎರಡು ವಿಗ್ರಹಗಳನ್ನು ಕೆತ್ತನೆ ಮಾಡಲಾಗಿದೆ. ಮತ್ತೊಂದು ವಿಗ್ರಹವನ್ನು ಅಮೃತಶಿಲೆಯಲ್ಲಿ ಕೆತ್ತನೆ ಮಾಡಲಾಗಿದೆ. ವಿಗ್ರಹ ಕೆತ್ತನೆಗೆ ಕಲ್ಲನ್ನು ಆಯ್ಕೆ ಮಾಡುವ ಸಂದರ್ಭ ಹಲವು ಪರೀಕ್ಷೆಗಳನ್ನು ನಡೆಸಿ ಅಂತಿಮವಾಗಿ ಎಚ್.ಡಿ. ಕೋಟೆಯ ಕಲ್ಲನ್ನು ವಿಗ್ರಹ ಕೆತ್ತನೆಗೆ ಬಳಕೆ ಮಾಡಲಾಯಿತು.

    ಮೈಸೂರಿನವರಾದ ಶಿಲ್ಪಿ ಅರುಣ್ ಯೋಗಿರಾಜ್ ಕೇದಾರನಾಥದಲ್ಲಿ ಪ್ರತಿಷ್ಠಾಪಿಸಿರುವ ಶಂಕರಾಚಾರ್ಯರ ಪ್ರತಿಮೆ ಹಾಗೂ ದೆಹಲಿಯ ಇಂಡಿಯಾ ಗೇಟ್‌ನಲ್ಲಿ ಸುಭಾಷ್‌ಚಂದ್ರ ಬೋಸ್ ಪ್ರತಿಮೆಯನ್ನು ಕೆತ್ತನೆ ಮಾಡಿ ದೇಶದ ಗಮನ ಸೆಳೆದವರು. ಈ ಎರಡು ಪ್ರತಿಮೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದರು. ಅರುಣ್ ಯೋಗಿರಾಜ್ ಕುಟುಂಬ 250 ವರ್ಷಗಳಿಂದ ವಿಗ್ರಹ ಕೆತ್ತನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ತಾತ ಬಿ.ಬಸವಣ್ಣ ಶಿಲ್ಪಕಲೆಯಲ್ಲಿ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರು. ಇವರ ತಂದೆ ಬಿ.ಎಸ್.ಯೋಗಿರಾಜ್ ಶಿಲ್ಪ ಕೆತ್ತನೆಯಲ್ಲಿ ಸಾಕಷ್ಟು ಹೆಸರು ಮಾಡಿದವರು. ಅರುಣ್ ಯೋಗಿರಾಜ್ 11 ವರ್ಷದಲ್ಲಿದ್ದಾಗಲೇ ಶಿಲ್ಪಕೆತ್ತನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಎಂಬಿಎ ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ 2008ರಿಂದ ಪೂರ್ಣಾವಧಿ ಶಿಲ್ಪಿಯಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts