More

    ಮಳವಳ್ಳಿಯಲ್ಲಿ ರಾಮನ ಹಬ್ಬ ಆಚರಣೆ

    ಮಳವಳ್ಳಿ: ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾನದ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆ ಸೋಮವಾರ ಸರ್ವ ಸಮುದಾಯದ ಭಕ್ತರು ವಿಜೃಂಭಣೆ ಹಾಗೂ ಸಂಭ್ರಮದಿಂದ ರಾಮನ ಹಬ್ಬವನ್ನು ಆಚರಿಸಿದರು.

    ಇಡೀ ಪಟ್ಟಣವೇ ಕೇಸರಿಮಯದಿಂದ ಕೂಡಿದ್ದು, ಮುಖ್ಯರಸ್ತೆ ಸೇರಿದಂತೆ ಪ್ರತಿ ಬಡಾವಣೆಯ ಮನೆಗಳು, ಅಂಗಡಿ ಮುಂಗಟ್ಟುಗಳ ಮೇಲೆ ಶ್ರೀರಾಮಾಂಜನೇಯರ ಚಿತ್ರವಿರುವ ಬಾವುಟಗಳು ಹಾಗೂ ಬಂಟಿಂಗ್ಸ್ ರಾರಾಜಿಸುತ್ತಿದ್ದವು. ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಜರುಗಿದವು. ಪಟ್ಟಣದಲ್ಲಿರುವ ಆಟೋ ನಿಲ್ದಾಣಗಳಲ್ಲಿ ಹಾಗೂ ವಿವಿಧ ವ್ಯಾಪಾರಿಗಳು ತಮ್ಮ ವಾಣಿಜ್ಯ ಮಳಿಗೆಗಳ ಮುಂದೆ ಬೃಹತ್ ರಾಮನ ಫ್ಲೆಕ್ಸ್ ಕಟ್ಟಿಕೊಂಡು ಪೂಜೆ ಸಲ್ಲಿಸಿ ಮಜ್ಜಿಗೆ, ಪಾನಕ, ಕೋಸಂಬರಿ, ಪುಳಿಯೋಗರೆ, ಮೊಸರನ್ನ ವಿತರಿಸಿ ಸಂಭ್ರಮಿಸಿದರು.

    ಅನಂತ್‌ರಾಮ್ ವೃತ್ತದಲ್ಲಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ನೇತೃತ್ವದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ರಘುಕುಲ ನಂದನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಮಂಗಳಾರತಿ ನೆರವೇರಿಸಲಾಯಿತು. 1992ರಲ್ಲಿ ಅಯೋಧ್ಯೆ ಕರಸೇವೆಯಲ್ಲಿ ಪಾಲ್ಗೊಂಡಿದ್ದ ಅಪ್ಪಾಜೀಗೌಡ, ಸಣ್ಮುಕೆಗೌಡ, ಮುದ್ದಮಲ್ಲು ಅವರನ್ನು ಸನ್ಮಾನಿಸಲಾಯಿತು. ಬಳಿಕ ಸಿಹಿ ವಿತರಣೆ ಮಾಡಲಾಯಿತು. ಪುರಸಭೆ ಸದಸ್ಯರಾದ ನಂದಕುಮಾರ್, ಪ್ರಶಾಂತ, ಪುಟ್ಟಸ್ವಾಮಿ, ಕುಮಾರ, ಜಯಸಿಂಹ, ಮುಖಂಡರಾದ ಚಂದಳ್ಳಿ ಮಲ್ಲೇಗೌಡ, ಶ್ರೀಧರ, ಸಿದ್ದಾಚಾರಿ, ಯಮದೂರು ಸಿದ್ದರಾಜು, ಕಂಬರಾಜು, ಮಲ್ಲೇಶ, ಪ್ರಭಾಕರ, ಕೆ.ಸಿ.ನಾಗೇಗೌಡ, ಅಶೋಕ್ ಕ್ಯಾತನಹಳ್ಳಿ, ಕೃಷ್ಣ, ಹೆಬ್ಬಣಿ ಬಸವರಾಜು ಇತರರಿದ್ದರು.

    ಗಂಗಾಮತ ಬಡಾವಣೆಯಲ್ಲಿ ಹತ್ತಾರು ಕಡೆಗಳಲ್ಲಿ ರಾಮನ ಪೂಜೆಯನ್ನು ಅದ್ದೂರಿಯಾಗಿ ಆಚರಿಸುವುದರ ಜತೆಗೆ, ಸಹಸ್ರ ಸಂಖ್ಯೆಯ ಜನರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿಸಿದರು. ಅಡ್ಡೆನಿಂಗಯ್ಯನ ಕೇರಿಯಲ್ಲಿರುವ ಸಿದ್ದಪ್ಪಾಜಿ ಶ್ರೀ ಸೀತಾರಾಮ ಮಂದಿರದಲ್ಲಿ 350 ವರ್ಷಗಳ ಹಿಂದೆ ತುಳಸಿದಾಸರು ಗಿಡಮೂಲಿಕೆಗಳಿಂದ ಚಿತ್ರಿಸಿರುವ ಸೀತಾರಾಮಲಕ್ಷ್ಮಣ ಚಿತ್ರಪಟಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಯಜಮಾನರಾದ ವೆಂಕಟೇಶ್, ಜಯರಾಮು, ರಮೇಶ್, ಮಾಕಾರ್ಂಡೆಯ, ಶ್ರೀಕಂಠಪ್ಪ, ಮಾದೇಶ ಇದ್ದರು.

    ಬ್ರಾಹ್ಮಣ ಬೀದಿಯಲ್ಲಿರುವ ರಾಮಮಂದಿರದಲ್ಲಿ ಎಲ್‌ಇಡಿ ಟಿವಿ ಅಳವಡಿಸಿ ಅಯೋಧ್ಯೆಯಲ್ಲಿ ನಡೆಯುತ್ತಿರುವ ಪ್ರಾಣಪ್ರತಿಷ್ಠಾನದ ಲೈವ್ ಚಿತ್ರಣ ವೀಕ್ಷಣೆಗೆ ಅವಕಾಶ ಕಲ್ಪಿಸುವುದರ ಜತೆಗೆ ವಿವಿಧ ಹೋಮ, ಹವನಗಳನ್ನು ಹಮ್ಮಿಕೊಂಡು ಮಂತ್ರಪಠಗಳನ್ನು ಪಠಿಸಿ ಮಹಾ ಮಂಗಳಾರತಿ ನೆರವೇರಿಸಿದರು.

    ಹಳ್ಳಿಗಳಲ್ಲಿ ರಾಮಜಪ: ತಾಲೂಕಿನ ಹೋಬಳಿ ಕೇಂದ್ರಗಳಾಗಿರುವ ಕಿರುಗಾವಲು, ಬಿ.ಜಿ.ಪುರ, ಹಲಗೂರು ಕೇಂದ್ರ ಗ್ರಾಮಗಳು ಮತ್ತು ಬೆಳಕವಾಡಿ, ರಾಗಿಬೊಮ್ಮನಹಳ್ಳಿ, ನೆಲ್ಲಿಗೆರೆ, ಪೂರಿಗಾಲಿ, ಕಲ್ಕುಣಿ, ದುಗ್ಗನಹಳ್ಳಿ, ತಳಗವಾದಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಶ್ರೀರಾಮನ ಫ್ಲೆಕ್ಸ್‌ಗಳು ರಾರಾಜಿಸಿದ್ದವು. ರಾಮ ಭಾವಚಿತ್ರಕ್ಕೆ ಪೂಜೆ, ಮೆರವಣಿಗೆ, ಪಾನಕ ವಿತರಣೆ , ಅನ್ನಸಂತರ್ಪಣೆ ಮಾಡುವ ಮೂಲಕ ರಾಮ ಜಪ ಮಾಡುತ್ತಾ ಸಂಭ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts