More

    ಎನ್ನೆಸ್​ಗೆ ರಾಜ್ಯೋತ್ಸವ ಪ್ರಶಸ್ತಿ

    ಯಲ್ಲಾಪುರ: ತಾಲೂಕಿನ ಹಿರಿಯ ಸಾಮಾಜಿಕ ಕಾರ್ಯಕರ್ತ, ಸಹಕಾರಿ ಧುರೀಣ ನಾರಾಯಣ ಸುಬ್ರಾಯ ಹೆಗಡೆ (ಎನ್.ಎಸ್.ಹೆಗಡೆ) ಕುಂದರಗಿ ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಸುಮಾರು 4-5 ದಶಕಗಳ ಅವರ ಸಮಾಜ ಸೇವೆಗೆ ಸಂದ ಗೌರವವಾಗಿದೆ.

    ತಾಲೂಕಿನ ಕುಂದರಗಿಯವರಾದ ಇವರು ಹಾಸಣಗಿಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಶಿರಸಿಯ ಮಾರಿಕಾಂಬಾ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದರು. ನಂತರ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ಅವರು, ಕುಂದರಗಿಯ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

    ಇವರ ಪ್ರಯತ್ನದಿಂದ ಕುಂದರಗಿ ಯಲ್ಲಿ ಪೂರ್ಣ ಪ್ರಾಥಮಿಕ ಶಾಲೆ ಆರಂಭವಾಯಿತು. ಮಂಚಿಕೇರಿಯಲ್ಲಿ ತಾಲೂಕಿನ ಮೊಟ್ಟಮೊದಲ ಪ್ರೌಢಶಾಲೆ ಆರಂಭಿಸುವಲ್ಲಿಯೂ ಎನ್. ಎಸ್.ಹೆಗಡೆ ಪ್ರಮುಖ ಪಾತ್ರ ವಹಿಸಿದ್ದಾರೆ. ಭರತನಹಳ್ಳಿಯಲ್ಲಿ ಪ್ರಗತಿ ಶಿಕ್ಷಣ ಅಭಿವೃದ್ಧಿ ಸಂಸ್ಥೆಯ ಮೂಲಕ ಪ್ರಗತಿ ವಿದ್ಯಾಲಯವೆಂಬ ಪ್ರೌಢಶಾಲೆ ಸ್ಥಾಪಿಸಿ, ಅದರಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯ, ವಾಚನಾಲಯ, ಸಂಗೀತ ಕಲಿಕೆಗೂ ಅವಕಾಶ ನೀಡಿದರು. ಸ್ವರ್ಣವಲ್ಲೀಯಲ್ಲಿ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾಗಿ ಸಂಸ್ಕೃತ ಕಾಲೇಜು ಆರಂಭಿಸುವಲ್ಲಿ ಮುಂಚೂಣಿಯಲ್ಲಿದ್ದ ಇವರು, ಶಿರಸಿಯ ಎಂ.ಇ.ಎಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಮಾವಿನಕಟ್ಟೆಯಲ್ಲಿ ಸೇವಾ ಸಹಕಾರಿ ಸಂಘ, ಭತ್ತ ಬೆಳೆಗಾರರ ಸಹಕಾರಿ ಸಂಘ ಮತ್ತು ಅಕ್ಕಿ ಗಿರಣಿಯನ್ನು ಆರಂಭಿಸಲು ಶ್ರಮಿಸಿದ್ದಾರೆ. ಮಾವಿನಕಟ್ಟೆಯಲ್ಲಿ ಶೈಕ್ಷಣಿಕ, ಸಹಕಾರಿ ವ್ಯವಸ್ಥೆ ರೂಪಿಸಿದ ಎನ್.ಎಸ್.ಹೆಗಡೆಯವರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಶು ಆಸ್ಪತ್ರೆಗಳನ್ನು ಕೂಡ ಮಂಜೂರಿ ಮಾಡಿಸಿ ಸಾರ್ವಜನಿಕರಿಗೆ ನೆರವಾದರು.

    ಉತ್ತರ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್​ನ ಮೊದಲ ಅಧ್ಯಕ್ಷರಾದ ಎನ್.ಎಸ್. ಹೆಗಡೆ, ಎರಡು ಬಾರಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅವಿಭಜಿತ ಕಾಂಗ್ರೆಸ್ಸಿನ ತಾಲೂಕು ಅಧ್ಯಕ್ಷರಾಗಿ, ಶಿರಸಿಯ ಟಿಎಸ್​ಎಸ್, ಯಲ್ಲಾಪುರ ಪಿಎಲ್​ಡಿ ಬ್ಯಾಂಕ್, ಎಪಿಎಂಸಿ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

    ಸ್ವರ್ಣವಲ್ಲೀ ಶ್ರೀಗಳಿಂದ ಸೇವಾ ರತ್ನಾಕರ ಗೌರವ, ಮುಂಬೈನ ಹವ್ಯಕ ವೆಲ್ಪೇರ್ ಟ್ರಸ್ಟ್ ವತಿಯಿಂದ ರ್ಕ ವೆಂಕಟರಮಣ ಶಾಸ್ತ್ರಿ ಸೂರಿ ಸ್ಮರಣಾರ್ಥ ನೀಡುವ ದತ್ತಿನಿಧಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 87ರ ಇಳಿ ವಯಸ್ಸಿನಲ್ಲೂ ಸಾಮಾಜಿಕ ಕಾರ್ಯಗಳಲ್ಲಿ ಚಟುವಟಿಕೆಯಿಂದ ತೊಡಗಿಸಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ.

    ಪ್ರಶಸ್ತಿ ಬಂದಿರುವುದು ಸಂತೋಷ ತಂದಿದೆ. ಗ್ರಾಮೀಣ ಭಾಗವನ್ನು ವಿವಿಧ ವಿಭಾಗಗಳಲ್ಲಿ ಅಭಿವೃದ್ಧಿ ಮಾಡುವ ಪ್ರಯತ್ನಕ್ಕೆ ಸಂದ ಗೌರವವಾಗಿದೆ. ಪ್ರಶಸ್ತಿ ಸಮಾಜಕ್ಕೆ ಸಂದಿದೆ. ಸರ್ಕಾರಕ್ಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಆಭಾರಿಯಾಗಿದ್ದೇನೆ.

    | ಎನ್. ಎಸ್. ಹೆಗಡೆ ಕುಂದರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts