More

    ಅವಳಿ ಜಿಲ್ಲೆಗಳಿಗೆ ರಾಜ್ಯೋತ್ಸವ ಸಪ್ತ ಪ್ರಶಸ್ತಿ ಗರಿ

    ದಕ್ಷಿಣ ಕನ್ನಡ ಜಿಲ್ಲೆಗೆ ನಾಲ್ಕು ಹಾಗೂ ಉಡುಪಿ ಜಿಲ್ಲೆಗೆ ಮೂರು ರಾಜ್ಯೋತ್ಸವ ಪ್ರಶಸ್ತಿ ಈ ಬಾರಿ ಒಲಿದು ಬಂದಿದೆ. ಸಾಹಿತ್ಯ ಕ್ಷೇತ್ರದಲ್ಲಿ ವಲೇರಿಯನ್ ಡಿಸೋಜ(ವಲ್ಲಿ ವಗ್ಗ), ಸಂಗೀತ ಕ್ಷೇತ್ರದಲ್ಲಿ ಕೆ.ಲಿಂಗಪ್ಪ ಶೇರಿಗಾರ ಕಟೀಲು, ನ್ಯಾಯಾಂಗದಲ್ಲಿ ವಕೀಲ ಎಂ.ಕೆ. ವಿಜಯಕುಮಾರ್, ಸಮಾಜ ಸೇವೆಯಲ್ಲಿ ಶಿರೂರಿನ ಮಣೆಗಾರ್ ಮೀರಾನ್ ಸಾಹೇಬ್, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಉಡುಪಿ ಶ್ರೀನಿವಾಸ್, ಹೊರನಾಡ ಕನ್ನಡಿಗ ಕ್ಷೇತ್ರದಲ್ಲಿ ಕುಸುಮೋದರ ದೇರಣ್ಣ ಶೆಟ್ಟಿ ಕೇಲ್ತಡ್ಕ ಹಾಗೂ ಸಂಘ-ಸಂಸ್ಥೆಗಳ ವಿಭಾಗದಲ್ಲಿ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ಪ್ರಶಸ್ತಿಗೆ ಆಯ್ಕೆಯಾಗಿದೆ.

    ಪ್ರಾಮಾಣಿಕ ಸಮಾಜ ಸೇವಕ
    ಬೈಂದೂರು: ಶಿರೂರು ಅಭಿವೃದ್ಧಿಯಲ್ಲಿ ಹಗಲಿರುಳು ತೊಡಗಿಸಿಕೊಂಡು ಜಾಗತಿಕ ಮಟ್ಟದಲ್ಲಿ ಅಪಾರ ಕೊಡುಗೆ ನೀಡಿದವರು ಅನಿವಾಸಿ ಉದ್ಯಮಿ ಶಿರೂರು ಮಣೆಗಾರ್ ಮೀರಾನ್ ಸಾಹೇಬ್. 40 ವರ್ಷಗಳಿಂದ ಗಲ್ಪ್ ರಾಷ್ಟ್ರಗಳಲ್ಲಿ ಕನ್ನಡದ ನಾಡು ನುಡಿಯ ಸೇವೆ ಮಾಡುತ್ತಿದ್ದಾರೆ. ಶಿಕ್ಷಣ, ಸಾಮಾಜಿಕ, ಸಾಂಸ್ಕೃತಿಕ ಸೇರಿದಂತೆ ಹೊರನಾಡಿನಲ್ಲಿ ಪ್ರತಿವರ್ಷ ಕನ್ನಡಿಗರ ಸಂಘಟನೆಗೆ ಮತ್ತು ಕನ್ನಡದ ಅಭಿವೃದ್ಧಿಗಾಗಿ ವಿವಿಧ ಸಂಘ ಸಂಸ್ಥೆಗಳ ಜವಾಬ್ದಾರಿ ಆದ್ಯತೆಯ ಮೇರೆಗೆ ಅನುಪಮ ಕೊಡುಗೆ ನೀಡಿದ್ದಾರೆ. ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್, ಶಿರೂರು ಅಸೋಸಿಯೇಶನ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ವಿದೇಶದಲ್ಲಿ ಮಾತ್ರವಲ್ಲದೆ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಜನಪರ ಕಾಳಜಿಯ ಕಾರ್ಯಕ್ರಮ ಸಂಘಟಿಸುವ ಜೊತೆಗೆ ನೂರಾರು ಬಡ ಕುಟುಂಬಗಳಿಗೆ ನೆರವಾಗಿದ್ದಾರೆ. ಶಿರೂರು ಗ್ರೀನ್‌ವ್ಯಾಲಿ ಸಂಸ್ಥೆಯ ಟ್ರಸ್ಟಿಯಾಗಿರುವ ಇವರು ಶಿರೂರಿನ ಅಭಿವೃದ್ಧಿಗೆ ಆಂಬುಲೆನ್ಸ್, ತ್ಯಾಜ್ಯ ಸಾಗಾಟ ವಾಹನ ಸೇರಿದಂತೆ ಹಲವು ಮಹತ್ತರ ಕೊಡುಗೆ ನೀಡಿದ್ದಾರೆ.

    ಬಾಲ್ಯದಿಂದಲೂ ಸಮಾಜ ಸೇವೆ ಮಾಡಬೇಕು ಎಂಬ ತುಡಿತ ಹೊಂದಿದ್ದೆ. ಹುಟ್ಟಿದೂರು ಶಿರೂರು ಎಂದರೆ ಅಭಿಮಾನ. ಹೀಗಾಗಿ ಪ್ರತಿವರ್ಷ ವಿವಿಧ ವರ್ಗದ ಜನರಿಗೆ ಸಹಾಯ ಮಾಡಲಾಗುತ್ತಿದೆ. ಸ್ಥಳೀಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಗ್ರೀನ್‌ವ್ಯಾಲಿ ಶಿಕ್ಷಣ ಸಂಸ್ಥೆಯನ್ನೂ ಆರಂಭಿಸಿದ್ದೇವೆ. ಸರ್ಕಾರ ಗುರುತಿಸಿ ಗೌರವಿಸಿರುವುದು ತುಂಬಾ ಸಂತಸ ತಂದಿದೆ.
    – ಮಣೆಗಾರ್ ಮೀರಾನ್ ಸಾಹೇಬ್ ಶಿರೂರು, ಸಮಾಜಸೇವಕ, ದುಬೈ

    ಪರ್ಯಾಯ ಇಂಧನ ಸಂಶೋಧಕ
    ಉಡುಪಿ: ಪ್ರತಿಷ್ಠಿತ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ನಿವೃತ್ತ ಪ್ರಾಧ್ಯಾಪಕ ಉಡುಪಿ ಶ್ರೀನಿವಾಸ್ (73) ಪರ್ಯಾಯ ಇಂಧನ ಸಂಶೋಧನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದವರು. ತೈಲ ಬೀಜಗಳಿಂದ ಜೈವಿಕ ಇಂಧನ ಉತ್ಪಾದನೆ ಬಗ್ಗೆ ನಡೆಯುತ್ತಿದ್ದ ಸಂಶೋಧನೆಯಲ್ಲಿ 25 ವರ್ಷ ಶ್ರಮಿಸಿದ್ದರು. ಸರ್ಕಾರ ರಚಿಸಿದ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯಲ್ಲೂ ಕಾರ್ಯ ನಿರ್ವಹಿಸಿದ್ದು, ಪರ್ಯಾಯ ಇಂಧನ ಬಳಕೆ ಬಗ್ಗೆ ಮಹತ್ವದ ಸಂಶೋಧನೆಗಳನ್ನು ಕೈಗೊಂಡಿದ್ದರು.

    ಉಡುಪಿಯ ಮಹಾತ್ಮ ಗಾಂಧಿ ಮುನ್ಸಿಪಲ್ ಶಾಲೆಯಲ್ಲಿ ಪ್ರಾಥಮಿಕ, ಕ್ರಿಶ್ಚಿಯನ್ ಹೈಸ್ಕೂಲ್‌ನಲ್ಲಿ ಪ್ರೌಢ ಮತ್ತು ಎಂಜಿಎಂ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿ ಮದ್ರಾಸ್ ಐಐಟಿಯಲ್ಲಿ ಏರೋನಾಟಿಕಲ್ ವಿಭಾಗದಲ್ಲಿ ಬಿಟೆಕ್ ಮತ್ತು ಎಂಟೆಕ್ ಪದವಿ ಪಡೆದು ಬೆಂಗಳೂರಿನ ಐಐಎಸ್‌ಸಿಯಲ್ಲಿ ಪಿಎಚ್‌ಡಿಯೊಂದಿಗೆ ಮೆಕ್ಯಾನಿಕಲ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. 30 ವರ್ಷ ಸೇವೆ ಬಳಿಕ 2012ರಲ್ಲಿ ನಿವೃತ್ತರಾಗಿದ್ದರು. ಪ್ರಸ್ತುತ ಬೆಂಗಳೂರಿನಲ್ಲಿ ಪುತ್ರಿಯೊಂದಿಗೆ ವಾಸವಾಗಿರುವ ಶ್ರೀನಿವಾಸ್, ಸೋದೆ ಮಠದ ಆಡಳಿತಕ್ಕೆ ಒಳಪಟ್ಟ ಬಂಟಕಲ್ ಶ್ರೀಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜು ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿದ್ದಾರೆ.

    ಕಳೆದ 25 ವರ್ಷದಿಂದ ಪರ್ಯಾಯ ಇಂಧನ ಉತ್ಪಾದನೆ ಬಗ್ಗೆ ನಡೆಯುತ್ತಿದ್ದ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದೆ. ಇದರೊಂದಿಗೆ ಐಐಎಸ್‌ಸಿಯಲ್ಲಿ ಹಳ್ಳಿಗಳ ಅಭಿವೃದ್ಧಿ ಬಗ್ಗೆ ಪ್ರತ್ಯೇಕ ವಿಭಾಗ ಕಾರ್ಯಾಚರಿಸುತ್ತಿದ್ದು, ಅದರಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ್ದೇನೆ. ಇದೆಲ್ಲವನ್ನೂ ಗುರುತಿಸಿ ಸರ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಭಾವಿಸುತ್ತೇನೆ.
    – ಉಡುಪಿ ಶ್ರೀನಿವಾಸ್, ನಿವೃತ್ತ ಪ್ರಾಧ್ಯಾಪಕ, ಐಐಎಸ್‌ಸಿ ಬೆಂಗಳೂರು

    ನ್ಯಾಯವಾದಿಗಳ ಗುರುವಿಗೆ ಗೌರವ
    ಕಾರ್ಕಳ: ಸ್ಥಳೀಯ, ಜಿಲ್ಲಾ, ರಾಜ್ಯದ ಕೋರ್ಟ್‌ಗಳಲ್ಲಿ ಎಲ್ಲ ರೀತಿಯ ದಾವೆಗಳನ್ನು ನಿರ್ವಹಿಸಿದ ಅನುಭವಿ ವಕೀಲ ಎಂ.ಎ.ವಿಜಯಕುಮಾರ್ ಪ್ರತಿಷ್ಠಿತ ಜೈನ ಮನೆತನಗಳಲ್ಲಿ ಒಂದಾದ ಉಡುಪಿ ಜಿಲ್ಲೆ ಕಾರ್ಕಳದ ಮಿಜಾರು ಕನಕಬೆಟ್ಟಿನವರು.
    ಮೂಡುಬಿದಿರೆ, ಕಾರ್ಕಳದಲ್ಲಿ ಶಿಕ್ಷಣ ಪಡೆದು ಬೆಂಗಳೂರಿನಲ್ಲಿ ಬಿಎಸ್‌ಸಿ ಹಾಗೂ ಕಾನೂನು ಪದವಿ ಪಡೆದರು. ಮಂಗಳೂರಿನಲ್ಲಿ ಮಂಜಯ್ಯ ಹೆಗ್ಡೆ ಅವರಲ್ಲಿ ತರಬೇತಿ ಬಳಿಕ ಎಚ್.ಕೆ.ಗೋಪಾಲಕೃಷ್ಣ ರಾಯರ ಮಾರ್ಗದರ್ಶನದಲ್ಲಿ 1968ರಲ್ಲಿ ವೃತ್ತಿ ಜೀವನ ಆರಂಭ. 52 ವರ್ಷದ ವಕೀಲಿಕೆ ಅನುಭವವಿದ್ದು, 60ಕ್ಕೂ ಮಿಕ್ಕಿ ಕಿರಿಯ ವಕೀಲರಿಗೆ ಮಾರ್ಗದರ್ಶನ ನೀಡಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬೆಳುವಾಯಿ ಅಬ್ದುಲ್ ನಜೀರ್ ಇವರದ್ದೇ ಗರಡಿಯಲ್ಲಿ ಪಳಗಿದವರು.

    1973ರಲ್ಲಿ ಜನಸಂಘದ ಕಾರ್ಯಕರ್ತ, 1980ರ ವರೆಗೆ ಜನತಾ ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ, 1978ರಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಜನತಾ ಪಕ್ಷದಿಂದ ಸ್ಪರ್ಧೆ, 1980ರಿಂದ 85ರ ವರೆಗೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ, 1983 ಹಾಗೂ 85ರಲ್ಲಿ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ – ಇವು ರಾಜಕೀಯ ಅನುಭವ.
    ಅವಿಭಜಿತ ಜಿಲ್ಲೆಯ ತಾಲೂಕು, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಹಾಗೂ ಮೂಡಬಿದಿರೆಯಲ್ಲಿ ಜರುಗಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ ಸಮ್ಮೇಳನಗಳಲ್ಲಿ ವಿಚಾರಗೋಷ್ಠಿಗಳಲ್ಲೂ ಭಾಗವಹಿಸಿದ್ದಾರೆ.

    ಇದು ವೃತ್ತಿಧರ್ಮಕ್ಕೆ ಸಂದ ಗೌರವ. ಸಂತೋಷದಿಂದ ಸ್ವೀಕರಿಸುತ್ತೇನೆ. ಪ್ರಶಸ್ತಿಗಾಗಿ ಹಾತೊರೆದು, ಅರ್ಜಿ ಹಾಕಿದವನು ನಾನಲ್ಲ. ಅನಿರೀಕ್ಷಿತವಾಗಿ ಬಂದಿದೆ. ಅದಕ್ಕೆ ಕಾರಣಕರ್ತರಾದ ಎಲ್ಲರಿಗೂ ಕೃತಜ್ಞತೆಗಳು.
    – ಎಂ.ಕೆ.ವಿಜಯಕುಮಾರ್, ವಕೀಲ

    ಕೊಂಕಣಿ ಸಾಹಿತಿ, ಕನ್ನಡದ ಕಥೆಗಾರ
    ಬಂಟ್ವಾಳ: ಕೊಂಕಣಿ ಸಾಹಿತಿ, ಕನ್ನಡ ಕಥೆಗಾರ ವಲೇರಿಯನ್ ಡಿಸೋಜ (ವಲ್ಲಿ ವಗ್ಗ) ನೂರಾರು ಕೊಂಕಣಿ ಸಣ್ಣಕಥೆ, ಕವನ, ಲೇಖನ, ಅಂಕಣ ಬರಹಗಳ ಕರ್ತೃ. ಮೂಲತಃ ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ವಗ್ಗದವರಾದ ಅವರು, 50 ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿದ್ದಾರೆ. 17ನೇ ವಯಸ್ಸಿನಿಂದ ಸಣ್ಣ ಕಥೆ ಬರೆಯಲು ಆರಂಭಿಸಿದ ಅವರು, 56 ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಆಯ್ದ ಸಣ್ಣಕಥೆಗಳು ಹಿಂದಿ, ತೆಲುಗು, ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿವೆ. ಅವರೇ ಅನುವಾದಿಸಿದ ಕಥೆಗಳು ಹಲವಾರು ಕನ್ನಡ ದಿನಪತ್ರಿಕೆ ಮತ್ತು ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಕಥಾ ಸಂಕಲನ, ಕವನ ಸಂಕಲನಗಳು ಪ್ರಕಟವಾಗಿವೆೆ. ವಿವಿಧ ಕವಿಗೋಷ್ಠಿ, ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಿದ್ದಾರೆ. ಇವರ ಸಮಗ್ರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಕೊಂಕಣಿ ಸಾಹಿತ್ಯ ಅಕಾಡೆಮಿ, ದಾಯ್ಜಿ ದುಬ-2019 ಪ್ರಶಸ್ತಿ, ಕೊಂಕಣಿ ಕುಟುಮ್ ಬಹರೈನ್, ಸಂದೇಶ ಪ್ರತಿಷ್ಠಾನ ಮಂಗಳೂರು ಸಾಹಿತ್ಯ ಗೌರವ ಪ್ರಶಸ್ತಿ ನೀಡಿವೆ. ರಾಜ್ಯ ವಾರ್ತಾ ಇಲಾಖೆ ಇವರ ಬಗ್ಗೆ ಸಾಕ್ಷ್ಯ ಚಿತ್ರ ತಯಾರಿಸಿದೆ.

    ಕಳೆದ 56 ವರ್ಷಗಳಿಂದ ಸಾಹಿತ್ಯ ಸೇವೆ ಮಾಡುತ್ತಿದ್ದೇನೆ. ಕನ್ನಡ ಮತ್ತು ಕೊಂಕಣಿಯಲ್ಲಿ ಬರೆಯುತ್ತಿದ್ದೇನೆ. ಈಗ ಸರ್ಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಹಜವಾಗಿ ಸಂತೋಷ ತಂದಿದೆ. ಸರ್ಕಾರಕ್ಕೆ ಧನ್ಯವಾದ ಹೇಳಲೇ ಬೇಕು. ನನ್ನ 17ನೇ ವರ್ಷದಲ್ಲಿ ಮೊದಲ ಸಣ್ಣ ಕತೆ ಪ್ರಕಟವಾಯಿತು.
    – ವಲೇರಿಯನ್ ವಗ್ಗ

    ತಾಯ್ನಡನ್ನು ಮರೆಯದ ಕನ್ನಡಿಗ
    ವಿಟ್ಲ: ದ.ಕ. ಜಿಲ್ಲೆ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಕುಸುಮೋದರ ದೇರಣ್ಣ ಶೆಟ್ಟಿ ಚೆಲ್ಲಡ್ಕ (ಕೆ.ಡಿ.ಶೆಟ್ಟಿ) ಹಲವು ದಶಕಗಳಿಂದ ಮುಂಬೈಯಲ್ಲಿದ್ದುಕೊಂಡು ಸಾಮಾಜಿಕ ಸೇವೆಗಳನ್ನು ಮಾಡುತ್ತಿದ್ದಾರೆ.
    ಚೆಲ್ಲಡ್ಕಗುತ್ತು ದೇರಣ್ಣ ಶೆಟ್ಟಿ – ಭವಾನಿ ದೇರಣ್ಣ ಶೆಟ್ಟಿ ಪುತ್ರರಾದ ಇವರು, 1978ರಲ್ಲಿ ಮೆಸರ್ಸ್ ಮೆಟ್ ಕಾಪ್ ಆ್ಯಂಡ್ ಹಾರ್ಡ್ ಕಿಸ್ ಸನ್ ಶಿಪ್ಪಿಂಗ್ ಕಂಪನಿಯಲ್ಲಿ ಕೆಲಸ ಆರಂಭಿಸಿದ್ದು, 12 ವರ್ಷಗಳ ಸೇವೆ ಬಳಿಕ ಹಾರ್ಡ್ ಕೋರ್ ಶಿಪ್ಪಿಂಗ್ ಕಂಪನಿಯ ಮೆಸರ್ಸ್ ಟ್ರಾನ್ಸ್ ವರ್ಲ್ಡ್ ಗ್ರೂಪ್ ಆಫ್ ಕಂಪನಿಯಲ್ಲಿ 16 ವರ್ಷ ಎಕ್ಸಿಕೂಟಿವ್ ಜನರಲ್ ಮ್ಯಾನೇಜರ್ ಆಗಿದ್ದರು. 2007ರಲ್ಲಿ ತಾಯಿ ಭವಾನಿ ದೇರಣ್ಣ ಶೆಟ್ಟಿ ಹೆಸರಿನಲ್ಲಿ ಕಂಪನಿ (ಮುಂಬೈಯ ಭವಾನಿ ಶಿಪ್ಪಿಂಗ್ ಸರ್ವಿಸಸ್) ಪ್ರಾರಂಭಿಸಿದರು. ಸದ್ಯ ವಾಯು ಹಾಗೂ ಜಲ ಪ್ರದೇಶದ ಮೂಲಕ ಭಾರತದ 18 ವಲಯಗಳಲ್ಲಿ ಹಾಗೂ 4 ವಿದೇಶದಲ್ಲಿ ಕಂಪನಿ ಕಚೇರಿಯನ್ನು ವಿಸ್ತರಿಸಿದೆ.
    2006ರಲ್ಲಿ ಶಿಪ್ಪಿಂಗ್ ನೋಬಲ್ ಪ್ರಶಸ್ತಿ, 2011ರಲ್ಲ್ಲಿ ಸ್ವಸ್ತಿಶ್ರೀ ರಾಜ್ಯ ಪ್ರಶಸ್ತಿ ಸೇರಿ 7 ಸ್ವರ್ಣ ಪದಕದ ಪುರಸ್ಕಾರ ಹಾಗೂ ಹಲವು ಗೌರವಗಳನ್ನು ಪಡೆದಿದ್ದಾರೆ. ಭವಾನಿ ಫೌಂಡೇಶನ್ ಟ್ರಸ್ಟ್ ಸ್ಥಾಪಿಸಿ ಈ ಮೂಲಕ ರಕ್ತದಾನ ಶಿಬಿರ, ವೈದ್ಯಕೀಯ ಶಿಬಿರ, ಅದಿವಾಸಿ ಕಲ್ಯಾಣ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ನಿರುದ್ಯೋಗಿ ಯುವಕ- ಯುವತಿಕರಿಗೆ ಉದ್ಯೋಗ, ಶಿಕ್ಷಣಕ್ಕೆ ಆರ್ಥಿಕ ಸಹಾಯ, ಅತಿಬಡ ಯುವತಿಯರಿಗೆ ವಿವಾಹದ ಖರ್ಚು, ಮಂಗಳಸೂತ್ರ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

    ಕರ್ಮಭೂಮಿ ಮಹಾರಾಷ್ಟ್ರ ಆದರೂ ಜನ್ಮಭೂಮಿಯನ್ನು ಮರೆತಿಲ್ಲ. ತಾಯಿನಾಡು, ತಾಯಿ ಕೊಟ್ಟ ಊಟದ ರುಚಿಯೇ ಬೇರೆ. ಕನ್ನಡದ ಮಹಾತಾಯಿ ಕೊಟ್ಟ ವರಪ್ರಸಾದ ಬಹಳ ಸಂತಸವನ್ನು ಕೊಟ್ಟಿದೆ. 45 ವರ್ಷಗಳಿಂದ ಮುಂಬೈಯಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದು, ತಾಯಿ ಗುರುತಿಸಿ ದೊಡ್ಡ ಸ್ಥಾನಮಾನವನ್ನು ನೀಡಿದ್ದಾಗಿ ನಾನು ಭಾವಿಸುತ್ತೇನೆ. ವಿಟ್ಲ ಸೀಮೆಗೆ ಸಂದ ಗೌರವ ಇದು.
    – ಕುಸುಮೋದರ ದೇರಣ್ಣ ಶೆಟ್ಟಿ

    ಕಟೀಲು ಕ್ಷೇತ್ರ ನಾಗಸ್ವರ ವಾದಕ
    ಕಿನ್ನಿಗೋಳಿ: ಲಿಂಗಪ್ಪ ಶೇರಿಗಾರ ಕಟೀಲು ಅವರು ನಾಗಸ್ವರ ಕಛೇರಿಯಲ್ಲಿ ಹೆಸರು ಮಾಡಿದವರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಸ್ಥಾನ ನಾಗಸ್ವರ ವಾದಕರಾಗಿದ್ದು, ದೇವಳದ ವಾರ್ಷಿಕ ಉತ್ಸವ, ನವರಾತ್ರಿ ಮತ್ತಿತರ ಸಂದರ್ಭಗಳಲ್ಲಿ ಮಾತ್ರವಲ್ಲದೆ ಕೊಲ್ಲೂರು, ಸುಬ್ರಮಣ್ಯ, ಧರ್ಮಸ್ಥಳ, ವಿಶಾಖಪಟ್ಟಣದ ಅಂಜನೇಯ ದೇವಸ್ಥಾನ, ತಮಿಳುನಾಡಿನ ಮದುರೈ ಮತ್ತಿತರ ಕಡೆಗಳಲ್ಲಿ ನಾಗಸ್ವರ ಕಛೇರಿ ನೀಡಿದ್ದಾರೆ. ಕಾಂಚಿ ಕಾಮಕೋಟಿ ಮಠಾಧೀಶರು ಕಟೀಲಿಗೆ ಭೇಟಿ ನೀಡಿದ ಸಂದರ್ಭ ನಾಗಸ್ವರ ವಾದನವನ್ನು ಮೆಚ್ಚಿ ಬಂಗಾರದ ಪದಕ ನೀಡಿದ್ದರು. ಪಲಿಮಾರು ಸ್ವಾಮೀಜಿಯವರಿಂದ ನಾಗಸ್ವರ ವಿಶಾರದ ಪ್ರಶಸ್ತಿ ಸಹಿತ ಹಲವು ಗೌರವಗಳಿಗೆ ಲಿಂಗಪ್ಪ ಪಾತ್ರರಾಗಿದ್ದಾರೆ.

    ಕಟೀಲು ದುರ್ಗೆಯ ಆಶೀರ್ವಾದದಿಂದ ಈ ಪ್ರಶಸ್ತಿ ಸಿಕ್ಕಿದೆ. ರಾಜ್ಯ, ಹೊರ ರಾಜ್ಯ ಮತ್ತು ಹಲವು ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದೇನೆ, ಆಕಾಶವಾಣಿ ಮತ್ತು ದೂರದರ್ಶನ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದೇನೆ, ಹಲವಾರು ಅಭಿಮಾನಿಗಳು ಸೇವೆಗೆ ಅವಕಾಶ ಕಲ್ಪಿಸಿದ್ದಾರೆ, ಈ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ.
    – ಲಿಂಗಪ್ಪ ಶೇರಿಗಾರ ಕಟೀಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts