More

    ಕಾಂಗ್ರೆಸ್​ಗೆ ರಾಜ್ಯಸಭೆ ಅಭ್ಯರ್ಥಿ ಆಯ್ಕೆ ಸವಾಲು; ಮೂರು ಸ್ಥಾನ ಭರ್ತಿಗೆ ಅವಕಾಶ

    ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸೋಮವಾರದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್ ಸಭೆ ನಡೆಸಿ ಸಂಭಾವ್ಯರ ಪಟ್ಟಿಯನ್ನು ಸಿದ್ಧಪಡಿಸಲಿದ್ದಾರೆ.

    ಫೆ.15ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮೂರು ಸ್ಥಾನ ಭರ್ತಿ ಮಾಡಿಕೊಳ್ಳಲು ಕಾಂಗ್ರೆಸ್​ಗೆ ಅವಕಾಶವಿದೆ. ಪ್ರಸ್ತುತ 20ಕ್ಕಿಂತ ಹೆಚ್ಚು ಆಕಾಂಕ್ಷಿಗಳು ಮುಂದೆ ಬಂದಿದ್ದು, ವಿವಿಧ ಕೋಟಾದಡಿ ಬೇಡಿಕೆ ಮುಂದಿಟ್ಟಿದ್ದಾರೆ. ಮಠ ಮಾನ್ಯಗಳಿಂದ, ಉದ್ಯಮಿಗಳಿಂದ ಒತ್ತಡ ಹೇರಲಾರಂಭಿಸಿದ್ದಾರೆ. ಮೂರು ಸ್ಥಾನಗಳ ಪೈಕಿ ಒಂದು ಸ್ಥಾನ ಅಲ್ಪಸಂಖ್ಯಾತರಿಗೆ, ಒಂದು ಒಕ್ಕಲಿಗ ಮತ್ತೊಂದು ಪರಿಶಿಷ್ಟರಿಗೆ ಕೊಡಬೇಕೆಂದು ಚರ್ಚೆಯಾಗಿದೆ. ಅಲ್ಪಸಂಖ್ಯಾತ ಕೋಟಾದಿಂದ ಹಾಲಿ ಸದಸ್ಯ ನಾಸೀರ್ ಹುಸೇನ್ ಪುನರಾಯ್ಕೆ ಬಯಸಲಿದ್ದು, ಹೈಕಮಾಂಡ್ ಕಡೆಯಿಂದ ಭರವಸೆಯೂ ಸಿಕ್ಕಿದೆ. ಆದರೆ, ಕೊನೆ ಹಂತದ ಬದಲಾವಣೆ ಹೊರತುಪಡಿಸಿ ನಾಸೀರ್ ಪುನಃ ಕಣಕ್ಕಿಳಿಯುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

    ಇನ್ನೊಂದು ಸ್ಥಾನಕ್ಕೆ ಹೈಕಮಾಂಡ್ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದೆ. ಆರ್​ಬಿಐ ಮಾಜಿ ಗೌರ್ನರ್ ರಘುರಾಮ್ ರಾಜನ್, ವಕೀಲ ಹಾಗೂ ಪಶ್ಚಿಮ ಬಂಗಾಳದಿಂದ ರಾಜ್ಯಸಭೆ ಸದಸ್ಯರಾಗಿರುವ ಅಭಿಷೇಕ್ ಮನುಸಿಂಘ್ವಿ ಕರ್ನಾಟಕದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಪಕ್ಷದಲ್ಲಿ ಚರ್ಚೆಯಾಗುತ್ತಿದೆ. ಇದರ ಹೊರತಾಗಿ ಉಳಿಯುವ ಮತ್ತೊಂದು ಸ್ಥಾನ ಒಕ್ಕಲಿಗರಿಗೆ ಮೀಸಲಾಗಿಡಬೇಕೋ ಅಥವಾ ಪರಿಶಿಷ್ಟರಿಗೆ ಅವಕಾಶ ನೀಡಬೇಕೋ ಎಂಬುದನ್ನು ಪಕ್ಷದ ಪ್ರಮುಖರು ತೀರ್ವನಿಸಬೇಕಾಗಿದೆ.

    ರೇಸ್​ನಲ್ಲಿ ರಾಜೀವ್ ಗೌಡ, ಆರತಿ ಕೃಷ್ಣ ಹಾಗೂ ವಕ್ತಾರ ನಟರಾಜ ಗೌಡ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಸೋಮವಾರದ ಬಳಿಕ ನಡೆಯುವ ಸಭೆಯಲ್ಲಿ ರಾಜ್ಯ ಘಟಕದಿಂದ ಮೂರು ಹೆಸರುಗಳ ಪ್ಯಾನಸ್ ಸಿದ್ಧಪಡಿಸಿ ದೆಹಲಿಗೆ ಕಳಿಸಲಾಗುತ್ತದೆ. ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಜತೆ ಸಮಾಲೋಚನೆ ನಡೆಸಿ ಒಂದು ಹೆಸರು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುವುದು. ಅದೇ ರೀತಿ ಸಿಎಂ, ಡಿಸಿಎಂ ಸಭೆಯಲ್ಲಿ ನಿಗಮ, ಮಂಡಳಿಗೆ ಕಾರ್ಯಕರ್ತರ ಹೆಸರು ಅಂತಿಮಗೊಂಡಿರುವ ಪಟ್ಟಿಯನ್ನು ಮುಂದಿಟ್ಟುಕೊಂಡು ಅವರಿಗೆ ಯಾವ ನಿಗಮ, ಮಂಡಳಿ ನೀಡಬೇಕೆಂದು ಚರ್ಚೆ ನಡೆಸಿ ಅಂತಿಮಗೊಳಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts