ಜೈಪುರ: ಬಂಡಾಯ ಕಾಂಗ್ರೆಸ್ ಶಾಸಕರು ಪಕ್ಷಕ್ಕೆ ಮರಳಿದ ಹೊರತಾಗಿಯೂ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚಿಸಲು ಸಿಎಂ ಅಶೋಕ್ ಗೆಹ್ಲೋಟ್ ಮುಂದಾಗಿದ್ದಾರೆ.
ಈಗ ವಿಶ್ವಾಸ ಮತ ಯಾಚನೆ ನಡೆದಲ್ಲಿ ಇನ್ನಾರು ತಿಂಗಳವರೆಗೆ ಮತ್ತೊಮ್ಮೆ ಯಾರೂ ಅವಿಶ್ವಾಸ ಗೊತ್ತುವಳಿ ಮಂಡಿಸುವಂತಿಲ್ಲ. ಇದರಿಂದಾಗಿ ಕೊಂಚ ನೆಮ್ಮದಿ ದೊರೆಯಲಿದೆ. ಇದಲ್ಲದೇ ಪಕ್ಷದೊಳಗಿನ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಬಹುದು ಎಂಬುದು ಸಿಎಂ ಉದ್ದೇಶ ಎಂದು ಹೇಳಲಾಗಿದೆ.
ಇದನ್ನೂ ಓದಿ; ಹುದ್ದೆ ಬಯಸಿಲ್ಲ, ರಾಜಕೀಯ ಕಲಹಕ್ಕೂ ಅವಕಾಶವಿಲ್ಲ; ತಿಂಗಳ ಬಳಿಕ ಜೈಪುರ್ಗೆ ಮರಳಿದ ಸಚಿನ್ ಪೈಲಟ್
ಆಗಸ್ಟ್ 14ರಂದು ವಿಧಾನಸಭೆ ಕಲಾಪ ಆರಂಭವಾದ ಬಳಿಕವಷ್ಟೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಇನ್ನಷ್ಟು ಸಮಯದವರೆಗೆ ಶಾಸಕರನ್ನು ರೆಸಾರ್ಟ್ನಲ್ಲಿ ಹಿಡಿದಿಡಲು ಸಾಧ್ಯವಾಗದು ಎಂಬ ಅಂಶವೂ ಕೂಡ ಇದಕ್ಕೆ ಕಾರಣವೆನ್ನಲಾಗಿದೆ.
ಕಾಂಗ್ರೆಸ್ ಕೇಂದ್ರ ಪರಿವೀಕ್ಷಕರಾದ ರಣ್ದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಅಜಯ್ ಮಾಕನ್ ಕಳೆದ ಒಂದು ತಿಂಗಳಿನಿಂದ ಜೈಪುರ್ನಲ್ಲಿಯೇ ಬೀಡುಬಿಟ್ಟಿದ್ದಾರೆ. ಎಲ್ಲ ಬೆಳವಣಿಗೆಗಳ ಮೇಲೂ ಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ; ರಾಜಸ್ಥಾನದಲ್ಲಿ ತೇಪೆ ಹಚ್ಚಿದ್ರು, ಮಣಿಪುರದಲ್ಲಿ ಹೋಳಾಯ್ತು; 6 ಕಾಂಗ್ರೆಸ್ ಶಾಸಕರ ರಾಜೀನಾಮೆ, ಪಕ್ಷಕ್ಕೂ ಗುಡ್ಬೈ
ಸಚಿನ್ ಪೈಲಟ್ ಸೇರಿ ಬಂಡಾಯವೆದ್ದಿದ್ದ 19 ಶಾಸಕರು ಪಕ್ಷಕ್ಕೆ ಮರಳಿರುವುದರಿಂದ 200 ಸದಸ್ಯ ಬಲದ ವಿಧಾನಸಭೆಯಲ್ಲಿ ಪಕ್ಷೇತರರು ಹಾಗೂ ಇತರ ಪಕ್ಷಗಳ ಸಹಕಾರದೊಂದಿಗೆ ಕಾಂಗ್ರೆಸ್ ಒಟ್ಟು 125ಕ್ಕೂ ಅಧಿಕ ಶಾಸಕರ ಬೆಂಬಲ ಹೊಂದಿದಂತಾಗಲಿದೆ.