More

    ರಾಜಧರ್ಮ-ರಾಜನೀತಿ: ‘ದ್ರವಿಡವಾದದ’ ಶೋಚನೀಯ ಅವಸಾನವೇ?

    ‘ಪೆರಿಯಾರ್’ ಎಂದರೆ ‘ದೊಡ್ಡವರು’ ಎಂದರ್ಥ. ಯಾವುದರಲ್ಲಿ? ಓದು, ತಿಳಿವಳಿಕೆ, ಹಿತಚಿಂತನೆ, ಸರ್ವರ ಯೋಗಕ್ಷೇಮ ಭಾವ, ಇತಿಹಾಸದ ಸರಿಯಾದ ಅರಿವು, ಭವಿಷ್ಯದ ಭವ್ಯಕಲ್ಪನೆ, ಸಂಕುಚಿತೆಯಿಂದ ದೂರ, ಜಗತ್ತನ್ನು ನೋಡುವ, ಹಿರಿದಾದ ಒಳಗಣ್ಣು ಇದ್ದವರನ್ನು ‘ಪೆರಿಯಾರ್’ ಎನ್ನಬೇಕು.

    ರಾಜಧರ್ಮ-ರಾಜನೀತಿ: ‘ದ್ರವಿಡವಾದದ’ ಶೋಚನೀಯ ಅವಸಾನವೇ?ಸಮಾಜ ಸುಧಾರಣೆಯೇ ಬೇರೆ, ಸಮುದಾಯ ದ್ವೇಷದ ಪ್ರಚಾರ, ದ್ವೇಷಪೂರ್ಣ ಚಳವಳಿಗಳು-ಒಂದು ನಿರ್ದಿಷ್ಟ ಭಾಷೆ, ಸಂಸ್ಕೃತಿ, ಮಹಾಪುರುಷರ, ಒಂದು ಜಾತಿಯ ಬಗೆಗಿನ ಹಿಂಸಾಯುಕ್ತ ಅಪಪ್ರಚಾರವವೋ, ಜನರಲ್ಲಿ ವಿಷ ಬಿತ್ತುವ ಪ್ರಮಾದವೋ ಬೇರೆ. ಹಿಂದೂಧರ್ಮದ ವೈಶಿಷ್ಟ್ಯವೇ ಕಾಲಕಾಲಕ್ಕೆ ಇಲ್ಲಿ ಮಹಾಪುರುಷರುಗಳ ಅವತಾರ, ಮತ್ತು ಕಾಲ ಪ್ರಯುಕ್ತ ಹುಟ್ಟಿಕೊಂಡ ಕೆಟ್ಟ ಆಚರಣೆಗಳು, ದುರ್ವಿಚಾರಗಳು ಇವನ್ನು ಸುಧಾರಿಸುವವರು ಬೆಳೆದು ಬಂದ ಪರಂಪರೆಗಳು, ಧರ್ಮಕ್ಕೆ ತನ್ನನ್ನು ರಕ್ಷಿಸಿಕೊಳ್ಳುವ, ಆವಿಷ್ಕಾರ ಮಾಡಿಕೊಳ್ಳುವ, ವಿಕಾಸಶಕ್ತಿ ಇರುತ್ತದೆ. ಇದನ್ನು Self transformation ಎನ್ನುತ್ತೇವೆ. ಶರೀರದಲ್ಲೇ ಈ ಶಕ್ತಿ ಕಾಣುತ್ತೇವೆ. ಗಾಯವಾದರೆ, ಚರ್ಮಕ್ಕೆ ತನ್ನ ರಕ್ಷಣೆಯ ಶಕ್ತಿ ಅದರಲ್ಲೇ ಇರುತ್ತದೆ. ತಲೆನೋವು, ಜ್ವರ ಬಂದರೆ, ನಾಲ್ಕುದಿನ ಇದ್ದು ಹೋಗಲು ಕಾರಣ, ಶರೀರದ ಪ್ರತಿರೋಧ ಶಕ್ತಿ. ಇದು ಕಡಿಮೆಯಾದಾಗ ಹೊರಗಿಂದ ಚಿಕಿತ್ಸೆ, ಔಷಧಗಳು ಇರುತ್ತವೆ. ಹೊರತು, ಬರೀ ಔಷಧ, ಚಿಕಿತ್ಸೆಗಳಿಂದ ಆಯುಷ್ಯ ಬೆಳೆಯುವುದಿಲ್ಲ. ಆಹಾರವನ್ನು ಜೀರ್ಣಿಸಿಕೊಂಡು, ಅದನ್ನು ಕೆಂಪುರಕ್ತ ಮಾಡುವ ಗುಣ ಸತ್ತ ದಿನ ರೋಗಿ ಸಾಯುತ್ತಾನೆ. ಆರೋಗ್ಯವಂತನಿಗೆ ಚಿಕಿತ್ಸೆ ಬೇಕಾಗುವುದಿಲ್ಲ. ಸಮುದಾಯಕ್ಕೂ ಸುಧಾರಣೆ, ಹಾಗೆ ಬೇಕಾಗದ ಸಂದರ್ಭಗಳೂ ಇವೆ. ಚೆನ್ನಾಗಿರುವುದನ್ನು ಮೊದಲು ಕೆಡಿಸಿ, ಕೆಟ್ಟ ಮೇಲೆ ಔಷಧ ಮಾರಾಟದಿಂದ ಬದುಕುವ ರಾಕೆಟ್ ಎಂಬ ವಿಷಚಕ್ರಗಳು ಈಗ ಚಾಲ್ತಿಯಲ್ಲಿವೆ.

    ಬ್ರಿಟಿಷರು ಬಿಟ್ಟುಹೋಗುವ ಮುನ್ನ ಇಲ್ಲಿ ಅಂಥದ್ದು ಮಾಡಿ ವಿಷ ಬಿತ್ತಿ ಹೋದರು. ಅದು ಜಾತಿ, ಮತ, ಪಂಗಡಗಳ ಜಗಳ, ಅಂತರ್ಯುದ್ಧ ಹಾಗೂ ಆರ್ಯ-ದ್ರಾವಿಡವಾದಗಳ ರೂಪದಲ್ಲಿ ಭಾರತೀಯರನೇಕರ ಮಿದುಳಿಗೆ ಹತ್ತಿ, ಬ್ರೇನ್ ಫಿವರ್ ಆಗಿಯೇ ಆಗ ತಮಿಳುನಾಡಿನಲ್ಲಿ ಜಸ್ಟಿಸ್ ಪಾರ್ಟಿ ಉದಯವಾಯ್ತು. ಹಿಂದುಳಿದವರ ಅಭಿವೃದ್ಧಿ, ಶ್ರೇಯಸ್ಸು, ಅದಕ್ಕಾಗಿ, ನಾನಾ ಕಾರ್ಯಕ್ರಮಗಳನ್ನು ಸ್ವಾಗತಿಸಬೇಕಾದ್ದೇ. ರಾಜಾರಾಂ ಮೋಹನರಾಯರೂ, ಸ್ವಾಮಿ ದಯಾನಂದರೂ ಅದನ್ನೇ ಮಾಡಿದರು. ಜಾತಿಗಳನ್ನು ಒಂದರ ಮೇಲೊಂದು ಎತ್ತಿ ಕಟ್ಟಿ ರಾಜಕೀಯ ಮಾಡಲಿಲ್ಲ. ಅವರು ಸುಸಂಸ್ಕೃತರೂ, ಪಂಡಿತರೂ, ಸಮುದಾಯ ಸಮಗ್ರತೆಗೆ ದೀಕ್ಷಿತರೂ, ಹಿಂದೂ ಕಲ್ಪನೆಯ ಪೂರ್ಣತೆಯಾಚೆಯ ನುರಿತ ಸೇನಾನಿಗಳೂ ಆಗಿದ್ದರು. ವಿವೇಕಾನಂದರೂ, ರಾಮಕೃಷ್ಣ ಸಂಘವೂ ಅಂಥ ಸುಧಾರಕರ ತಂಡವನ್ನೇ ನಿರ್ವಿುಸಿದ್ದು ಉಪಕಾರಕ, ಶ್ಲಾಘ್ಯ. ಇವರಾರೂ ‘ತುಕ್ಡೇ ತುಕ್ಡೇ’ ಮನಸ್ಥಿತಿಯ ರೋಗಿಗಳಿರಲಿಲ್ಲ, ಗಾಂಧಿಯವರೂ-ರಾಜಕೀಯ ಅನಾಹುತಗಳೇನೇ ಮಾಡಿರಲಿ-ಹರಿಜನೋದ್ಧಾರ, ಗ್ರಾಮ ನೈರ್ಮಲ್ಯ, ಸ್ವದೇಶೀ, ಸರಳತೆ ಇಂಥ ಧ್ಯೇಯಗಳಿಗೆ ಅರ್ಪಿಸಿಕೊಂಡರು. ಇವರ ದಾರಿಯೇ ಬೇರೆ. ಅಂಬೇಡ್ಕರರೂ ವಿದ್ವಾಂಸರೂ, ದಲಿತೋದ್ಧಾರದೀಕ್ಷಿತರೂ ಆಗಿ ಬರೆದರು, ದುಡಿದರು, ಒಳ್ಳೆಯ ಕೆಲಸ ಮಾಡಿದರು.

    ತಮಿಳುನಾಡಿನಲ್ಲಿ ಇದು ಹಾಗಾಗಲಿಲ್ಲ! ಬುದ್ಧಿವಂತರ ದೇಶ, ಸಂಗೀತ, ನೃತ್ಯ, ಸಾಹಿತ್ಯ, ಸಂಸ್ಕೃತಿ, ಶಿಲ್ಪಿಗಳ ತವರೂರೆಂದೇ ಖ್ಯಾತಿಯಾದ ತಮಿಳುನಾಡಿನಲ್ಲಿ ‘ಸಂಘ’ಕಾಲದಿಂದ ಹಿಡಿದು ಪಲ್ಲವ, ಪಾಂಡ್ಯ, ಚೋಳರ ಅಭಿವೃದ್ಧಿ ಕಾರ್ಯಗಳು ಇಂದೂ ಕಾಣುತ್ತಿವೆಯಷ್ಟೆ? ಅಲ್ಲಿ ಶ್ರೀರಾಮದ್ವೇಷ, ರಾಮಾಯಣದ್ವೇಷ, ಸಂಸ್ಕೃತದ್ವೇಷ, ಬ್ರಾಹ್ಮಣದ್ವೇಷ, ವಿಗ್ರಹಭಂಜನ, ಬೆದರಿಸುವುದು, ದ್ವೇಷವನ್ನು ನಡುಬೀದಿಯಲ್ಲಿ ಹರಡುವ ಹೇಟ್ ಸ್ಪೀಚ್ ಮಾಡುವುದು ಇವು ಹೇಗೆ ಸುಧಾರಣೆಯೋ?

    ಸುಸಂಸ್ಕೃತರು, ನಾಗರಿಕರೂ, ‘ಸಂವಿಧಾನ’ವೇ ಪ್ರಮಾಣವೆಂಬ ಶ್ರದ್ಧಾಳುಗಳೂ ಈಗಲಾದರೂ ಯೋಚಿಸಿ, ತೀರ್ವನಿಸಬೇಕಾಗಿದೆ. ತಮಿಳುನಾಡಿನ ರಾಜಕಾರಣದ ಆರೋಗ್ಯ, ಜನತೆಯ ಗೌರವ, ಸುರಕ್ಷೆ, ಸಮಸ್ತ ಭಾರತದ ಪ್ರತಿಷ್ಠೆ, ಅಸ್ತಿತ್ವ, ಸ್ವಂತಿಕೆಗಳಿಗೆ ತಮಿಳುನಾಡು ತಾನೇ ಕೊಡಲಿಯಾಗಬಹುದೆ? ಎಂಬುದನ್ನು ಅರವತ್ತು ವರ್ಷ ಕಾಲ ಯಾರೂ ಯೋಚಿಸಲಿಲ್ಲ. ಇಂದಿನ ಅಲ್ಲಿನ ಅಧಃಪತನಕ್ಕೆ ತಮಿಳು ನಾಯಕರ ಕುರುಡುತನವೇ ಕಾರಣ ಹೊರತು ಕೇಂದ್ರವೋ, ಬೇರಾರೋ ಅಲ್ಲ ಎಂಬುದು ಈಗ ಬಯಲಾಗಬೇಕಾಗಿದೆ, ಬಯಲಾಗುತ್ತಿದೆ. ಜನತೆಗೆ ಹುಚ್ಚು ಹಿಡಿಯುವುದು ಯಾವುದೇ ದುರ್ವಾದಗಳು ಜನಪ್ರಿಯವಾದಾಗ! ಆ ದುರ್ವಾದ, ಭಾರತದ್ವೇಷ ಹೇಗೆ ಪಾಕಿಸ್ತಾನವನ್ನು ಇಂದು ಯಾವ ಸ್ಥಿತಿಗೆ ತಂದಿದೆಯೆಂದು, ನೋಡಿದ ಮೇಲೂ, ಆ ಪರಿಸ್ಥಿತಿ, ತಮಿಳುನಾಡಿಗೆ, ಕೇರಳಕ್ಕೆ ಹಾಗೂ ಪಶ್ಚಿಮ ಬಂಗಾಳಕ್ಕೆ, ಕಾಶ್ಮೀರಾದಿಗಳಿಗೆ ಬರಬಹುದೆ? ಎಂದು ಬುದ್ಧಿಯಿದ್ದವರು ಚಿಂತಿಸಿ, ಕಾರ್ಯಪರರಾಗಬೇಕಾದ ಪರಿಪಕ್ವ ಕಾಲ ಇದು.

    ‘ಪೆರಿಯಾರ್’ ಎಂದರೆ ‘ದೊಡ್ಡವರು’ ಎಂದರ್ಥ. ಯಾವುದರಲ್ಲಿ? ಓದು, ತಿಳಿವಳಿಕೆ, ಹಿತಚಿಂತನೆ, ಸರ್ವರ ಯೋಗಕ್ಷೇಮ ಭಾವ, ಇತಿಹಾಸದ ಸರಿಯಾದ ಅರಿವು, ಭವಿಷ್ಯದ ಭವ್ಯಕಲ್ಪನೆ, ಸಂಕುಚಿತೆಯಿಂದ ದೂರ, ಜಗತ್ತನ್ನು ನೋಡುವ, ಹಿರಿದಾದ ಒಳಗಣ್ಣು ಇದ್ದವರನ್ನು ‘ಪೆರಿಯಾರ್’ ಎನ್ನಬೇಕು. ಅವರವರ ಜಾತಿಗೆ ಅವರವರು ಹಿರಿಯರಿದ್ದು, ಹಾಗೇ ಜಾತಿಮುಖಂಡರನ್ನು ಕರೆಯಬಹುದೇ? ಎಂಬುದು ಚಿಂತನೀಯ. ಸಾಕ್ರೆಟೀಸ್, ಪ್ಲೇಟೋ, ಎಮರ್ಸನ್, ಶೇಕ್ಸ್​ಪಿಯರ್, ಜೆಫರ್ ಸನ್ ಇಂಥ ಪಾಶ್ಚಾತ್ಯರನ್ನೂ ಭಾರತದ ವ್ಯಾಸ, ವಾಲ್ಮೀಕಿಗಳನ್ನೂ ಹಾಗೆ ಕರೆದರೆ ತಕರಾರಿಲ್ಲ. ಭಾರತದ ಮಹಾಪುರುಷರನ್ನೇ ಅವಮಾನಿಸುವ, ಕೀಳುಬುದ್ಧಿಯ ಅಜ್ಞಾನಿಗಳನ್ನೂ, ದ್ವೇಷಿಗಳನ್ನೂ ಹೇಗೆ ಸಮೀಕರಿಸುತ್ತೀರಿ? ಪೆರಿಯಾರರು, ಸ್ವಾತಂತ್ರ್ಯ ಬಂದ ಕಾಲದಲ್ಲಿ ಪ್ರತ್ಯೇಕ ‘ದ್ರವಿಡಸ್ಥಾನ’ ಬೇಕೆಂಬ ಚಳವಳಿ ಹೂಡಿದರು. ಇದು ‘ತುಕ್ಡೇ ತುಕ್ಡೇ’ ಚಿಂತನೆಯಲ್ಲವೇ?

    ‘ಪಂಚದ್ರಾವಿಡ’ ಎನಿಸಿದ ಕರ್ನಾಟಕ, ಆಂಧ್ರ, ಮಲೆಯಾಳ, ತುಳು, ತಮಿಳು ಸೇರಿ ಹಾಗೊಂದು ಪರಿಭಾಷೆ ಇದ್ದದ್ದು ನಿಜ. ದ್ರವಿಡ=ದ್ರಮಿಳ=ತಮಿಳ ಎಂಬ ನಿಷ್ಪತ್ತಿಯಲ್ಲಿ ‘ದ್ರವ್ಯ’ಸಂಪತ್ತು ಸಮೃದ್ಧಿಯಿದ್ಧ ಭಾರತದ ದಕ್ಷಿಣಭಾಗಕ್ಕೆ ಅಂದು, ಯಾವತ್ತೋ ಈ ಅಂಟುಶಬ್ದ ಅಂಟಿಕೊಂಡಿತ್ತು. ಈ ಬಗ್ಗೆ ಗೋವಿಂದ ಪೈ ಅವರು ಒಂದು ಆಯಾಮ ತೆರೆದು, ಬರೆದದ್ದು, ಹಳೆಯ ದಾಖಲೆ. ಹಾಗೆಯೇ ‘ಪಂಚಗೌಡ’ ಪ್ರದೇಶಗಳೂ ಹಿಂದೆ ಖ್ಯಾತಿ ಹೊಂದಿದ್ದವು. ಬಂಗಾಳ, ಬಿಹಾರ (ಮಗಧ), ವಿದರ್ಭ, ವೈಶಾಲೀ, ಇಂಥ ಭಾಗಗಳೆಲ್ಲ ಅಂದು ‘ಪಂಚಗೌಡ’ ಗಳಾಗಿದ್ದವು. ಇಲ್ಲಿ ‘ಗೌಡ’ರೆಂದರೆ ಮಂಡ್ಯದವರೇ? ಹಾಸನದವರೇ? ಗೌಡ=ಗುಣ ಎಂಬ ಕಬ್ಬು, ಸಕ್ಕರೆಗಳಿಂದ ಉಪೇಕ್ಷಿತವಾದ, ಭತ್ತ, ಇತರ ಆಹಾರ ಸಮೃದ್ಧಿಯಿದ್ದ ಗಂಗೆಯ ತಡಿಯ ‘ಬೆಲ್ಟ್’ ಎಂಬ ಭಾಗಗಳೂ ಸಮೃದ್ಧ ಎಂದು ಆಗ ಪರಿಭಾಷೆ.

    ಭಾರತದ ಖನಿಜಸಂಪತ್ತು, ವನ್ಯಸಂಪತ್ತು, ಜಲಸಂಪತ್ತು, ದುಡಿಮೆ ಎಂಬ ಸಂಪತ್ತು, ಕೃಷಿಸಂಪತ್ತು, ಗೋಸಂಪತ್ತು ಆಗ ಖ್ಯಾತವಾಗಿರುತ್ತ, ಭಾಷೆಯಲ್ಲಿ ಗುರುತಿಸುವಾಗ ಹೀಗೆ ಶಬ್ದಗಳು ಹುಟ್ಟುತ್ತವೆ. ಸಂಸ್ಕಾರಸಂಪನ್ನರನ್ನು ‘ಆರ್ಯ’ ಎಂದು ಕರೆಯುತ್ತಿದ್ದು, ಆ ಶಬ್ದದ ತದ್ಭವವೇ ‘ಅಯ್ಯ, ಅಜ್ಜ’ ಎಂಬುವು. ಗೋಪಾಲಾರ್ಯ=ಗೋಪಾಲಯ್ಯ ಎಂಬ ಬಗೆಯ ಸಮಿಕರಣವನ್ನು ಮುಮ್ಮಡಿ ಕೃಷ್ಣರಾಜ ಒಡೆಯರ ದಾನಪತ್ರಗಳಲ್ಲೂ, ಜಹಗೀರು, ದತ್ತಿ, ಉಂಬಳಿಗಳ ಬರಹಗಳಲ್ಲೂ ಕಾಣುತ್ತೇವೆ. ಬ್ರಿಟಿಷರು ‘ಆರ್ಯ ದ್ರಾವಿಡ’ ಶಬ್ದಗಳನ್ನು ಜನಾಂಗೀಯವನ್ನಾಗಿ ತಿರುಚಿ, ಅದು ತುಂಬ ಅನರ್ಥ ಮಾಡಿತ್ತು. ಹಿಟ್ಲರನು ‘ಆರ್ಯ’ ಎನಿಸಿಕೊಂಡು, ‘ಜರ್ಮನ್= ಶರ್ಮನ್’ ಸಮೀಕರಣ ಮಾಡಿ, ವಿಶ್ವಯುದ್ಧ ಮಾಡಿ, ಜನಾಂಗೀಯ ಹಿಂಸೆಯಲ್ಲಿ ಕೋಟಿಗಟ್ಟಳೆಯ ಹುಚ್ಚರನ್ನು ಕೊಂದ. ಏಕೆ? ಅವರು ‘ಆರ್ಯರಲ್ಲ’! ಅದರ-ಹಿಟ್ಲರಿನ ದುಷ್ಕಲ್ಪನೆಯ- ಇನ್ನೊಂದು ಮುಖ ಈ ‘ದ್ರಾವಿಡ’ ವಾದವಾಗಿ, ಪೆರಿಯಾರ್ ಎಂಬವರು ಎಲ್ಲಿ, ಏಕೆ, ಹೇಗೆ ಸಲ್ಲುತ್ತಾರೆಂದು ಕಾಣಿರಿ!

    ಹರಪ್ಪ ಮೊಹೆಂಜೋದಾರೊಗಳ ಅವಶೇಷಗಳು ದ್ರಾವಿಡ ಮೂಲವೆಂದೂ, ಅಲ್ಲಿ ಸಿಂಧೂ ಸಂಸ್ಕೃತೀ ತೀರದ ದ್ರಾವಿಡರನ್ನು ‘ಆರ್ಯರು’ ಮಧ್ಯ ಏಷ್ಯಾದಿಂದ ಬಂದು ಇತ್ತ ದಕ್ಷಿಣಕ್ಕೆ ಓಡಿಸಿದರೆಂದೂ ಸರ್ ಜಾನ್ ಮಾರ್ಷಲ್ ಎಂಬ ಅವಿವೇಕೀ, ಉತ್ಖನನದ ಹಿನ್ನೆಲೆಯಲ್ಲಿ ತಪು್ಪ ವ್ಯಾಖ್ಯಾನಿಸಿ, ಸಿಂಧೂಲಿಪಿಯನ್ನು ಬಗೆಹರಿಸಲಾಗದೆ, ಆರ್ಯರು ಅನಾಗರಿಕರೆಂದೂ, ‘ಪುರಧ್ವಂಸಿಗಳೆಂದೂ’, ಅಲೆಮಾರಿಗಳೆಂದೂ ವಿಷ ಬಿತ್ತಿದ. ‘ಅವರು ಹೊರಗಿಂದ ಬಂದವರಾದರೆ, ನಾವು ಬ್ರಿಟಿಷರೂ ಹೊರಗಿನಿಂದ ಬಂದು ಆಕ್ರಮಿಸಲು ನಿಮ್ಮ ಇತಿಹಾಸವೇ ಪ್ರಮಾಣಿಸುತ್ತದೆ’ ಎಂಬ ಬ್ರಿಟಿಷರ ಆಕ್ರಮಣನೀತಿಗೆ ಇದು ದುರದ್ದೇಶಪೂರ್ವವಾಗಿ ಹೆಣೆಯಲ್ಪಟ್ಟ ದುರ್ವಾದ! ‘ದ್ರಾವಿಡ ಭಾಷಾಶಾಸ್ತ್ರ’ ಎಂಬ ಒಂದು ಆಯಾಮ ಇಂಬುಗೊಡುವಂತೆ ಹುಟ್ಟಿದ್ದೂ ಹೀಗೇ. ಈಚೆಗೆ ನಮ್ಮ ಕರ್ನಾಟಕದ ನವರತ್ನ ರಾಜಾರಾಂ ಮತ್ತು ನಟವರ್, ಓಝಾ ಎಂಬ ಮಹನೀಯರು ಸಿಂಧೂ ಲಿಪಿಯನ್ನು ಬಗೆಹರಿಸಿ, ಅದು ಸಂಸ್ಕೃತವೆಂದೂ, ಅಲ್ಲಿ ನೂರಾರು ಶಬ್ದಗಳನ್ನೂ ಗುರುತಿಸಿ, ಇತಿಹಾಸ ಪರಾಮರ್ಶೆಯ, ಮಹಾಗ್ರಂಥವನ್ನೇ ಬರೆದಿದ್ದಾರೆ. (ಆದಿತ್ಯ ಪಬ್ಲಿಕೇಶನ್, ನವದೆಹಲಿ) ಸನರ್ಪರೀ ಎಂಬುದು ವೇದಕಾಲದ ಲಿಪಿ. ಅದೇ ಮುಂದೆ, ಸೌರೀ, ಗಾಣೇಶೀ, ಬ್ರಾಹ್ಮಿ, ದೇವನಾಗರಿಯಾಯ್ತು. ‘ಜಮದಗ್ನಿಯು ವಿಶ್ವಾಮಿತ್ರರ ಕಪಟ ಬ್ರಾಹ್ಮಣ್ಯವನ್ನು ಅವರು ‘ಸನರ್ಪರೀ’ ಲಿಪಿ ಓದಲಾಗದೆ, ಬಯಲು ಮಾಡಿದರು’ ಎಂದು ಋಗ್ವೇದ ಹೇಳುತ್ತದೆ. ‘ಸನರ್ಪರೀ’ ಎಂದರೆ ಹಾವಿನಂತೆ ಓಡಾಡಿ, ಎಳೆಯಲ್ಪಟ್ಟು ಬರೆಯುವ ಒಂದು ಶೈಲಿಯ ಲಿಪಿ. ‘ಮೋಡಿ’, ‘ವೈದಿಕಾಕ್ಷರ ಎಂದು ಆಗ ಖ್ಯಾತಿ.

    ಪೆರಿಯಾರರು ವಿದ್ವಾಂಸರಿದ್ದರೇ? ಜವಾಬ್ದಾರಿಯುತ ಚಳವಳಿಗಾರರಾಗಿದ್ದರೆ? ತಿಳಿಯದು. ಯಾರೋ ದುರ್ವಾದ ಹುಟ್ಟುಹಾಕಿದರು. ಇವರು ಚಳವಳಿಗೆ ಧುಮುಕಿದರು. ‘ಹಿಂದೂ’ ಸಮಗ್ರತೆಯ ಕಲ್ಪನೆಯ ವಿರುದ್ಧ ಹೋರಾಡಿದರು. ಹಿಂದೂದ್ವೇಷ ಕ್ರಮೇಣ, ಕ್ರೖೆಸ್ತ ಮಿಷನರಿಗಳಿಗೂ, ಇಸ್ಲಾಮಿ ಮತಾಂತರಕ್ಕೂ ಪೂರಕವಾಗಿ, ಅಂದಿನ ಚೇಷ್ಟೆ, ತಮಿಳುನಾಡಿನ ಶತ್ರುವನ್ನೇ ‘ಉಲ್ಲಟ’ (ಉಲ್ಟಾ) ಮಾಡಿದೆ. ಜ್ಞಾನಿಗಳಾದ ರಾಜಾಜಿಯವರೂ, ಅಣ್ಣಾದೊರೈ ಕಾಲದಲ್ಲಿ ದ್ರವಿಡವಾದವು ಕಾಂಗ್ರೆಸ್ಸಿನ ವಿರುದ್ಧ ಅಧಿಕಾರಕ್ಕೆ ಬರುವಂತೆ ಸಹಾಯ ಮಾಡಿ ಬಿಟ್ಟರು! ಯಾರು ವಾಸಿ! ಕಾಂಗ್ರೆಸ್ಸೊ? ಡಿಎಂಕೆ, ಎಐಎಡಿಎಂಕೆ, ಪಿಎಂಕೆ ಮುಂತಾದವೋ? ಜಯಲಲಿತಾ ದುರಂತಕ್ಕೆ ಯಾರು ಕಾರಣ? ‘ತಮಿಳಿಗೆ ಆಪತ್ತು’ ಎಂಬ ಕೂಗಿನಲ್ಲಿ ನೂರಾರು ಜನ ಪೆಟ್ರೋಲು ಸುರಿದುಕೊಂಡು ಸತ್ತರಲ್ಲ, ಇದು ಈ ಹಿಂಸಾಚಾರ, ಹಿಂದೂ ವಿರುದ್ಧ, ಉತ್ತರ ಭಾರತ ವಿರುದ್ಧ.

    ಇನ್ನೊಂದು ಮುಖ-ಶ್ರೀಲಂಕಾದ ಎಲ್​ಟಿಟಿಇ ಪ್ರಭಾಕರನ್​ಗೂ ಈ ದ್ರವಿಡ್ ಹುಚ್ಚು ಹತ್ತಿಯೇ ‘ಲಂಕಾದಹನ’, ಹತ್ಯಾಕಾಂಡ ನಡೆದು ಲಕ್ಷಾಂತರ ಜನ ಸತ್ತರು. ಆಸ್ತಿ ಲೂಟಿಯಾಯ್ತು, ದೇಶ ಒಡೆಯಿತು, ನಾಯಕರೇ ಕೊಲ್ಲಲ್ಪಟ್ಟರು. ಈಗಲಾದರೂ ಯೋಚಿಸಿ. ಇದು ಕ್ರೖೆಸ್ತರಿಗಲ್ಲದೆ ಕಮ್ಯುನಿಷ್ಟರಿಗೂ ಕುಮ್ಮಕ್ಕಾಗಿ, ಇಲ್ಲಿ ಕರ್ನಾಟಕದ ‘ಅಹಿಂದ’ ಪ್ರತ್ಯೇಕತಾವಾದಕ್ಕೂ ಸುಸಂಸ್ಕೃತಿಯ ದ್ವೇಷಕ್ಕೂ, ದೇಶಾದ್ಯಂತ ಹರಡಿರುವ ಐಎಸ್​ಐಎಸ್, ಪಿಎಫ್​ಐ, ಇತ್ಯಾದಿ ಪಾಕ್, ಸಿರಿಯಾ ಮೂಲಗಳ, ದೇಶನಾಶಕ ‘ತುಕ್ಡೇ ತುಕ್ಡೇ’ ಚಳವಳಿಗೂ ಸಹಾಯವಾದದ್ದು, ಪೆರಿಯಾರರ ಅವಾಂತರ, ಪೆರಿಯಪುರಾಣ ಸೃಷ್ಟಿಸಿರುವ ಮರಣಾಂತಿಕ ಪರಿಸ್ಥಿತಿಗೆ ಅಳುವವರಾರು?

    ತಮಿಳುನಾಡು ಸ್ವಂತಿಕೆಗೆ ಮರಳಬೇಕು. ತಮಿಳರು ಪ್ರಾಚೀನ ಸಂಸ್ಕೃತಿಯಿತ್ತ ಮಾತ್ರ ಸಾರ್ಥಕ ಅಭಿಮಾನವನ್ನು ಪಡೆಯಬೇಕು. ಅವಿಭಾಜ್ಯ ಭಾರತಸಂಸ್ಕೃತಿಯ ಹೆಮ್ಮೆಯ ಕೊಡುಗೆಗಳಲ್ಲಿ ತಮ್ಮದೂ ಸಿಂಹಪಾಲಿದೆ ಎಂದು ಅಭಿಮಾನ ಪಡಬೇಕು. ಹೆಚ್ಚು ಓದದ ಕಾಮರಾಜ ನಾಡಾರರ ದಾರಿಯಲ್ಲಿ ಮೌನವಾಗಿ ಆ ಪ್ರಾಂತ್ಯವನ್ನು ಮುನ್ನಡೆಸಬೇಕು. ಅರ್ಥಾತ್ ಪೆರಿಯಾರರು ನೇಪಥ್ಯಕ್ಕೆ ಸರಿಯಬೇಕು. ಇತಿಹಾಸದಲ್ಲಿಯೂ ರಂಗಭೂಮಿಯಿರುತ್ತದೆ, ನೇಪಥ್ಯವೂ ಇರುತ್ತದೆ. ಅಪಥ್ಯಗಳು ತೆರೆಯ ಹಿಂದೆ ಹೋಗುತ್ತ ನಾಟಕವು ರಸಪ್ರದರ್ಶನ ಮಾಡುವಾಗ, ಆಟ ಅಮರವಾಗುತ್ತದೆ. ನಟ ಅಮರನಾಗುತ್ತಾನೆ.

    ಭಾಷೆ, ನದಿ, ಸಂಸ್ಕೃತಿ, ಮಹಾಪುರುಷರ ಬಗ್ಗೆ ತಕರಾರು ಎತ್ತುವ ಬುದ್ಧಿ ಯಾರಿಗೂ ಒಳ್ಳೆಯದಲ್ಲ. ‘ತಮಿಳರು’ ಎಂದರೆ ಭಾರತದ ಇತರರು ಭಯಪಡುವ ಕಾಲ ಮುಗಿಯಿತು. ಕರುಣಾನಿಧಿ, ಅವರ ಕುಟುಂಬ, ಎಷ್ಟೊಂದು ಆಸ್ತಿ ಮಾಡಿಕೊಂಡರು! ‘ದ್ರವಿಡವಾದ’ ಅವರಿಗೆ ಬಂಡವಾಳವಾಯ್ತು, ವರವಾಯ್ತು! ಭಾರತೀಯರು ಭಾರತೀಯರೇ ಆದರೆ ತಮಿಳರೂ ಭಾರತೀಯರೇ ಆಗಬೇಕಲ್ಲ? ಈ ಬುದ್ಧಿ ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ, ಈಶಾನ್ಯ ರಾಜ್ಯಗಳಲ್ಲಿ ಉದಿಸಿದೆ.

    ‘ದ್ರವಿಡ್ ಪ್ರತ್ಯೇಕತಾವಾದವೂ’ ಒಂದೇ, ಕಾಶ್ಮೀರ ಪ್ರತ್ಯೇಕತಾವಾದವೂ ಒಂದೇ. ‘ದ್ವಿರಾಷ್ಟ್ರವಾದವೂ’ ಒಂದೇ, ಒಬ್ಬ ಜಿನ್ನಾ ಮಾಡಿದ್ದೇ ಜೀರ್ಣವಾಗದೇ ಇರುವಾಗ, ನೂರಾರು ಪೆರಿಯಾರರು ಏಕೆ ಬೇಕಯ್ಯ? ಈಗ ಎನ್​ಆರ್​ಸಿ, ಸಿಎಎ ವಿರುದ್ಧದ ಹೋರಾಟಕ್ಕೂ, ಎಲ್ಲ ಬಗೆಯ ಪ್ರತ್ಯೇಕತಾವಾದಿಗಳಿಗೂ ಕೊಂಡಿ ಇರುವುದು ಕಾಣುತ್ತದೆಯೇನಿರಯ್ಯ? ಜಯಲಲಿತಾ-good administration ಇದ್ದೂ ಬಲಿಯಾದದ್ದು. ಜನತೆಗೇ ಹುಚ್ಚು ಹಿಡಿದಾಗ! ಈಗ ತಮಿಳರಿಗೆ ಸಮರ್ಥ ನಾಯಕರು ಬೇಕು. ರಜನಿಕಾಂತ್ ಆಗಬಲ್ಲರೇ? ಕಮಲ್ ಹಾಸನ್ ಹುಸಿಯಾದದ್ದು ಈಗ ರೋಗಗ್ರಸ್ತವಾದದ್ದೂ ಅಂತರ್ಜಾಲದಲ್ಲಿದೆ. ಹಿಂದೂಗಳು ಅಲ್ಲಿ ಜಾಗೃತರಾಗಿದ್ದಾರೆ. ಸಮಗ್ರತೆಗೆ ‘ಹಿಂದೂ’ ಕಲ್ಪನೆಯೇ ಮಹಾ ಮದ್ದು. ಆರ್ಯ, ದ್ರಾವಿಡ, ಎಲ್ಲ ಅದರೊಳಗೆ! ಶತ್ರುಗಳು ನಿರಾಸೆ ಹೊಂದಲಿ. ಜೈ ತಮಿಳುನಾಡು, ಜೈ ಭಾರತ್! ಜೈಶ್ರೀರಾಂ!

    (ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts