More

    ಗಾಳಿ ಸಹಿತ ಗುಡುಗು, ಮಳೆ ಅಬ್ಬರ, ಗ್ರಾಮಾಂತರ ಭಾಗದಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯ

    ಮಂಗಳೂರು/ಕಡಬ: ಕೆಲವು ದಿನಗಳಿಂದ ದೂರವಾಗಿದ್ದ ಮಳೆ ದೀಪಾವಳಿಗೆ ಮತ್ತೆ ಕಾಣಿಸಿಕೊಂಡಿದೆ. ದ.ಕ. ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಶುಕ್ರವಾರ ಸಾಯಂಕಾಲ, ರಾತ್ರಿ ವೇಳೆ ಭಾರಿ ಗಾಳಿ ಸಹಿತ ಗುಡುಗು-ಮಿಂಚಿನೊಂದಿಗೆ ಮಳೆ ಸುರಿದಿದೆ.
    ಪುತ್ತೂರು, ಬೆಳ್ತಂಗಡಿ, ಕಡಬ ತಾಲೂಕಾದ್ಯಂತ ಸಾಯಂಕಾಲ ಸಿಡಿಲಬ್ಬರ ಜತೆ ಮಳೆ ಜೋರಾಗಿತ್ತು. ಹಲವೆಡೆ ವಿದ್ಯುತ್ ಕಂಬ, ಮರ-ಕೊಂಬೆಗಳು ಮುರಿದುಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ.

    ಸುಬ್ರಹ್ಮಣ್ಯ- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಸುಂಕದಕಟ್ಟೆ ಎಂಬಲ್ಲಿ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬ ಮುರಿದು ವಾಹನ ಸಂಚಾರಕ್ಕೆ ತೊಡಕಾಯಿತು. ಬಿಳಿನೆಲೆಯಲ್ಲಿ ರಸ್ತೆ ಬದಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನದ ಮೇಲೆ ಮರ ಬಿದ್ದು ಹಾನಿಯಾಗಿದೆ. ರಾತ್ರಿ ವೇಳೆ ಮಂಗಳೂರು ನಗರ ಮತ್ತು ಆಸುಪಾಸಿನ ಪ್ರದೇಶದಲ್ಲಿಯೂ ಅಬ್ಬರದ ಗುಡುಗು-ಮಿಂಚು ಸಹಿತ ಮಳೆಯಾಗಿದೆ.

    ಪುತ್ತೂರಿನ ನಿಡ್ಪಳ್ಳಿಯಲ್ಲಿ ಅತ್ಯಧಿಕ 52 ಮಿ.ಮೀ ಮಳೆ ಸುರಿದಿದ್ದು, ಉಳಿದಂತೆ ಬೆಳ್ತಂಗಡಿ 46, ಪುದುವೆಟ್ಟು 41, ಲಾಲ 28.5, ಬೆಟ್ಟಂಪಾಡಿಯಲ್ಲಿ 28 ಮಿ.ಮೀ. ಮಳೆಯಾಗಿದೆ. ಇನ್ನು ಎರಡು ಮೂರು ದಿನ ಸಾಯಂಕಾಲದ ಬಳಿಕ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಳಗ್ಗಿನ ಚಳಿಯ ಕಚಗುಳಿ ಶುಕ್ರವಾರ ಸ್ವಲ್ಪ ಕಡಿಮೆಯಾಗಿತ್ತು.

    ಮರ ಬಿದ್ದು ಸಂಚಾರಕ್ಕೆ ತೊಡಕು: ಶುಕ್ರವಾರ ಸುರಿದ ಧಾರಾಕಾರ ಮಳೆಗೆ ಬಂಟ್ವಾಳ ತಾಲೂಕಿನ ಮಣಿಹಳ್ಳ- ಸರಪಾಡಿ ರಸ್ತೆಯ ಬಜ- ಕಾಯರ್‌ಪಲ್ಕೆ ಬಳಿ ನಾಲ್ಕು ಮರಗಳು ರಸ್ತೆಗೆ ಉರುಳಿ ವಾಹನ ಸಂಚಾರಕ್ಕೆ ತೊಡಕುಂಟಾಗಿದೆ.

    ಕೃಷಿಕರಿಗೆ ತೊಂದರೆ: ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನರು ಮಳೆಯಿಂದ ಸ್ವಲ್ಪ ನಿರಾಳರಾದರೂ, ಕೃಷಿಕರು ಸಮಸ್ಯೆ ಅನುಭವಿಸಿದರು. ಪ್ರಸಕ್ತ ಭತ್ತ ಗದ್ದೆ ಕೊಯ್ಲು ನಡೆಯುತ್ತಿದ್ದು, ಒಣಗಲು ಹಾಕಿದ ಅಡಕೆಯೂ ಅಂಗಳದಲ್ಲಿರುತ್ತದೆ. ಮಳೆಯಿಂದ ಒದ್ದೆಯಾಗುವುದರಿಂದ ಗುಣಮಟ್ಟದ ಮೇಲೆ ಹೊಡೆತ ಬೀಳುತ್ತದೆ.

    ದೇಶದಲ್ಲೇ ಅತ್ಯಧಿಕ ತಾಪಮಾನ: ಶುಕ್ರವಾರ ಗರಿಷ್ಠ ತಾಪಮಾನ 37.2 ಡಿಗ್ರಿ ತಲುಪುವ ಮೂಲಕ ಮಂಗಳೂರಿನಲ್ಲಿ ಈ ವರ್ಷದ ಅತ್ಯಧಿಕ ತಾಪಮಾನ ದಾಖಲಾಗಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ 38.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿ ದಶಕದ ಅತ್ಯಧಿಕ ತಾಪಮಾನ ವರದಿಯಾಗಿತ್ತು. ವಾರದ ಅವಧಿಯಲ್ಲಿ ಎರಡನೇ ಬಾರಿ ಮಂಗಳೂರಿನಲ್ಲಿ ದೇಶದಲ್ಲೇ ಅತ್ಯಧಿಕ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಿನದ ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts