More

    ಮಾಗಿ ಉಳುಮೆಗೆ ಮಳೆ ಕೊರತೆ

    ರಾಣೆಬೆನ್ನೂರ: ಈ ಬಾರಿ ಜಿಲ್ಲಾದ್ಯಂತ ಮುಂಗಾರು ಪೂರ್ವ ವಾಡಿಕೆ ಮಳೆ ಕಡಿಮೆಯಾಗಿ ಮಾಗಿ ಉಳುಮೆ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಮುಂಗಾರು ತಯಾರಿಗೂ ರೈತರು ಉತ್ಸಾಹ ತೋರುತ್ತಿಲ್ಲ.
    ಮುಂಗಾರು ಪೂರ್ವ ಬೇಸಿಗೆಯಲ್ಲಿ ಮೇ 9ರ ಹೊತ್ತಿಗೆ ಜಿಲ್ಲೆಯಲ್ಲಿ 51.2 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 43.3 ಮಿ.ಮೀ. ಮಳೆ ಬಿದ್ದಿದ್ದು, ಶೇ. 15ರಷ್ಟು ಕೊರತೆಯಾಗಿದೆ. ಮಳೆ ಇಡೀ ಜಿಲ್ಲೆಯಲ್ಲಿ ಒಂದೇ ತೆರನಾಗಿ ಹಂಚಿಕೆಯಾಗಿಲ್ಲ. ಹಿಂದಿನ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಸಾಕಷ್ಟು ಸುರಿದಿತ್ತು. ಇದರಿಂದ ರೈತರಿಗೆ ಭೂಮಿ ಹದಗೊಳಿಸುವುದು ಸೇರಿದಂತೆ ಇತರ ಚಟುವಟಿಕೆ ನಡೆಸಲು ಅನುಕೂಲವಾಗಿತ್ತು. ಈ ಬಾರಿ ಮಳೆ ಕಡಿಮೆಯಾಗುವುದರ ಜತೆಗೆ ಬಿಸಿಲ ಝಳ 42 ಡಿಗ್ರಿ ಸೆಲ್ಷಿಯಸ್ ತನಕ ಮುಟ್ಟಿದೆ. ಇದರಿಂದ ಭೂಮಿ ಕಾದ ಕಬ್ಬಿಣದಂತಾಗಿದ್ದು, ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ.
    ಬಿತ್ತನೆ ಸಿದ್ಧತೆಗೆ ಸಮಸ್ಯೆ: ಜನವರಿಯಿಂದ ಮೇ ಅಂತ್ಯದವರೆಗೆ ಮುಂಗಾರು ಪೂರ್ವ ಮಳೆಯನ್ನು ಲೆಕ್ಕ ಹಾಕಲಾಗುತ್ತದೆ. ಮುಂಗಾರು ಆರಂಭಕ್ಕೂ ಮುನ್ನ ಬೇಸಿಗೆಯಲ್ಲಿ ಮೂರ್ನಾಲ್ಕು ಬಾರಿ ಹದ ಮಳೆ ಸುರಿಯುವ ವಾಡಿಕೆಯಿದೆ. ಆದರೆ, ಈ ಬಾರಿ ಹಾಗಾಗಿಲ್ಲ. ಮಳೆ ಸುರಿಯದಿದ್ದರೆ ಮಾಗಿ ಉಳುಮೆ ಸಾಧ್ಯವಾಗುವುದಿಲ್ಲ. ಬೇಸಿಗೆಯ ದಿನಗಳಲ್ಲಿ ಮಾಗಿ ಉಳುಮೆ ಮಾಡುವುದರಿಂದ ಮಣ್ಣು ತಿರುವಿ ಬೀಳಲಿದೆ. ಇದರಿಂದ ಮಣ್ಣಿನಲ್ಲಿರಬಹುದಾದ ಕ್ರಿಮಿ ಕೀಟಗಳು ಬಿಸಿಲಿಗೆ ನಾಶವಾಗಿ ಮುಂದಿನ ಮುಂಗಾರಿನ ಬೆಳೆಗಳಿಗೆ ರೋಗ ಬಾಧೆ ಕಡಿಮೆಯಾಗುತ್ತದೆ. ಉತ್ತಮ ಇಳುವರಿಗೂ ಸಹಾಯಕ ಆಗಲಿದೆ ಎಂಬುದು ಕೃಷಿ ಅಧಿಕಾರಿಗಳ ಅಭಿಪ್ರಾಯವಾಗಿದೆ.ಮಳೆ ಇಲ್ಲದೆ ತೋಟ ಸೇರಿ ವಾಣಿಜ್ಯ ಬೆಳೆಗಳಿಗೂ ನೀರಿನ ಕೊರತೆಯಾಗಿದೆ.
    ಅಡಕೆಗೆ ರೋಗ: ಬಿಸಿಲು ತೀವ್ರವಾಗಿದ್ದರಿಂದ ರಾಣೆಬೆನ್ನೂರ, ರಟ್ಟಿಹಳ್ಳಿ, ಹಿರೇಕೆರೂರ, ಹಾನಗಲ್ಲ ಭಾಗದಲ್ಲಿ ಹೆಚ್ಚುತ್ತಿರುವ ಅಡಕೆ ಬೆಳೆಗಳಿಗೆ ರೋಗ ಕಾಣಿಸಿಕೊಂಡಿದೆ. ಅದರಲ್ಲೂ ಎರಡ್ಮೂರು ವರ್ಷದ ಚಿಕ್ಕ ಅಡಕೆ ಗಿಡಗಳಿಗೆ ನುಸಿ ರೋಗ ಹೆಚ್ಚಿ ರೈತರು ಹೈರಾಣಾಗಿದ್ದಾರೆ. ನುಸಿ ರೋಗ ಹತೋಟಿಗೆ ಒಂದೆರಡು ಬಾರಿ ಉತ್ತಮ ಹದ ಮಳೆ ಬೀಳಬೇಕು. ಬಿಸಿಲು ಕಡಿಮೆ ಆಗಬೇಕು ಎಂಬುದು ರೈತರ ಅಭಿಪ್ರಾಯ.
    ಕಳೆದ ವರ್ಷ ಮೇ ತಿಂಗಳಲ್ಲಿ ಭರ್ಜರಿ ಮಳೆ ಸುರಿದಿತ್ತು. ಇದರಿಂದ ಜೂನ್ ಆರಂಭದಲ್ಲಿಯೇ ರೈತರು ಬಿತ್ತನೆ ಕೂಡ ಚುರುಕುಗೊಳಿಸಿದ್ದರು. ಆದರೆ, ಈ ಬಾರಿ ಅನುಕೂಲಕರ ಮಳೆ ಆಗಿಲ್ಲ. ಸದ್ಯ ರಾಣೆಬೆನ್ನೂರ ಸೇರಿ ಹಾವೇರಿ ಜಿಲ್ಲೆಯ ಎಲ್ಲ ಭಾಘದ ಜನ ಮಳೆಗಾಗಿ ಕಾತರಿಸುತ್ತಿದ್ದಾರೆ.

    ಮುಂಗಾರು ಪೂರ್ವ ಮಳೆಯಿಂದ ಜಮೀನುಗಳನ್ನು ಹಸನು ಮಾಡಿಕೊಳ್ಳಲು ಪೂರಕ ವಾತಾವರಣ ನಿರ್ಮಾಣವಾಗುತ್ತಿತ್ತು. ಆದರೆ, ಈ ಬಾರಿ ಕಳೆದ ವಾರದಲ್ಲಿ ಎರಡ್ಮೂರು ದಿನ ಕೊಂಚ ಪ್ರಮಾಣದಲ್ಲಿ ಮಳೆ ಸುರಿದಿರುವುದನ್ನು ಹೊರತು ಪಡಿಸಿದರೆ ಮತ್ತೆ ಮಳೆ ಕಂಡಿಲ್ಲ. ಹೀಗಾದರೆ ಮುಂಗಾರು ಬಿತ್ತನೆಗೆ ಹಿನ್ನಡೆಯಾಗಲಿದೆ.
    ಮಹದೇವಪ್ಪ ರೈತ ರಾಣೆಬೆನ್ನೂರ

    ಮಾಗಿ ಉಳುಮೆ ಮಾಡಿದರೆ ಭೂಮಿ ನೀರು ಹೀರಿಕೊಳ್ಳುತ್ತದೆ. ರೋಗ ರುಜಿನಗಳು ಕಡಿಮೆ ಆಗುತ್ತವೆ. ಮುಂಗಾರು ಉತ್ತಮ ಫಸಲು ಬರಲಿದೆ. ನಮಗೆ ಇನ್ನೂ 20-25 ದಿನ ಸಮಯವಿದೆ. ಅಷ್ಟರಲ್ಲಿ ಉತ್ತಮ ಮಳೆಯಾದರೆ ರೈತರು ಬಿತ್ತನೆಗೆ ಮುಂದಾಗಲಿದ್ದಾರೆ.
    ಶಿವಾನಂದ ಹಾವೇರಿ ಕೃಷಿ ತಾಂತ್ರಿಕ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts