More

    ಮಳೆ ಹಾನಿ, ಶಾಶ್ವತ ಪರಿಹಾರಕ್ಕೆ ಎಚ್‌ಡಿಕೆ ಬ್ರಿಗೇಡ್ ಆಗ್ರಹ

    ಶಿವಮೊಗ್ಗ: ಪ್ರತಿ ಬಾರಿ ಸಣ್ಣ ಪ್ರಮಾಣದ ಮಳೆಯಾದರೂ ಸವಾಯಿಪಾಳ್ಯ ಸೇರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಹಲವು ಬಡಾವಣೆಗಳು ಜಲಾವೃತಗೊಳ್ಳುತ್ತಿವೆ. ಜಿಲ್ಲಾಡಳಿತ ಮತ್ತು ಪಾಲಿಕೆ ಈ ಬಡಾವಣೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್‌ಡಿಕೆ ಮಲ್ನಾಡ್ ಬ್ರಿಗೇಡ್‌ನ ಜಿಲ್ಲಾಧ್ಯಕ್ಷ ಎನ್.ಎಂ.ಸಿಬ್ಗತ್ ಉಲ್ಲಾ ಎಚ್ಚರಿಕೆ ನೀಡಿದರು.
    33ನೇ ವಾರ್ಡ್‌ನ ಸವಾಯಿಪಾಳ್ಯದ ಜನ ಮಳೆ ಬಂದರೆ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಸ್ಥಳೀಯಾಡಳಿತ ಜನರ ಸಮಸ್ಯೆ ಆಲಿಸುತ್ತಿಲ್ಲ. ಕಳೆದ 15 ವರ್ಷಗಳಿಂದ ಮನೆಗಳು, ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಅಪಾರ ಆಸ್ತಿ, ಪಾಸ್ತಿ ನಷ್ಟವಾಗುತ್ತಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗುತ್ತಿದೆ ಎಂದು ಮೀಡಿಯಾ ಹೌಸ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
    ವೃದ್ಧರು, ಮಕ್ಕಳು, ಮಹಿಳೆಯರು, ರೋಗಿಗಳು ಪರದಾಡುವಂತಾಗಿದೆ. ಸವಾಯಿಪಾಳ್ಯದ ಕಲ್ಯಾಣಮಂಟಪದ ಹಿಂಭಾಗದ ರಾಜಕಾಲುವೆ ಸರಿಯಾದ ನಿರ್ವಹಣೆ ಇಲ್ಲದೇ ಅಧಿಕ ಮಳೆಯಾದಾಗ ತುಂಬಿ ಹರಿಯುತ್ತದೆ. ಇಲ್ಲಿನ ಅವೈಜ್ಞಾನಿಕ ಚರಂಡಿಗಳಿಂದ ಮಳೆ ನೀರು ಬಡಾವಣೆಗೆ ನುಗ್ಗುತ್ತದೆ. ಸುಲ್ತಾನ್ ಪಾಳ್ಯ, ಮುರಾದ್‌ನಗರ, ಅಂಬೇಡ್ಕರ್‌ನಗರ, ನ್ಯೂಮಂಡ್ಲಿ 2ನೇ ತಿರುವು, ಬೈಪಾಸ್ ರಸ್ತೆಯ ಸೂಳೆಬೈಲ್ ರಾಜಕಾಲುವೆ, ವಾದಿ ಎ ಹುದಾ ಬಡಾವಣೆ ಸಂಪೂರ್ಣ ಜಲಾವೃತಗೊಳ್ಳುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು.
    ಜಿಲ್ಲಾಡಳಿತ ಕೂಡಲೇ ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ಸ್ಮಾರ್ಟ್‌ಸಿಟಿಯ ಅವೈಜ್ಞಾನಿಕ ಕಾಮಗಾರಿಯೂ ಹಲವು ಸಮಸ್ಯೆಗಳಿಗೆ ಕಾರಣವಾಗಿದ್ದು ರಾಜಕಾಲುವೆ ದುರಸ್ತಿ ಮಾಡಬೇಕು. ಚರಂಡಿ ಸ್ವಚ್ಛಗೊಳಿಸಬೇಕು. ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತ್ವರಿತ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಬ್ರಿಗೇಡ್‌ನ ಕಾರ್ಯಕರ್ತರಾದ ಅನಿಲ್‌ಕುಮಾರ್, ಪರಮೇಶ್ವರ್, ಸೈಯದ್ ನಾಸೀರ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts