More

    ರಾಜ್ಯದ ಹಲವೆಡೆ ಭಾರಿ ಮಳೆ: ಉಡುಪಿಯಲ್ಲಿ ಪ್ರವಾಹ ಸ್ಥಿತಿ, ವೀಕೆಂಡ್​ ಮೂಡ್​ನಲ್ಲಿದ್ದವರಿಗೆ ವರುಣಾಘಾತ

    ಬೆಂಗಳೂರು: ರಾಜ್ಯದ ಹಲವೆಡೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ಪ್ರವಾಹ ಪರಿಸ್ಥಿತಿ ಮತ್ತೊಮ್ಮೆ ತಲೆದೂರಿದೆ. ಇತರೆ ಭಾಗಗಳಿಗೆ ಹೋಲಿಸಿದರೆ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ವರುಣನ ಆರ್ಭಟ ಜೋರಾಗಿದ್ದು, ರಸ್ತೆ ಮತ್ತು ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ.

    ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ
    ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರಿ ನೆರೆ ಹಾವಳಿಗೆ ಉಡುಪಿ ನಗರದ ಜನ ಜೀವನ ತತ್ತರಿಸಿದೆ. ಬೆಳಗ್ಗೆಯಿಂದ ವರುಣರಾಯ ಅಬ್ಬರಿಸುತ್ತಿದ್ದು, ಕೃತಕ‌ ನೆರೆಯಿಂದಾಗಿ ಉಡುಪಿ ಕಲ್ಸಂಕ ಮಣಿಪಾಲ, ಗುಂಡಿಬೈಲು, ಮಲ್ಪೆ ರಸ್ತೆಗಳ ಸಂಚಾರ ಬಂದ್ ಆಗಿದೆ. ಅಂಬಲಪಾಡಿ, ಮಠದ ಬೆಟ್ಟು, ಗುಂಡಿಬೈಲು, ಬನ್ನಂಜೆ,‌ಕಾಪು ಸೇರಿದಂತೆ ಹಲವು ಭಾಗದಲ್ಲಿ ನೆರೆ ಹಾವಳಿ‌ ತೀವ್ರವಾಗಿದ್ದು, ಇಲ್ಲಿವರೆಗೆ 50 ಕುಟುಂಬಗಳನ್ನು ರಕ್ಷಣೆ ಮಾಡಲಾಗಿ, ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ವಿಜಯವಾಣಿಗೆ ತಿಳಿಸಿದ್ದಾರೆ. ಪ್ರವಾಹ ಪೀಡಿತರ ರಕ್ಷಣೆಗೆ ಎರಡು ಹೆಲಿಕಾಪ್ಟರ್ ಬಳಸುವ ಸಾಧ್ಯತೆಯಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ ಜತೆ ಸಂಸದೆ ಶೋಭಾ ಕರಂದ್ಲಾಜೆ ಮಾತುಕತೆ ನಡೆಸಿದ್ದಾರೆ. ಭೀಕರ ಮಳೆಗೆ ನದಿಗಳು ತುಂಬಿ ಹರಿಯುತ್ತಿವೆ.

    ದಕ್ಷಿಣ ಕನ್ನಡದಲ್ಲಿ ಭರ್ತಿಯಾದ ನದಿಗಳು
    ಮಂಗಳೂರು ಕರಾವಳಿಯಲ್ಲಿ ನಿನ್ನೆ ರಾತ್ರಿಯಿಂದ ಸುರಿದ ಮಳೆಗೆ ನಂದಿನಿ ಮತ್ತು ಶಾಂಭವಿ ನದಿಗಳು ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನೆರೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮಂಗಳೂರಿನ ಹೊರವಲಯದ ಕಿನ್ನಿಗೋಳಿ ಸಮೀಪದ ಕಿಲೆಂಜೂರು, ಪಂಜ, ಬಳ್ಕುಂಜೆ ಮತ್ತು ಅತ್ತೂರು ಪ್ರದೇಶಗಳು ಜಲಾವೃತಗೊಂಡಿವೆ. ಬಪ್ಪನಾಡು ದುರ್ಗಾಪರಮೇಶ್ವರಿ, ಶಿಮಂತೂರು ಆದಿಜನಾರ್ದನ ದೇಗುಲ ಪ್ರವಾಹದ ನೀರುವ ನುಗ್ಗಿದೆ. ಹಲವೆಡೆ ಕೃಷಿಭೂಮಿ ಸಂಪೂರ್ಣ ಜಲಾವೃತವಾಗಿದೆ. ಸುರಕ್ಷಿತ ಪ್ರದೇಶಕ್ಕೆ ಜನರನ್ನು ಸ್ಥಳಾಂತರಿಸಲಾಗಿದೆ.

    ಮೈಸೂರು ಜಿಲ್ಲೆಯುಲ್ಲೂ ಮಳೆರಾಯ ಆರ್ಭಟ
    ಕಬಿನಿ ಜಲಾನಯಯ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಕಪಿಲಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕಬಿನಿ ಜಲಾಶಯದ ಹೊರಹರಿವಿನ ಪ್ರಮಾಣ ಹೆಚ್ಚಳವಾಗಿದ್ದು, ನದಿಗೆ 35 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ. ಜನ-ಜಾನುವಾರು ಹಾಗೂ ಆಸ್ತಿಪಾಸ್ತಿ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

    ರಾಜಧಾನಿಯಲ್ಲಿ ಅಬ್ಬರಿಸಿದ ವರುಣ
    ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಆರಂಭವಾದ ಮಳೆ ಮಧ್ಯಾಹ್ನದವರೆಗೂ ನಿರಂತರವಾಗಿ ಒಂದೇ ಸಮನೇ ಎಡೆಬಿಡದೆ ಸುರಿಯಿತು. ಭಾರಿ ಮಳೆಯಿಂದ ರಸ್ತೆಗಳು ಜಲಾವೃತಗೊಂಡ ಸಂಚಾರ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ವೀಕೆಂಡ್​ ಮೂಡಿನಲ್ಲಿದ್ದ ಜನರ ಆಸೆಗೆ ಮಳೆರಾಯ ತಣ್ಣಿರೆರಚಿದ್ದಾನೆ.

    ಉಳಿದಂತೆ ವಿಜಯಪುರ, ಚಿಕ್ಕಮಗಳೂರು, ರಾಯಚೂರು, ಹಾಸನ, ಮಂಡ್ಯ, ಬೀದರ್ ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಭಾರಿ ಮಳೆಯಾಗಿದ್ದು, ಮತ್ತೊಮ್ಮೆ ಪ್ರವಾಹದ ಭೀತಿ ಎದುರಾಗಿರುವುದರಿಂದ ಜನರು ಚಿಂತೆಗೀಡಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

    ಭಾರಿ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು..!

    ಭಾರಿ ಮಳೆಗೆ ಉಡುಪಿ ತತ್ತರ: 50 ಕುಟುಂಬಗಳ ರಕ್ಷಣೆ,‌ ಎನ್​ಡಿಆರ್​ಎಫ್ ದೌಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts