More

    ಕೊಟ್ಟೂರು ತಾಲೂಕಲ್ಲಿ ಮಳೆ ಅಪಾರ, ಮೇವು ಭರಪೂರ

    ಉಜ್ಜಿನಿ ರುದ್ರಪ್ಪ ಕೊಟ್ಟೂರು
    ಕೊಟ್ಟೂರು ತಾಲೂಕಲ್ಲಿ ಮಳೆ ಅಪಾರ, ಮೇವು ಭರಪೂರ.

    ಈ ವರ್ಷ ವರುಣ ದೇವನ ದಯೆ ಆಗಿದ್ದರಿಂದ ತಾಲೂಕಿನಲ್ಲಿ ದನಗಳಿಗೆ ಮೇವಿನ ಕೊರತೆ ಎದುರಾಗಿಲ್ಲ

    ಪಟ್ಟಣ ಸೇರಿ ಸುತ್ತಲಿನ ಅರವತ್ತುನಾಲ್ಕು ಹಳ್ಳಿಗಳನ್ನು ಒಳಗೊಂಡ ಕೊಟ್ಟೂರು ತಾಲೂಕಿನಲ್ಲಿ ನದಿ, ಕಾಲುವೆಗಳು ಇಲ್ಲ. ಈ ತಾಲೂಕು ಸಂಪೂರ್ಣ ಮಳೆಯಾಶ್ರಿತ ಪ್ರದೇಶ. ಕಳೆದ ವರ್ಷ ಧಾರಾಕಾರವಾಗಿ ಮಳೆಸುರಿದ ಪರಿಣಾಮ ಕೆರೆ, ಕಟ್ಟೆಗಳು ಇನ್ನೂ ತುಂಬಿಕೊಂಡಿವೆ.

    ಪ್ರಕೃತಿ ನೀಡಿದ ಈ ವರದಾನದಿಂದಾಗಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿಲ್ಲ. ದನಗಳಿಗೆ ನೀರಿನ ಜತೆ ಮೇವಿನ ಕೊರತೆಯೂ ಆಗಿಲ್ಲ. ಸದ್ಯ ನೀರು-ಮೇವು ಎಷ್ಟಿದೆಯೆಂದರೆ, ಇನ್ನೂ 4-5 ತಿಂಗಳು ಹಸಿ ಮೇವಿನ ಕೊರತೆ ಎದುರಾಗುವುದಿಲ್ಲ.

    ಈಗಾಗಲೇ ರೈತರು ಹೊಲ ಮತ್ತು ಕಣಗಳಲ್ಲಿ ಒಂದು ವರ್ಷಕ್ಕಾಗುವಷ್ಟು ಒಣ ಮೇವನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಶೇ.65 ರೈತರು ಈ ಬಾರಿ ಮುಂಜಾಗ್ರತೆ ವಹಿಸಿದ್ದಾರೆ. ಪಶು ಆಸ್ಪತ್ರೆಯಿಂದ ಉಚಿತ ಮೇವಿನ ಬೀಜಗಳನ್ನು ತಂದು ಹೊಲದಲ್ಲಿ ಬಿತ್ತನೆ ಮಾಡಿಕೊಂಡಿದ್ದಾರೆ.

    ಇನ್ನೂ ಕೆಲ ರೈತರು ಖಾಸಗಿಯಾಗಿ ಮೇವಿನ ಬೀಜವನ್ನು ಖರೀದಿಸಿ ಬಿತ್ತನೆ ಮಾಡಿಕೊಂಡಿದ್ದಾರೆ. ಒಟ್ಟಾರೆಯಾಗಿ ಮೇವಿನ ಕೊರತೆ ಕಾಡದಂತೆ ನೋಡಿಕೊಳ್ಳುತ್ತಿದ್ದಾರೆ. ಈ ಹಸಿಮೇವು ಹಾಗೂ ಈ ಮೊದಲೇ ಸಂಗ್ರಹಿಸಿಟ್ಟಿಕೊಂಡಿರುವ ಒಣ ಮೇವು ಸಾಕಷ್ಟು ಪ್ರಮಾಣದಲ್ಲಿ ಲಭ್ಯ ಆಗುವಂತೆ ಮಾಡಿಕೊಂಡಿದ್ದರಿಂದ ಕೊರತೆ ಕಂಡುಬರುತ್ತಿಲ್ಲ.

    ಮಳೆ ಕೊರತೆಯಿಂದ 2018-19ರಲ್ಲಿ ಹೊರಗಿನಿಂದ ಮೇವು ತರಲಾಗಿತ್ತು

    2018-19ರಲ್ಲಿ ಸಕಾಲದಲ್ಲಿ ಮಳೆಯಾಗಿರಲಿಲ್ಲ. ಆದ್ದರಿಂದ ಜಾನುವಾರುಗಳಿಗೆ ಕೊಟ್ಟೂರು ತಾಲೂಕಿನಲ್ಲಿ ಮೇವಿನ ಕೊರತೆ ಉಂಟಾಗಿತ್ತು. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಜಂಟಿಯಾಗಿ ಪಶುವೈದ್ಯರು ಕೊಟ್ಟ ಮಾಹಿತಿ ಆಧರಿಸಿ ಹೊರ ಜಿಲ್ಲೆ ಮತ್ತು ತಾಲೂಕುಗಳಿಂದ ಮೇವನ್ನು ಖರೀದಿಸಿ ರೈತರಿಗೆ ಉಚಿತವಾಗಿ ವಿತರಿಸಿದ್ದರು. ಈ ಮೂಲಕ ಮೇವಿನ ಕೊರತೆಯನ್ನು ನೀಗಿಸಲಾಗಿತ್ತು.

    ಕುರಿಗಾರರ ವಲಸೆ ನಿಂತಿಲ್ಲ, ಮಳೆ ಅಪಾರ, ಮೇವು ಭರಪೂರ

    ಮೂರು ವರ್ಷಗಳಿಂದ ತಾಲೂಕಿನಲ್ಲಿ ಮೇವಿನ ಕೊರತೆ ಉಂಟಾಗಿಲ್ಲ. ಹಸು, ಎಮ್ಮೆ ಸೇರಿ ತಾಲೂಕಿನ 26,1072 ಜಾನುವಾರುಗಳಿವೆ. 66 ಸಾವಿರ ಕುರಿ, ಮೇಕೆಗಳಿವೆ. ವಿಜಯನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಕುರಿ, ಮೇಕೆ ಸಾಕಣೆದಾರರು ಇರುವುದು ಕೊಟ್ಟೂರು ತಾಲೂಕಿನಲ್ಲೇ. ಕುರಿ, ಮೇಕೆಗಳು ಮೇಯಲು ಸಾಕಾಗುವಷ್ಟು ಕಾಡು ಇಲ್ಲಿಲ್ಲ. ಆದಕಾರಣ ಬಹುತೇಕ ಕುರಿಗಾರರು ತಮ್ಮ ಕುರಿ ಮತ್ತು ಮೇಕೆಗಳೊಂದಿಗೆ ಮೆವು-ನೀರು ಇರುವ ಸ್ಥಳಕ್ಕೆ ವಲಸೆ ಹೋಗುವುದು ಸಾಮಾನ್ಯವಾಗಿದೆ. ಜಾನುವಾರುಗಳನ್ನು ಒಂದುಕಡೆ ಕಟ್ಟಿಹಾಕಿ ಮೇಯಿಸುವಂತೆ ಕುರಿ ಮತ್ತು ಮೇಕೆಗಳನ್ನು ಮೇಯಿಸಲು ಸಾಧ್ಯವಿಲ್ಲ. ಆದ್ದರಿಂದ ಕುರಿಗಾರರು ವಲಸೆ ಹೋಗುವುದು ನಿಂತಿಲ್ಲ. ಆದರೆ, ಹಿಂಗಾರು ಹಂಗಾಮಿನಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ. ಇದರಿಂದ ಕೆರೆ, ಕಟ್ಟೆಗಳು ತುಂಬಿವೆ. ಬೆಳೆಯೂ ಚನ್ನಾಗಿ ಬಂದಿದೆ.

    ಕೊಟ್ಟೂರು ತಾಲೂಕಿನಲ್ಲಿ ಮೂರು ವರ್ಷಗಳ ಹಿಂದೆ ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗಿತ್ತು. ಈ ಮೂರು ವರ್ಷಗಳಿಂದ ಸರಿಯಾಗಿ ಮಳೆಯಾಗುತ್ತಿದೆ. ಆದ್ದರಿಂದ ಮೇವಿನ ಸಮಸ್ಯೆ ಉಂಟಾಗಿಲ್ಲ. ಮುಖ್ಯವಾಗಿ ಮೇವಿನ ಸಮಸ್ಯೆ ಇದೆ ಎಂದು ತಾಲೂಕಿನ ರೈತರು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿಲ್ಲ.
    ಕುಮಾರ ಸ್ವಾಮಿ, ಕೊಟ್ಟೂರು ತಹಸೀಲ್ದಾರ್

    ಜಾನುವಾರುಗಳಿಗೆ ಹೆಚ್ಚಿನ ಮೇವಿನ ಸಮಸ್ಯೆ ಇಲ್ಲ. ಆದರೆ, ವಿಜಯನಗರ ಜಿಲ್ಲೆಯಲ್ಲಿ 66 ಸಾವಿರ ಕುರಿ-ಮೇಕೆಗಳನ್ನು ಹೊಂದಿರುವ ಕೊಟ್ಟೂರು ತಾಲೂಕಿನಲ್ಲಿ ಕುರಿ ಮತ್ತು ಮೇಕೆಗಳಿಗೆ ಮೇವಿನ ಸಮಸ್ಯೆ ಇದೆ. ಆದ್ದರಿಂದ ಕುರಿ ಸಾಕಣಿಕೆದಾರರು ಕುರಿ ಮತ್ತು ಮೇಕೆಗಳೊಂದಿಗೆ ನೀರು-ಮೇವು ಇದ್ದ ಕಡೆ ವಲಸೆ ಹೋಗುತ್ತಾರೆ.
    ಭರಮಪ್ಪ, ರಾಜ್ಯ ಉಪಾಧ್ಯಕ್ಷ, ರೈತ ಸಂಘ ಹಸಿರು ಸೇನೆ(ಬಸವರಾಜಪ್ಪ ಬಣ)

    ಕೊಟ್ಟೂರು ತಾಲೂಕಿನಲ್ಲಿ ಮೇವಿನ ಬೀಜ ಬಿತ್ತನೆ ಮಾಡಿ, ಮೇವು ಬೆಳೆಯುವುದು ಸ್ವಲ್ಪ ಕಡಿಮೆ. ನಮ್ಮಲ್ಲಿ ಹೆಚ್ಚಾಗಿ ರಾಗಿ, ಶೇಂಗಾ, ಮೆಕ್ಕೆಜೋಳ ಬೆಳೆಯುತ್ತಾರೆ. ಇದರ ಸೊಪ್ಪೆಯೇ ಮೇವಾಗಿ ಬಳಸಲಾಗುತ್ತದೆ. ಹಿಂಗಾರಿನಲ್ಲಿ ಅಧಿಕವಾಗಿ ಮಳೆಯಾಗಿದೆ. ಆದ್ದರಿಂದ ತಾಲೂಕಿನಲ್ಲಿ ಮೇವಿನ ಕೊರತೆ ಇಲ್ಲ.
    ಶ್ಯಾಂಸುಂದರ್, ಕೃಷಿ ಅಧಿಕಾರಿ, ಕೊಟ್ಟೂರು

    ಸದ್ಯ ಮೇವಿನ ಕೊರತೆ ನಮ್ಮಲ್ಲಿ ಕಂಡು ಬಂದಿಲ್ಲ. ಹಿಂಗಾರು ಮಳೆ ಅಧಿಕವಾಗಿ ಸುರಿದಿದ್ದರಿಂದ ಕೆರೆ-ಕಟ್ಟೆಗಳು ತುಂಬಿವೆ. ಬೆಳೆಗಳು ಚೆನ್ನಾಗಿದ್ದ ಕಾರಣ ಮೇವಿನ ಸಮಸ್ಯೆ ಇಲ್ಲ. ಇನ್ನೂ ನಾಲ್ಕೈದು ತಿಂಗಳು ಮೇವಿನ ಸಮಸ್ಯೆ ಕೊಟ್ಟೂರು ತಾಲೂಕಿನಲ್ಲಿ ಇಲ್ಲ.
    ಡಾ. ಕೊಟ್ರೇಶ, ಉಪನಿರ್ದೇಶಕರು ಪಶು ಆಸ್ಪತ್ರೆ ಕೊಟ್ಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts