More

    ರೈತರಿಗೆ ಕಂಟಕವಾದ ಮಳೆ: ಮಂಡ್ಯ ಜಿಲ್ಲೆಯಲ್ಲಿ 677 ಹೆಕ್ಟೇರ್ ಬೆಳೆ ನಾಶ

    ಮಂಡ್ಯ: ಕೆಲ ದಿನಗಳಿಂದ ಸುರಿಯುತ್ತಿರುವ ಜೋರು ಮಳೆ ಜಿಲ್ಲೆಯ ರೈತರ ಪಾಲಿಗೆ ಕಂಟಕವಾಗಿ ಪರಿಗಣಿಸಿದೆ. ವಾರದಲ್ಲಿ ಸುರಿದ ಮಳೆಗೆ ಬರೋಬ್ಬರಿ 677 ಹೆಕ್ಟೇರ್ ಬೆಳೆ ಹಾಳಾಗಿದ್ದು, ಕೋಟ್ಯಂತರ ರೂ. ನಷ್ಟವಾಗಿದೆ.
    ಈ ವರ್ಷದಲ್ಲಿಯೇ ಜಿಲ್ಲೆಯಲ್ಲಿ ಮಳೆ ದಾಖಲೆ ಪ್ರಮಾಣದ, ಅಂದರೆ ಒಂದು ಸಾವಿರ ಮಿ.ಮೀ ಗಡಿಯನ್ನು ದಾಟಿದೆ. ಇದರಿಂದಾಗಿ ರೈತರಿಗೆ ದೊಡ್ಡ ಮಟ್ಟದಲ್ಲಿಯೇ ಸಮಸ್ಯೆಯಾಗಿದೆ. ಬೆಳೆ ಕೈ ಸೇರುವ ಹಂತಕ್ಕೆ ಬರುವ ವೇಳೆಗೆ ಮತ್ತೆ ವರುಣನ ಅವಕೃಪೆಯಾಗುತ್ತಿದ್ದು, ಅನ್ನದಾತರಿಗೆ ದಿಕ್ಕು ತೋಚದಂತಾಗಿದೆ.
    677 ಹೆಕ್ಟೇರ್ ಬೆಳೆ ನಾಶ
    ಏಳು ದಿನದ ಅವಧಿಯಲ್ಲಿ (ಅ.15ರಿಂದ 21ರವರೆಗೆ) ಜಿಲ್ಲೆಯಲ್ಲಿ 32.4 ಮಿ.ಮೀ(ವಾಡಿಕೆ ಮಳೆ)ಗೆ ಬದಲಾಗಿ ಬರೋಬ್ಬರಿ 160.5 ಮಿ.ಮೀ ವಾಸ್ತವ ಮಳೆಯಾಗಿದೆ. ವರುಣನ ಅಬ್ಬರಕ್ಕೆ ಬೆಳೆಯ ಜತೆಗೆ ರೈತರು ಅಕ್ಷರಶಃ ನಲುಗಿ ಹೋಗಿದ್ದಾರೆ. ಈ ಅವಧಿಯಲ್ಲಿ 120 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾಳಾಗಿದೆ. ಮುಖ್ಯವಾಗಿ ವಾಣಿಜ್ಯ ಬೆಳೆಗಳೇ ಕೈ ಕೊಟ್ಟಿರುವುದು ಕೃಷಿಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
    ಟೊಮ್ಯಾಟೊ 71 ಎಕರೆ, ಬಾಳೆಹಣ್ಣು 25 ಎಕರೆ, ಈರುಳ್ಳಿ 23 ಎಕರೆ, ಬೀನ್ಸ್ 18 ಎಕರೆ, ಎಲೆಕೋಸು 15, ಸೇವಂತಿಗೆ 23 ಎಕರೆ ಹಾಳಾಗಿದೆ. ಬಹುವಾರ್ಷಿಕ ಬೆಳೆಗಳಾದ ತೆಂಗು 35 ಎಕರೆ, ಅಡಕೆ 23 ಎಕರೆ ಮಳೆಯಬ್ಬರಕ್ಕೆ ನಾಶವಾಗಿದೆ.
    ಕೃಷಿ ಇಲಾಖೆಗೆ ಸಂಬಂಧಿಸಿದಂತೆ 557 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಇದರಲ್ಲಿ ಸಿಂಹಪಾಲು ಭತ್ತವಾಗಿದ್ದು, ಜಿಲ್ಲೆಯಲ್ಲಿ 400 ಹೆಕ್ಟೇರ್‌ನಲ್ಲಿದ್ದ ಬೆಳೆ ನೀರು ಪಾಲಾಗಿದೆ. ಜತೆಗೆ 143 ಹೆಕ್ಟೇರ್ ಕಬ್ಬು, 7.6 ಹೆಕ್ಟೇರ್ ರಾಗಿ ಹಾಗೂ 6.2 ಹೆಕ್ಟೇರ್‌ನಲ್ಲಿದ್ದ ಮುಸುಕಿನ ಜೋಳಕ್ಕೆ ಮಳೆ ಕಂಟಕವಾಗಿದೆ.
    ಅರೆಕಾಸಿನ ಮಜ್ಜಿಗೆಯ ಪರಿಹಾರ: ಮಳೆಯಿಂದಾಗಿ ರೈತರು ಕೋಟ್ಯಂತರ ರೂ. ನಷ್ಟ ಅನುಭವಿಸಿದ್ದಾರೆ. ಇದು ಸರ್ಕಾರಕ್ಕೂ ಗೊತ್ತಿರುವ ವಿಷಯ. ಆದರೆ ಬಿಡುಗಡೆಯಾಗುವ ಪರಿಹಾರದ ಮೊತ್ತ ಮಾತ್ರ ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ಯಂತಾಗಿದೆ. 677 ಹೆಕ್ಟೇರ್ ಬೆಳೆ ಹಾನಿಗೆ ಸಂಬಂಧಿಸಿದಂತೆ 120 ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ಅಂದರೆ ತರಕಾರಿಗೆ ಎಕರೆಗೆ 10 ಸಾವಿರ ರೂ., ಬಹುವಾರ್ಷಿಕ ಬೆಳೆಗೆ 12 ಸಾವಿರ ರೂ.ಗಳನ್ನು ನಿಗದಿಪಡಿಸಲಾಗಿದೆ. ಇದು ಎನ್‌ಡಿಆರ್‌ಎಫ್ ನಿಯಮದಂತೆ ಮಾಡಲಾಗಿದೆ. ತೋಟಗಾರಿಕೆ ಬೆಳೆಗೆ ನಿಯಮದಂತೆ ವಿತರಣೆಯಾದರೆ 31 ಲಕ್ಷ ರೂ. ನಷ್ಟು ಪರಿಹಾರ ಸಿಗಲಿದೆ. ಆದರೆ 1.50 ಕೋಟಿ ರೂ. ನಷ್ಟವಾಗಿದೆ ಎನ್ನುವುದು ವಾಸ್ತವ.
    ಇತ್ತ ಕೃಷಿ ಬೆಳೆಗಳಿಗೂ ಹೆಚ್ಚಿನ ಮೊತ್ತದ ಪರಿಹಾರ ಸಿಗುವುದಿಲ್ಲ. ನಿಯಮದಂತೆ ನೀರಾವರಿ ಪ್ರದೇಶದ ಬೆಳೆ ಹೆಕ್ಟೇರ್‌ಗೆ 25 ಸಾವಿರ ರೂ. ಹಾಗೂ ಮಳೆಯಾಶ್ರಿತ ಪ್ರದೇಶದ ಬೆಳೆ ಹೆಕ್ಟೇರ್‌ಗೆ 13,600 ರೂ.ನಂತೆ ಪರಿಹಾರ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಗಮನಹರಿಸಬೇಕು. ಸಾಲಸೋಲ ಮಾಡಿ ಕೃಷಿ ಮಾಡಿದ ರೈತರಿಗೆ ಮಳೆ ಸುರಿದು ನಷ್ಟವಾದಾಗ ಸರಿಯಾದ ಮೊತ್ತ ಪರಿಹಾರದ ರೂಪದಲ್ಲಿ ಸಿಗದಿದ್ದರೆ ಕಷ್ಟವಾಗುತ್ತದೆ. ಆದ್ದರಿಂದ ಹೆಚ್ಚಿನ ಪರಿಹಾರ ನೀಡಬೇಕೆನ್ನುವುದು ರೈತರ ಆಗ್ರಹವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts